ಗುರುವಾರ , ಫೆಬ್ರವರಿ 20, 2020
26 °C

ವಿಕೆಟ್‌ ಕೀಪಿಂಗ್‌ಗೆ ಬೆಸ್ಟ್‌ ಆಪ್ಷನ್: ಕೊಹ್ಲಿ ಮನಗೆದ್ದ ಕನ್ನಡಿಗ ರಾಹುಲ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದಿನೇಶ್‌ ಕಾರ್ತಿಕ್, ವೃದ್ದಿಮಾನ್ ಸಹಾ, ಸಂಜು ಸ್ಯಾಮ್ಸನ್, ಪಾರ್ಥಿವ್ ಪಟೇಲ್, ಇಶಾನ್ ಕಿಶನ್..

ವಿಕೆಟ್‌ಕೀಪಿಂಗ್‌ ಎಂದ ಕೂಡಲೇ ಸದ್ಯ ನೆನಪಿಗೆ ಬರುವ ಪರಿಣತ ವಿಕೆಟ್‌ಕೀಪರ್‌ಗಳು ಇವರು. ಆದರೂ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಕೆ.ಎಲ್. ರಾಹುಲ್ ಅವರೇ ಇರಲಿ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಕೆಲ ಹಿರಿಯ ಆಟಗಾರರು ಹೇಳುತ್ತಿರುವುದೇಕೆ?

‘ಇದರಿಂದ ಇನ್ನೊಬ್ಬ ಬ್ಯಾಟ್ಸ್‌ಮನ್ ಅಥವಾ ಬೌಲಿಂಗ್ ಆಲ್‌ರೌಂಡರ್‌ಗೆ ಸ್ಥಾನ ಕಲ್ಪಿಸಬಹುದು’ ಎಂಬ ಸರಳ ಉತ್ತರವನ್ನು ಕೋಚ್ ರವಿಶಾಸ್ತ್ರಿ ಮತ್ತಿತರರು ಈಗಾಗಲೇ ಹೇಳಿದ್ದಾರೆ. ಆದರೆ ಅದರಾಚೆಯೂ ಒಂದು ವಿಷಯವಿದೆ. ಅದು ರಾಹುಲ್ ತಮ್ಮ ಬಾಲ್ಯದ ದಿನಗಳಲ್ಲಿ ವಿಕೆಟ್‌ ಕೀಪರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಮತ್ತು ಅವರಲ್ಲಿರುವ ‘ಸ್ಮಾರ್ಟ್‌ ಕ್ರಿಕೆಟ್‌’ ಕೌಶಲಗಳು. ಬಾಲ್ಯದಿಂದಲೂ ರಾಹುಲ್ ಆಟವನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯಗಳಿವು.

‘ರಾಹುಲ್‌ನಲ್ಲಿ ದೈವದತ್ತವಾದ ಪ್ರತಿಭೆ ಇದೆ. ಆದರೆ, ಆತನ ಪ್ರತಿಭೆ ಮತ್ತು ಪರಿಶ್ರಮ ಆಗಾಧವಾದದ್ದು. ಆರಂಭದ ದಿನಗಳಿಂದಲೂ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಆಗಿದ್ದ ರಾಹುಲ್, ಮಂಗಳೂರು ವಲಯಕ್ಕೆ ಆಡಿದ್ದರು. ಆಗಲೂ ವಿಕೆಟ್‌ಕೀಪರ್ ಆಗಿದ್ದರು. ವಯೋಮಿತಿ ವಿಭಾಗದ ರಾಜ್ಯ ತಂಡಗಳಲ್ಲಿ ಆಡುವಾಗಲೂ ಕೀಪಿಂಗ್ ಮಾಡಿದ್ದಾರೆ. ಅದರಿಂದಾಗಿ ಅವರಿಗೆ ಕೀಪಿಂಗ್ ಕಷ್ಟವಾಗುವುದಿಲ್ಲ’ ಎಂದು ಮಂಗಳೂರಿನಲ್ಲಿರುವ ಅವರ ಬಾಲ್ಯದ ಕೋಚ್ ಜಯರಾಜ್ ಸ್ಯಾಮುಯೆಲ್ ಹೇಳುತ್ತಾರೆ.

ಹತ್ತನೇ ವಯಸ್ಸಿನಲ್ಲಿಯೇ ರಾಹುಲ್ ಜಯರಾಜ್ ಅವರ ಅಕಾಡೆಮಿಯಲ್ಲಿ ಕ್ರಿಕೆಟ್ ಕಲಿಯಲು ಆರಂಭಿಸಿದ್ದರು. ರಾಹುಲ್ ವೃತ್ತಿಜೀವನದ ಯಶಸ್ಸಿನಲ್ಲಿ ಜಯರಾಜ್ ಕಾಣಿಕೆಯೂ ಮಹತ್ವದ್ದಾಗಿದೆ.

ಜಯರಾಜ್ ಸ್ಯಾಮುಯೆಲ್

‘ವಿಕೆಟ್‌ಕೀಪಿಂಗ್‌ನಿಂದ ರಾಹುಲ್ ಬ್ಯಾಟಿಂಗ್‌ಗೆ ಯಾವುದೇ ತೊಂದರೆ ಆಗುವುದಿಲ್ಲ. ಬದಲಿಗೆ ಇನ್ನಷ್ಟು ಉತ್ಕೃಷ್ಟಗೊಳ್ಳುತ್ತದೆ. ಕೀಪಿಂಗ್ ಮಾಡುವಾಗ  ಪ್ರತಿಯೊಂದು ಎಸೆತಕ್ಕೂ ಸ್ಪಂದಿಸಲೇಬೇಕು. ಅದರಿಂದಾಗಿ ಚೆಂಡಿನ ಚಲನೆ, ಪಿಚ್‌ ಗುಣಮಟ್ಟ ಮತ್ತು ಬೇರೆ ಬೇರೆ ಬ್ಯಾಟ್ಸ್‌ಮನ್‌ಗಳ ಕೌಶಲಗಳನ್ನು ಹತ್ತಿರದಿಂದ ನೋಡುತ್ತಾರೆ. ಅದರಿಂದ ಅವರ ಬ್ಯಾಟಿಂಗ್ ಮತ್ತಷ್ಟು ಪರಿಪಕ್ವಗೊಳ್ಳುತ್ತದೆ. ಪರಿಶ್ರಮ ಮತ್ತು ಶ್ರದ್ಧೆಯಿಂದ ಅಭ್ಯಾಸ ಮಾಡುವ ಹುಡುಗ ಆತ. ಮಾನಸಿಕವಾಗಿಯೂ ಬಹಳ ಗಟ್ಟಿಗ’ ಎಂದು ಜಯರಾಜ್ ವಿಶ್ಲೇಷಿಸುತ್ತಾರೆ.

ಮೊದಲಿನಿಂದಲೂ  ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ರಾಹುಲ್, ಆಸ್ಟ್ರೇಲಿಯಾ ಎದುರಿನ ಸರಣಿಯ ಮೂರು ಪಂದ್ಯಗಳಲ್ಲಿಯೂ ಬೇರೆ ಬೇರೆ ಕ್ರಮಾಂಕಗಳಲ್ಲಿ ಆಡಿದ್ದರು. ಯಶಸ್ವಿಯೂ ಆಗಿದ್ದರು. 

‘ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಬಂದರೆ 300 ಎಸೆತಗಳನ್ನು ಆಡುವ ಅವಕಾಶ ಇರುತ್ತದೆ. ಕ್ರಮಾಂಕ ಕೆಳಗಿಳಿದಂತೆ ಎಸೆತಗಳ ಸಂಖ್ಯೆ ಕಡಿಮೆಯಾಗುತ್ತದೆ ಅಷ್ಟೇ. ಸಿಗುವ ಎಸೆತಗಳಲ್ಲಿ ಎಷ್ಟು ರನ್ ಬಾರಿಸಬೇಕು ಎಂಬುದು ರಾಹುಲ್‌ಗೆ ಚೆನ್ನಾಗಿ ಗೊತ್ತಿದೆ. ಅದಕ್ಕೇ ಐದನೇ ಕ್ರಮಾಂಕದಲ್ಲಿ 80 ರನ್‌ ಹೊಡೆದಿದ್ದು. ತಾಂತ್ರಿಕವಾಗಿ ಪರಿಣತರಾಗಿರುವಾಗ ಕ್ರಮಾಂಕಕ್ಕೆ ಚಿಂತಿಸುವ ಅಗತ್ಯವೇ ಇಲ್ಲ’ ಎನ್ನುತ್ತಾರೆ ಜಯರಾಜ್‌.

ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲಿ ರಿಷಭ್ ಪಂತ್ ಹೆಲ್ಮೆಟ್‌ಗೆ ಚೆಂಡು ಬಡಿದ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆಗ ಕೀಪಿಂಗ್ ಮಾಡಲು ಕಣಕ್ಕಿಳಿದಿದ್ದ ರಾಹುಲ್ ಉತ್ತಮವಾಗಿ ಆಡಿದ್ದರು. ನ್ಯೂಜಿಲೆಂಡ್‌ ಪ್ರವಾಸದಲ್ಲಿಯೂ ಅವರಿಗೆ ಕೀಪಿಂಗ್‌ ಹೊಣೆ ನೀಡುವ ಇಂಗಿತವನ್ನು ವಿರಾಟ್‌ ಕೊಹ್ಲಿ ವ್ಯಕ್ತಪಡಿಸಿದ್ದಾರೆ. 

ರಾಹುಲ್ ‘ಸ್ಮಾರ್ಟ್ ಕ್ರಿಕೆಟರ್’
‘ಅವಕಾಶಗಳು ಲಭಿಸಿದಾಗ ಯಶಸ್ಸು ಗಳಿಸುವ ಕಲೆ ರಾಹುಲ್‌ಗೆ ಇದೆ. ಪ್ರತಿಭಾವಂತ ಆಟಗಾರನಾಗಿರುವ ಅವರು ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಭ್ಯಾಸ ಮಾಡಿ ಸ್ಮಾರ್ಟ್ ಕ್ರಿಕೆಟಿಗನಾಗಿದ್ದಾರೆ. ಅವರು ಕೀಪಿಂಗ್‌ನಲ್ಲಿಯೂ ಯಶಸ್ವಿಯಾಗುತ್ತಾರೆ’ ಎಂದು ಕರ್ನಾಟಕದ ಹಿರಿಯ ಕ್ರಿಕೆಟ್ ಕೋಚ್ ಸೋಮಶೇಖರ್ ಶಿರಗುಪ್ಪಿ ಅಭಿಪ್ರಾಯಪಡುತ್ತಾರೆ.

2009ರಲ್ಲಿ ರಾಹುಲ್ ಕರ್ನಾಟಕ ರಣಜಿ ಕ್ರಿಕೆಟ್‌ ತಂಡಕ್ಕೆ ಕಾಲಿಟ್ಟಾಗ ಸೋಮಶೇಖರ್ ಸಹಾಯಕ ಕೋಚ್ ಆಗಿದ್ದರು. ದಶಕಗಳ ಹಿಂದೆ ಕರ್ನಾಟಕ ತಂಡದ ವಿಕೆಟ್ ಕೀಪರ್ ಆಗಿದ್ದ ಸೋಮಶೇಖರ್ ರಾಹುಲ್ ಅವರನ್ನು ಬಾಲ್ಯದಿಂದಲೂ ಗಮನಿಸಿದವರು. 

ಸೋಮಶೇಖರ್ ಶಿರಗುಪ್ಪಿ

‘ವಯೋಮಿತಿಯ ತಂಡಗಳಲ್ಲಿ ರಾಹುಲ್ ಕೀಪಿಂಗ್ ಮಾಡುತ್ತಿದ್ದರು. ಆದರೆ, ಅವರು ಕರ್ನಾಟಕ ತಂಡಕ್ಕೆ ಬಂದ ಸಂದರ್ಭದಲ್ಲಿ ಬ್ಯಾಟ್ಸ್‌ಮನ್ ಆಗಿ ಆಡುವ ಅವಕಾಶ ಸಿಕ್ಕಿತು. ಅದಾಗಲೇ ತಂಡದಲ್ಲಿ ಇನ್‌ಫಾರ್ಮ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇದ್ದ ಕಾರಣ ಇವರಿಗೆ ಅವಕಾಶ ಸಿಗಲಿಲ್ಲ. ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಾಗಲೂ ಏಕದಿನ, ಟಿ20ಯಲ್ಲಿ ಮಹೇಂದ್ರಸಿಂಗ್ ಧೋನಿ ಇದ್ದರು. ಟೆಸ್ಟ್‌ನಲ್ಲಿ ವೃದ್ಧಿಮಾನ್ ಸಹಾ ಮತ್ತಿತರರು ಇದ್ದರು. ಆದ್ದರಿಂದ ಆವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಕೀಪರ್ ಆಗಿದ್ದಾರೆ. ಕುಮಾರ ಸಂಗಕ್ಕಾರ, ಆ್ಯಡಂ ಗಿಲ್‌ಕ್ರಿಸ್ಟ್‌ ಮತ್ತು ರಾಹುಲ್ ದ್ರಾವಿಡ್ ಅವರೆಲ್ಲರೂ ಇದೇ ರೀತಿ ಕೀಪರ್ ಆಗಿದ್ದವರು’ ಎಂದು ಹೇಳುತ್ತಾರೆ.

‘ಬ್ಯಾಟಿಂಗ್ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಮೂಲತಃ ಪರಿಶ್ರಮಿಯಾಗಿರುವ ರಾಹುಲ್ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ. ಏಕದಿನ ಮತ್ತು ಟಿ20ಯಲ್ಲಿ ಆಡಲು ಯಾವುದೇ ತೊಂದರೆಯಿಲ್ಲ’ ಎಂದರು. 

ಕೆ.ಎಲ್.ರಾಹುಲ್ ಫಿಟ್‌ನೆಸ್‌ ಅನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು. ಉಳಿದಂತೆ ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ರಾಹುಲ್ ಚೆನ್ನಾಗಿದ್ದಾರೆ. ಅವರು ಎರಡರಲ್ಲೂ ಯಶಸ್ವಿಯಾಗುತ್ತಾರೆ ಎನ್ನುತ್ತಾರೆ ಕೋಚ್ ದೇವದಾಸ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು