ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA: ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ 9 ರನ್‌ಗಳ ಜಯ

ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ 9 ರನ್‌ ಗೆಲುವು; ಸಂಜು ಸ್ಯಾಮ್ಸನ್‌ ಹೋರಾಟ ವ್ಯರ್ಥ
Last Updated 7 ಅಕ್ಟೋಬರ್ 2022, 4:15 IST
ಅಕ್ಷರ ಗಾತ್ರ

ಲಖನೌ: ಗುರುವಾರ ಮಧ್ಯಾಹ್ನ ಸುರಿದ ಮಳೆ ನಿಂತ ಮೇಲೆ ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ಹಾಗೂ ಹೆನ್ರಿಚ್ ಕ್ಲಾಸೆನ್ ರನ್‌ಗಳ ಹೊಳೆ ಹರಿಸಿದರು.

ಮಿಲ್ಲರ್ (ಔಟಾಗದೆ 75; 63ಎ) ಹಾಗೂ ಕ್ಲಾಸೆನ್ (ಔಟಾಗದೆ 74; 65ಎ) ಸಿಡಿಲಬ್ಬರದ ಆಟದಿಂದಾಗಿ ದಕ್ಷಿಣ ಆಫ್ರಿಕಾ ತಂಡವು ಭಾರತ ಎದುರು ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರನ್‌ಗಳ ಗೆಲುವು ಸಾಧಿಸಿ ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು.

ಮಳೆಯಿಂದಾಗಿ ಪಂದ್ಯವು ವಿಳಂಬವಾಗಿ ಆರಂಭವಾಯಿತು. ಆದ್ದರಿಂದ ಇನಿಂಗ್ಸ್‌ಗೆ
40 ಓವರ್‌ ನಿಗದಿಪಡಿಸಲಾಯಿತು. ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ತಂಡ 40 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 249 ರನ್‌ ಗಳಿಸಿತು. ಭಾರತ ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 240 ರನ್‌ ಕಲೆಹಾಕಿತು. ವಿಕೆಟ್‌
ಕೀಪರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ (ಔಟಾಗದೆ 86, 63 ಎ., 4X9, 6X3) ಅವರು ಸೋಲಿನ ನಡುವೆಯೂ ಮಿಂಚಿದರು.

ಸವಾಲಿನ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಕಗಿಸೊ ರಬಾಡ ಮತ್ತು ವೇಯ್ನ್‌ ಪಾರ್ನೆಲ್‌ ಆರಂಭದಲ್ಲೇ ಆಘಾತ ನೀಡಿದರು. ನಾಯಕ ಶಿಖರ್‌ ಧವನ್ (4) ಮತ್ತು ಶುಭಮನ್‌ ಗಿಲ್‌ (3) ಬೇಗನೇ ಔಟಾದರು.

ಶ್ರೇಯಸ್‌ ಅಯ್ಯರ್‌ (50 ರನ್‌, 37 ಎ., 4X8) ಬಿರುಸಿನ ಆಟವಾಡಿ ಗೆಲುವಿನ ಆಸೆ ಮೂಡಿಸಿದರು. ಸಂಜು ಮತ್ತು ಶಾರ್ದೂಲ್‌ ಠಾಕೂರ್‌ ಆರನೇ ವಿಕೆಟ್‌ಗೆ 93 ರನ್‌ ಸೇರಿಸಿದರು. ಶಾರ್ದೂಲ್‌ ಔಟಾದ ಬಳಿಕ ದಕ್ಷಿಣ ಆಫ್ರಿಕಾ ಬೌಲರ್‌ಗಳು ಮತ್ತೆ ಹಿಡಿತ ಸಾಧಿಸಿದರು.

ತಬ್ರೇಜ್‌ ಶಂಸಿ ಬೌಲ್‌ ಮಾಡಿದ ಕೊನೆಯ ಓವರ್‌ನಲ್ಲಿ ಗೆಲುವಿಗೆ 31 ರನ್‌ಗಳು ಬೇಕಿದ್ದವು. ಸ್ಯಾಮ್ಸನ್‌ ಒಂದು ಸಿಕ್ಸರ್‌ ಮತ್ತು ಮೂರು ಬೌಂಡರಿ ಹೊಡೆದರಾದರೂ ಅದು ಜಯಕ್ಕೆ ಸಾಕಾಗಲಿಲ್ಲ.

ಉತ್ತಮ ಆರಂಭ: ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕ ಶಿಖರ್ ಧವನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮಲಾನ್ (22) ಹಾಗೂ ಕ್ವಿಂಟನ್ (48) ಉತ್ತಮ ಆರಂಭ ನೀಡಿದರು. ಮಧ್ಯಮವೇಗಿ ಶಾರ್ದೂಲ್ ಠಾಕೂರ್ 13ನೇ ಓವರ್‌ನಲ್ಲಿ ಮಲಾನ್ ವಿಕೆಟ್ ಗಳಿಸಿ, ಜೊತೆಯಾಟ ಮುರಿದರು.

ತಮ್ಮ ಇನ್ನೊಂದು ಓವರ್‌ನಲ್ಲಿ ಶಾರ್ದೂಲ್ ಪ್ರವಾಸಿ ತಂಡದ ನಾಯಕ ತೆಂಬಾ ಬವುಮಾ ವಿಕೆಟ್ ಗಳಿಸಿದರು. 16ನೇ ಓವರ್‌ನಲ್ಲಿಸ್ಪಿನ್ನರ್ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಕ್ವಿಂಟನ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಇದರಿಂದಾಗಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಾಗಿತ್ತು. ಆದರೆ ಕ್ರೀಸ್‌ನಲ್ಲಿ ಜೊತೆಗೂಡಿದ ಮಿಲ್ಲರ್ ಹಾಗೂ ಕ್ಲಾಸೆನ್ ತಂಡದ ಭೀತಿಯನ್ನು ಬೌಂಡರಿಯಾಚೆಗೆ ಅಟ್ಟಿದರು.

ಟಿ20 ಸರಣಿಯಲ್ಲಿಯೂ ಅಬ್ಬರಿಸಿದ್ದ ಮಿಲ್ಲರ್ ಇಲ್ಲಿ ಮೂರು ಸಿಕ್ಸರ್ ಹಾಗೂ ಐದು ಬೌಂಡರಿ ಬಾರಿಸಿದರು. ಕ್ಲಾಸೆನ್ ಕೂಡ ಅರ್ಧಡಜನ್ ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರು. ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 139 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 40 ಓವರ್‌ಗಳಲ್ಲಿ 4ಕ್ಕೆ249 (ಜನ್ನೇಮನ್ ಮಲಾನ್ 22, ಕ್ವಿಂಟನ್ ಡಿಕಾಕ್ 48, ಹೆನ್ರಿಚ್ ಕ್ಲಾಸೆನ್ ಔಟಾಗದೆ 74, ಡೇವಿಡ್ ಮಿಲ್ಲರ್ ಔಟಾಗದೆ 75, ಶಾರ್ದೂಲ್ ಠಾಕೂರ್ 35ಕ್ಕೆ2, ರವಿ ಬಿಷ್ಣೋಯಿ 69ಕ್ಕೆ1, ಕುಲದೀಪ್ ಯಾದವ್ 39ಕ್ಕೆ1)

ಭಾರತ: 40 ಓವರ್‌ಗಳಲ್ಲಿ 8 ವಿಕೆಟ್‌ಗೆ 240 (ಋತುರಾಜ್‌ ಗಾಯಕವಾಡ್‌ 19, ಇಶಾನ್‌ ಕಿಶನ್‌ 20, ಶ್ರೇಯಸ್‌ ಅಯ್ಯರ್‌ 50, ಸಂಜು ಸ್ಯಾಮ್ಸನ್‌ ಔಟಾಗದೆ 86, ಶಾರ್ದೂಲ್‌ ಠಾಕೂರ್‌ 33, ಕಗಿಸೊ ರಬಾಡ 36ಕ್ಕೆ 2, ವೇಯ್ನ್‌ ಪಾರ್ನೆಲ್‌ 38ಕ್ಕೆ 1, ಲುಂಗಿ ಗಿಡಿ 52ಕ್ಕೆ 3) ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 9 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT