ಓಡಿಬಂದು ಸಲಹೆ ಉಸುರಿದ ಧೋನಿ; ವಿಕೆಟ್‌ ಉರುಳಿಸಿದ ಶಮಿ

ಬುಧವಾರ, ಜೂಲೈ 17, 2019
29 °C
ವಿಶ್ವಕಪ್‌ ಕ್ರಿಕೆಟ್‌

ಓಡಿಬಂದು ಸಲಹೆ ಉಸುರಿದ ಧೋನಿ; ವಿಕೆಟ್‌ ಉರುಳಿಸಿದ ಶಮಿ

Published:
Updated:

ಸೌತಾಂಪ್ಟನ್‌: ಅಫ್ಗಾನಿಸ್ತಾನ ಎದುರಿನ ಪಂದ್ಯದ ಕೊನೆಯ ಓವರ್‌ನಲ್ಲಿ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ, ಬೌಲರ್‌ ಮೊಹಮ್ಮದ್‌ ಶಮಿ ಬಳಿ ಓಡಿ ಬಂದು ಮಾತು ಉಸುರಿದ ಕೆಲವೇ ಗಳಿಗೆಯಲ್ಲಿ ಒಂದರಿಂದೊಂದು ವಿಕೆಟ್‌ಗಳು ಉರುಳಿ ಹೋದವು!

ಪಂದ್ಯದ ಕೊನೆಯ ಓವರ್‌ನಲ್ಲಿ ಶಮಿ ಎಸೆತವನ್ನು ಅಫ್ಗಾನ್‌ನ ಮೊಹಮ್ಮದ್ ನಬಿ ಬೌಂಡರಿ ದಾಟಿಸುತ್ತಿದ್ದಂತೆ ಭಾರತದ ಒತ್ತಡ ಹೆಚ್ಚಿತು. ಶಮಿ ರನ್‌ ನಿಯಂತ್ರಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿದರು. ಅವರು ಮೂರನೇ ಎಸೆತ ಎಸೆಯುವುದಕ್ಕೂ ಮುನ್ನ ಕೀಪಿಂಗ್‌ ಬಿಟ್ಟು ಓಡಿ ಬಂದ ಮಹೇಂದ್ರ ಸಿಂಗ್‌ ಧೋನಿ, ಪಟಪಟನೆ ಸಲಹೆ ನೀಡಿ ಸ್ಥಾನಕ್ಕೆ ಮರಳಿದರು. 

ಸ್ಟ್ರೈಕ್‌ನಲ್ಲಿದ್ದ ನಬಿಗೆ ಎಸೆದ ಮೂರನೇ ಎಸೆತವನ್ನು ನೇರವಾಗಿ ಹೊಡೆಯುವ ಪ್ರಯತ್ನದಲ್ಲಿ ಹಾರ್ದಿಕ್‌ ಪಾಂಡ್ಯಗೆ ಕ್ಯಾಚ್‌ ನೀಡಿ ಹೊರನಡೆದರು. ಭರ್ಜರಿ ಅರ್ಧ ಶತಕದ ಮೂಲಕ ಭಾರತದ ಬೌಲರ್‌ಗಳನ್ನು ಕಾಡಿದ್ದ ನಬಿ ಆಟ ಮುಗಿಸಿದ್ದು ಒತ್ತಡವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿತ್ತು. ಧೋನಿ–ಶಮಿ ನಡುವಿನ ಕೆಲ ಸೆಕೆಂಡ್‌ಗಳ ಮಾತುಕತೆ ನಬಿ ಆಟಕ್ಕೆ ಕೊನೆಹಾಡಿತು. ಇದರೊಂದಿಗೆ ಅಫ್ಗಾನಿಸ್ತಾನದ ಗೆಲವಿನ ಭರವಸೆಯೂ ಕುಂದಿತು. 

ಇದನ್ನೂ ಓದಿ: ವಿಶ್ವಕಪ್‌ ಇತಿಹಾಸ:ಹ್ಯಾಟ್ರಿಕ್‌ ಸಾಧನೆ ಮಾಡಿದ ಭಾರತದ 2ನೇ ಆಟಗಾರ ಮೊಹಮ್ಮದ್‌ ಶಮಿ

ಇವರಿಬ್ಬರ ನಡುವೆ ನಡೆದ ಮಾತುಕತೆ ಏನು? ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಿದರೆ, ಇನ್ನೂ ಕೆಲವರು ಹ್ಯಾಟ್ರಿಕ್ ಸಾಧನೆಗೆ ಧೋನಿಯೇ ಕಾರಣ ಎಂದು ಬಿಂಬಿಸಿದ್ದಾರೆ. ’ಶಮಿ ಸಾಧನೆಯನ್ನು ಧೋನಿ ದಾಖಲೆ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ’ ಎಂದೂ ಅಭಿಪ್ರಾಯ ಪಟ್ಟಿದ್ದಾರೆ. 

ಆದರೆ, ವರದಿಗಳ ಪ್ರಕಾರ ಮೊಹಮ್ಮದ್‌ ಶಮಿ ಹೇಳಿರುವುದು–

’’ಮಾಡಿದ ಯೋಜನೆ ಬಹಳ ಸರಳವಾಗಿತ್ತು. ಯಾರ್ಕರ್‌ ಎಸೆತ ಹಾಕುವುದು ಹಾಗೂ ಮಹಿ ಭಾಯ್‌ ಸಹ ಅದೇ ಸಲಹೆ ನೀಡಿದರು. ಅವರು, ’ಈಗ ಹ್ಯಾಟ್ರಿಕ್‌ ಪಡೆಯುವ ದೊಡ್ಡ ಅವಕಾಶ ನಿನ್ನ ಮುಂದಿದೆ, ಈಗ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳಬೇಡ. ಇಂಥ ಅವಕಾಶ ಬಹಳ ಅಪರೂಪ, ಬದಲಾವಣೆ ಮಾಡಿಕೊಳ್ಳದೆ ಅದನ್ನೇ ಮುಂದುವರಿಸು’ ಎಂದರು. ನನಗೆ ತಿಳಿಸಿದಂತೆಯೇ ನಾನು ಆಡಿದೆ’’ ಎಂದು ಶಮಿ ವರದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. 

ಕೊನೆಯ ಎರಡೂ ಎಸೆತಗಳಲ್ಲಿ ಕ್ರಮವಾಗಿ ಆಫ್ತಾಬ್ ಆಲಂ ಮತ್ತು ಮುಜೀಬ್ ಉರ್ ರೆಹಮಾನ್ ವಿಕೆಟ್‌ಗಳನ್ನು ಕಬಳಿಸಿದರು. ಏಳನೇ ಓವರ್‌ನಲ್ಲಿ ಅವರು ಆರಂಭಿಕ ಬ್ಯಾಟ್ಸ್‌ಮನ್ ಹಜರತ್‌ ಉಲ್ಲಾ ಜಜೈ ವಿಕೆಟ್ ಪಡೆದಿದ್ದರು. ಈ ಮೂಲಕ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಶಮಿ ಪಾತ್ರರಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 19

  Happy
 • 1

  Amused
 • 3

  Sad
 • 2

  Frustrated
 • 3

  Angry

Comments:

0 comments

Write the first review for this !