ಶುಕ್ರವಾರ, ಅಕ್ಟೋಬರ್ 18, 2019
27 °C
ಭಾರತ ತಂಡಕ್ಕೆ ಭರ್ಜರಿ ಜಯ; ರವೀಂದ್ರ ಜಡೇಜಗೆ ನಾಲ್ಕು ವಿಕೆಟ್

ಭಾರತ– ದಕ್ಷಿಣ ಆಫ್ರಿಕಾ ಟೆಸ್ಟ್| ಶಮಿ ‘ಫೈವ್ ಸ್ಟಾರ್’; ಜಡೇಜ ಸೂಪರ್

Published:
Updated:
Prajavani

ವಿಶಾಖಪಟ್ಟಣ: ಭಾನುವಾರ ಬೆಳಿಗ್ಗೆ ಮಧ್ಯಮವೇಗಿ ಮೊಹಮ್ಮದ್ ಶಮಿಯ ಎಸೆತಕ್ಕೆ ಕ್ಲೀನ್‌ಬೌಲ್ಡ್‌ ಆದ ಫಾಫ್ ಡು ಪ್ಲೆಸಿ ಅವಾಕ್ಕಾದರು. ಕೆಲ ನಿಮಿಷಗಳ ನಂತರ ನಿಧಾನವಾಗಿ ಪೆವಿಲಿಯನ್‌ಗೆ ಮರಳಿದರು. 

ಫಾಫ್‌ಗೆ ಆದ ಅನುಭವ ಇನ್ನುಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳಿಗೂ ಆಯಿತು. ಏಕೆಂದರೆ, ಸ್ಪಿನ್‌ ಬೌಲರ್‌ಗಳಿಗೆ ರತ್ನಗಂಬಳಿ ಹಾಸಿಕೊಟ್ಟಂತಿದ್ದ ಪಿಚ್‌ನಲ್ಲಿ  ಶಮಿಯ (10.5–2–35–5) ಚಾಣಾಕ್ಷ ಬೌಲಿಂಗ್ ಎದುರು ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಭಾರತವು 203 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡದ ಎದುರು ಜಯಿಸಿತು. ಇದರೊಂದಿಗೆ ಮೂರು ಪಂದ್ಯಗಳ ಫ್ರೀಡಂ ಟೆಸ್ಟ್ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಶನಿವಾರ ಸಂಜೆ ಭಾರತ ತಂಡವು ನೀಡಿದ್ದ 395 ರನ್‌ಗಳ ಗುರಿ ಬೆನ್ನಟ್ಟಿದ್ದ ಪ್ರವಾಸಿ ಬಳಗವು ದಿನದಾಟದ ಕೊನೆಗೆ 9 ಓವರ್‌ಗಳಲ್ಲಿ 1 ವಿಕೆಟ್‌ಗೆ 11 ರನ್ ಗಳಿಸಿತ್ತು. ಕೊನೆಯ ದಿನ 63.5 ಓವರ್‌ಗಳಲ್ಲಿ 191 ರನ್ ಗಳಿಸಿ ಆಲೌಟ್ ಆಯಿತು. ಒಂದೊಮ್ಮೆ ಸೆನುರನ್ ಮುತ್ತುಸ್ವಾಮಿ (ಔಟಾಗದೆ 49; 108ಎಸೆತ, 5 ಬೌಂಡರಿ) ಮತ್ತು ಡೇನ್ ಪೀಟ್ (56; 107ಎ, 9ಬೌಂ, 1ಸಿ) ಕೊನೆಯ ಹಂತದಲ್ಲಿ ಹೋರಾಟ ಮಾಡದೇ ಹೋಗಿದ್ದರೆ ತಂಡವು ನೂರು ರನ್‌ಗಳ ಮೊತ್ತದೊಳಗೇ ಆಲೌಟ್ ಆಗುವ ಅಪಾಯವಿತ್ತು.  ಏಕೆಂದರೆ ಇವರಿಬ್ಬರ ಜೊತೆಯಾಟ ಶುರುವಾಗಿದ್ದು ತಂಡವು 70 ರನ್‌ಗಳಿಗೆ ಎಂಟು ವಿಕೆಟ್‌ ಕಳೆದುಕೊಂಡ ನಂತರವಷ್ಟೇ!

ಅದಕ್ಕೆ ಕಾರಣವಾಗಿದ್ದು ಶಮಿ. ಪಿಚ್‌ನಲ್ಲಿದ್ದ ಬಿರುಕುಗಳಿಂದಾಗಿ ಚೆಂಡು ಹೆಚ್ಚು ತಿರುವು ಪಡೆಯುತ್ತಿತ್ತು. ಕಡಿಮೆ ಎತ್ತರದಲ್ಲಿ ಪುಟಿಯುತ್ತಿತ್ತು. ತಲೆತಗ್ಗಿಸಿ ಆಡುವ ಬ್ಯಾಟ್ಸ್‌ಮನ್‌ಗಳಿಗೆ ಮಾತ್ರ ಅವಕಾಶ ಇತ್ತು. ಸ್ವಲ್ಪ ಏಮಾರಿದರೂ ತಲೆದಂಡ ಖಚಿತ. ಇನಿಂಗ್ಸ್‌ನ 12ನೇ ಓವರ್‌ನಲ್ಲಿ ತೆಂಬಾ ಬವುಮಾ ವಿಕೆಟ್ ಹಾರಿಸಿದ ಶಮಿ ತಮ್ಮ ಬೇಟೆ ಆರಂಭಿಸಿದರು.

ತುಸು ಜಿಗುಟತನದ ಅಟವಾಡುತ್ತಿದ್ದ ನಾಯಕ ಫಾಫ್ 22ನೇ ಓವರ್‌ನಲ್ಲಿ ಶಮಿ ಎಸೆತವನ್ನು ತಪ್ಪಾಗಿ ಅಂದಾಜಿಸಿದರು. ಆಫ್‌ಸ್ಟಂಪಿನಿಂದ ಹೊರಗೆ ನೆಲಸ್ಪರ್ಶ ಮಾಡಿದ್ದ ಚೆಂಡು ಹಾಗೇ ಸಾಗಿ ವಿಕೆಟ್ ಕೀಪರ್ ಕೈಸೇರಬಹುದು ಎಂಬ ಫಾಫ್ ಲೆಕ್ಕಾಚಾರ ತಪ್ಪಾಯಿತು. ತಿರುವು ಪಡೆದು ಒಳನುಗ್ಗಿದ ಚೆಂಡು ಬಲಗೈ ಬ್ಯಾಟ್ಸ್‌ಮನ್ ಫಾಫ್ ಆಫ್‌ಸ್ಟಂಪ್‌ಗೆ ಅಪ್ಪಳಿಸಿತು. ಸ್ಟಿಕ್ ಕುಣಿದಾಡುತ್ತ ನೆಲಕಚ್ಚಿತು. ಫಾಫ್ ನಿಬ್ಬೆರಗಾದರು.

ತಮ್ಮ ನಂತರದ ಓವರ್‌ನಲ್ಲಿ ಶಮಿ ಅವರು ಎಡಗೈ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್‌ಗೂ ಶಾಕ್ ಕೊಟ್ಟರು. ಅವರ ಆಫ್‌ಸ್ಟಂಪ್‌ ಅನ್ನು ಕಿತ್ತರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಕ್ವಿಂಟನ್ ಖಾತೆ ತೆರೆಯದೇ ಮರಳಿದರು.

ಇನ್ನೊಂದೆಡೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಕೂಡ ತಮ್ಮ ಕೈಚಳಕ ಮೆರೆದರು. ಶನಿವಾರ ಸಂಜೆ ಮೊದಲ ವಿಕೆಟ್ ಕೆಡವಿದ್ದ ಅವರು, ಏಡನ್ ಮರ್ಕರಂ (39 ರನ್), ಕೆಳಕ್ರಮಾಂಕದ ವೆರ್ನಾನ್ ಫಿಲಾಂಡರ್ ಮತ್ತು ಕೇಶವ್‌  ಮಹಾರಾಜ್ ಅವರ ವಿಕೆಟ್ ಕಬಳಿಸಿದರು. ಆದರೆ ತಂಡವನ್ನು ಸೋಲಿನಿಂದ ಪಾರು ಮಾಡುವ ಯತ್ನದಲ್ಲಿದ್ದ ಮುತ್ತುಸ್ವಾಮಿ ಮತ್ತು ಡೇನ್ ಪೀಟ್  ಅವರು 91 ರನ್‌ಗಳ ಜೊತೆಯಾಟವನ್ನು 60ನೇ ಓವರ್‌ನಲ್ಲಿ ಶಮಿ ಮುರಿದರು. ಅವರ ರಿವರ್ಸ್ ಸ್ವಿಂಗ್ ರಭಸಕ್ಕೆ ಸ್ಟಂಪ್ ಕೂಡ ಮುರಿಯಿತು!

ಕೊನೆಯ ವಿಕೆಟ್ ಜೊತೆಯಾಟದಲ್ಲಿ ಕಗಿಸೊ ರಬಾಡ (18, 19ಎ, 3ಬೌಂ, 1ಸಿ) ಕೂಡ ಉತ್ತಮವಾಗಿ ಆಡಿದರು. ಅವರಿಗೂ ಶಮಿಯೇ ಪೆವಿಲಿಯನ್ ದಾರಿ ತೋರಿದರು. ವಿಕೆಟ್‌ಕೀಪರ್ ಸಹಾ ಕ್ಯಾಚ್ ಪಡೆದರು.ದಕ್ಷಿಣ ಆಫ್ರಿಕಾದ ಐವರು ಕ್ಲೀನ್‌ಬೌಲ್ಡ್, ಮೂವರು ಎಲ್‌ಬಿಡಬ್ಲ್ಯು ಆಗಿದ್ದು ವಿಶೇಷ. ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಕ್ಯಾಚ್ ಆದರು.

ಮುತ್ತಯ್ಯ ದಾಖಲೆ ಸರಿಗಟ್ಟಿದ ಅಶ್ವಿನ್

ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 350 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಿದರು.

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ತಿಯಾನಸ್ ಬ್ರಯನ್ ವಿಕೆಟ್ ಗಳಿಸಿದ ಅವರು ಈ ಸಾಧನೆ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ ಐದು ವಿಕೆಟ್ ಗಳಿಸಿದ್ದರು. ಒಟ್ಟು 66 ಟೆಸ್ಟ್‌ಗಳಲ್ಲಿ ಅವರು ಈ ದಾಖಲೆ ಬರೆದರು.

***

ಸೆನುರನ್ ಮುತ್ತುಸ್ವಾಮಿ ಆಲ್‌ರೌಂಡರ್‌ ಆಗಿ ಹೊರಹೊಮ್ಮಿದ್ದಾರೆ. ಇದರಿಂದಾಗಿ ತಂಡಕ್ಕೆ ಮತ್ತೊಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್ ಲಭಿಸಿದಂತಾಗಿದೆ.

–ಫಾಫ್ ಡುಪ್ಲೆಸಿ, ದಕ್ಷಿಣ ಆಫ್ರಿಕಾ ತಂಡದ ನಾಯಕ

ಮೊಹಮ್ಮದ್ ಶಮಿ ಅವರು ರಿವರ್ಸ್‌ ಸ್ವಿಂಗ್‌ನಲ್ಲಿ ಪ್ರಾವಿಣ್ಯತೆ ಸಾಧಿಸಿದ್ದಾರೆ. ಅದರಲ್ಲಿಯೂ ಎರಡನೇ ಇನಿಂಗ್ಸ್‌ನಲ್ಲಿ ಅವರ ಬೌಲಿಂಗ್ ಅಮೋಘವಾಗಿದೆ.

–ರೋಹಿತ್ ಶರ್ಮಾ, ಭಾರತ ತಂಡದ ಬ್ಯಾಟ್ಸ್‌ಮನ್

Post Comments (+)