ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WTC FINAL: ಭಾರತ ತಂಡದ ಹಾದಿ ಕಠಿಣ

Published 9 ಜೂನ್ 2023, 2:08 IST
Last Updated 9 ಜೂನ್ 2023, 2:08 IST
ಅಕ್ಷರ ಗಾತ್ರ

ಲಂಡನ್: ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡದ ವೇಗದ ದಾಳಿಯ ಮುಂದೆ ಭಾರತ ತಂಡದ ಅಗ್ರ ಬ್ಯಾಟರ್‌ಗಳು ಮುಗ್ಗರಿಸಿದರು. 

ಇದರಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಬಳಗಕ್ಕೆ ಹಿನ್ನಡೆಯ ಭೀತಿ ಕಾಡಿತು. ದ ಒವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 469 ರನ್‌ ಗಳಿಸಿತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು 38ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 151ರನ್‌ ಗಳಿಸಿತು.

ರವೀಂದ್ರ ಜಡೇಜ (48) ಆಸರೆಯಾದರೆ, ಅಜಿಂಕ್ಯ ರಹಾನೆ  (ಬ್ಯಾಟಿಂಗ್ 29) ಅವರು ಇನಿಂಗ್ಸ್‌ಗೆ ಬಲ ತುಂಬುವ ಹೋರಾಟ ಮಾಡುತ್ತಿದ್ದಾರೆ. ಭಾರತವು ಇದೀಗ 318 ರನ್‌ಗಳ ಹಿನ್ನಡೆಯಲ್ಲಿದೆ.

ಗುರುವಾರ ಊಟದ ವಿರಾಮದ ನಂತರದ ಅವಧಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಲು ಪ್ರಯತ್ನಿಸಿದ ರೋಹಿತ್ ಶರ್ಮಾ ಅವರನ್ನು ಆರನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಪ್ಯಾಟ್ ಕಮಿನ್ಸ್‌ ಸಂಭ್ರಮಿಸಿದರು. 26 ಎಸೆತಗಳಲ್ಲಿ 15 ರನ್ ಗಳಿಸಿದ ರೋಹಿತ್ ಪೆವಿಲಿಯನ್‌ಗೆ ಮರಳಿದರು.

ಇದರ ನಂತರದ ಓವರ್‌ನಲ್ಲಿ ಸ್ಕಾಟ್ ಬೊಲಾಂಡ್ ಹಾಕಿದ ಇನ್‌ಸ್ವಿಂಗ್‌ ಗುರುತಿಸುವಲ್ಲಿ ವಿಫಲರಾದ ಶುಭಮನ್ ಗಿಲ್ ಕ್ಲೀನ್‌ಬೌಲ್ಡ್ ಆದರು.

ಕಳೆದ ಹಲವು ದಿನಗಳಿಂದ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದ ಅನುಭವಿ ಚೇತೇಶ್ವರ್ ಪೂಜಾರ ಕೂಡ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಿದರು. 14 ರನ್ ಗಳಿಸಿದ ಅವರು ಕ್ಯಾಮರಾನ್ ಗ್ರೀನ್
ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಅವರು ಕೂಡ ಗಿಲ್ ಮಾದರಿಯಲ್ಲಿಯೇ ಔಟಾದರು. 

31 ಎಸೆತಗಳಲ್ಲಿ 14 ರನ್‌ ಗಳಿಸಿದ್ದ ವಿರಾಟ್ ಕೊಹ್ಲಿ ಲಯಕ್ಕೆ ಮರಳುವ ವಿಶ್ವಾಸ ಮೂಡಿಸಿದ್ದರು. ಇದೇ ಹೊತ್ತಿನಲ್ಲಿ ಮಿಚೆಲ್ ಸ್ಟಾರ್ಕ್ ಹಾಕಿದ ಎಸೆತವನ್ನು ಹೊಡೆಯುವ ಪ್ರಯತ್ನದಲ್ಲಿ ಸ್ಪಿಪ್‌ನಲ್ಲಿದ್ದ ಸ್ಮಿತ್‌ಗೆ ಕ್ಯಾಚಿತ್ತರು.

ಜಡೇಜ ಮತ್ತು ರಹಾನೆ 5ನೇ ವಿಕೆಟ್‌ಗೆ 71 ರನ್‌ ಸೇರಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಜಡೇಜ ಅವರ ವಿಕೆಟ್‌ ಪಡೆದ ನೇಥನ್‌ ಲಯನ್, ಭಾರತ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು.

ಸ್ಮಿತ್ ಶತಕ, ಸಿರಾಜ್ ಆಟ:

ಬುಧವಾರ ಟಾಸ್ ಗೆದ್ದಿದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಟ್ರಾವಿಸ್ ಹೆಡ್ ಶತಕ ಹಾಗೂ ಸ್ಮಿತ್ ಅಮೋಘ ಬ್ಯಾಟಿಂಗ್ ಬಲದಿಂದ ದಿನದಾಟದ ಕೊನೆಗೆ ಆಸ್ಟ್ರೇಲಿಯಾವು 3 ವಿಕೆಟ್‌ಗಳಿಗೆ 350 ರನ್‌ ಗಳಿಸಿತ್ತು. 91 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಸ್ಮಿತ್ ಶತಕ (121, 268ಎ, 4X19) ಎರಡನೇ ದಿನದಾಟದಲ್ಲಿ ಪೂರೈಸಿದರು. ಅವರು ಹೆಡ್ ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 285 ರನ್‌ಗಳನ್ನು ಸೇರಿಸಿದರು. ಬೆಳಗಿನ ಅವಧಿಯಲ್ಲಿಯೇ ಸಿರಾಜ್ ಈ ಜೊತೆಯಾಟ ಮುರಿದರು. ಅವರು ಹೆಡ್ ವಿಕೆಟ್ ಉರುಳಿಸಿದರು. ಇದಾಗಿ ಏಳು ಓವರ್‌ಗಳ ನಂತರ ಶಾರ್ದೂಲ್ ಬೌಲಿಂಗ್‌ನಲ್ಲಿ ಸ್ಮಿತ್ ಕ್ಲೀನ್‌ಬೌಲ್ಡ್ ಆದರು.

ಕೆಳಕ್ರಮಾಂಕದಲ್ಲಿ ಅಲೆಕ್ಸ್ ಕ್ಯಾರಿ (48; 69ಎ) ಅವರೊಬ್ಬರೇ ರನ್‌ ಗಳಿಸುವಲ್ಲಿ ಯಶಸ್ವಿಯಾದರು. ನಂತರದ ಆಟದಲ್ಲಿ ಉಳಿದ ಬ್ಯಾಟರ್‌ಗಳು  ಹೆಚ್ಚು ರನ್ ಗಳಿಸಲಿಲ್ಲ.

ಸಿರಾಜ್ ಒಟ್ಟು ನಾಲ್ಕು ವಿಕೆಟ್ ಗಳಿಸಿದರು. ಶಮಿ ಹಾಗೂ ಠಾಕೂರ್ ತಲಾ ಎರಡು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT