ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG | ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 66 ರನ್‌ಗಳ ಗೆಲುವು

Last Updated 23 ಮಾರ್ಚ್ 2021, 19:08 IST
ಅಕ್ಷರ ಗಾತ್ರ

ಪುಣೆ: ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತು ಕೃಣಾಲ್ ಪಾಂಡ್ಯ ಅವರ ಅಮೋಘ ಅಟದ ನೆರವಿನಿಂದ ಭಾರತ ತಂಡವು ಮಂಗಳವಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಜಯಿಸಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆಯು 66 ರನ್‌ಗಳಿಂದ ಗೆದ್ದಿತು. ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ಬಳಗವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 317 ರನ್‌ಗಳನ್ನು ಪೇರಿಸಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಮತ್ತು ಜಾನಿ ಬೆಸ್ಟೊ ಅಮೋಘ ಆರಂಭ ನೀಡಿದರು. ಆದರೆ ಮಧ್ಯಮವೇಗಿ ಪ್ರಸಿದ್ಧಕೃಷ್ಣ (8.1–1–54–4) ಅಮೋಘ ಬೌಲಿಂಗ್‌ ಮುಂದೆ ಇಂಗ್ಲೆಂಡ್ ತಂಡವು 42.1 ಓವರ್‌ಗಳಲ್ಲಿ 251 ರನ್‌ ಗಳಿಸಲು ಮಾತ್ರ ಶಕ್ತವಾಯಿತು. ವಿರಾಟ್ ಕೊಹ್ಲಿ ಬಳಗವು ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಟಿ. ನಟರಾಜನ್ ಮತ್ತು ಮೊಹಮ್ಮದ್ ಸಿರಾಜ್ ಅವರು ತಂಡದಲ್ಲಿದ್ದರೂ ಪ್ರಸಿದ್ಧಗೆ ಅವಕಾಶ ನೀಡಲಾಯಿತು. ತಮ್ಮ ಮೊದಲ ಮೂರು ಓವರ್‌ಗಳಲ್ಲಿ ಪ್ರಸಿದ್ಧ ದುಬಾರಿಯಾದರು. ಆದರೆ, ನಂತರ ಲಯ ಕಂಡುಕೊಂಡ ಪ್ರಸಿದ್ಧ, ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಜೇಸನ್ ರಾಯ್ (46 ರನ್) ವಿಕೆಟ್ ಪಡೆದರು. ರಾಯ್ ಮತ್ತು ಜಾನಿ ಬೆಸ್ಟೊ (94 ರನ್) ಅವರ ಮೊದಲ ವಿಕೆಟ್ ಜೊತೆಯಾಟವನ್ನು (135 ರನ್) ಮುರಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ಬೆನ್ ಸ್ಟೋಕ್ಸ್‌ (1 ರನ್) ವಿಕೆಟ್‌ ಕೂಡ ಕಬಳಿಸಿದ ಪ್ರಸಿದ್ಧ ಮಿಂಚಿದರು.

ಇಂಗ್ಲೆಂಡ್ ಇನಿಂಗ್ಸ್‌ಗೆ ಸ್ಥಿರತೆ ನೀಡುವ ಪ್ರಯತ್ನ ಮಾಡಿದ ಸ್ಯಾಮ್ ಬಿಲಿಂಗ್ಸ್ ಅವರ ವಿಕೆಟ್ ಕೂಡ ಪ್ರಸಿದ್ಧ ಖಾತೆ ಸೇರಿತು. ಕೊನೆಯಲ್ಲಿ ಟಾಮ್ ಕರನ್ ವಿಕೆಟ್‌ ಕೂಡ ಕಬಳಿಸಿದ ಪ್ರಸಿದ್ಧ ಇಂಗ್ಲೆಂಡ್ ಇನಿಂಗ್ಸ್‌ಗೆ ತೆರೆ ಎಳೆದರು. ಭುವನೇಶ್ವರ್ ಕುಮಾರ್ (30ಕ್ಕೆ 2), ಶಾರ್ದೂಲ್ ಠಾಕೂರ್ (37ಕ್ಕೆ3) ಮತ್ತು ಕೃಣಾಲ್ ಪಾಂಡ್ಯ (59ಕ್ಕೆ1) ಉತ್ತಮ ದಾಳಿ ಸಂಘಟಿಸಿದರು.

ಕೃಣಾಲ್–ರಾಹುಲ್ ಜೊತೆಯಾಟ: ವಿಕೆಟ್‌ಕೀಪರ್ ರಿಷಭ್ ಪಂತ್ ಅವರಿಗೆ ವಿಶ್ರಾಂತಿ ನೀಡಿದ ಕಾರಣ ಮಧ್ಯಮಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಕೆ.ಎಲ್. ರಾಹುಲ್ ಕೊನೆಗೂ ತಮ್ಮ ಲಯ ಕಂಡುಕೊಂಡರು. ಪದಾರ್ಪಣೆಯ ಪಂದ್ಯವಾಡಿದ ಕೃಣಾಲ್ ಪಾಂಡ್ಯ ಅವರೊಂದಿಗೆ ಮುರಿಯದ ಆರನೇ ವಿಕೆಟ್‌ ಜೊತೆಯಾಟದಲ್ಲಿ 112 ರನ್ ಸೇರಿಸಿದರು. ಇದರಿಂದಾಗಿ ತಂಡವು ಮುನ್ನೂರು ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.

ಶತಕ ತಪ್ಪಿಸಿಕೊಂಡ ಶಿಖರ್: ಹೋದ ಟ್ವೆಂಟಿ–20 ಕ್ರಿಕೆಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಶಿಖರ್ ಧವನ್ ಅವರ ಅಂದದ ಬ್ಯಾಟಿಂಗ್‌ ರಂಗೇರಿತು. ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ ದೆಹಲಿಯ ಎಡಗೈ ಬ್ಯಾಟ್ಸ್‌ಮನ್ ಎರಡು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. 11 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸಿದ ಧವನ್, 106 ಎಸೆತಗಳನ್ನು ಎದುರಿಸಿದರು.

ಅವರು ರೋಹಿತ್ ಅವರೊಂದಿಗೆ ಮೊದಲ ವಿಕೆಟ್‌ ಜೊತೆಯಾಟದಲ್ಲಿ 64 ರನ್ ಸೇರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ನಾಯಕ ವಿರಾಟ್ ಕೊಹ್ಲಿ (56; 60ಎ) ಅವರೊಂದಿಗೆ 105 ರನ್ ಪೇರಿಸಿದರು. 39ನೇ ಓವರ್‌ನಲ್ಲಿ ಬೆನ್ ಸ್ಟೋಕ್ಸ್‌ ಎಸೆತದಲ್ಲಿ ಏಯಾನ್ ಮಾರ್ಗನ್ ಪಡೆದ ಕ್ಯಾಚ್‌ಗೆ ಧವನ್ ಪೆವಿಲಿಯನ್‌ಗೆ ಮರಳಿದರು.

ಶಿಖರ್ ಧವನ್ ಅವರು ಪಂದ್ಯಶ್ರೇಷ್ಠ ಗೌರವ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT