ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ತಡೆದು ಬಿಜೆಪಿ ಕಾರ್ಯಕರ್ತರ ಆಕ್ರೋಶ

ನರಗುಂದದಲ್ಲಿ ಬಿಜೆಪಿ ಶಾಸಕ ಸಿ.ಸಿ. ಪಾಟೀಲ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ; ಸಾಲ ಮನ್ನಾಕ್ಕೆ ಆಗ್ರಹ
Last Updated 29 ಮೇ 2018, 12:29 IST
ಅಕ್ಷರ ಗಾತ್ರ

ನರಗುಂದ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಘೋಷಣೆ ಮಾಡದಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ತಾಲ್ಲೂಕು ಘಟಕ ಕರೆ ನೀಡಿದ್ದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಶಾಸಕ ಸಿ.ಸಿ. ಪಾಟೀಲರ ನೇತೃತ್ವದಲ್ಲಿ ಪುರಸಭೆ ಆವರಣದಿಂದ ಬೆಳಿಗ್ಗೆ 11 ಗಂಟೆಗೆ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿ ಶಿವಾಜಿ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿತು. ಇದರಿಂದ ಬಸ್‌ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಬೇಕಾಯಿತು.

ಕಾಲೇಜು ವಿದ್ಯಾರ್ಥಿಗಳು ಮರಳಿ ಊರುಗಳಿಗೆ ಸಕಾಲಕ್ಕೆ ತೆರಳಲು ತೊಂದರೆ ಪಡಬೇಕಾಯಿತು. ಪ್ರತಿಭಟನೆ ಸಂದರ್ಭದಲ್ಲಿ ಅಂಗಡಿ– ಮುಂಗಟ್ಟುಗಳು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದವು. ನಂತರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮತ್ತೆ ಅಂಗಡಿಗಳು ಯಥಾವತ್ತಾಗಿ ತೆರೆದುಕೊಂಡವು.

ನವಲಗುಂದ ಕಡೆ ಬಸ್‌ ಸ್ಥಗಿತ: ಅಮರಗೋಳ ಕ್ರಾಸ್‌ ಬಳಿ ಹೆದ್ದಾರಿ ತಡೆ ನಡೆದಿದ್ದರಿಂದ ನವಲಗುಂದ ಮಾರ್ಗವಾಗಿ ತರೆಳುವ ಬಸ್‌ಗಳು ಬೆಳಿಗ್ಗೆಯಿಂದಲೇ ಸ್ಥಗಿತಗೊಂಡವು. ಇದರಿಂದ ಹುಬ್ಬಳ್ಳಿ ಕಡೆ ತೆರಳುವ ಪ್ರಯಾಣಿಕರು ತೀವ್ರ ಪರದಾಡಬೇಕಾಯಿತು.

ಬಂದ್‌ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಸಿ.ಪಾಟೀಲ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಚುನಾವಣೆ ಪೂರ್ವ ಘೋಷಿಸಿದಂತೆ ರೈತರ ಸಾಲ ಮನ್ನಾ ಮಾಡಲು ಮುಂದಾಗಬೇಕು. ಕಾಂಗ್ರೆಸ್‌ ಪಕ್ಷ ರೈತರ ಏಳ್ಗೆ ಬಯಸದು. ಅದರ ಕುತಂತ್ರಕ್ಕೆ ಮಣಿಯದೇ ತಮ್ಮ ಅಧಿಕಾರ ಬಳಸಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಎಸ್‌.ಆರ್‌.ಹಿರೇಮಠ, ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ, ಸದಸ್ಯರಾದ ವಸಂತ ಜೋಗಣ್ಣವರ, ಉಮೇಶ ಕುಡೇನವರ, ಚಂದ್ರು ಪವಾರ, ಎ.ಎಂ.ಹುಡೇದ, ಶಂಕ್ರಗೌಡ ಪಾಟೀಲ, ಉಮೇಶ ಮೊರಬಸ, ಅನೀಲ ಧರಿಯಣ್ಣವರ, ರಾಚನಗೌಡ ಪಾಟೀಲ ಸೇರಿದಂತೆ ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT