ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು ತಪ್ಪಿಸಲು ಪಟ್ಟು ಹಿಡಿದ ಪ್ಯಾಟ್: ವಿರಾಟ್ ಪಡೆಗೆ ಬೇಕು ಇನ್ನೆರಡು ವಿಕೆಟ್

Last Updated 29 ಡಿಸೆಂಬರ್ 2018, 19:24 IST
ಅಕ್ಷರ ಗಾತ್ರ

ಮೆಲ್ಬರ್ನ್:ವಿರಾಟ್ ಕೊಹ್ಲಿ ನಾಯಕತ್ವದ ಕ್ರಿಕೆಟ್‌ ತಂಡವು ಭಾನುವಾರ ಬೆಳಿಗ್ಗೆಯೇ ಭಾರತದ ಕ್ರಿಕೆಟ್‌ಪ್ರೇಮಿಗಳಿಗೆ ‘ವೆರಿ ಗುಡ್‌ ಮಾರ್ನಿಂಗ್’ ಹೇಳಲು ಸಿದ್ಧರಾಗಿದ್ದಾರೆ!

ಆಸ್ಟ್ರೇಲಿಯಾ ಎದುರಿನ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಜಯದ ಗುರಿ ಮುಟ್ಟಲು ಭಾರತ ಇನ್ನೆರಡು ಹೆಜ್ಜೆ ಕ್ರಮಿಸಬೇಕಷ್ಟೇ. ಬೌಲರ್‌ಗಳ ‘ಪ್ರಿಯ ಸಖಿ’ಯಂತೆ ವರ್ತಿಸುತ್ತಿರುವ ಎಂಸಿಜಿ ಕ್ರೀಡಾಂಗಣದ ಪಿಚ್‌ನಲ್ಲಿ ಇದು ಕಷ್ಟವೂ ಅಲ್ಲ. ಆದರೆ ಪವಾಡದ ನಿರೀಕ್ಷೆಯಲ್ಲಿರುವ ಆಸ್ಟ್ರೇಲಿಯಾ ತಂಡದ ಕಣ್ಣು ಮಾತ್ರ ಈಗ ಪ್ಯಾಟ್ ಕಮಿನ್ಸ್‌ (ಬ್ಯಾಟಿಂಗ್ 61;103ಎಸೆತ, 5ಬೌಂಡರಿ, 1ಸಿಕ್ಸರ್) ಮೇಲೆ ಇದೆ.

ಶನಿವಾರ ಬೆಳಿಗ್ಗೆ ಆತಿಥೇಯರಿಗೆ 399 ರನ್‌ಗಳ ಗೆಲುವಿನ ಗುರಿ ನೀಡಿದ ಭಾರತ ತಂಡದ ಬೌಲರ್‌ಗಳು ತಮ್ಮ ಯೋಜನೆಗೆ ತಕ್ಕಂತೆ ಬೌಲಿಂಗ್ ಮಾಡಿದರು. ಸವಾಲು ಮೀರಲು ಸಾಕಷ್ಟು ಸಮಯವಿದ್ದ ಕಾರಣ ಟಿಮ್ ಪೇನ್ ಬಳಗವೂ ಗೆಲುವಿನ ಕನಸು ಕಂಡಿತು. ಕ್ರೀಸ್‌ಗೆ ಬಂದ ಎಲ್ಲ ಬ್ಯಾಟ್ಸ್‌ಮನ್‌ಗಳೂ ಬಿರುಸಿನ ಹೊಡೆತಗಳ ಮೂಲಕ ಚುರುಕಾಗಿ ರನ್ ಪೇರಿಸುವತ್ತಲೇ ಗಮನವಿತ್ತರು.ಇದರಿಂದಾಗಿ ತಂಡವು ದಿನದಾಟದ ಕೊನೆಗೆ 85 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 258 ರನ್‌ ಗಳಿಸಿದೆ. ಸೋಲು ತಪ್ಪಿಸಿಕೊಳ್ಳಲು 141 ರನ್‌ಗಳು ಮಾತ್ರ ಬೇಕು. ಆದರೆ, ಇದು ಕಡುಕಷ್ಟದ ಕಾರ್ಯ. ಏಕೆಂದರೆ, ತಂಡದ ಖಾತೆಯಲ್ಲಿ ಕೇವಲ ಎರಡು ವಿಕೆಟ್‌ಗಳು ಮಾತ್ರ ಉಳಿದಿವೆ.

ಪ್ಯಾಟ್ ಮೇಲೆ ಭರವಸೆ: ಎಂಟನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪ್ಯಾಟ್ ಕೊನೆಯ ದಿನಕ್ಕೂ ಆಟ ಉಳಿಸಿದರು. ಅವರೊಂದಿಗೆ ನೇಥನ್ ಲಯನ್ (ಬ್ಯಾಟಿಂಗ್ 6; 38ಎಸೆತ) ಆವರು ಕ್ರೀಸ್‌ನಲ್ಲಿದ್ದಾರೆ. ಏಕಾಗ್ರತೆ ಮತ್ತು ತಾಳ್ಮೆ
ಯಿಂದ ಆಡುತ್ತಿರುವ ಇಬ್ಬರ ಮೇಲೆ ಆತಿಥೇಯ ಬಳಗದ ನಿರೀಕ್ಷೆ ನೆಟ್ಟಿದೆ. ‘ಬಾಕ್ಸಿಂಗ್‌ ಡೇ’ ಟೆಸ್ಟ್‌ ಸೋಲು ತಪ್ಪಿಸಲು ಇವರ ಆಟವೇ ಮಹತ್ವದ್ದಾಗಲಿದೆ. ಬ್ಯಾಟಿಂಗ್ ಕಷ್ಟವಾಗಿರುವ ಪಿಚ್‌ನಲ್ಲಿ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳ ಬಲೆಗೆ ಬಿದ್ದರು. ಚೆಂಡು ನಿಧಾನವಾಗಿ ಪುಟಿದೇಳುತ್ತಿರುವ ಪಿಚ್‌ನಲ್ಲಿ 135 ರನ್‌ಗಳಾಗುಷ್ಟರಲ್ಲಿ ಐವರು ಪ್ರಮುಖರು ಪೆವಿಲಿಯನ್ ಸೇರಿದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (82ಕ್ಕೆ3), ಜಸ್‌ಪ್ರೀತ್ ಬೂಮ್ರಾ (53ಕ್ಕೆ2), ಮೊಹಮ್ಮದ್ ಶಮಿ (71ಕ್ಕೆ2) ಮತ್ತು ಇಶಾಂತ್ ಶರ್ಮಾ (37ಕ್ಕೆ1) ಆಸ್ಟ್ರೇಲಿಯಾದ ಬ್ಯಾಟಿಂಗ್‌ ಬೆನ್ನೆಲುಬನ್ನು ಮುರಿದರು.

ಪ್ಯಾಟ್‌ ಕಮಿನ್ಸ್‌ ಬ್ಯಾಟಿಂಗ್‌ ವೇಳೆವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಚೆಂಡು ತಡೆಯಲು ಪ್ರಯತ್ನಿಸಿದ್ದು..
ಪ್ಯಾಟ್‌ ಕಮಿನ್ಸ್‌ ಬ್ಯಾಟಿಂಗ್‌ ವೇಳೆವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಚೆಂಡು ತಡೆಯಲು ಪ್ರಯತ್ನಿಸಿದ್ದು..

ಅರ್ಧಶತಕ ತಪ್ಪಿಸಿಕೊಂಡ ಮಯಂಕ್: ಪದಾರ್ಪಣೆ ಪಂದ್ಯ ಆಡಿದ ಕನ್ನಡಿಗ ಮಯಂಕ್ ಅಗರವಾಲ್ ಎರಡನೇ ಇನಿಂಗ್ಸ್‌ನಲ್ಲಿಯೂ ಮಿಂಚಿದರು. ಆದರೆ ಅರ್ಧಶತಕದ ಸನಿಹ ಎಡವಿದರು. ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ 292 ರನ್‌ಗಳ ಮುನ್ನಡೆ ಸಾಧಿಸಿದ್ದ ಭಾರತ ತಂಡವು ಆಸ್ಟ್ರೇಲಿಯಾಗೆ ಫಾಲೋ ಆನ್ ನೀಡಿರಲಿಲ್ಲ. ಎರಡನೇ ಇನಿಂಗ್ಸ್‌ ಆರಂಭಿಸಿತ್ತು. ದಿನದಾಟದ ಅಂತ್ಯಕ್ಕೆ 54 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 28 ರನ್‌ ಗಳಿಸಿದ್ದ ಮಯಂಕ್ ಕ್ರೀಸ್‌ನಲ್ಲಿದ್ದರು. ಆರು ರನ್ ಗಳಿಸಿದ್ದ ರಿಷಭ್ ಪಂತ್ ಕೂಡ ಇದ್ದರು.

ನಾಲ್ಕನೇ ದಿನದ ಬೆಳಿಗ್ಗೆ 33ನೇ ಓವರ್‌ನಲ್ಲಿ ಮಯಂಕ್ (42; 102ಎಸೆತ, 4ಬೌಂಡರಿ, 2 ಸಿಕ್ಸರ್) ಅವರು ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ಕ್ಲೀನ್‌ಬೌಲ್ಡ್‌ ಆದರು. ಆದರೆ, ಅವರ ಸೊಗಸಾದ ಬ್ಯಾಟಿಂಗ್‌ ಕ್ರಿಕೆಟ್‌ ಪುಟಗಳಲ್ಲಿ ಅಚ್ಚಾಯಿತು. ಪಂತ್ ಜೊತೆಗೂಡಿದ ಜಡೇಜಾ ಕೂಡ ಅಲ್ಪ ಕಾಣಿಕೆ ನೀಡಿದರು. 37ನೇ ಓವರ್‌ನಲ್ಲಿ ಜಡೇಜಾ ಮತ್ತು 38ನೇ ಓವರ್‌ನಲ್ಲಿ ರಿಷಭ್ ಔಟಾದರು. ತಂಡವು 108 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ವಿರಾಟ್ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡರು. ನಂತರದ ಆಟದಲ್ಲಿ ಬೌಲರ್‌ಗಳು ಮಿಂಚಿದರು. ಹೊಸ ವರ್ಷಕ್ಕೆ ಗೆಲುವಿನ ಕಾಣಿಕೆ ನೀಡಲು ವೇದಿಕೆ ನಿರ್ಮಿಸಿದರು.

ತಾತ್ಕಾಲಿಕ ನಾಯಕ ಗೊತ್ತಾ: ಪಂತ್ ಗೇಲಿ

ಮೆಲ್ಬರ್ನ್: ‘ಇವತ್ತು ನಮ್ಮಲ್ಲಿ ಒಬ್ಬ ವಿಶೇಷಅತಿಥಿ ಇದ್ದಾರೆ. ಮಯಂಕ್ ನೀನು ಯಾವಾಗಲಾದರೂ ತಾತ್ಕಾಲಿಕ ಕ್ಯಾಪ್ಟನ್‌ ಬಗ್ಗೆ ಕೇಳಿದ್ದೀಯಾ?’-

ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ರಿಷಭ್ ಪಂತ್ ಅವರು ಶನಿವಾರ ದಿನದಾಟದಲ್ಲಿ ತಮ್ಮ ಪಕ್ಕದಲ್ಲಿಯೇ ನಿಂತಿದ್ದ ಫೀಲ್ಡರ್ ಮಯಂಕ್ ಅಗರವಾಲ್ ಅವರಿಗೆ ಕೇಳಿದ ಪ್ರಶ್ನೆ ಇದು. ಅವರು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಅವರು ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಾಗ ಸ್ವಾಗತಿಸಿದ ಪರಿ ಇದು. ಜೊತೆಗೆ ಇದು ಪಂತ್ ಅವರು ಪೇನ್‌ಗೆ ನೀಡಿದ ತಿರುಗೇಟು ಕೂಡ ಹೌದು!

‘ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ನಾನು ಆಡುವ ಹೋಬರ್ಟ್ ಹರಿಕೇನ್‌ ತಂಡದ ‘ಬೇಬಿ ಸೀಟ್‌’ಗೆ ಪಂತ್ ಅವರನ್ನು ಆಯ್ಕೆ ಮಾಡಬೇಕು. ನನ್ನ ಪತ್ತಿಯೊಂದಿಗೆ ಸಿನಿಮಾ ನೋಡಲು ಹೋದಾಗ ಪಂತ್ ನನ್ನ ಮಕ್ಕಳೊಂದಿಗೆ ಆಡಬಹುದು’ ಎಂದು ಪೇನ್ ಅವರು ಬೆಳಿಗ್ಗೆ ಪಂತ್ ಬ್ಯಾಟಿಂಗ್ ಮಾಡುವಾಗ ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪಂತ್ ಪೇನ್ ಅವರನ್ನು ಕಾಡಿದರು.

‘ಆತನನ್ನು (ಪೇನ್) ಔಟ್ ಮಾಡಲು ನೀನು ವಿಶೇಷವಾಗಿ ಏನೂ ಮಾಡಬೇಕಿಲ್ಲ. ಆತನಿಗೆ ಮಾತನಾಡುವುದೆಂದರೆ ಬಹಳ ಪ್ರೀತಿ. ಅವನಿಗೆ ಬರುವುದು ಅದೊಂದೇ ಕೇಲಸ. ಮಾತು..ಮಾತು.. ಬರೀ ಮಾತು!’ ಎಂದು ಪಂತ್ ಅವರು ಪೇನ್‌ಗೆ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾಗೂ ಕೂಗಿ ಹೇಳಿದರು. ಇದು ಸ್ಟಂಪ್‌ನ ಮೈಕ್‌ಗಳಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ಅಂಪೈರ್ ಇಯಾನ್ ಗೌಲ್ಡ್ ಅವರು ಪಂತ್‌ಗೆ ಎಚ್ಚರಿಕೆ ನೀಡಿದರು. ಆದರೆ, ಪಂತ್ ಬ್ಯಾಟಿಂಗ್‌ ಮಾಡುವಾಗ ಗೇಲಿ ಮಾಡಿದ್ದ ಪೇನ್‌ ಮತ್ತು ಸಹ ಆಟಗಾರರಿಗೆ ಅಂಪೈರ್‌ಗಳು ಏನೂಹೇಳಿರಲಿಲ್ಲ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT