ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಮೊಗ್ಗು ಅರಳುವ ಹಿಗ್ಗು

Last Updated 28 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬಣ್ಣದ ಕುರ್ಚಿಗಳಿಂದಲೇ ತುಂಬಿದ್ದ ಆ ಚಿತ್ರಮಂದಿರದ ಗೋಡೆಯಲ್ಲಿನ ಬೆಳಕಿನ ಕಣ್ಣುಗಳು ಒಂದೊಂದಾಗಿ ಮುಚ್ಚಿಕೊಂಡವು. ಎದುರಿನ ಬಿಳಿ ಪರದೆಯ ವಿರುದ್ಧ ದಿಕ್ಕಿನ ಗೋಡೆಯಲ್ಲಿನ ಸಣ್ಣ ಕಿಂಡಿಯ ಹಿಂದಿನ ದೊಡ್ಡ ಯಂತ್ರ ಬೆಳಕಿನ ಕಿರಣಗಳನ್ನು ಉಗುಳಿದ್ದೇ ತಡ, ಝಗ್‌ನೇ ಹೊತ್ತಿಕೊಂಡಿತು ಪರದೆ. ಪರದೆಯ ಮೇಲೀಗ ಎಷ್ಟೊಂದು ಬಣ್ಣಗಳು, ಎಷ್ಟೆಲ್ಲ ಚಿತ್ರಗಳು...

ಶ್‌... ಪಿಕ್ಚರ್‌ ಶುರುವಾಯ್ತು...!

***

ಇದೇನು ಎಲ್ಲ ಚಿತ್ರಮಂದಿರಗಳಲ್ಲಿಯೂ ಕಾಣುವ ಸಾಮಾನ್ಯ ಸನ್ನಿವೇಶವೇ ಅಲ್ವಾ?

ಹೌದು, ಆದರೆ ಅದನ್ನು ನಿಂತು ನೋಡಿದ ಜಾಗ ಇಡೀ ಸನ್ನಿವೇಶವನ್ನು ಹೊಸ ಬೆಳಕಲ್ಲಿ ಹೊಳೆಯಿಸಿತು, ರೋಮಾಂಚನಗೊಳಿಸಿತು.

ಅದು ಪ್ರೊಜೆಕ್ಷನ್‌ ರೂಂ.

ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನೆಲ್ಲ ಚಿತ್ರಮಂದಿರದ ಸೀಟಿನಲ್ಲಿ ಆರಾಮವಾಗಿ ಕೂತುಕೊಂಡು ನೋಡುತ್ತಿರುವಾಗ ಅದ್ಯಾವುದೋ ದೇಶ–ಭಾಷೆಯ ಸಿನಿಮಾ ಇಲ್ಲಿಗೆ ಬಂದು ಹೇಗೆ ಪ್ರದರ್ಶನಗೊಳ್ಳುತ್ತದೆ. ನಾವು ನೋಡುವ ಸಿನಿಮಾ ಆ ಬೆಳಕಿಂಡಿಯ ಹಿಂದೆ ಕೂತವರಿಗೆ ಹೇಗೆ ಕಾಣುತ್ತದೆ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡಿತು.

ಪ್ರಶ್ನೆಗಳನ್ನು ಹಂಚಿಕೊಂಡಾಗ ತಾಯಿ ಲೋಕೇಶ್‌ ಅವರು ‘ನಂಜೊತೆ ಬನ್ನಿ’ ಎಂದರು. ಅವರ ಜತೆ ಸುಹಾಸ್‌ ಮತ್ತು ಪವನ್ ಸೇರಿಕೊಂಡರು. ಈ ಮೂವರು ಹಲವು ವರ್ಷಗಳಿಂದ ಸಿನಿಮೋತ್ಸವದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.

ಇದುವರೆಗೆ ಮುಖ್ಯದ್ವಾರದ ಮೂಲಕವೇ ಚಿತ್ರಮಂದಿರದೊಳಗೆ ಹೋಗುತ್ತಿದ್ದವಿನಿಗೆ ಹಿಂಬಾಗಿಲ ಮೂಲಕ ಹೋಗುವುದು ವಿಶಿಷ್ಟ ಅನುಭವ ನೀಡಿತು. ಸುರಂಗದೊಳಗೆ ಹೋಗುವ ಅನುಭವ ನೀಡುವ ದಾರಿ. ಗೋಡೆಗೆ ಅಂಟಿಕೊಂಡಿರುವ ಕೆಂಪು, ಬಿಳಿ ಬಣ್ಣದ ಪೈಪು, ವೈರ್‌ಗಳ ಜಾಲ.

ಲೋಕೇಶ್‌ ಅವರಿಗೆ ‘ಪ್ರೊಜೆಕ್ಷನ್‌ ರೂಂನ ಒಡನಾಟ ಹೇಗಿರುತ್ತದೆ?’ ಎಂದು ಕೇಳಿದೆ. ‘ಮಗು ಹುಟ್ಟಿದ ನಂತರ ನಡೆಯುವುದನ್ನು ಕಲಿಯುತ್ತದಲ್ಲಾ... ಹಾಗೆ ನಿರ್ಮಾಣಗೊಂಡ ಸಿನಿಮಾವೊಂದು ನಡೆಯುವ, ತನ್ನನ್ನು ತಾನು ಹೊರಜಗತ್ತಿಗೆ ತೆರೆದುಕೊಳ್ಳುವ ಜಾಗ ಪ್ರೊಜೆಕ್ಷನ್‌ ರೂಂ’ ಎಂದು ಹೇಳಿ ನಕ್ಕರು. ಸಿನಿಮಾ ನಿರ್ದೇಶನದ ಕನಸನ್ನು ನನಸು ಮಾಡಿಕೊಳ್ಳುವ ಹೊಸಿಲಿನಲ್ಲಿರುವ ಲೋಕೇಶ್‌ ಕಳೆದ ನಾಲ್ಕು ವರ್ಷಗಳಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಪ್ರಿಂಟ್‌’ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಬೇರೆ ದೇಶಗಳಿಂದ ವಿಮಾನ ನಿಲ್ದಾಣಕ್ಕೆ ಬರುವ ಸಿನಿಮಾಗಳನ್ನು ಜೋಪಾನವಾಗಿ ತಂದು ಸಿನಿಮೋತ್ಸವ ಮುಗಿಯುವವರೆಗೂ ಸಂರಕ್ಷಿಸಿ, ನಂತರ ಅಷ್ಟೇ ಜೋಪಾನವಾಗಿ ಅದನ್ನು ತಿರುಗಿ ಕಳಿಸುವುದು ನಮ್ಮ ಜವಾಬ್ದಾರಿ. ಕೆಲವೊಮ್ಮೆ ಮತ್ತೊಂದು ಚಿತ್ರೋತ್ಸವಗಳಿಗೆ ಕಳಿಸಲು ಹೇಳುತ್ತಾರೆ. ಆ ಹೊಣೆಯನ್ನೂ ನಿರ್ವಹಿಸಬೇಕು. ನಾವು ಎಷ್ಟು ಜಾಗರೂಕರಾಗಿದ್ದರೂ ಕಮ್ಮಿಯೇ. ಯಾಕೆಂದರೆ ಇದು ಅಂತರರಾಷ್ಟ್ರೀಯ ಮಟ್ಟದ ಉತ್ಸವ. ಇಲ್ಲಿ ಏನಾದರೂ ಹೆಚ್ಚು ಕಮ್ಮಿಯಾದರೆ ಅದು ನಮ್ಮ ದೇಶದ ಘನತೆಗೇ ಕುಂದು’ ಎನ್ನುತ್ತಾರೆ ಲೋಕೇಶ್‌.

‘ಈ ಪ್ರಕ್ರಿಯೆಯಲ್ಲಿ ಮಾಲ್‌ನ ಸಿಬ್ಬಂದಿಗಳ ಸಹಕಾರವೂ ಅಷ್ಟೇ ಮುಖ್ಯ. ಅವರ ಜತೆಗೆ ಸ್ನೇಹಸಂಬಂಧ ಬೆಳೆಸಿಕೊಳ್ಳುವುದೂ ನಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ. ‌‌ಒರಾಯನ್‌ ಮಾಲ್‌ನ ಪ್ರೊಜೆಕ್ಷನ್‌ ತಂಡವೂ ಚಿತ್ರೋತ್ಸವಕ್ಕಾಗಿ ನಮ್ಮಷ್ಟೇ ಶ್ರಮವಹಿಸಿ ದುಡಿಯುತ್ತಿದೆ’ ಎಂದು ನೆನಪಿಸಿಕೊಂಡರು ಸುಹಾಸ್‌ ಎಸ್‌.ಆರ್‌.

‘ಸಮಸ್ಯೆ–ಸವಾಲುಗಳು ಏನೇ ಇರಬಹುದು. ನಾನು 2006ರಿಂದ ಚಿತ್ರೋತ್ಸವದ ಪ್ರಿಂಟ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಇದುವರೆಗೂ ಒಮ್ಮೆಯೂ ನಮ್ಮ ಚಿತ್ರೋತ್ಸವಕ್ಕೆ ಪ್ರಿಂಟ್‌ ವಿಷಯದಲ್ಲಿ ಕೆಟ್ಟ ಹೆಸರು ಬಂದಿಲ್ಲ’ ಎನ್ನುವುದು ಅವರ ಹೆಮ್ಮೆ.

ಪ್ರಿಂಟ್‌ ವಿಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿರುವ ಪವನ್‌ ಕುಮಾರ್‌ ಮೈಸೂರಿನವರು. ಅಡಿಟ್‌ ಕಚೇರಿಯಲ್ಲಿ ಕೆಲಸ ಮಡುವ ಅವರು ಪ್ರತಿ ವರ್ಷ ಚಿತ್ರೋತ್ಸವಕ್ಕಾಗಿ ಎರಡು ತಿಂಗಳು ರಜೆ ಹಾಕಿ ಬರುತ್ತಾರೆ. ಮರುದಿನ ಪ್ರದರ್ಶನವಾಗಲಿರುವ ಸಿನಿಮಾಗಳನ್ನು ಪ್ರೊಜೆಕ್ಷನ್‌ ರೂಂ ತಲುಪಿಸುವುದು, ಸಿನಿಮಾಗಳು, ಉಪಶೀರ್ಷಿಕೆ, ಧ್ವನಿ ಪರಿಶೀಲಿಸುವ ಕೆಲಸವನ್ನು ಮಾಡುತ್ತಾರೆ.

‘ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾ ನಡುವೆ ಹತ್ತು ಹದಿನೈದು ನಿಮಿಷಗಳ ಬಿಡುವಷ್ಟೇ ಇರುತ್ತದೆ. ಅದರ ನಡುವೆಯೇ ಸಿನಿಮಾ ಸರಿಯಾಗಿ ಪ್ರದರ್ಶನವಾಗುತ್ತದೆಯಾ ಎಂಬುದನ್ನು ಪರಿಶೀಲಿಸಬೇಕು. ಯಾವುದಾದರೂ ಸಿನಿಮಾ ಪ್ರದರ್ಶನದಲ್ಲಿ ತೊಂದರೆ ಕಾಣಿಸಿಕೊಂಡರೆ ಬೇರೆ ಫಾರ್ಮ್ಯಾಟ್‌ನಲ್ಲಿ ಪ್ರದರ್ಶಿಸಲು ಸಹಕರಿಸುವ ಕೆಲಸವನ್ನು ನಾವು ಮಾಡುತ್ತೇವೆ’ ಎನ್ನುವ ಅವರು ರಾತ್ರಿ ಎರಡು, ಮೂರು ಗಂಟೆಯವರೆಗೆ ಕೆಲಸ ಮಾಡಬೇಕಾಗುತ್ತದೆ. ಆದರೆ ಅದ್ಯಾವುದೂ ಈ ತಂಡಕ್ಕೆ ಕಷ್ಟ ಅನಿಸಿಲ್ಲ.

‘ಸಿನಿಮಾಕ್ಕಾಗಿ ಜನರು ಕ್ಯೂ ನಿಂತಿರುವುದನ್ನು ನೋಡಿದಾಗ, ಥಿಯೇಟರ್‌ ತುಂಬಿದಾಗ ನಮ್ಮ ಶ್ರಮವೆಲ್ಲ ಸಾರ್ಥಕ ಎನಿಸುತ್ತದೆ’ ಎನ್ನುತ್ತಾರೆ ಪವನ್‌.

ಹೀಗೆ ಮಾತನಾಡುತ್ತಲೇ ಎರಡು ಮಹಡಿಗಳನ್ನು ಏರಿಯಾಗಿತ್ತು. ಹೊರಗಿನ ಝಗಮಗ ಜಗತ್ತಿನಿಂದ ಪೂರ್ತಿ ಬೇರೆಯದೇ ಆದ ಹೊಸ ಲೋಕಕ್ಕೆ ಹೊಕ್ಕುತ್ತಿರುವಂತೆ ಅನಿಸುತ್ತಿತ್ತು. ಒಂದು ಬಾಗಿಲು ತೆರೆದು ಒಳಹೋಗುತ್ತಿರುವ ಹಾಗೆಯೇ ಒಮ್ಮಿಂದೊಮ್ಮೆಲೇ ವಾತಾವರಣ ತುಂಬ ತಂಪಾಯಿತು. ಸುಯ್‌ ಎಂಬ ಸದ್ದು, ದೊಡ್ಡ ದೊಡ್ಡ ವಯರ್‌ಗಳು, ಕೆಂಪುಗಣ್ಣು ಬೀರುತ್ತಿರುವ ಪೆಟ್ಟಿಗೆಗಳು... ‘ಇದೇ ನೋಡಿ ಪ್ರೊಜೆಕ್ಷನ್‌ ರೂಂ’ ಎಂದರು ಲೋಕೇಶ್‌.

ದೊಡ್ಡದಾದ ಯಂತ್ರದ ಎದೆಯ ಮೇಲೆ ಪುಟ್ಟ ಡಿಜಿಟಲ್‌ ಸ್ಕ್ರೀನ್‌ನ ಮೇಲೆ ಏನನ್ನೋ ನಿರೀಕ್ಷಿಸುತ್ತಾ ಒಬ್ಬರು ಕೂತಿದ್ದರು. ಅದರ ಮೂತಿಯ ತುದಿಗೆ ಇರುವ ಕಿಂಡಿಯಲ್ಲಿ ಇಣುಕಿದರೆ ಚಿತ್ರಮಂದಿರದೊಳಗೆ ನುಗ್ಗುತ್ತಿರುವ ಸಹೃದಯರೆಲ್ಲರೂ ಯಾವುದೋ ಸಿನಿಮಾದ ಪಾತ್ರಗಳಂತೇ ಕಾಣುತ್ತಿದ್ದರು. ಯಂತ್ರದ ಪಕ್ಕದಲ್ಲಿ ಸ್ಟೂಲ್‌ ಹಾಕಿಕೊಂಡು ‘ಆಡಿಸುವಾತ’ನ ಗತ್ತಿನಲ್ಲಿ ಕೂತಿದ್ದ ವ್ಯಕ್ತಿ ಇವೆಲ್ಲವೂ ಸಾಮಾನ್ಯ ಎನ್ನುವಂತೆ ನಿರ್ಲಿಪ್ತರಾಗಿದ್ದರು.

ಎಲ್ಲ ಪ್ರೊಜೆಕ್ಷನ್‌ ರೂಂಗಳನ್ನೂ ಹಾದು ಬರುವಾಗ ಅದೇ ಸುರಂಗವನ್ನು ಹೋಲುವ ಪೈಪ್‌, ವಯರ್‌ಗಳ ಜಾಲದ ದಾರಿ. ಆ ಪೈಪ್‌ಗಳು, ವಯರ್‌ಗಳು ಇಡೀ ಮಾಲ್‌ನ ನರಮಂಡಲ ಇದ್ದ ಹಾಗೆ. ಹೊರಜಗತ್ತಿಗೆ ಕಾಣುವುದಿಲ್ಲ. ಆದರೆ ಎಲ್ಲವೂ ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡುವ ಕೆಲಸವನ್ನು ಅವು ಮರೆಯಲ್ಲಿದ್ದುಕೊಂಡೇ ಮಾಡುತ್ತಿರುತ್ತವೆ. ಚಿತ್ರೋತ್ಸವಕ್ಕಾಗಿ ಹಗಲಿರುಳು ದುಡಿಯುತ್ತಿರುವ ಸ್ವಯಂ ಸೇವಕರೂ ಹಾಗೆಯೇ ಅಲ್ಲವೇ ಎಂಬ ಭಾವವೊಂದು ಮನಸ್ಸಿನಲ್ಲಿ ತುಂಬಿಕೊಳ್ಳುವ ಹೊತ್ತಿಗೆ ಹೊರಗಿನ ಝಗಮಗ ಪ್ರಪಂಚದ ಬಾಗಿಲು ಮೆಲ್ಲನೇ ತೆರೆದುಕೊಂಡಿತು.

ಸಿನಿಮಾಗಳು ಹೇಗೆ ಬರುತ್ತವೆ

ಬೇರೆ ದೇಶಗಳಿಂದ ಸಿನಿಮಾಗಳನ್ನು ತರಿಸಿಕೊಂಡು ಪ್ರದರ್ಶಿಸುವುದು ಮೇಲ್ನೋಟಕ್ಕೆ ಕಾಣುವಷ್ಟು ಸುರಳೀತ ಇರುವುದಿಲ್ಲ. ಮೊದಲು ರೀಲ್‌ಗಳಲ್ಲಿ ಸಿನಿಮಾ ಕಳಿಸಿಕೊಡುತ್ತಿದ್ದರು. ಈಗ ಅದು ನಿಂತುಹೋಗಿದೆ. ಈಗ ಡಿಸಿಪಿ (ಡಿಜಿಟಲ್‌ ಸಿನಿಮಾ ಪ್ಯಾಕೇಜ್‌), ಡಿವಿಡಿ, ಬ್ಲೂರೇ ರೂಪದಲ್ಲಿ ಕಳಿಸಿಕೊಡುತ್ತಾರೆ. ಆದರೆ ಬೇರೆ ದೇಶಗಳಿಂದ ಬರುವ ಸಿನಿಮಾಗಳನ್ನು ಭದ್ರತಾ ಕಾರಣಗಳಿಂದ ವಿಮಾನ ನಿಲ್ದಾಣಗಳಲ್ಲಿಯೇ ಉಳಿಸಿಕೊಳ್ಳಲಾಗುತ್ತದೆ. ಅದನ್ನು ಬಿಡಿಸಿಕೊಂಡು ಬರುವುದೂ ಪ್ರಯಾಸದ ಕೆಲಸವೇ.

ಡಿಸಿಪಿ ರೂಪದಲ್ಲಿಯೇ ಈಗ ಹೆಚ್ಚು ಜನರು ಸಿನಿಮಾಗಳನ್ನು ಕಳಿಸಿಕೊಡುತ್ತಾರೆ. ಆದರೆ ಆ ಸಿನಿಮಾಗಳಿಗೆ ಪಾಸ್‌ವರ್ಡ್‌ ಇರುತ್ತದೆ. ಅದನ್ನು ಕೆಡಿಎಂ (ಕೀ ಡೆಲಿವರಿ ಮೆಸೇಜ್‌) ಎಂದು ಕರೆಯಲಾಗುತ್ತದೆ. ಅಂದರೆ ಆ ಪಾಸ್‌ವರ್ಡ್‌ ಅನ್ನು ಹಾಕಿದರೆ ಮಾತ್ರ ಚಿತ್ರ ಪ್ರದರ್ಶನಕ್ಕೆ ತೆರೆದುಕೊಳ್ಳುತ್ತದೆ. ಅದನ್ನೂ ತರಿಸಿಕೊಳ್ಳಬೇಕಾಗುತ್ತದೆ. ಆ ಪಾಸ್‌ವರ್ಡ್‌ ನಿಗದಿತ ಅವಧಿಯಲ್ಲಿ ಮಾತ್ರ ಕೆಲಸ ಮಾಡುತ್ತದೆ. ಆದ್ದರಿಂದಲೇ ಯಾವ ಸಮಯದಲ್ಲಿ ಯಾವ ಚಿತ್ರ ಪ್ರದರ್ಶನ ಆಗಬೇಕು ಎಂಬ ವೇಳಾಪಟ್ಟಿಯನ್ನು ಖಚಿತವಾಗಿ ರೂಪಿಸುವುದು ಮುಖ್ಯವಾಗುತ್ತದೆ.  ಇಷ್ಟೆಲ್ಲ ಆಗಿಯೂ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ಹಾರ್ಡ್‌ವೇರ್‌ ಕನೆಕ್ಟ್‌ ಆಗದೇ ಇರುವುದು, ಪಾಸ್‌ವರ್ಡ್‌ ಆ್ಯಕ್ಟಿವೇಟ್‌ ಆಗಲು ತಡವಾಗುವುದು ಹೀಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಬೇರೆ ದೇಶಗಳ ಟೈಂ ಜೋನ್‌ ಬೇರೆ ಇರುತ್ತದೆ. ಭಾರತದ ಟೈಂ ಜೋನ್‌ಗೆ ಅದು ಹೊಂದಾಣಿಕೆ ಆಗುತ್ತಿರುವುದಿಲ್ಲ. ಹಾಗಾಗಿ ಕೆಡಿಎಂ ಆ್ಯಕ್ಟಿವೇಟ್‌ ಆಗುವಲ್ಲಿ ವಿಳಂಬ ಆಗಬಹುದು. ಅದಕ್ಕಾಗಿ ಇವನ್ನು ನೋಡಿಕೊಂಡೇ ಪಾಸ್‌ವರ್ಡ್‌ ಅನ್ನು ಪಡೆದುಕೊಳ್ಳಬೇಕು. ಡಿಸಿಪಿ, ಡಿವಿಡಿ, ಬ್ಲ್ಯೂರೇ ರೂಪದಲ್ಲಿರುವ ಸಿನಿಮಾಗಳು ಚಿತ್ರಮಂದಿರದ ಸರ್ವರ್‌ನೊಳಗೆ ಸಂಗ್ರಹವಾಗಲು ಕನಿಷ್ಠ ಎರಡು ಗಂಟೆ ಬೇಕಾಗುತ್ತದೆ. ಆದ್ದರಿಂದ ಆಯಾ ದಿನ ಪ್ರದರ್ಶನ ಕಾಣಲಿರುವ ಸಿನಿಮಾಗಳನ್ನು ಹಿಂದಿನ ದಿನ ರಾತ್ರಿಯೇ ಪ್ರೊಜೆಕ್ಷನ್‌ ಯಂತ್ರದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT