ಬುಧವಾರ, ನವೆಂಬರ್ 13, 2019
23 °C

ವೀಕ್ಷಕ–ನಿರೂಪಕರಾಗಿ ಮಿಂಚಲಿದ್ದಾರೆಯೇ ಮಹೇಂದ್ರ ಸಿಂಗ್‌ ಧೋನಿ?

Published:
Updated:

ಬೆಂಗಳೂರು: ಸುಮಾರು ಒಂದೂವರೆ ದಶಕದಿಂದ  ಕ್ರಿಕೆಟ್ ಅಂಗಳದಲ್ಲಿ ಮಹೇಂದ್ರಸಿಂಗ್ ಧೋನಿಯ ನಾಯಕತ್ವ, ಬ್ಯಾಟಿಂಗ್ ಮತ್ತು ವಿಕೆಟ್‌ಕೀಪಿಂಗ್ ನೋಡಿದವರು ಕೋಟಿ ಕೋಟಿ ಜನರಿದ್ದಾರೆ. ಇದೀಗ ಅವರನ್ನು ಹೊಸದೊಂದು ಅವತಾರದಲ್ಲಿ ನೋಡುವ ಅವಕಾಶ ಸಿಗುವ ಸಾಧ್ಯತೆ ಇದೆ.

ಇದೇ 22ರಂದು ಕೋಲ್ಕತ್ತದಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಣ ಹಗಲು–ರಾತ್ರಿ ಟೆಸ್ಟ್‌ನಲ್ಲಿ ಅವರು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ವೀಕ್ಷಕ ವಿವರಣೆ ಮಾಡುವ ಸಾಧ್ಯತೆ ಇದೆ ಎಂದು ‘ಇಂಡಿಯಾ ಟುಡೆ’ ವೆಬ್‌ಸೈಟ್ ವರದಿ ಮಾಡಿದೆ. ಇದರಿಂದಾಗಿ ಧೋನಿ ಅವರು ನಿಗದಿಯ ಓವರ್‌ಗಳ ಕ್ರಿಕೆಟ್‌ ವಿದಾಯ ಹೇಳಿ, ಕಾಮೆಂಟ್ರಿ ಬಾಕ್ಸ್‌ಗೆ ಪದಾರ್ಪಣೆ ಮಾಡುವರೇ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಈ ಬಗ್ಗೆ ಇನ್ನೂ ಖಚಿತವಾಗಿಲ್ಲ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇದೇ ಮೊದಲ ಬಾರಿ ಭಾರತದಲ್ಲಿ ನಡೆಯಲಿರುವ ಹೊನಲು ಬೆಳಕಿನ ಟೆಸ್ಟ್‌ ಪಂದ್ಯವನ್ನು ಅವಿಸ್ಮರಣೀಯಗೊಳಿಸಲು ಒಂದು ಕಾರ್ಯಕ್ರಮದ ಯೋಜನೆ ಹಾಕಿಕೊಂಡಿದ್ದಾರೆ. ಭಾರತದ ಟೆಸ್ಟ್‌ ತಂಡವನ್ನು ಇಲ್ಲಿಯವರೆಗೆ ಮುನ್ನಡೆಸಿದ ನಾಯಕರನ್ನು ಈ ಪಂದ್ಯಕ್ಕೆ ಆಹ್ವಾನಿಸುವುದು ಮತ್ತು ಅವರಿಂದ ಕಾಮೆಂಟ್ರಿ ಮಾಡಿಸುವುದು ಅವರ ಯೋಜನೆ. ಇದರಿಂದಾಗಿ ಸ್ವತಃ ಸೌರವ್‌, ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್, ಸುನಿಲ್ ಗಾವಸ್ಕರ್, ಕಪಿಲ್ ದೇವ್ ಅವರಂತಹ ದಿಗ್ಗಜರನ್ನು ಒಂದೆಡೆ ಸೇರುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಧೋನಿ ಕೂಡ ಇದ್ದಾರೆ.

ಅವರಿಗೂ ಆಮಂತ್ರಣ ಕಳುಹಿಸಲಾಗಿದೆ. ಅವರು ಇಲ್ಲಿಗೆ ಆಗಮಿಸುವ ಬಗ್ಗೆ ಖಚಿತಪಡಿಸಬೇಕಷ್ಟೇ ಎಂದು ಗಂಗೂಲಿಯ ಆಪ್ತ ಮೂಲಗಳು ತಿಳಿಸಿವೆ.

ಆದರೆ, 2014ರಲ್ಲಿಯೇ ಟೆಸ್ಟ್‌ ಕ್ರಿಕೆಟ್‌ ಮಾದರಿಯಿಂದ ಧೋನಿ ನಿವೃತ್ತರಾಗಿದ್ದರು. ಆದ್ದರಿಂದ ಅವರನ್ನು ಇಲ್ಲಿ ಕರೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅವರು ಏಕದಿನ ಮತ್ತು ಟ್ವೆಂಟಿ–20ಯಲ್ಲಿ  ಮುಂದುವರಿದಿದ್ದರು.

ಈಚೆಗೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್  ಟೂರ್ನಿಯಲ್ಲಿ ಆಡಿದ್ದರು. ಅದರ ನಂತರ ಭಾರತವು ಆಡಿದ್ದ ಸರಣಿಯಲ್ಲಿ ಅವರು ಕಣಕ್ಕೆ ಮರಳಿಲ್ಲ. 

ಪ್ರತಿಕ್ರಿಯಿಸಿ (+)