ಬುಧವಾರ, ಸೆಪ್ಟೆಂಬರ್ 22, 2021
23 °C
ಕೌಂಟಿ ಸೆಲೆಕ್ಟ್ ಇಲೆವನ್ ಎದುರಿನ ಅಭ್ಯಾಸ ಪಂದ್ಯ; ಕೊಹ್ಲಿ, ರಹಾನೆಗೆ ವಿಶ್ರಾಂತಿ

ಕೌಂಟಿ ಸೆಲೆಕ್ಟ್ ಇಲೆವನ್ ಎದುರಿನ ಅಭ್ಯಾಸ ಪಂದ್ಯ: ರಾಹುಲ್ ಶತಕದ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆಸ್ಟರ್ ಲಿ ಸ್ಟ್ರೀಟ್: ಕನ್ನಡಿಗ ಕೆ.ಎಲ್. ರಾಹುಲ್ ಮಂಗಳವಾರ ರಿವರ್‌ಸೈಡ್ ಕ್ರೀಡಾಂಗಣದಲ್ಲಿ ಸುಂದರವಾದ ಶತಕ ದಾಖಲಿಸಿದರು.

ಇಲ್ಲಿ ಆರಂಭವಾದ ಅಭ್ಯಾಸ ಪಂದ್ಯದಲ್ಲಿ ರಾಹುಲ್ ಶತಕದ ಬಲದಿಂದ ಇಂಡಿಯನ್ಸ್ ತಂಡವು ಕೌಂಟಿ ಸೆಲೆಕ್ಟ್‌ ಇಲೆವನ್ ತಂಡದ ಎದುರು 72 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 234 ರನ್ ಗಳಿಸಿತು.

ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರಿಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಆದ್ದರಿಂದ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಕಣಕ್ಕಿಳಿಯಿತು. 

ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರಾಹುಲ್ ಸೊಗಸಾದ ಹೊಡೆತಗಳ ಮೂಲಕ ಗಮನ ಸೆಳೆದರು. 150 ಎಸೆತಗಳನ್ನು ಎದುರಿಸಿದ ಅವರು 101 ರನ್‌ ಗಳಿಸಿದರು. ಅದರಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದ್ದವು. ಗಾಯಗೊಂಡು ನಿವೃತ್ತಿ ಪಡೆದರು.

ರಾಹುಲ್ ಐದನೇ ವಿಕೆಟ್ ಜೊತೆಯಾಟದಲ್ಲಿ ರವೀಂದ್ರ ಜಡೇಜ (ಔಟಾಗದೆ 46) ಅವರೊಂದಿಗೆ 127 ರನ್‌ ಗಳಿಸಿದರು. ಜಡೇಜ ತಮ್ಮ ಎಂದಿನ ಬೀಸಾಟವನ್ನು ಆಡಲಿಲ್ಲ. ಬದಲಿಗೆ ತಾಳ್ಮೆಯಿಂದ ಬ್ಯಾಟ್ ಬೀಸಿದರು. 101 ಎಸೆತಗಳನ್ನು ಆಡಿದರು.

ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಆರಂಭಿಸಿದರು. ಆದರೆ, ಉತ್ತಮ ಆರಂಭ ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಕೇವಲ ಒಂಬತ್ತು ರನ್ ಗಳಿಸಿ ಔಟಾದರು.

ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಮಯಂಕ್ ಅಗರವಾಲ್ (28; 35ಎ) ಲಯ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಚೇತೇಶ್ವರ್ ಪೂಜಾರ (21; 46ಎ) ಕೂಡ ತಮ್ಮ ಫಾರ್ಮ್‌ ಮರಳಿ ಪಡೆಯುವ ಪ್ರಯತ್ನ ಮಾಡಿದರು. ಆದರೆ, 14ನೇ ಓವರ್‌ನಲ್ಲಿ ಮಯಂಕ್  ಔಟಾದರು. 25ನೇ ಓವರ್‌ನಲ್ಲಿ ಪೂಜಾರ ನಿರ್ಗಮಿಸಿದರು. ಹನುಮವಿಹಾರಿ ಕೂಡ 24 ರನ್ ಗಳಿಸಿ ಔಟಾದರು.

ಇದರಿಂದಾಗಿ ತಂಡವು 107 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಸಂದರ್ಭದಲ್ಲಿ ರಾಹುಲ್ ಮತ್ತು ಜಡೇಜ ತಂಡದ ಇನಿಂಗ್ಸ್‌ಗೆ ಬಲ ತುಂಬಿದರು.

 ಸಂಕ್ಷಿಪ್ತ ಸ್ಕೋರು: ಇಂಡಿಯನ್ಸ್: 72 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 234 (ಮಯಂಕ್ ಅಗರವಾಲ್ 28, ಚೇತೇಶ್ವರ್ ಪೂಜಾರ 21, ಹನುಮವಿಹಾರಿ 24, ಕೆ.ಎಲ್. ರಾಹುಲ್ 101, ರವೀಂದ್ರ ಜಡೇಜ ಬ್ಯಾಟಿಂಗ್ 46, ಲಿಂಡನ್ ಜೇಮ್ಸ್‌ 21ಕ್ಕೆ2) ವಿವರ ಅಪೂರ್ಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು