ಭಾನುವಾರ, ಅಕ್ಟೋಬರ್ 25, 2020
22 °C
ತಿರುಗೇಟು ನೀಡುವತ್ತ ಫಿಂಚ್ ಬಳಗದ ಚಿತ್ತ

ಇಂದು ಮೂರನೇ ಏಕದಿನ ಪಂದ್ಯ: ರಾಹುಲ್ ಆಟ ಕಣ್ತುಂಬಿಕೊಳ್ಳುವ ತವಕದಲ್ಲಿ ಬೆಂಗಳೂರು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಣ್ಣೂರು ಲೋಕೇಶ್ ರಾಹುಲ್ ತಮ್ಮ ತವರಿನಂಗಳ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಬಾರಿ ಏಕದಿನ ಪಂದ್ಯವನ್ನಾಡುವ ತವಕದಲ್ಲಿದ್ದಾರೆ.

ಭಾನುವಾರ ಇಲ್ಲಿ ನಡೆಯಲಿರುವ ಆಸ್ಟ್ರೆಲಿಯಾ ಎದುರಿನ ಸರಣಿಯ ಅಂತಿಮ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಖಚಿತ. ಇಲ್ಲಿ ಆಸ್ಟ್ರೇಲಿಯಾ ಎದುರು ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನು ಆಡಿರುವ ಅವರಿಗೆ ಇದುವರೆಗೆ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿರಲಿಲ್ಲ. ಎರಡೂವರೆ ವರ್ಷಗಳ ಹಿಂದಷ್ಟೇ ಇಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ರಾಹುಲ್‌ಗೆ ಕಣಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. ಬೆಂಚ್ ಮೇಲೆ ಕುಳಿತು ಪಂದ್ಯ ನೋಡಿದ್ದರು. ಆದರೆ, ಇವತ್ತಿನ ಪರಿಸ್ಥಿತಿ ಸಂಪೂರ್ಣ ತಿರುವುಮುರುವಾಗಿದೆ. ಬ್ಯಾಟಿಂಗ್ ಮತ್ತು ವಿಕೆಟ್‌ಕೀಪಿಂಗ್‌ ಎರಡರಲ್ಲೂ ಮಿಂಚುತ್ತಿರುವ 27 ವರ್ಷದ ರಾಹುಲ್ ಯಾವುದೇ ಕ್ರಮಾಂಕದಲ್ಲಿಯೂ ರನ್‌ ಗಳಿಸುವ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. 

ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ ಹೆಲ್ಮೆಟ್‌ಗೆ ಚೆಂಡು ಬಡಿದ ಕಾರಣ ರಿಷಭ್ ಪಂತ್ ವಿಶ್ರಾಂತಿ ಪಡೆದಿದ್ದರು. ಅದಕ್ಕಾಗಿ ರಾಹುಲ್ ಗ್ಲೌಸ್‌ ಕೈಗೇರಿಸಿದ್ದರು. ಶುಕ್ರವಾರ ರಾಜ್‌ಕೋಟ್‌ನಲ್ಲಿ ಆ್ಯರನ್ ಫಿಂಚ್ ಅವರನ್ನು ಮಿಂಚಿನ ಸ್ಟಂಪಿಂಗ್ ಮಾಡಿ ಬಲಿ ಪಡೆದಿದ್ದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿ ಭರ್ಜರಿ 80 ರನ್ ಗಳಿಸಿ ಪಂದ್ಯ ಶ್ರೇಷ್ಠ ಗೌರವವನ್ನೂ ಗಳಿಸಿದ್ದರು. ಇದರಿಂದಾಗಿ ಭಾರತವು ಮೂರು ಪಂದ್ಯಗಳ ಸರಣಿಯಲ್ಲಿ 1–1ರಿಂದ ಸಮಬಲ ಸಾಧಿಸುವಂತಾಯಿತು. ಇದರಿಂದಾಗಿ ಈಗ ಕದನ ಕುತೂಹಲ ಗರಿಗೆದರಿದೆ.

ಮರುಜನ್ಮ ನೀಡಿದ ಕ್ರೀಡಾಂಗಣ: 2017 ಮತ್ತು 2018ರ ಅವಧಿಯಲ್ಲಿ ಬ್ಯಾಟಿಂಗ್‌ನಲ್ಲಿ ಅಸ್ಥಿರತೆ ಅನುಭವಿಸಿದ್ದ ರಾಹುಲ್ ವಿಶ್ವಕಪ್‌ನಲ್ಲಿಯೂ ಮಂಕಾ ಗಿದ್ದರು. ಅದರ ನಂತರ ತಂಡದಲ್ಲಿ ಅವರು ಸ್ಥಾನ ಪಡೆದರೂ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಆದರೆ ಎದೆಗುಂದದ ರಾಹುಲ್ ಹೋದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ 11 ಪಂದ್ಯಗಳಲ್ಲಿ 598 ರನ್‌ ಗಳಿಸಿದರು. ಅದರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಬಾರಿಸಿದರು. ಕರ್ನಾಟಕ ಚಾಂಪಿಯನ್ ಕೂಡ ಆಯಿತು.

ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಲಭಿಸಿದ ಅವಕಾಶಗಳಲ್ಲಿ ಮಿಂಚಿದರು. ಇದರಿಂದಾಗಿ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಇದ್ದರೂ ರಾಹುಲ್ ಸ್ಥಾನ ಗಳಿಸಿದರು. ಮುಂಬೈನಲ್ಲಿ ಮೂರನೇ ಕ್ರಮಾಂಕದಲ್ಲಿ 47 ರನ್ ಗಳಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇದೀಗ ತವರಿನಂಗಳಲ್ಲಿ  ಅವರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

ಪಕ್ಕೆಲುಬಿನ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಶಿಖರ್ ಮತ್ತು ಫೀಲ್ಡಿಂಗ್ ಮಾಡುವಾಗ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದ ರೋಹಿತ್ ಕಣಕ್ಕಿಳಿಯುವುದು ಇನ್ನೂ ಖಚಿತವಾಗಿಲ್ಲ. ಎರಡನೇ ಪಂದ್ಯದಲ್ಲಿ ಉತ್ತಮ ಆರಂಭ ನೀಡಿದ ಇಬ್ಬರೂ ಇಲ್ಲಿ ಆಡಿದರೆ, ರಾಹುಲ್  ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಬೇಕಾಗಬಹುದು. ಸತತ ವೈಫಲ್ಯ ಅನುಭವಿಸುತ್ತಿರುವ ಶ್ರೇಯಸ್ ಅಯ್ಯರ್ ಬದಲಿಗೆ ಶಿವಂ ದುಬೆ ಅಥವಾ ಕೇದಾರ್ ಜಾಧವ್ ಕಣಕ್ಕಿಳಿದರೆ ಅಚ್ಚರಿಯಿಲ್ಲ. ಚುರುಕಿನ ಫೀಲ್ಡರ್‌ ಮನೀಷ್ ಪಾಂಡೆ ಕೂಡ ಕಣಕ್ಕಿಳಿಯುವುದು ಬಹುತೇಕ ಖಚಿತ. ಇದರಿಂದಾಗಿ ಇಬ್ಬರು ಸ್ಥಳೀಯ ಹೀರೊಗಳ ಆಟ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

ಮುಯ್ಯಿ ತೀರಿಸಿಕೊಳ್ಳುವರೇ ಕೊಹ್ಲಿ?: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೂ ಉದ್ಯಾನನಗರಿ ತವರಿನಂಗಳವಿದ್ದಂತೆ. 2017ರಲ್ಲಿ ಆಸ್ಟ್ರೇಲಿಯಾ ಎದುರು ಕೊಹ್ಲಿ ಬಳಗವು ಸೋತಿತ್ತು. ಆಗ 94 ರನ್ ಗಳಿಸಿದ್ದ ಫಿಂಚ್ ಮತ್ತು ಶತಕ ಬಾರಿಸಿ, 231 ರನ್‌ಗಳ ದಾಖಲೆ ಜೊತೆಯಾಟವಾಡಿದ್ದರು. ಇದೀಗ ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.

ಅದರಿಂದಾಗಿ ಭಾರತವು ಸೋತಿತ್ತು. ಈಗಲೂ ಇವರಿಬ್ಬರೂ ಅಮೋಘ ಲಯದಲ್ಲಿದ್ದಾರೆ. ಅವರಲ್ಲದೇ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಶೇನ್ ಕೂಡ ಅವರೂ ರನ್‌ ಹರಿಸುವುದರಲ್ಲಿ ನಿಷ್ಣಾತರಾಗಿದ್ದಾರೆ. ಅವರನ್ನು ಕಟ್ಟಿಹಾಕಲು ಭಾರತದ ಬೌಲರ್‌ಗಳು ಕೂಡ ಸಿದ್ಧರಾಗಿದ್ದಾರೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಶುಕ್ರವಾರದ ಪಂದ್ಯದಲ್ಲಿ ತಮ್ಮ ಒಂದೇ ಓವರ್‌ನಲ್ಲಿ ಸ್ಮಿತ್ ಮತ್ತು ಅಲೆಕ್ಸ್ ಕ್ಯಾರಿ ವಿಕೆಟ್ ಕಬಳಿಸಿ ತಂಡವನ್ನು ಗೆಲುವಿನ ಹಾದಿಗೆ ತಂದಿದ್ದರು. ಉಳಿದ ಬೌಲರ್‌ಗಳೂ ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದ್ದರಿಂದ ಬೌಲಿಂಗ್‌ನಲ್ಲಿ ಯಾವುದೇ ಬದಲಾವಣೆ ಮಾಡಲಿಕ್ಕಿಲ್ಲ.

ಚಳಿಗಾಳಿಯ ಪ್ರಭಾವ
ಕಳೆದ  ಐದು ದಿನಗಳಿಂದ ಬೆಂಗಳೂರಿನಲ್ಲಿ ಮುಸ್ಸಂಜೆ ಮತ್ತು ರಾತ್ರಿಯಲ್ಲಿ ಮೈಕೊರೆಯುವ ಚಳಿಗಾಳಿ ಇದೆ. ಇಬ್ಬನಿಯೂ ಬೀಳುತ್ತಿದೆ. ಈ ಹವಾಗುಣವು ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಕಠಿಣ ಸವಾಲೊಡ್ಡಬಹುದು. ಆದ್ದರಿಂದ ಟಾಸ್ ಗೆದ್ದವರು ತೆಗೆದುಕೊಳ್ಳುವ ನಿರ್ಧಾರವೂ ಮುಖ್ಯವಾಗಲಿದೆ. ಇಲ್ಲಿಯ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುವ ಸಾಧ್ಯತೆಯೇ ಹೆಚ್ಚು. ರನ್‌ಗಳ ಹೊಳೆ ಹರಿಯುವ ನಿರೀಕ್ಷೆ ಇದೆ. ಭಾರತ ಮತ್ತು ಆಸ್ಟ್ರೇಲಿಯಾ ಇಲ್ಲಿ ಮುಖಾಮುಖಿಯಾದ ಕಳೆದೆರಡು ಪಂದ್ಯಗಳಲ್ಲಿ ಕ್ರಮವಾಗಿ ಒಟ್ಟು 709 ಮತ್ತು 647 ರನ್‌ಗಳು ದಾಖಲಾಗಿದ್ದವು.

ಬಂಟಿಂಗ್ಸ್, ಬ್ಯಾನರ್‌ಗೆ ಅವಕಾಶವಿಲ್ಲ
ಬೆಂಗಳೂರು:
ಭಾರತ–ಆಸ್ಟ್ರೇಲಿಯಾ ನಡುವಣ ಪಂದ್ಯ ವೀಕ್ಷಣೆಗೆ ಬರಲಿರುವ ಪ್ರೇಕ್ಷಕರು ರಾಜಕೀಯ ಸಂಬಂಧಿ ಭಿತ್ತಿಪತ್ರಗಳು ಮತ್ತು ವಿವಾದಾತ್ಮಕ ಹೇಳಿಕೆ ಗಳಿರುವ ಬ್ಯಾನರ್‌ಗಳನ್ನು ತರಬಾರದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಮನವಿ ಮಾಡಿದೆ.

‘ಕ್ರಿಕೆಟ್ ಪಂದ್ಯವು ಸುಗಮವಾಗಿ ನಡೆಯಲು ಮತ್ತು ಕ್ರೀಡೆಯನ್ನು ಆಸ್ವಾದಿಸಲು ಯಾವುದೇ ಅಡೆತಡೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಮೆನನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಕೆಲವರು, ಪೌರತ್ವ (ತಿದ್ದು ಪಡಿ) ಕಾಯ್ದೆ ವಿರೋಧಿಸಿ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದರು.

ನಿಷೇಧಿತ ವಸ್ತುಗಳ ಪಟ್ಟಿ: ಪ್ಲೆಕಾರ್ಡ್‌, ಬಂಟಿಂಗ್ಸ್, ಸ್ಪೋಟಕ ವಸ್ತುಗಳು, ಲೈಟರ್ಸ್, ಸಿಗರೇಟ್, ಬೀಡಿ, ಬೆಂಕಿ ಪೊಟ್ಟಣ, ಆಟದ ಪಿಸ್ತೂಲು, ನೀರಿನ ಬಾಟಲಿ, ಚಾಕು, ಕತ್ತರಿ, ಉಗುರು ಕತ್ತರಿಸುವ ಸಲಕರಣೆ, ಆಯುಧಗಳು, ಪಟಾಕಿಗಳು, ಪೆಟ್ರೋಲ್, ಡೀಸೆಲ್, ವಿಡಿಯೊ ಅಥವಾ ಸ್ಥಿರ ಚಿತ್ರ ಕ್ಯಾಮೆರಾ ಗಳು, ಬೈನಾಕ್ಯುಲರ್ಸ್, ಹ್ಯಾಂಡಿಕ್ಯಾಮ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಐಪಾಡ್, ಪವರ್ ಬ್ಯಾಂಕ್‌, ಎಲೆಕ್ಟ್ರಾನಿಕ್ಸ್ ಗ್ಯಾಜೆಟ್, ಹೆಡ್‌ಫೋನ್, ಮಾದಕ ದ್ರವ್ಯ ಗಳು, ಮದ್ಯ, ಸುಗಂಧ ದ್ರವ್ಯ, ಜೆಲ್, ಕಾಸ್ಮೆಟಿಕ್ಸ್, ಹೆಲ್ಮೆಟ್, ಧ್ಜಜ ಕಟ್ಟುವ ಕಟ್ಟಿಗೆ, ಛತ್ರಿಗಳು, ಪ್ಲಾಸ್ಕ್, ಸೂಟ್‌ಕೇಸ್, ಗುಟ್ಕಾ, ಸುಪಾರಿ, ಸಾಕುಪ್ರಾಣಿಗಳು.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ರೋಹಿತ್ ಶರ್ಮಾ, ಶಿಖರ್ ಧವನ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್, ರವೀಂದ್ರ ಜಡೇಜ, ನವದೀಪ್ ಸೈನಿ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ಕೇದಾರ್ ಜಾಧವ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ಆಷ್ಟನ್ ಟರ್ನರ್, ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ, ಜೋಶ್ ಹ್ಯಾಜಲ್‌ವುಡ್, ಪೀಟರ್ ಹ್ಯಾಂಡ್ಸ್‌ಕಂಭ್, ಡಿ ಆರ್ಚಿ ಶಾರ್ಟ್.

ಅಂಪೈರ್ಸ್‌: ಮೈಕೆಲ್ ಗಾಫ್, ಸಿ. ಶಂಸುದ್ದೀನ್, ಮೂರನೇ ಅಂಪೈರ್: ರಿಚರ್ಡ್ ಕೆಟಲ್‌ಬೊರೊ, ಮ್ಯಾಚ್ ರೆಫರಿ: ರಂಜನ್ ಮದುಗಲೆ.

ಪಂದ್ಯ ಆರಂಭ: ಮಧ್ಯಾಹ್ನ 1.30ರಿಂದ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು