ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್: ಅಜೇಯ ಆಟದತ್ತ ಭಾರತದ ನೋಟ

ಇನಿಂಗ್ಸ್‌ ಆರಂಭಿಸಲು ಸಿದ್ಧವಾಗಿರುವ ರೋಹಿತ್–ಮಯಂಕ್
Last Updated 13 ನವೆಂಬರ್ 2019, 20:05 IST
ಅಕ್ಷರ ಗಾತ್ರ

ಇಂದೋರ್: ರನ್‌ಗಳ ಹೊಳೆ ಹರಿಸುವ ಪಿಚ್ ಎಂದೇ ಖ್ಯಾತವಾಗಿರುವ ಹೋಳ್ಕರ್ ಮೈದಾನದಲ್ಲಿ ಗುರುವಾರ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಮೊದಲ ಟೆಸ್ಟ್‌ ಆರಂಭವಾಗಲಿದೆ.

ಹಗಲು ಅವಧಿಯ ಪಂದ್ಯವಾಗಿರುವ ಇದರಲ್ಲಿ ಕೆಂಪು ಚೆಂಡು ಬಳಕೆಯಾಗುತ್ತಿದೆ. ಆದರೆ, ಉಭಯ ತಂಡಗಳ ಆಟಗಾರರಲ್ಲಿ ಮಾತ್ರ ನಸುಗೆಂಪು (ಪಿಂಕ್ ಬಾಲ್) ಚೆಂಡಿನ ಗುಂಗು ಇದೆ.ಕೋಲ್ಕತ್ತದಲ್ಲಿ ಸರಣಿಯ ಎರಡನೇ ಪಂದ್ಯವು ಹಗಲು ರಾತ್ರಿ ಅವಧಿಯಲ್ಲಿ ನಡೆಯಲಿದ್ದು, ಪಿಂಕ್ ಬಾಲ್ ಬಳಕೆಯಾಗುತ್ತಿದೆ.ಭಾರತ ತಂಡಕ್ಕೆ ಅದು ಪ್ರಥಮ ಹೊನಲು ಬೆಳಕಿನ ಕ್ರಿಕೆಟ್‌ ಟೆಸ್ಟ್ ಪಂದ್ಯವಾಗಿದೆ. ಆದರೆ ಅದಕ್ಕಿಂತ ಮೊದಲು ಇಲ್ಲಿಯ ಟೆಸ್ಟ್ ಆಡಲು ಕೂಡ ಸಿದ್ಧತೆ ಮಾಡಿಕೊಂಡಿದೆ.

ತವರಿನಲ್ಲಿ ಸತತ 11 ಸರಣಿಗಳನ್ನು ಗೆದ್ದಿರುವ ಭಾರತ ತಂಡವು ತನ್ನ ಅಜೇಯ ಓಟ ಮುಂದುವರಿಸುವ ಛಲದಲ್ಲಿದೆ. ಆದರೆ, ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಆಘಾತ ನೀಡಿದ್ದ ಬಾಂಗ್ಲಾದೇಶ ತಂಡವು ಟೆಸ್ಟ್‌ನಲ್ಲಿಯೂ ಜಿಗುಟುತನದ ಆಟ ತೋರಲು ಸಿದ್ಧವಾಗಿದೆ.
ಹೋದ ತಿಂಗಳು ದಕ್ಷಿಣ ಆಫ್ರಿಕಾ ತಂಡದ ಎದುರು ಸರಣಿ ಜಯಿಸಿರುವ ವಿರಾಟ್ ಬಳಗವು ಆತ್ಮವಿಶ್ವಾಸದ ಉತ್ತುಂಗದಲ್ಲಿದೆ. ಆ ಸರಣಿಯಲ್ಲಿ ಇನಿಂಗ್ಸ್‌ ಆರಂಭಿಸಿದ್ದ ರೋಹಿತ್ ಶರ್ಮಾ ದಾಖಲೆಗಳು ಮತ್ತು ರನ್‌ಗಳ ರಾಶಿಯನ್ನೇ ಪೇರಿಸಿದ್ದರು. ಅವರೊಂದಿಗೆ ಕನ್ನಡಿಗ ಮಯಂಕ್ ಅಗರವಾಲ್ ಕೂಡ ಮಿಂಚಿದ್ದರು. ದ್ವಿಶತಕ ಹೊಡೆದಿದ್ದ ಅವರು ಅಭಿಮಾನಿಗಳ ಮನಗೆದ್ದಿದ್ದರು. ಇದೇ ಜೋಡಿ ಈ ಸರಣಿಯಲ್ಲಿಯೂ ಇನಿಂಗ್ಸ್‌ ಆರಂಭಿಸಲಿದೆ.ನಾಯಕ ವಿರಾಟ್, ಉಪನಾಯಕ ಅಜಿಂಕ್ಯ ರಹಾನೆ ಕೂಡ ಅಮೋಘ ಲಯದಲ್ಲಿದ್ದಾರೆ.

2016ರಲ್ಲಿ ಹೋಳ್ಕರ್‌ ಮೈದಾನದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ವಿರಾಟ್ ದ್ವಿಶತಕ ಮತ್ತು ಅಜಿಂಕ್ಯ ಶತಕ ಹೊಡೆದಿದ್ದರು. ಅದಾದ ನಂತರ ಇಲ್ಲಿ ನಡೆಯುತ್ತಿರುವ ಟೆಸ್ಟ್ ಇದು.ಇಲ್ಲಿಯ ಪಿಚ್‌ ಬ್ಯಾಟ್ಸ್‌ಮನ್‌ಗಳ ಸ್ವರ್ಗವಾಗಿದೆ. 2012ರಲ್ಲಿ ಇಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ದ್ವಿಶತಕ ಬಾರಿಸಿದ್ದರು.

ಇಲ್ಲಿ ನಡೆದ ಯಾವುದೇ ಪಂದ್ಯದ ದಾಖಲೆಗಳನ್ನು ನೋಡಿದರೂ ರನ್‌ಗಳ ಹೊಳೆ ಹರಿದಿದೆ. ಆದ್ದರಿಂದ ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಮಾಡುವ ಉತ್ಸಾಹ ತೋರುವುದು ಸಹಜ.

ಟೆಸ್ಟ್‌ನಲ್ಲಿ ಬಾಂಗ್ಲಾ ತಂಡವನ್ನು ಮೊಮಿನುಲ್ ಹಕ್ ಮುನ್ನಡೆಸುತ್ತಿದ್ದಾರೆ. ನಿಷೇಧಕ್ಕೊಳಗಾಗಿರುವ ಶಕೀಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಛಲ ಅವರಲ್ಲಿದೆ.

ಮಹಮದುಲ್ಲಾ ರಿಯಾದ್, ಮುಷ್ಫಿಕುರ್ ರಹೀಮ್, ಲಿಟನ್ ಕುಮಾರ್ ದಾಸ್ ಮತ್ತು ಇಮ್ರುಲ್ ಕಯಸ್‌ ಅವರ ಬ್ಯಾಟಿಂಗ್ ಮೇಲೆ ಮೇಲೆ ಹಕ್‌ ಅವರು ವಿಶ್ವಾಸವಿಟ್ಟಿದ್ದಾರೆ. ಅನುಭವಿ ಬೌಲರ್ ಮುಸ್ತಫಿಜುರ್ ರೆಹಮಾನ್ ಸಾರಥ್ಯದ ಬೌಲಿಂಗ್ ಪಡೆಯ ಮುಂದೆ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ.

ಬಾಂಗ್ಲಾದೇಶ ತಂಡವು ಭಾರತದ ಎದುರು ಇದುವರೆಗೆ ಒಂದೂ ಟೆಸ್ಟ್ ಗೆದ್ದಿಲ್ಲ. ಇತಿಹಾಸ ಬರೆಯುವ ಉತ್ಸಾಹವು ಹಕ್ ಬಳಗದಲ್ಲಿದೆ.

ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್. ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ಕಾಯ್ದಿಟ್ಟ ಆಟಗಾರರು: ಶುಭಮನ್ ಗಿಲ್, ಹನುಮವಿಹಾರಿ, ರಿಷಭ್ ಪಂತ್.

ಬಾಂಗ್ಲಾದೇಶ: ಮೊಮಿನುಲ್ ಹಕ್ (ನಾಯಕ), ಇಮ್ರುಲ್ ಕಯೆಸ್, ಮುಷ್ಫಿಕುರ್ ರಹೀಮ್ (ವಿಕೆಟ್‌ಕೀಪರ್), ಮಹಮುದುಲ್ಲಾ ರಿಯಾದ್, ಮೊಹಮ್ಮದ್ ಮಿಥುನ್, ಲಿಟನ್ ಕುಮಾರ್ ದಾಸ್, ಮೆಹದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ನಯೀಂ ಹಸನ್, ಸೈಫ್ ಹಸನ್, ಶಾದಮನ್ ಇಸ್ಲಾಂ, ತೈಜುಲ್ ಇಸ್ಲಾಂ, ಅಬು ಜಯೆದ್, ಇಬಾದತ್ ಹುಸೇನ್, ಅಲ್ ಅಮಿನ್ ಹುಸೇನ್.

ಪಂದ್ಯ ಆರಂಭ: ಬೆಳಿಗ್ಗೆ 9.30

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT