ಸೋಮವಾರ, ಜುಲೈ 4, 2022
22 °C
ಕೋವಿಡ್‌ ಕಾರಣ ಶ್ರೀಲಂಕಾ– ಬಾಂಗ್ಲಾದೇಶ ಪಂದ್ಯ ರದ್ದು

19 ವರ್ಷದೊಳಗಿನವರ ಏಷ್ಯಾಕಪ್: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ಇಬ್ಬರು ಅಧಿಕಾರಿಗಳಿಗೆ ಕೋವಿಡ್‌–19 ದೃಢಪಟ್ಟ ಹಿನ್ನೆಲೆಯಲ್ಲಿ 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಬಾಂಗ್ಲಾದೇಶ–ಶ್ರೀಲಂಕಾ ಪಂದ್ಯವು ರದ್ದಾಗಿದೆ.

ಗುಂಪು ಹಂತದ ಕೊನೆಯ ಪಂದ್ಯವು ರದ್ದುಗೊಂಡಿದ್ದು, ಭಾರತ ತಂಡವು ಸೆಮಿಫೈನಲ್‌ನಲ್ಲಿ ಗುರುವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

‘ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಮಂಗಳವಾರ ನಡೆಯಬೇಕಿದ್ದ 19 ವರ್ಷದೊಳಗಿನವರ ಏಷ್ಯಾ ಕಪ್‌ನ ಬಿ ಗುಂಪಿನ ಅಂತಿಮ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಖಚಿತಪಡಿಸಿವೆ‘ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ತಿಳಿಸಿದೆ.

‘ಇಬ್ಬರು ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಧಿಕಾರಿಗಳು ಆರೋಗ್ಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ‘ ಎಂದು ಎಸಿಸಿ ತಿಳಿಸಿದೆ.

ಬಿ ಗುಂಪಿನ ಈ ಪಂದ್ಯದಲ್ಲಿ 32.2 ಓವರ್‌ಗಳ ಆಟ ನಡೆದಿತ್ತು. ಮೊದಲು ಬ್ಯಾಟ್‌ ಮಾಡುತ್ತಿದ್ದ ಬಾಂಗ್ಲಾ ಪಂದ್ಯ ಸ್ಥಗಿತಗೊಂಡ ಸಂದರ್ಭದಲ್ಲಿ 4 ವಿಕೆಟ್‌ಗೆ 130 ರನ್‌ ಗಳಿಸಿತ್ತು. ಆರಿಫುಲ್ ಇಸ್ಲಾಂ (19) ಮತ್ತು ಮೊಹಮ್ಮದ್ ಫಾಹಿಮ್‌ (27) ಕ್ರೀಸ್‌ನಲ್ಲಿದ್ದರು. ಬಾಂಗ್ಲಾದೇಶ ಮತ್ತು ಶ್ರೀಲಂಕಾ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿವೆ. ಈ ಪಂದ್ಯವು ಗುಂಪಿನ ಅಗ್ರಸ್ಥಾನ ಪಡೆಯುವ ತಂಡವನ್ನು ನಿರ್ಣಯಿಸುತ್ತಿತ್ತು.

ಉತ್ತಮ ರನ್‌ರೇಟ್‌ ಆಧಾರದಲ್ಲಿ ಬಾಂಗ್ಲಾದೇಶ ಗುಂಪಿನಲ್ಲಿ ಮೊದಲ ಸ್ಥಾನ ಗಳಿಸಿತು.

ಮತ್ತೊಂದು ಸೆಮಿಫೈನಲ್‌ ಹಣಾಹಣಿಯಲ್ಲಿ ಶ್ರೀಲಂಕಾ ತಂಡವು ‍ಪಾಕಿಸ್ತಾನವನ್ನು ಎದುರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು