ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ 3rd T20I: ಯುವ ಆಟಗಾರರಿಗೆ ಅವಕಾಶ ಸಾಧ್ಯತೆ

ಭಾರತ–ನ್ಯೂಜಿಲೆಂಡ್ ಟಿ20 ಕ್ರಿಕೆಟ್ ಸರಣಿಯ ಮೂರನೇ ಪಂದ್ಯ
Last Updated 20 ನವೆಂಬರ್ 2021, 12:07 IST
ಅಕ್ಷರ ಗಾತ್ರ

ಕೋಲ್ಕತ್ತ: ನಾಯಕತ್ವ ವಹಿಸಿಕೊಂಡ ಚೊಚ್ಚಲ ಟ್ವೆಂಟಿ–20 ಕ್ರಿಕೆಟ್ ಸರಣಿಯನ್ನು ಕೈವಶ ಮಾಡಿಕೊಂಡಿರುವ ರೋಹಿತ್ ಶರ್ಮಾ ಈಗ ಕ್ಲೀನ್‌ಸ್ವೀಪ್‌ ಮೇಲೆ ಕಣ್ಣಿಟ್ಟಿದ್ದಾರೆ.

ಈಡನ್ ಗಾರ್ಡನ್‌ನಲ್ಲಿ ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ಎದುರಿನ ಸರಣಿಯ ಕೊನೆಯ ಪಂದ್ಯದಲ್ಲಿ ಉದಯೋನ್ಮುಖ ಆಟಗಾರರೊಂದಿಗೆ ಭಾರತವು ಕಣಕ್ಕಿಳಿಯುವ ಸಾಧ್ಯತೆ ಇದೆ. ರೋಹಿತ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಯುವ ಆಟಗಾರರಿಗೆ ಅವಕಾಶ ಕೊಡುವುದು ಬಹುತೇಕ ಖಚಿತವಾಗಿದೆ.

ಮುಂದಿನ ವಾರ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡಲಿರುವ ರಿಷಭ್ ಪಂತ್, ಆರ್. ಅಶ್ವಿನ್, ಮೊಹಮ್ಮದ್ ಸಿರಾಜ್ ಮತ್ತು ಕೆ.ಎಲ್. ರಾಹುಲ್ ಅವರಿಗೆ ವಿಶ್ರಾಂತಿ ನೀಡುವ ನಿರೀಕ್ಷೆ ಇದೆ. ಇದರೊಂದಿಗೆ ರೋಹಿತ್ ಜೊತೆಗೆ ಇನಿಂಗ್ಸ್‌ ಆರಂಭಿಸಲು ಮತ್ತು ವಿಕೆಟ್‌ಕೀಪಿಂಗ್ ಹೊಣೆ ನಿಭಾಯಿಸಲು ಇಶಾನ್ ಕಿಶನ್‌ಗೆ ಅವಕಾಶ ದೊರಕಬಹುದು ಅಥವಾ ಋತುರಾಜ್ ಗಾಯಕವಾಡ್‌ಗೆ ಪದಾರ್ಪಣೆ ಮಾಡುವ ಅವಕಾಶ ಲಭಿಸುವ ಸಾಧ್ಯತೆಯೂ ಇದೆ.

ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಶ್ರೇಷ್ಠ ಆಟಗಾರನ ಗೌರವ ಗಳಿಸಿದ ಮಧ್ಯಮವೇಗಿ ಹರ್ಷಲ್ ಪಟೇಲ್, ಸ್ಪಿನ್ನರ್ ಅಕ್ಷರ್ ಪಟೇಲ್, ದೀಪಕ್ ಚಾಹರ್ ಅವರಿಗೆ ಮತ್ತೊಂದು ಅವಕಾಶ ಸಿಗಬಹುದು. ಯಜುವೇಂದ್ರ ಚಾಹಲ್ ಕೂಡ ಆಡುವ ಸಾಧ್ಯತೆ ಇದೆ. ಕಿವೀಸ್ ತಂಡವು ಸಮಾಧಾನಕರ ಗೆಲುವಿಗಾಗಿ ಹೋರಾಡಲು ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯಬಹುದು. ಹೋದ ಪಂದ್ಯದಲ್ಲಿ ನಾಯಕ ಟಿಮ್ ಸೌಥಿ ಒಬ್ಬರೇ ಮೂರು ವಿಕೆಟ್ ಗಳಿಸಿದ್ದರು. ಉಳಿದ ಬೌಲರ್‌ಗಳಿಗೆ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

ಈಡನ್ ಗಾರ್ಡನ್‌ನಲ್ಲಿ ರಿವರ್ಸ್‌ ಸ್ವಿಂಗ್ ಪ್ರಯೋಗಿಸುವ ಬೌಲರ್‌ಗಳಿಗೆ ಹೆಚ್ಚು ನೀಡುವಂತಹ ಪಿಚ್ ಇದೆ. ಅದರಿಂದಾಗಿ ಇನಿಂಗ್ಸ್ ಕೊನೆಯ ಹಂತದ ಓವರ್‌ಗಳಲ್ಲಿ ರನ್‌ ಗಳಿಸುವುದು ಬ್ಯಾಟರ್‌ಗಳಿಗೆ ಹೆಚ್ಚು ಸವಾಲಿನದ್ದಾಗಬಹುದು. ಮುಸ್ಸಂಜೆಯಿಂದ ಸುರಿಯುವ ಇಬ್ಬನಿ ಕೂಡ ಮಹತ್ವದ ಅಂಶವಾಗಲಿದೆ. ಆದ್ದರಿಂದ ಟಾಸ್ ಗೆದ್ದ ನಾಯಕ ತೆಗೆದುಕೊಳ್ಳುವ ನಿರ್ಣಯವೂ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಖಚಿತ.

ತಂಡಗಳು:

ಭಾರತ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಋತುರಾಜ್ ಗಾಯಕವಾಡ್.

ನ್ಯೂಜಿಲೆಂಡ್:ಟಿಮ್ ಸೌಥಿ (ನಾಯಕ), ಟಾಡ್ ಆಸ್ಟ್ಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪಮನ್, ಲಾಗಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಆ್ಯಡಂ ಮಿಲ್ನೆ, ಡೆರಿಲ್ ಮಿಚೆಲ್, ಜಿಮ್ಮಿ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಟಿಮ್ ಸೀಫರ್ಟ್, ಈಶ್ ಸೋಧಿ.

ಪಂದ್ಯ ಆರಂಭ: ರಾತ್ರಿ 7ರಿಂದ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT