ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಸತತ ಸಪ್ತ ಜಯದ ಸಂಭ್ರಮ

ಪಿಂಕ್ ಟೆಸ್ಟ್: ಉಮೇಶ್ ಯಾದವ್‌ಗೆ ಐದು ವಿಕೆಟ್‌ಗಳ ಗುಚ್ಛ
Last Updated 25 ನವೆಂಬರ್ 2019, 1:38 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾನುವಾರ ಈಡನ್ ಗಾರ್ಡನ್‌ನಲ್ಲಿ ಹೊನಲು ಬೆಳಕು ಚೆಲ್ಲಲೇ ಇಲ್ಲ. ಆದರೆ, ವಿರಾಟ್ ಕೊಹ್ಲಿ ಬಳಗದ ಗೆಲುವಿನ ಮಿಂಚು ಹರಿಯಿತು. ಭಾರತದ ಅಂಗಳದಲ್ಲಿ ನಡೆದ ಮೊಟ್ಟಮೊದಲ ಟೆಸ್ಟ್ ಪಂದ್ಯ ಮೂರನೇ ದಿನದ ಊಟದ ವಿರಾಮಕ್ಕೂ ಮುನ್ನವೇ ಮುಗಿದುಹೋಯಿತು!

ಭಾರತ ತಂಡವು ಬಾಂಗ್ಲಾ ತಂಡದ ಎದುರು ಇನಿಂಗ್ಸ್‌ ಮತ್ತು 46 ರನ್‌ಗಳಿಂದ ಗೆದ್ದಿತ್ತು. ಸತತ ಏಳು ಟೆಸ್ಟ್‌ಗಳಲ್ಲಿ ಜಯಗಳಿಸಿದ ಸಾಧನೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು. ತವರಿನಲ್ಲಿ ಸತತ 12ನೇ ಟೆಸ್ಟ್ ಜಯಿಸಿದ ದಾಖಲೆಯೂ ವಿರಾಟ್ ಬಳಗದ್ದಾಯಿತು.ಸತತ ನಾಲ್ಕು ಟೆಸ್ಟ್‌ಗಳಲ್ಲಿ ಇನಿಂಗ್ಸ್‌ ಅಂತರದಿಂದ ಜಯಿಸಿದ ಶ್ರೇಯವೂ ತಂಡದ್ದಾಯಿತು.

ಉಮೇಶ್ ಯಾದವ್ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿ ಮಿಂಚಿದರು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿದ್ದ ಇಶಾಂತ್ ಶರ್ಮಾ ಎರಡನೇ ಇನಿಂಗ್ಸ್‌ನಲ್ಲಿಯೂ ನಾಲ್ಕು ವಿಕೆಟ್ ಕಬಳಿಸಿ ಭಾರತದ ಜಯದ ಹಾದಿ ಸುಲಭಗೊಳಿಸಿದರು.

ಈ ಪಂದ್ಯದಲ್ಲಿ ವಿರಾಟ್ಬಳಗದ ಸ್ಪಿನ್ನರ್‌ಗಳಿಗೆ ಒಂದೇ ಒಂದು ವಿಕೆಟ್‌ ಕೂಡ ಲಭಿಸಲಿಲ್ಲ. ಇದೇ ಮೊದಲ ಸಲ ತವರಿನಲ್ಲಿ ಇಂತಹದೊಂದು ದಾಖಲೆಯನ್ನು ಭಾರತವು ಬರೆಯಿತು.

ಬಾಂಗ್ಲಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 106 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತ ತಂಡವು ಶನಿವಾರ ಸಂಜೆ 9 ವಿಕೆಟ್‌ಗಳಿಗೆ 347 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ವಿರಾಟ್ ದಾಖಲೆಯ ಶತಕದ ಬಲದಿಂದ ತಂಡವು 241 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ, ದಿನದಾಟದ ಅಂತ್ಯಕ್ಕೆ ಬಾಂಗ್ಲಾ ತಂಡವು 152 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಪಂದ್ಯದ ಮೂರನೇ ದಿನವಾದ ಭಾನುವಾರ ಕೇವಲ 41 ನಿಮಿಷಗಳ ಆಟದಲ್ಲಿ ಉಳಿದ ಮೂರು ವಿಕೆಟ್‌ಗಳು ಪತನವಾದವು. ಮಹಮುದುಲ್ಲಾ ಗಾಯಗೊಂಡು ನಿವೃತ್ತರಾದರು.

ಮುಷ್ಫಿಕುರ್ ಹೋರಾಟ: ಬಾಂಗ್ಲಾದೇಶ ತಂಡ ಮತ್ತು ಅದರ ಅಭಿಮಾನಿಗಳು ಈ ಪಂದ್ಯದಲ್ಲಿ ನೆನಪಿಡುವಂತಹ ಏಕೈಕ ವಿಷಯವೆಂದರೆ ಮುಷ್ಫಿಕುರ್ ರಹೀಂ ಅವರ ಬ್ಯಾಟಿಂಗ್.

ಏಕಾಂಗಿ ಹೋರಾಟ ಮಾಡಿದ ರಹೀಂ (74; 96ಎಸೆತ, 13ಬೌಂಡರಿ) ಭಾರತದ ಬೌಲಿಂಗ್ ದಾಳಿಯನ್ನು ಜಾಣ್ಮೆಯಿಂದ ಎದುರಿಸಿದರು.

ಹೆಚ್ಚು ಅವಸರದ ಹೊಡತಗಳಿಗೆ ಕೈಹಾಕದೇ ಅವಕಾಶ ಸಿಕ್ಕಾಗ ಬೌಂಡರಿ ಗಳಿಸಿದರು. ಮಹಮುದುಲ್ಲಾ ಅವರು ಗಾಯಗೊಂಡು ಪೆವಿಲಿಯನ್‌ಗೆ ಮರಳುವವರೆಗೆ ರಹೀಂಗೆ ಉತ್ತಮ ಜೊತೆ ನೀಡಿದರು. ಅವರು ತೆರಳಿದ ನಂತರ ತಂಡದ ಪತನಕ್ಕೆ ಬಹಳ ಸಮಯ ಬೇಕಾಗಲಿಲ್ಲ.

ಪಂದ್ಯದ ಮೊದಲೆರಡು ದಿನಗಳು ಮಾತ್ರ ಹೊನಲು ಬೆಳಕಿನಲ್ಲಿ ಆಟ ನಡೆಯಿತು. ಭಾನುವಾರ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ಈ ಅವಕಾಶ ಸಿಗಲಿಲ್ಲ. ಆದರೆ, ವಿರಾಟ್ ಬಳಗದ ವಿಜಯವನ್ನು ಕಣ್ತುಂಬಿಕೊಂಡರು.

ಪಂದ್ಯ ಮುಗಿದ ನಂತರ ಟ್ರೋಫಿಯೊಂದಿಗೆ ಮೈದಾನದಲ್ಲಿ ಒಂದು ಸುತ್ತು ಹಾಕಿದ ಭಾರತದ ಆಟಗಾರರು ಪ್ರೇಕ್ಷಕರತ್ತ ಕೈಬೀಸಿ ಕೃತಜ್ಞತೆ ಸಲ್ಲಿಸಿದರು.

ಸ್ಕೋರು

ಮೊದಲ ಇನಿಂಗ್ಸ್

ಬಾಂಗ್ಲಾದೇಶ 106

ಭಾರತ 9ಕ್ಕೆ347 ಡಿಕ್ಲೆರ್ಡ್

ಎರಡನೇ ಇನಿಂಗ್ಸ್‌

ಬಾಂಗ್ಲಾದೇಶ

9ಕ್ಕೆ195 (41.1 ಓವರ್‌ಗಳಲ್ಲಿ)
ಶಾದಮನ್ ಇಸ್ಲಾಂ ಎಲ್‌ಬಿಡಬ್ಲ್ಯು ಬಿ ಇಶಾಂತ್ ಶರ್ಮಾ 00

ಇಮ್ರುಲ್ ಕಯಸ್ ಸಿ ವಿರಾಟ್ ಕೊಹ್ಲಿ ಬಿ ಇಶಾಂತ್ ಶರ್ಮಾ 05

ಮೊಮಿನುಲ್ ಹಕ್ ಸಿ ವೃದ್ಧಿಮಾನ್ ಸಹಾ ಬಿ ಇಶಾಂತ್ ಶರ್ಮಾ 00

ಮೊಹಮ್ಮದ್ ಮಿಥುನ್ ಸಿ ಮೊಹಮ್ಮದ್ ಶಮಿ ಬಿ ಉಮೇಶ್ ಯಾದವ್ 06

ಮುಷ್ಫಿಕುರ್ ರಹೀಂ ಸಿ ರವೀಂದ್ರ ಜಡೇಜ ಬಿ ಉಮೇಶ್ ಯಾದವ್ 74

ಮಹಮುದುಲ್ಲಾ ಗಾಯಗೊಂಡು ನಿವೃತ್ತಿ 39

ಮೆಹದಿ ಹಸನ್ ಸಿ ವಿರಾಟ್ ಕೊಹ್ಲಿ ಬಿ ಇಶಾಂತ್ ಶರ್ಮಾ 15

ತೈಜುಲ್ ಇಸ್ಲಾಂ ಸಿ ಅಜಿಂಕ್ಯ ರಹಾನೆ ಬಿ ಉಮೇಶ್ ಯಾದವ್ 11

ಇಬಾದತ್ ಹುಸೇನ್ ಸಿ ವಿರಾಟ್ ಕೊಹ್ಲಿ ಬಿ ಉಮೇಶ್ ಯಾದವ್ 00

ಅಲ್ ಅಮಿನ್ ಹುಸೇನ್ ಸಿ ವೃದ್ಧಿಮಾನ್ ಸಹಾ ಬಿ ಉಮೇಶ್ ಯಾದವ್ 21

ಅಬು ಜಯೆದ್ ಔಟಾಗದೆ 02

ಇತರೆ: 22 (ಬೈ 8, ಲೆಗ್‌ಬೈ 9, ವೈಡ್ 5)

ವಿಕೆಟ್ ಪತನ: 7–152 (ಇಬಾದತ್; 34.1), 8–184 (ರಹೀಂ;39.3), 9–195 (ಅಲ್ ಅಮಿನ್;41.1).

ಬೌಲಿಂಗ್

ಇಶಾಂತ್ ಶರ್ಮಾ 13–2–56–4, ಉಮೇಶ್ ಯಾದವ್ 14.1–53–5, ಮೊಹಮ್ಮದ್ ಶಮಿ 8–0–42–0 (ವೈಡ್ 5), ಆರ್‌. ಅಶ್ವಿನ್ 5–0–19–0, ರವೀಂದ್ರ ಜಡೇಜ 1–0–8–0

ಫಲಿತಾಂಶ: ಭಾರತಕ್ಕೆ 46 ರನ್ ಜಯ; 2–0ಯಿಂದ ಸರಣಿ ಜಯ.

ಪಂದ್ಯಮತ್ತು ಸರಣಿ ಶ್ರೇಷ್ಠ: ಇಶಾಂತ್ ಶರ್ಮಾ

*******

ಮಧ್ಯಮವೇಗಿಗಳು ವಿಕೆಟ್‌ಗಳನ್ನು ಬೇಟೆಯಾಡುತ್ತಿರುವ ರೀತಿ ಅನನ್ಯ. ಅಲ್ಲದೇ ಈ ಸಾಧನೆಗಾಗಿ ಬೌಲರ್‌ಗಳು ಪರಸ್ಪರ ಉತ್ತಮ ಜೊತೆ ನೀಡುತ್ತಾ ಆಸುತ್ತಿರುವುದು ಮಹತ್ವದ್ದು
–ಭರತ್ ಅರುಣ್
ಭಾರತ ತಂಡದ ಬೌಲಿಂಗ್ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT