ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ನರ್‌ಗಳ ಕೈಚಳಕ; ಸರಣಿ ಜಯದ ಪುಳಕ

ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌: ಭಾರತದ ಜಯಂತ್ ಯಾದವ್‌, ರವಿಚಂದ್ರನ್ ಅಶ್ವಿನ್‌ಗೆ ತಲಾ 4 ವಿಕೆಟ್‌
Last Updated 6 ಡಿಸೆಂಬರ್ 2021, 20:36 IST
ಅಕ್ಷರ ಗಾತ್ರ

ಮುಂಬೈ: ಸ್ಪಿನ್ನರ್‌ಗಳು ಪಾರಮ್ಯ ಮೆರೆದ ಪಿಚ್‌ನಲ್ಲಿ ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ತಂಡದ ಬ್ಯಾಟರ್‌ಗಳನ್ನು ಸುಲಭವಾಗಿ ಕೆಡವಿದ ಭಾರತ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಟೆಸ್ಟ್‌ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 372 ರನ್‌ಗಳಿಂದ ಗೆದ್ದ ವಿರಾಟ್ ಕೊಹ್ಲಿ ಬಳಗ ಎರಡು ಪಂದ್ಯಗಳ ಸರಣಿಯನ್ನು 1–0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

540 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಮೂರನೇ ದಿನವಾದ ಭಾನುವಾರ ಆಟದ ಮುಕ್ತಾಯಕ್ಕೆ 140 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಸೋಮವಾರ ಭೋಜನ ವಿರಾಮಕ್ಕೂ ಮೊದಲೇ ಉಳಿದ ಐದು ವಿಕೆಟ್‌ಗಳನ್ನು ಭಾರತದ ಬೌಲರ್‌ಗಳು ಉರುಳಿಸಿದರು.

ನ್ಯೂಜಿಲೆಂಡ್‌ಗೆ 167 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಜಯದೊಂದಿಗೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭಾರತ ಅಗ್ರ ಸ್ಥಾನಕ್ಕೆ ಜಿಗಿಯಿತು.

ಭಾರತದ ಮೊದಲ ಇನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್‌ಗಳನ್ನು ಗಳಿಸಿದ ನ್ಯೂಜಿಲೆಂಡ್‌ನ ಎಜಾಜ್ ಪಟೇಲ್‌ ಸೇರಿದಂತೆ ಸ್ಪಿನ್ನರ್‌ಗಳೇ ಮಿಂಚಿದ ಪಂದ್ಯದಲ್ಲಿ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (8ಕ್ಕೆ4 ಮತ್ತು 34ಕ್ಕೆ4) ಒಟ್ಟು ಎಂಟು ವಿಕೆಟ್ ಉರುಳಿಸಿದರು. ತವರಿನಲ್ಲಿ 300 ವಿಕೆಟ್ ಕಬಳಿಸಿದ ಸಾಧನೆಗೂ ಪಾತ್ರರಾದರು.

ಭಾನುವಾರ ಕೊನೆಯ ಅವಧಿಯಲ್ಲಿ ಮೂರು ವಿಕೆಟ್‌ ಉರುಳಿಸಿ ಪ್ರವಾಸಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ ರವಿಚಂದ್ರನ್ ಅಶ್ವಿನ್ ಐದನೇ ಕ್ರಮಾಂಕದ ಹೆನ್ರಿ ನಿಕೋಲ್ಸ್ ಅವರ ವಿಕೆಟ್ ಗಳಿಸುವ ಮೂಲಕ ಪಂದ್ಯಕ್ಕೆ ತೆರೆ ಎಳೆದರು.ನಾಲ್ಕನೇ ದಿನದ ಏಳನೇ ಓವರ್‌ನಲ್ಲಿ ರಚಿನ್ ರವೀಂದ್ರ ಅವರನ್ನು ಬೌಲ್ಡ್ ಮಾಡುವ ಮೂಲಕ ಜಯಂತ್ ಯಾದವ್ ಸಂಭ್ರಮಿಸಿದರು. ಒಂದೇ ಓವರ್‌ನಲ್ಲಿ ಕೈಲ್ ಜೆಮಿಸನ್ ಮತ್ತು ಟಿಮ್ ಸೌಥಿ ವಿಕೆಟ್ ಉರುಳಿಸಿದರು.49ಕ್ಕೆ4 ವಿಕೆಟ್ ಗಳಿಸಿದ ಅವರು ಜೀವನಶ್ರೇಷ್ಠ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT