ಶುಕ್ರವಾರ, ಡಿಸೆಂಬರ್ 3, 2021
24 °C

ಭಾರತ- ಪಾಕ್‌ನಲ್ಲಿ ಕ್ರಿಕೆಟ್‌: ಕೇವಲ ಆಟವಲ್ಲ, ಎರಡು ದೇಶಗಳ ಸ್ಥಿತಿಯ ಪ್ರತಿಬಿಂಬ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ-ಪಾಕಿಸ್ತಾನ ಕ್ರಿಕೆಟ್‌ ತಂಡಗಳು ದುಬೈನಲ್ಲಿ ಇಂದು(ಭಾನುವಾರ) ಮುಖಾಮುಖಿಯಾಗುತ್ತಿವೆ. ಇದು ಕೇವಲ ಕ್ರಿಕೆಟ್‌ ಪಂದ್ಯವಾಗಿರದೇ ಎರಡು ಸಾಂಪ್ರದಾಯಿಕ ವೈರಿ ರಾಷ್ಟ್ರಗಳ ನಡುವಿನ ರೋಚಕ ಕದನವಾಗಿದೆ.

ಪ್ರಪಂಚದಾದ್ಯಂತ ಕೋಟ್ಯಂತರ ಜನರು ಇಂದು ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕ್ರಿಕೆಟ್‌ನ ಹುಚ್ಚು ಹಚ್ಚಿಕೊಂಡಿರುವ ಎರಡು ದೇಶಗಳ ಅಭಿಮಾನಿಗಳು ಟಿವಿ ಪರದೆಗಳ ಮುಂದೆ, ದೊಡ್ಡ ಪರದೆಗಳ ಎದುರು, ಗಲ್ಲಿ-ವಠಾರಗಳಲ್ಲಿ ಗುಂಪಾಗಿ ಕೂತು ಇಂದಿನ ಪಂದ್ಯವನ್ನು ವೀಕ್ಷಿಸಲಿದ್ದಾರೆ.

ಈ ದೃಶ್ಯಗಳು ಎರಡು ದೇಶಗಳಿಗೆ ಹೊಸದೇನಲ್ಲ. ಈ ಹಿಂದೆಯೂ ಭಾರತ-ಪಾಕಿಸ್ತಾನದ ನಡುವಿನ ಪಂದ್ಯಗಳು ಯುದ್ಧದ ರೀತಿಯ ವಾತಾವರಣವನ್ನು ಸೃಷ್ಟಿಸಿದ್ದವು. ಅಭಿಮಾನಿಗಳು ಭಾವೋದ್ರೇಕದ ಹುಚ್ಚು ಹೊಳೆಯಲ್ಲಿ ತೇಲಿ ಮುಳುಗುತ್ತಿದ್ದರು. ಇದೇ ರೀತಿಯ ವಾತಾವರಣ ಇಂದಿನ ಪಂದ್ಯದ ಸುತ್ತ ದಟ್ಟವಾಗುತ್ತಿದೆ.

ಎರಡು ಪರಮಾಣು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧವೀಗ ಸಂಪೂರ್ಣ ಹಳಸಿದೆ. ಬಾಲಿವುಡ್‌ ಸಿನಿಮಾಗಳಲ್ಲಿ ಪಾಕಿಸ್ತಾನದ ನಟ-ನಟಿಯರು ನಟಿಸುವಂತಿಲ್ಲ. ದೆಹಲಿ- ಇಸ್ಲಾಮಾಬಾದ್‌ಗಳ ನಡುವೆ ಉತ್ತಮ ಬಾಂಧವ್ಯಗಳಿಲ್ಲ. ಕಾಶ್ಮೀರದ ಕಣಿವೆಗಳಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯುತ್ತಲೇ ಇವೆ. ಇದಕ್ಕೆ ಪಾಕಿಸ್ತಾನದ ಕುಮ್ಮಕ್ಕು ಇದೆ ಎಂದು ಭಾರತ ಆರೋಪಿಸುತ್ತಲೇ ಬಂದಿದೆ. ಎರಡೂ ದೇಶಗಳಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ಕ್ರಿಕೆಟ್‌ ಪಂದ್ಯವನ್ನು ಬಹಿಷ್ಕರಿಸುವಂತೆ ಸಂಘಟಕರ ಮೇಲೆ ಒತ್ತಡಗಳು ತೀವ್ರವಾಗುತ್ತಿವೆ.

ಆದರೆ, ಭಾನುವಾರದ ಪಂದ್ಯವು ವಿಶ್ವಕಪ್‌ ಟೂರ್ನಿಯ ಭಾಗವಾಗಿದೆ. ಈ ಪಂದ್ಯದ ಸುತ್ತಲೂ ಭಾವೋದ್ರೇಕದ ಕಂಪನಗಳು ತೀವ್ರವಾಗುತ್ತಲೇ ಇವೆ. ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಹಿಂಸಾಚಾರದ ನಂತರ ಭಾರತೀಯ ರಾಜಕೀಯ ಮುಖಂಡರು ಬಹಿಷ್ಕಾರಕ್ಕೆ ಕರೆ ನೀಡಿದ್ದರೂ, ಪಂದ್ಯ ನಡೆಯುವುದು ಖಾತರಿಯಾಗಿದೆ.

ಓದಿ: 

ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಬಿಸಿಸಿಐ, 'ಈ ಪಂದ್ಯವನ್ನು ಏರ್ಪಡಿಸಿರುವುದು ಐಸಿಸಿ. ನಾವು ಅಂತರಾಷ್ಟ್ರೀಯ ಬದ್ಧತೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಪಂದ್ಯವನ್ನು ಗೆಲ್ಲುವತ್ತ ಮಾತ್ರ ನಮ್ಮ ತಂಡವು ಗಮನ ಹರಿಸುತ್ತದೆ' ಎಂದು ಹೇಳಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್‌ ರಾಜಾ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 'ನಾವು ಕ್ರಿಕೆಟ್‌ ಬಾಂಧವ್ಯವನ್ನು ಕಾಪಾಡಿಕೊಳ್ಳಬೇಕಿದೆ. ರಾಜಕೀಯವು ಕ್ರಿಕೆಟ್‌ನಿಂದ ಬೇರೆಯಾಗಿದೆ' ಎಂದು ತಿಳಿಸಿದ್ದಾರೆ.

ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಬಳುವಳಿಯೇ ಕ್ರಿಕೆಟ್‌

ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಬಳುವಳಿಯಾಗಿ ದಕ್ಷಿಣ ಏಷ್ಯಾದಲ್ಲಿ ಕ್ರಿಕೆಟ್‌ ನೆಲೆಯೂರಿದೆ. 'ಬ್ರಿಟಿಷರು ಆಕಸ್ಮಿಕವಾಗಿ ಕಂಡುಹಿಡಿದ ಭಾರತೀಯ ಆಟ' ಎಂದು ಖ್ಯಾತ ವಿಮರ್ಶಕ ಆಶಿಸ್ ನಂದಿ ಹೇಳಿದ್ದರು. ವಸಾಹತುಶಾಹಿ ಆಳ್ವಿಕೆಯ ಅಂತ್ಯವು 1947ರಲ್ಲಿ ಭಾರತವನ್ನು ವಿಭಜಿಸಿದ್ದು ಈಗ ಇತಿಹಾಸ.

ಓದಿ: 

ಕಳೆದ 75 ವರ್ಷಗಳಲ್ಲಿ ಈ ಎರಡು ದೇಶಗಳು ಹಲವು ಬಾರಿ ಯುದ್ಧಭೂಮಿಯಲ್ಲಿ ಕಾದಾಡಿವೆ. ಯುದ್ಧ ಇಲ್ಲದಿದ್ದಾಗಲೂ ಯುದ್ಧದ ನೆನಪುಗಳ ಆಧಾರದ ಮೇಲೆ ದೂರದೂರವೇ ಉಳಿದಿವೆ. ಕೆಲವೊಮ್ಮೆ, ದಶಕಕ್ಕಿಂತಲೂ ಹೆಚ್ಚು ಕಾಲ ಎರಡೂ ದೇಶಗಳ ನಡುವೆ ಕ್ರಿಕೆಟ್‌ ಪಂದ್ಯ ಏರ್ಪಡದ ಉದಾಹರಣೆ ಇದೆ. 1999ರ ವಿಶ್ವಕಪ್ ಸಮಯದಲ್ಲಿ ಕಾರ್ಗಿಲ್‌ ಕದನ ಸಂಭವಿಸಿದ್ದರೂ, ಪಂದ್ಯ ನಡೆದ ನಿದರ್ಶನವೂ ಇದೆ.

ಕ್ರಿಕೆಟ್‌ ಮತ್ತು ಭಾರತದ ಕಥೆ

'ದಿ ಸೀನ್ ಅಂಡ್ ದಿ ಅನ್‌ಸೀನ್' ಪಾಡ್‌ಕಾಸ್ಟ್‌ ಅನ್ನು ಹೋಸ್ಟ್‌ ಮಾಡುವ ಅಮಿತ್‌ ವರ್ಮಾ ಇತ್ತೀಚಿನ ತಮ್ಮ ಸಂಚಿಕೆಯಲ್ಲಿ 'ಕ್ರಿಕೆಟ್ ಮತ್ತು ಭಾರತ ಕಥೆ' ಎಂಬ ವಿಷಯದ ಕುರಿತು ಮಾತನಾಡಿದ್ದಾರೆ.

'ಕ್ರಿಕೆಟ್‌ನಲ್ಲಿ ಭಾರತವು ಮೇಲುಗೈ ಸಾಧಿಸಿದೆ. ವಿಶೇಷವಾಗಿ ವಾಣಿಜ್ಯ ದೃಷ್ಟಿಯಿಂದ ಅಪಾರ ಬೆಳವಣಿಗೆ ಕಂಡಿದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓದಿ: 

'ಈ ಹಿಂದೆ ನಾವು ಜಗತ್ತಿನಲ್ಲಿ ನಮ್ಮ ಸ್ಥಾನದ ಬಗ್ಗೆ ಅನಿಶ್ಚಿತತೆಯನ್ನು ಹೊಂದಿದ್ದೆವು. ನಮ್ಮ ಹೆಜ್ಜೆಯ ಗುರುತುಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೆವು. ಕೀಳರಿಮೆಯಲ್ಲಿ ಒದ್ದಾಡುತ್ತಿದ್ದೆವು. ಸಣ್ಣ ಸಮಾಧಾನಗಳಲ್ಲಿ ಹೆಮ್ಮೆಯನ್ನು ಹುಡುಕುತ್ತಿದ್ದೆವು. ಆದರೆ, ನಾವೀಗ ಅಂತಿಮವಾಗಿ ಜಗತ್ತಿಗೆ ತೆರೆದುಕೊಳ್ಳುತ್ತಿದ್ದೇವೆ. ನಮ್ಮನ್ನು ನಾವು ಸಾಬೀತುಪಡಿಸಿಕೊಳ್ಳುತ್ತಿದ್ದೇವೆ' ಎಂದು ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಭಾರತವು ಕ್ರಿಕೆಟ್‌ಗೆ ನಿರ್ವಿವಾದದ ತಾಣವಾಗಿದೆ. ವಿಶ್ವದಾದ್ಯಂತ ಇರುವ ಶ್ರೇಷ್ಠ ಆಟಗಾರರು ಲಾಭದಾಯಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಬಯಸುತ್ತಿದ್ದಾರೆ. ವಿಶ್ವದ ಐದು ಅತ್ಯಂತ ಲಾಭದಾಯಕ ಕ್ರೀಡಾ ಲೀಗ್‌ಗಳಲ್ಲಿ ಐಪಿಎಲ್‌ ಸಹ ಒಂದಾಗಿದೆ.

ಓದಿ- T20 WC: ಭಾರತ–ಪಾಕ್ ಮುಖಾಮುಖಿ ಇಂದು, ಭಾರತಕ್ಕೆ ಜಯದ ಪರಂಪರೆ ಮುಂದುವರಿಸುವ ಸವಾಲು

ಆದರೆ, ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಆಡವಂತಿಲ್ಲ. ಅವರು ವಿಶ್ವದ ಅತ್ಯುತ್ತಮ ಆಟಗಾರರೊಂದಿಗೆ ಆಡುವ ಮತ್ತು ಹಣ ಗಳಿಸುವ ಪ್ರಮುಖ ವೇದಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.

ಭಾರತ ಮತ್ತು ಪಾಕಿಸ್ತಾನಿ ಆಟಗಾರರು ಮೈದಾನದಲ್ಲಿರುವ ತೀವ್ರತೆ ಆತಿಥ್ಯದಲ್ಲಿ ಕೊನೆಗೊಳ್ಳುತ್ತದೆ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ವಿರೋಧಿ ಪಡೆಯ ಆಟಗಾರರು ಉಳಿದುಕೊಂಡಿರುವ ಹೋಟೆಲ್‌ಗಳಿಗೆ ಆತಿಥೇಯ ಆಟಗಾರರು ತಮ್ಮ ಮನೆಯಲ್ಲಿಯೇ ಬೇಯಿಸಿದ ಆಹಾರವನ್ನು ಕಳುಹಿಸುತ್ತಾರೆ.

ಭಾರತದ ಆಟಗಾರರಿಗೆ ಶಾಹಿದ್‌ ಅಫ್ರಿದಿಯ ಆತಿಥ್ಯ

ಈ ವಿಚಾರವನ್ನು ಹಂಚಿಕೊಂಡಿರುವ ಶಾಹಿದ್‌ ಅಫ್ರಿದಿ, 'ದಶಕದ ಹಿಂದೆ ಇಡೀ ಭಾರತ ತಂಡದ ಆತಿಥ್ಯವನ್ನು ವಹಿಸಿಕೊಂಡಿದ್ದೆ. ಅವರು ಇಲ್ಲಿಗೆ ಬಂದಾಗ, ಅವರೆಲ್ಲರೂ ಸಸ್ಯಾಹಾರಿಗಳು ಎಂದು ಗೊತ್ತಾಯಿತು. ಆಗ, ನಾನು ತರಕಾರಿಗಳಿಗಾಗಿ ಪರದಾಡಬೇಕಾಯಿತು' ಎಂದು ನೆನಪಿಸಿಕೊಂಡಿದ್ದಾರೆ.

ಭಾರತದ ಅಭಿಮಾನಿಯ ಹೆಮ್ಮೆಯ ಕ್ಷಣಗಳು

ನವದೆಹಲಿಯಲ್ಲಿ ಫೋಟೋ ಸ್ಟುಡಿಯೊ ನಡೆಸುತ್ತಿರುವ ವಿಕ್ಕಿ ಲುಥ್ರಾ ಅವರು ಕ್ರಿಕೆಟ್‌ನ ಅಭಿಮಾನಿಯಾಗಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನಾಲ್ಕು ಬಾರಿ ವೀಕ್ಷಿಸಿದ್ದಾರೆ. ಪಂದ್ಯ ವೀಕ್ಷಿಸಲು 2017 ರಲ್ಲಿ ಇಂಗ್ಲೆಂಡ್‌ಗೆ ಪ್ರಯಾಣಿಸಿದ್ದೂ ಇದೆ.

'2006ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಭಾರತ ಆಡುವುದನ್ನು ವೀಕ್ಷಿಸಲು ಕಾಲ್ನಡಿಗೆಯಲ್ಲಿ ಗಡಿ ದಾಟಿದ್ದೆ. ನನ್ನ ಹಿರಿಯರು ಪಾಕಿಸ್ತಾನದಿಂದ ಇಲ್ಲಿಗೆ ವಲಸೆ ಬಂದವರು. ಪಾಕಿಸ್ತಾನಕ್ಕೆ ಹೋಗಲು ನನಗೆ ಆಸೆ ಇತ್ತು. ಆದರೆ, ನನ್ನ ಹೆಂಡತಿಗೆ ಇದು ಇಷ್ಟವಿರಲಿಲ್ಲ' ಎಂದು ಲುಥ್ರಾ ಸ್ಮರಿಸಿಕೊಂಡಿದ್ದಾರೆ.

ಓದಿ: 

'ಆದರೆ, ಪಾಕಿಸ್ತಾನಕ್ಕೆ ಹೋಗಿ ಬಂದ ನಂತರ ನಾನು ನನ್ನ ಹೆಂಡತಿಗೆ ಹೇಳಿದೆ. ಪಾಕಿಸ್ತಾನಿಗಳು ಒಳ್ಳೆಯವರು.,ಅಲ್ಲಿ ಜನರು ಸ್ನೇಹಪರರು ಎಂಬುದನ್ನು ನನ್ನ ಬಾಯಿಂದ ಕೇಳಿ ಅವಳು ಆಶ್ಚರ್ಯಚಕಿತಳಾದಳು. ಕ್ರಿಕೆಟ್‌ನಿಂದಾಗಿ ನಾನು ಆ ನೆಲದ ಕೆಲ ಭಾಗಗಳನ್ನು ನೋಡಲು ಸಾಧ್ಯವಾಯಿತು' ಎಂದು ಲುಥ್ರಾ ಮೆಲುಕು ಹಾಕಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್‌ ತಂಡ- ಆ ದೇಶದ ಸ್ಥಿತಿಯ ಪ್ರತಿಬಿಂಬ

ಪಾಕಿಸ್ತಾನದ ಕ್ರಿಕೆಟ್ ತಂಡದ ಕಥೆಯು ಕೆಲವೊಮ್ಮೆ ಆ ದೇಶದ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ತಪ್ಪು ನಿರ್ವಹಣೆ, ಅನಿಶ್ಚಿತತೆ ಮತ್ತು ಅವಕಾಶದ ಕೊರತೆಯಿಂದ ಪಾಕಿಸ್ತಾನ ಮತ್ತು ಅಲ್ಲಿನ ಕ್ರಿಕೆಟ್‌ ತಂಡ ದುರ್ಬಲಗೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನವು ದುರ್ಬಲವಾಗಿದೆ. ವಿಶ್ವಕಪ್ ಪಂದ್ಯಗಳಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದ್ದು ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಆದರೆ, 1980 ಮತ್ತು 1990 ರ ದಶಕಗಳಲ್ಲಿ, ಪಾಕಿಸ್ತಾನವು ಭಾರತದ ವಿರುದ್ಧ ಗೆಲುವು ಸಾಧಿಸುತ್ತಿತ್ತು ಎಂಬುದೀಗ ಇತಿಹಾಸವಾಗಿದೆ.

-ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟಗೊಂಡಿರುವ ವರದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು