ಶನಿವಾರ, ಜನವರಿ 22, 2022
16 °C
ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ–ನ್ಯೂಜಿಲೆಂಡ್ ಎರಡನೇ ಟೆಸ್ಟ್‌ ಇಂದಿನಿಂದ

Ind vs Nz 2nd Test: ವಿರಾಟ್–ದ್ರಾವಿಡ್ ’ಜೊತೆಯಾಟ‘ಕ್ಕೆ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಟ್–ದ್ರಾವಿಡ್ ’ಜೊತೆಯಾಟ‘ಕ್ಕೆ ಮುನ್ನುಡಿ

ಮುಂಬೈ: ದೀರ್ಘ ಕಾಲದ ವಿಶ್ರಾಂತಿಯ ನಂತರ ವಿರಾಟ್ ಕೊಹ್ಲಿ ಶುಕ್ರವಾರ ಕಣಕ್ಕೆ ಮರಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಗೆದ್ದವರಿಗೆ ಸರಣಿ ಕಿರೀಟ ಒಲಿಯಲಿದೆ. ಆದ್ದರಿಂದ ಈ ಪಂದ್ಯವು ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಮೊದಲ ಪಂದ್ಯದಲ್ಲಿ ರೋಚಕ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದ ಕೇನ್ ವಿಲಿಯಮ್ಸನ್ ಬಳಗವು ಆತಿಥೇಯರಿಂದ ಗೆಲುವು ಕಸಿದುಕೊಂಡಿತ್ತು. ವಿಶ್ವ ಚಾಂಪಿಯನ್ ತಂಡಕ್ಕೆ ತಕ್ಕಂತೆ ಆಡಿತ್ತು.

ಇದೀಗ ಕೊಹ್ಲಿ  ಎದುರು ಇರುವ ಪ್ರಮುಖ ಸವಾಲೆಂದರೆ, ಬ್ಯಾಟಿಂಗ್ ಕ್ರಮಾಂಕವನ್ನು ಬಲಿಷ್ಠಗೊಳಿಸುವಂತಹ ತಂಡವನ್ನು ಕಣಕ್ಕಿಳಿಸುವುದಾಗಿದೆ. ಅಲ್ಲದೇ ಹವಾಮಾನ ವೈಪರಿತ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವ ‘ಮಹಾನಗರಿ’ಯ ವಾತಾವರಣವೂ ಆಟಗಾರರಿಗೆ ಕೂಡ ಕಠಿಣ ಸವಾಲೊಡ್ಡಲಿದೆ. ಪಂದ್ಯ ನಡೆಯುವ ಐದು ದಿನಗಳಲ್ಲಿಬಹುತೇಕ ಮಳೆ ಬರುವ ಮುನ್ಸೂಚನೆಯೂ ಇದೆ.

ಕಾನ್ಪುರ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಶ್ರೇಯಸ್ ಅಯ್ಯರ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೆಯದ್ದರಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಇದರಿಂದಾಗಿ ಅವರು ತಮ್ಮ ತವರು ಅಂಗಳದಲ್ಲಿ ಆಡುವ ಅವಕಾಶ ಪಡೆಯುವುದು ಖಚಿತ. ಆದರೆ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿರುವುದರಿಂದ ಸತತ ವೈಫಲ್ಯ ಅನುಭವಿಸುತ್ತಿರುವ ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಲ್ಲಿ ಒಬ್ಬರು ಸ್ಥಾನ ಬಿಟ್ಟುಕೊಡಬೇಕಾಗಬಹುದು. 2021ರಲ್ಲಿಯೇ ಸತತ 12 ಪಂದ್ಯಗಳಲ್ಲಿ ರಹಾನೆ ವೈಫಲ್ಯ ಅನುಭವಿಸಿದ್ದಾರೆ. ಕೊಹ್ಲಿ ಕೂಡ ಕಳೆದ ಎರಡು ವರ್ಷಗಳಲ್ಲಿ ಮೂರಂಕಿ ಮೊತ್ತ ಗಳಿಸಿಲ್ಲ.

ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ್ದ ಶುಭಮನ್ ಗಿಲ್ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತ.  ಮಯಂಕ್ ಮತ್ತೊಂದು ಅವಕಾಶ ಗಿಟ್ಟಿಸಿದರೆ, ರಹಾನೆ ಅಥವಾ ಪೂಜಾರ ಬೆಂಚ್‌ ಕಾಯಬೇಕಾಗಬಹುದು. ಹೋದ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದ ವೃದ್ಧಿಮಾನ್ ಸಹಾ ಕತ್ತುನೋವಿನಿಂದಾಗಿ ಕೀಪಿಂಗ್ ಮಾಡಿರಲಿಲ್ಲ. ಅವರ ಬದಲಿಗೆ ಕೀಪಿಂಗ್ ಮಾಡಿದ್ದ ಶ್ರೀಕರ್ ಭರತ್ ಚುರುಕಿನ ಆಟದಿಂದ ಗಮನ ಸೆಳೆದಿದ್ದರು. ಸಹಾ ಫಿಟ್ ಆಗದಿದ್ದರೆ ಭರತ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಬದಲು ಸಿರಾಜ್‌ ಸ್ಥಾನ ಪಡೆಯಬಹುದು.

ಹಸಿರು ಹೆಚ್ಚಾಗಿ ಕಾಣುತ್ತಿರುವ ವಾಂಖೆಡೆ ಕ್ರೀಡಾಂಗಣದ ಪಿಚ್‌ ವೇಗಿಗಳಿಗೆ ನೆರವು ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಕೇನ್ ವಿಲಿಯಮ್ಸನ್ ಈ ಬಾರಿ ನೀಲ್ ವಾಗ್ನರ್ ಅವರನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ. ಇದರಿಂದಾಗಿ ವಿಲ್ ಸೊಮರ್‌ವಿಲ್ ಬೆಂಚ್‌ ಕಾಯಬೇಕಾಗಬಹುದು.

ತಂಡದ ಸೋಲು ತಪ್ಪಿಸಿದ್ದ ಯುವಪ್ರತಿಭೆ ರಚಿನ್ ರವೀಂದ್ರ ಮುಂಬೈನಲ್ಲಿ ಆಡುವುದು ಖಚಿತ. ಟಾಮ್ ಲಥಾಮ್ ಮತ್ತು ವಿಲ್ ಯಂಗ್ ಮತ್ತೊಮ್ಮೆ ಭಾರತದ ಸ್ಪಿನ್ ಶಕ್ತಿಗೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ.

 ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶುಭಮನ್ ಗಿಲ್, ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಕೆ.ಎಸ್. ಭರತ್ (ವಿಕೆಟ್‌ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ ಕೃಷ್ಣ.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲಥಾಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್‌, ಟಾಮ್ ಬ್ಲಂಡೆಲ್ (ವಿಕೆಟ್‌ಕೀಪರ್), ಕೈಲ್ ಜೆಮಿಸನ್, ಟಿಮ್ ಸೌಥಿ, ನೀಲ್ ವಾಗ್ನರ್, ಎಜಾಜ್ ಪಟೇಲ್, ವಿಲ್ ಸೊಮರ್‌ವಿಲ್, ರಚಿನ್ ರವೀಂದ್ರ, ಡೆರಿಲ್ ಮಿಚೆಲ್, ಮಿಚೆಲ್ ಸ್ಯಾಂಟನರ್.

ಐದು ವರ್ಷಗಳ ನಂತರ ಟೆಸ್ಟ್

ವಾಂಖೆಡೆ ಕ್ರೀಡಾಂಗಣದಲ್ಲಿ ಐದು ವರ್ಷಗಳ ನಂತರ ಟೆಸ್ಟ್ ಪಂದ್ಯ ನಡೆಯಲಿದೆ.

2016ರಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಟೆಸ್ಟ್‌ ಪಂದ್ಯ ನಡೆದಿತ್ತು. ಅದರಲ್ಲಿ ಆತಿಥೇಯ ತಂಡವು 36 ರನ್‌ಗಳಿಂದ ಜಯಿಸಿತ್ತು.

1975ರಲ್ಲಿ ಇಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಿದ್ದವು.

ಮಹಿಳಾ ಸ್ಕೋರರ್ ಜೋಡಿ

ಶುಕ್ರವಾರ ನಡೆಯುವ ಪಂದ್ಯದಲ್ಲಿ ಮಾಧ್ಯಮ ಬಾಕ್ಸ್‌ನಲ್ಲಿ ಇಬ್ಬರು ಮಹಿಳಾ ಸ್ಕೋರರ್‌ಗಳು ಕಾರ್ಯನಿರ್ವಹಿಸಲಿದ್ದಾರೆ.

ಕ್ಷಮಾ ಸೇನ್ ಮತ್ತು ಸುಷ್ಮಾ ಸಾವಂತ್ ಅವರು ಟೆಸ್ಟ್‌ನಲ್ಲಿ ಸ್ಕೋರಿಂಗ್ ಮಾಡಲಿದ್ದಾರೆ. ‘ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಟೆಸ್ಟ್‌ ಪಂದ್ಯದ ಸ್ಕೋರಿಂಗ್ ಮಾಡಲಿದ್ದಾರೆ’ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಸೀನಿಯರ್ ಸ್ಕೋರರ್ ತಿಳಿಸಿದ್ದಾರೆ.

‘ದಕ್ಷಿಣ ಆಫ್ರಿಕಾ ಪ್ರವಾಸ: ರಾಹುಲ್–ಬಿಸಿಸಿಐ ಮಾತುಕತೆ’

ಇದೇ ತಿಂಗಳು ದಕ್ಷಿಣ ಆಫ್ರಿಕಾಕ್ಕೆ ಭಾರತವು ಕ್ರಿಕೆಟ್ ಪ್ರವಾಸ ಕೈಗೊಳ್ಳಲಿದೆ. ಆದರೆ, ಆ ದೇಶದಲ್ಲಿ ಕೋವಿಡ್ –19ರ ಹೊಸ ತಳಿ ಓಮೈಕ್ರಾನ್‌ ಹಾವಳಿ ಹೆಚ್ಚಾಗಿರುವುದರಿಂದ ಪ್ರವಾಸದ ಕುರಿತು ಮರುಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಕೋಚ್ ರಾಹುಲ್ ದ್ರಾವಿಡ್ ಸಂಬಂಧಿತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

‘ಬಿಸಿಸಿಐನೊಂದಿಗೆ ಮಾತುಕತೆ ನಡೆಯುತ್ತಿದೆ. ಇನ್ನೊಂದೆರಡು ದಿನಗಳಲ್ಲಿ ಸ್ಪಷ್ಟತೆ ದೊರೆಯಲಿದೆ’ ಎಂದು ಹೇಳಿದರು.

* ವಾಂಖೆಡೆ ಕ್ರೀಡಾಂಗಣದ ಪಿಚ್ ಮೊದಲ ದಿನ ಸ್ವಿಂಗ್‌ಗೆ ಹೆಚ್ಚು ನೆರವು ನೀಡಲಿದೆ. ಉಷ್ಣಾಂಶ ಕಡಿಮೆ ಇರುವುದರಿಂದ ಪರಿಣಾಮಕಾರಿ ಬೌಲಿಂಗ್ ಸಾಧ್ಯವಾಗುವ ನಿರೀಕ್ಷೆ ಇದೆ.

- ಟಿಮ್ ಸೌಥಿ, ನ್ಯೂಜಿಲೆಂಡ್ ಬೌಲರ್

* ಈಗ ಇರುವ ವಾತಾವರಣಕ್ಕೆ ಅನುಗುಣವಾಗಿ ತಂಡದಲ್ಲಿ ಮೂರನೇ ಮಧ್ಯಮವೇಗಿಯನ್ನು ಕಣಕ್ಕಿಳಿಸಬೇಕಾಗಬಹುದು.

-ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

ಪಂದ್ಯ ಆರಂಭ: ಬೆಳಿಗ್ಗೆ 9.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು