ಭಾರತಕ್ಕೆ ಸ್ಯಾಮ್‌ ಕೊಟ್ಟ ಪೆಟ್ಟು

7

ಭಾರತಕ್ಕೆ ಸ್ಯಾಮ್‌ ಕೊಟ್ಟ ಪೆಟ್ಟು

Published:
Updated:
Deccan Herald

ಎಜ್‌ಬಾಸ್ಟನ್ : ಇಂಗ್ಲೆಂಡ್‌ನ ಚಿಗುರುಮೀಸೆಯ ಹುಡುಗ ಸ್ಯಾಮ್ ಕರ್ರನ್ (23ಕ್ಕೆ3) ಅವರ ಮೊನಚಾದ ದಾಳಿಗೆ ಭಾರತದ ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ದಂಡ ತೆತ್ತರು.

ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನವಾದ  ಗುರುವಾರ ಊಟದ ವೇಳೆಗೆ ಭಾರತ ತಂಡವು 31 ಓವರ್‌ಗಳಲ್ಲಿ  ವಿಕೆಟ್‌ಗಳಿಗೆ 100 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ (ಬ್ಯಾಟಿಂಗ್ 21) ಮತ್ತು   ಹಾರ್ದಿಕ್ ಪಾಂಡ್ಯ (ಬ್ಯಾಟಿಂಗ್ 0) ಅವರು ಕ್ರೀಸ್‌ನಲ್ಲಿದ್ದಾರೆ.

ಬುಧವಾರ ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಇಂಗ್ಲೆಂಡ್ ತಂಡವು ಆರ್. ಅಶ್ವಿನ್ (62ಕ್ಕೆ4) ಆವರ ಕೈಚಳಕದ ಮೋಡಿಯಿಂದ 9 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಗುರುವಾರ ಬೆಳಿಗ್ಗೆ ಮೊಹಮ್ಮದ್ ಶಮಿ ಇನ್ನೊಂದು ವಿಕೆಟ್ ಕಬಳಿಸಿ ಇಂಗ್ಲೆಂಡ್ ತಂಡದ ಇನಿಂಗ್ಸ್‌ಗೆ ತೆರೆ ಎಳೆದರು. ಇದರಿಂದಾಗಿ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ 287 ರನ್‌ಗಳನ್ನು ಗಳಿಸಿತು.

ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮುರಳಿ ವಿಜಯ್ ಮತ್ತು ಶಿಖರ್ ಧವನ್  ಮೊದಲ ವಿಕೆಟ್‌ಗೆ 50 ರನ್‌ ಗಳಿಸಿ ಉತ್ತಮ  ಆರಂಭ ನೀಡಿದರು.

ಆದರೆ, 14ನೇ ಓವರ್‌ನಲ್ಲಿ ಸ್ಯಾಮ್ ಅವರ ಲೆಗ್‌ಕಟರ್‌ಗೆ ಕಾಲು ಮುಂದೊಡ್ಡಿದ ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಆದರು. ಕ್ರೀಸ್‌ಗೆ ಬಂದ ಕೆ.ಎಲ್. ರಾಹುಲ್ ಕೂಡ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಕ್ಲೀನ್‌ಬೌಲ್ಡ್‌ ಆದರು. 

16ನೇ ಓವರ್‌ನಲ್ಲಿ ಶಿಖರ್ ಧವನ್ ಅವರಿಗೂ ಎಡಗೈ ವೇಗಿ ಸ್ಯಾಮ್ ಪೆವಿಲಿಯನ್ ದಾರಿ ತೋರಿಸಿದರು.  ಆಫ್‌ಸ್ಟಂಪಿನಿಂದ ಹೊರ ನುಗ್ಗುತ್ತಿದ್ದ ಎಸೆತವನ್ನು ಕೆಣಕಿದ ಧವನ್ ಅವರು ಸ್ಲಿಪ್‌ ಫೀಲ್ಡರ್ ಡೇವಿಡ್ ಮಲಾನ್ ಅವರಿಗೆ ಕ್ಯಾಚಿತ್ತರು.

ಮೊಣಕಾಲುದ್ದ ಮಾತ್ರ ಪುಟಿಯುತ್ತಿರುವ ಎಸೆತಗಳನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳು ಹರಸಾಹಸಪಡುತ್ತಿದ್ದಾರೆ. ವಿರಾಟ್ ಮತ್ತು ಹಾರ್ದಿಕ್ ಅವರು ಮಧ್ಯಮವೇಗದ ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸುತ್ತ ಕ್ರೀಸ್‌ನಲ್ಲಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !