ಶನಿವಾರ, ಆಗಸ್ಟ್ 24, 2019
22 °C
ವಿಶ್ವಕಪ್‌ ಕ್ರಿಕೆಟ್‌

ವಿಶ್ವಕಪ್‌ ಇತಿಹಾಸ:ಹ್ಯಾಟ್ರಿಕ್‌ ಸಾಧನೆ ಮಾಡಿದ ಭಾರತದ 2ನೇ ಆಟಗಾರ ಮೊಹಮ್ಮದ್‌ ಶಮಿ

Published:
Updated:

ಬೆಂಗಳೂರು: ಸೌತಾಂಪ್ಟನ್‌ನಲ್ಲಿ ಶನಿವಾರ ಅಫ್ಗಾನಿಸ್ತಾನದ ಎದುರು ಭಾರತ 11 ರನ್‌ಗಳ ರೋಚಕ ಜಯದಲ್ಲಿ ಮೊಹಮ್ಮದ್‌ ಶಮಿ ಹ್ಯಾಟ್ರಿಕ್‌ ಸಾಧನೆ ಪ್ರಮುಖ ಪಾತ್ರವಹಿಸಿತು. ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 

ಇದನ್ನೂ ಓದಿ: ಓಡಿಬಂದು ಸಲಹೆ ಉಸುರಿದ ಧೋನಿ; ವಿಕೆಟ್‌ ಉರುಳಿಸಿದ ಶಮಿ

ವಿಶ್ವಕಪ್‌ ಕ್ರಿಕೆಟ್‌ ಇತಿಹಾಸಲ್ಲಿಯೇ ಹ್ಯಾಟ್ರಿಕ್‌ ವಿಕೆಟ್ ಪಡೆದಿರುವವರ ಪೈಕಿ ಶಮಿ 10ನೇ ಬೌಲರ್‌ ಆಗಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್‌ ಕೂಡ ಇವರೇ. 1987ರ ವಿಶ್ವಕಪ್‌ನಲ್ಲಿ ಭಾರತದ ಚೇತನ್‌ ಶರ್ಮಾ ಹ್ಯಾಟ್ರಿಕ್‌ ವಿಕೆಟ್‌ ಗಳಿಸಿದ್ದರು. ಅವರು ನಾಗಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಈ ಮೂಲಕ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್‌ ಅವರ ಹೆಸರಿನಲ್ಲಿದೆ. 

ಇದನ್ನೂ ಓದಿ: ಭಾರತಕ್ಕೆ ಜಯ: ಶಮಿಗೆ ಹ್ಯಾಟ್ರಿಕ್ ವಿಕೆಟ್, ಆಫ್ಗನ್‌ಗೆ ಸೋಲಿನ ಡಬಲ್ ಹ್ಯಾಟ್ರಿಕ್

ಶ್ರೀಲಂಕಾದ ವೇಗದ ಬೌಲರ್‌ ಲಸಿತ್‌ ಮಾಲಿಂಗ  ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಎರಡು ಬಾರಿ ಹ್ಯಾಟ್ರಿಕ್‌ ಸಾಧನೆ ಮಾಡಿರುವ ಏಕೈಕ ಆಟಗಾರ. 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ವಿಕೆಟ್‌ ಹಾಗೂ 2011ರಲ್ಲಿ ಕೀನ್ಯಾ ಎದುರು ಮೂರು ವಿಕೆಟ್‌ ಗಳಿಸಿದ್ದರು.

ಕೊನೆಯ ಓವರ್‌ನಲ್ಲಿ ಶಮಿ ಮೂರು ವಿಕೆಟ್‌ ಕಬಳಿಸುವ ಮೂಲಕ ಅಫ್ಗಾನಿಸ್ತಾನದ ಗೆಲುವಿನ ಹೋರಾಟವನ್ನು ಕೊನೆಗೊಳಿಸಿದರು. ಅಫ್ಗಾನ್‌ 6ನೇ ಸೋಲು ಅನುಭವಿಸಿತು. ಭಾರತಕ್ಕೆ ಟೂರ್ನಿಯಲ್ಲಿ ನಾಲ್ಕನೇ ಗೆಲುವು ದೊರೆಯಿತು. 

ಅಫ್ಗಾನ್‌ ಗೆಲುವಿಗೆ 6 ಎಸೆತಗಳಲ್ಲಿ 16 ರನ್‌ ಬೇಕಿತ್ತು. ಶಮಿ, 49ನೇ ಓವರ್‌ನ ಮೂರನೇ ಎಸೆತದಲ್ಲಿ ನಬಿ ವಿಕೆಟ್ ಕಬಳಿಸಿದರು. ಭರ್ಜರಿ ಅರ್ಧ ಶತಕ ಗಳಿಸಿದ್ದ ನಬಿ ವಿಕೆಟ್ ಪತನಗೊಳ್ಳುತ್ತಿದ್ದಂತೆ ಪಂದ್ಯ ಭಾರತ ಕಡೆಗೆ ಮರಳಿತು. ನಂತರ ಎರಡೂ ಎಸೆತಗಳಲ್ಲಿ ಕ್ರಮವಾಗಿ ಆಫ್ತಾಬ್ ಆಲಂ ಮತ್ತು ಮುಜೀಬ್ ಉರ್ ರೆಹಮಾನ್ ವಿಕೆಟ್‌ಗಳನ್ನು ಕಬಳಿಸಿದರು. ಏಳನೇ ಓವರ್‌ನಲ್ಲಿ ಅವರು ಆರಂಭಿಕ ಬ್ಯಾಟ್ಸ್‌ಮನ್ ಹಜರತ್‌ ಉಲ್ಲಾ ಜಜೈ ವಿಕೆಟ್ ಪಡೆದಿದ್ದರು.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸಾಧಕರು

ಬೌಲರ್‌ ವರ್ಷ ತಂಡ
ಚೇತನ್‌ ಶರ್ಮಾ 1987 ಭಾರತ
ಸಕ್ಲೈನ್‌ ಮುಷ್ತಾಕ್‌ 1999 ಪಾಕಿಸ್ತಾನ
ಚಮಿಂದ ವಾಸ್ 2003 ಶ್ರೀಲಂಕಾ
ಬ್ರೆಟ್‌ ಲೀ  2003 ಆಸ್ಟ್ರೇಲಿಯಾ
ಲಸಿತ್‌ ಮಾಲಿಂಗ (4ಕ್ಕೆ 4) 2007 ಶ್ರೀಲಂಕಾ
ಕೆಮರ್‌ ರೋಚ್‌ 2011 ವೆಸ್ಟ್ ಇಂಡೀಸ್‌
ಲಸಿತ್‌ ಮಾಲಿಂಗ 2011 ಶ್ರೀಲಂಕಾ
ಸ್ಟೀವೆನ್‌ ಫಿನ್‌ 2015 ಇಂಗ್ಲೆಂಡ್‌
ಜೆ.ಪಿ.ಡುಮಿನಿ 2015 ದಕ್ಷಿಣ ಆಫ್ರಿಕಾ
ಮೊಹಮ್ಮದ್‌ ಶಮಿ 2019 ಭಾರತ

Post Comments (+)