ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND v NZ T20: ಭಾರತ ತಂಡಕ್ಕೆ ರೋಚಕ ಜಯ

ಎರಡನೇ ಟಿ20 ಕ್ರಿಕೆಟ್ ಪಂದ್ಯ
Last Updated 29 ಜನವರಿ 2023, 19:17 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಹಾರ್ದಿಕ್ ಪಾಂಡ್ಯ ನಾಯಕತ್ವ ಭಾರತ ತಂಡವು ಭಾನುವಾರ ರಾತ್ರಿ ನೂರು ರನ್‌ಗಳ ಗೆಲುವಿನ ಗುರಿ ತಲುಪಲು ಹರಸಾಹಸಪಟ್ಟಿತು. ಇಲ್ಲಿ ನಡೆದ ಟಿ20 ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳ ದಿಟ್ಟ ಪ್ರತಿರೋಧವನ್ನು ಅಂತೂ ಮೀರಿ ನಿಂತ ಆತಿಥೇಯ ತಂಡವು ರೋಚಕ ಜಯ ಸಾಧಿಸಿತು.

ಏಕನಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡಿತು. ನ್ಯೂಜಿಲೆಂಡ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 99 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ 19.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 101 ರನ್ ಗಳಿಸಿ ಗೆದ್ದಿತು. ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದ ಆತಿಥೇಯ ತಂಡವು ಪ್ರವಾಸಿ ಬಳಗದ ಲೆಕ್ಕಾಚಾರವನ್ನು ವಿಫಲಗೊಳಿಸಿತು. ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಹೆಚ್ಚು ಎತ್ತರಕ್ಕೆ ಪುಟಿಯದೇ ತಿರುವು ಪಡೆದು ಬರುತ್ತಿದ್ದ ಎಸೆತಗಳನ್ನು ಆಡುವುದು ಬ್ಯಾಟರ್‌ಗಳಿಗೆ ಸವಾಲಾಗಿತ್ತು. ಇದರ ಲಾಭ ಗಳಿಸಿದ ಭಾರತದ ಬೌಲರ್‌ಗಳು ಮಿಂಚಿದರು. ಕಿವೀಸ್ ತಂಡದ ಯಾವುದೇ ಬ್ಯಾಟರ್ ಹೆಚ್ಚು ಎಸೆತ ಗಳನ್ನು ಆಡಲು ಬಿಡಲಿಲ್ಲ. ನಾಯಕ ಮಿಚೆಲ್ ಸ್ಯಾಂಟನರ್ (19; 23ಎ) ಅವರೇ ಈ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕಿವೀಸ್ ಆಟಗಾರನಾದರು.

ಆದರೆ, ಚಳಿಗಾಲದ ರಾತ್ರಿಗೆ ಬಿಸಿಯೇರಿದ್ದು ಕಿವೀಸ್ ಬೌಲರ್‌ಗಳ ಶಿಸ್ತಿನ ದಾಳಿಯಿಂದಾಗಿ. ಭಾರತದ ಆರಂಭಿಕ ಜೋಡಿ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಅಬ್ಬರಿಸಲಿಲ್ಲ. ತಂಡದ ಖಾತೆಗೆ 46 ರನ್‌ಗಳು ಸೇರುವ ಹೊತ್ತಿಗೆ ಇಬ್ಬರೂ ಪೆವಿಲಿಯನ್‌ಗೆ ಮರಳಿದ್ದರು. ರಾಹುಲ್ ತ್ರಿಪಾಠಿ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಿಲ್ಲ.

ಸೂರ್ಯಕುಮಾರ್ ಯಾದವ್ ಆಟದಲ್ಲಿ ಎಂದಿನ ಬಿಸುಪು ಕಾಣಲಿಲ್ಲ. ಎರಡು ಜೀವದಾನ ಲಭಿಸಿದರೂ ಅವರ ಆಟದ ವೇಗ ಹೆಚ್ಚಲಿಲ್ಲ. ಇನ್ನೊಂದೆಡೆ ಚೆನ್ನಾಗಿ ಆಡುತ್ತಿದ್ದ ವಾಷಿಂಗ್ಟನ್ ಸುಂದರ್ 15ನೇ ಓವರ್‌ನಲ್ಲಿ ರನೌಟ್ ಆದರು. ಕ್ರೀಸ್‌ಗೆ ಬಂದ ಹಾರ್ದಿಕ್ ವಿಕೆಟ್ ಪತನ ತಡೆಯಲು ಆದ್ಯತೆ ಕೊಟ್ಟರು. ಸೂರ್ಯ ಕೂಡ ಎಚ್ಚರಿಕೆಯಿಂದ ಆಡಿದರು.

ಕಿವೀಸ್ ಬೌಲರ್‌ಗಳು ಮತ್ತಷ್ಟು ಒತ್ತಡ ಹೇರಿದರು. ಸ್ಪಿನ್‌ ಬೌಲರ್‌ಗಳಿಗೆ ನೆರವು ನೀಡಿದ ಪಿಚ್‌ನ ಸಂಪೂರ್ಣ ಲಾಭ ಪಡೆದರು. ಕೊನೆಯ ಓವರ್‌ನಲ್ಲಿ ಆರು ರನ್‌ಗಳ ಅಗತ್ಯವಿದ್ದಾಗಲೂ ಸೂರ್ಯ ಮತ್ತು ಹಾರ್ದಿಕ್ ಅವರಿಗೆ ದೊಡ್ಡ ಹೊಡೆತಗಳನ್ನು ಆಡಲು ಬೌಲರ್‌ ಬ್ಲೇರ್‌ ಟಿಕ್ನರ್ ಅವಕಾಶ ಕೊಡಲಿಲ್ಲ. ಈ ಓವರ್‌ನ ಐದನೇ ಎಸೆತ ದಲ್ಲಿ ಚೆಂಡನ್ನು ಬೌಂಡರಿಗೆರೆ ದಾಟಿಸಿದ ಸೂರ್ಯ ನಿಟ್ಟುಸಿರುಬಿಟ್ಟರು. ಪ್ರೇಕ್ಷಕರೂ ಸಂಭ್ರಮಿಸಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 99 (ಚಾಪ್ಮನ್ 14, ಮೈಕಲ್‌ ಬ್ರೇಸ್‌ವೆಲ್ 14, ಮಿಚೆಲ್ ಸ್ಯಾಂಟನರ್ ಔಟಾಗದೆ 19,ಆರ್ಷದೀಪ್ ಸಿಂಗ್ 7ಕ್ಕೆ2). ಭಾರತ: 19.5 ಓವರ್‌ಗಳಲ್ಲಿ 4 ವಿಕೆಟ್‌ಗೆ 101 (ಇಶಾನ್ ಕಿಶನ್‌ 19, ರಾಹುಲ್ ತ್ರಿಪಾಠಿ 13, ಸೂರ್ಯಕುಮಾರ್ ಯಾದವ್‌ ಔಟಾಗದೆ 26, ಹಾರ್ದಿಕ್ ಪಾಂಡ್ಯ ಔಟಾಗದೆ 15; ಮೈಕಲ್ ಬ್ರೇಸ್‌ವೆಲ್‌ 13ಕ್ಕೆ 1, ಇಶ್ ಸೋಧಿ 24ಕ್ಕೆ 1) ಫಲಿತಾಂಶ: ಭಾರತಕ್ಕೆ ಆರು ವಿಕೆಟ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT