ಗುರುವಾರ , ನವೆಂಬರ್ 21, 2019
21 °C
ದಕ್ಷಿಣ ಆಫ್ರಿಕಾ ‘ಎ’ ಎದುರಿನ ಕ್ರಿಕೆಟ್‌ ‘ಟೆಸ್ಟ್’; ಪಾಂಚಾಲ್‌ ಶತಕ

ಪಂದ್ಯ ಡ್ರಾ; ಸರಣಿ ಗೆದ್ದ ಭಾರತ ‘ಎ’

Published:
Updated:
Prajavani

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಅಂತಿಮ ದಿನ ಯಾವುದೇ ಪವಾಡ ನಡೆಯಲಿಲ್ಲ. ಭಾರತ ‘ಎ’ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಿನ ನಾಲ್ಕು ದಿನಗಳ ಕ್ರಿಕೆಟ್‌ ‘ಟೆಸ್ಟ್‌’ ಪಂದ್ಯ ನಿರೀಕ್ಷೆಯಂತೆಯೇ ಡ್ರಾದಲ್ಲಿ ಕೊನೆಗೊಂಡಿತು.

ಅಂತಿಮ ದಿನವಾದ ಶುಕ್ರವಾರದ ಆಟದ ಚಹಾ ವಿರಾಮದ ವೇಳೆಗೆ ಭಾರತ 70 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 202 ರನ್‌ ಗಳಿಸಿ ಎರಡನೇ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಪಂದ್ಯದ ಕೊನೆಯ ಅವಧಿಯಲ್ಲಿ ಸ್ಪಷ್ಟ ಫಲಿತಾಂಶ ಬರುವುದು ಅಸಾಧ್ಯವಾದ ಕಾರಣ ಎರಡೂ ತಂಡಗಳು ಡ್ರಾಗೆ ಒಪ್ಪಿಕೊಂಡವು. ಆಕರ್ಷಕ ಶತಕ ಗಳಿಸಿದ ಪ್ರಿಯಾಂಕ್‌ ಪಾಂಚಾಲ್ (109, 192 ಎಸೆತ, 9 ಬೌಂ, 4 ಸಿ.) ಕೊನೆಯ ದಿನದಾಟದ ಗೌರವ ತಮ್ಮದಾಗಿಸಿಕೊಂಡರು.

ಈ ಮೂಲಕ ಭಾರತ ‘ಎ’ ತಂಡ ಎರಡು ಪಂದ್ಯಗಳ ಸರಣಿಯನ್ನು 1–0 ರಲ್ಲಿ ಗೆದ್ದುಕೊಂಡಿತು. ತಿಮೊದಲ ಪಂದ್ಯದಲ್ಲಿ ಆತಿಥೇಯರು ಏಳು ವಿಕೆಟ್‌ಗಳ ಜಯ ಸಾಧಿಸಿದ್ದರು. ಇದಕ್ಕೂ ಮುನ್ನ ನಡೆದಿದ್ದ ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ‘ಎ’ 4–1 ರಲ್ಲಿ ತನ್ನದಾಗಿಸಿಕೊಂಡಿತ್ತು.

ಪಾಂಚಾಲ್‌ ಶತಕ: ಭಾರತ ‘ಎ’ ತಂಡ ವಿಕೆಟ್‌ ನಷ್ಟವಿಲ್ಲದೆ 14 ರನ್‌ಗಳಿಂದ ಅಂತಿಮ ದಿನದಾಟ ಮುಂದುವರಿಸಿತು. ಪಾಂಚಾಲ್‌ ಮತ್ತು ಅಭಿಮನ್ಯು ಈಶ್ವರನ್ (37, 93 ಎಸೆತ) ಎಚ್ಚರಿಕೆಯಿಂದ ಎದುರಾಳಿ ಬೌಲಿಂಗ್‌ ದಾಳಿಯನ್ನು ಎದುರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 94 ರನ್‌ ಕಲೆಹಾಕಿತು.

ಈಶ್ವರನ್‌ ಅವರನ್ನು ಬೌಲ್ಡ್‌ ಮಾಡಿದ ಡೇನ್‌ ಪಿಯೆಟ್‌ ಈ ಜತೆಯಾಟ ಮುರಿದರು. ಶುಭಮನ್‌ ಗಿಲ್‌ (0) ವಿಫಲರಾದರೂ, ಬಳಿಕ ಬಂದ ಕರುಣ್‌ ನಾಯರ್‌ (ಅಜೇಯ 51, 99 ಎಸೆತ) ಅವರು ಪಾಂಚಾಲ್‌ಗೆ ತಕ್ಕ ಸಾಥ್‌ ನೀಡಿದರು. ಗುಜರಾತ್‌ನ ಬ್ಯಾಟ್ಸ್‌ಮನ್‌ ಪಾಂಚಾಲ್‌ ಅವರು ಪಿಯೆಟ್‌ ಬೌಲಿಂಗ್‌ನಲ್ಲಿ ಕವರ್‌ ಡ್ರೈವ್ ಮೂಲಕ ಚೆಂಡನ್ನು ಬೌಂಡರಿಗೆ ಅಟ್ಟಿ ಶತಕ ಪೂರೈಸಿದರು.

ಪಾಂಚಾಲ್‌ ಮತ್ತು ಕರುಣ್‌ ನಾಯರ್‌ ಮೂರನೇ ವಿಕೆಟ್‌ಗೆ 92 ರನ್‌ ಸೇರಿಸಿದರು. ಚಹಾ ವಿರಾಮಕ್ಕೆ ಅಲ್ಪ ಮುನ್ನ ಪಾಂಚಾಲ್‌ ಅವರು ಸೆನುರನ್‌ ಮುತ್ತುಸ್ವಾಮಿಗೆ ವಿಕೆಟ್‌ ಒಪ್ಪಿಸಿದರು. ಕರುಣ್‌ ಅರ್ಧಶತಕ ಪೂರೈಸಿದೊಡನೆ ಭಾರತ ‘ಎ’ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಸಂಕ್ಷಿಪ್ತ ಸ್ಕೋರ್: ಭಾರತ ‘ಎ’ ಮೊದಲ ಇನಿಂಗ್ಸ್ 417 ಮತ್ತು ಎರಡನೇ ಇನಿಂಗ್ಸ್ 70 ಓವರ್‌ಗಳಲ್ಲಿ 3 ವಿಕೆಟ್‌ಗೆ 202 ಡಿಕ್ಲೇರ್ಡ್ (ಪ್ರಿಯಾಂಕ್‌ ಪಾಂಚಾಲ್ 109, ಅಭಿಮನ್ಯು ಈಶ್ವರನ್ 37, ಕರುಣ್‌ ನಾಯರ್ ಔಟಾಗದೆ 51, ಡೇನ್‌ ಪಿಯೆಟ್ 88ಕ್ಕೆ 2, ಸೆನುರನ್‌ ಮುತ್ತುಸ್ವಾಮಿ 46ಕ್ಕೆ 1) ದಕ್ಷಿಣ ಆಫ್ರಿಕಾ ‘ಎ’ ಮೊದಲ ಇನಿಂಗ್ಸ್ 400

ಫಲಿತಾಂಶ: ಪಂದ್ಯ ಡ್ರಾ, ಭಾರತಕ್ಕೆ 1–0 ರಲ್ಲಿ ಸರಣಿ ಜಯ; ಪಂದ್ಯಶ್ರೇಷ್ಠ: ಏಡನ್‌ ಮರ್ಕರಮ್

ಪ್ರತಿಕ್ರಿಯಿಸಿ (+)