ಭಾನುವಾರ, ನವೆಂಬರ್ 17, 2019
28 °C
ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್; ಮಿಂಚಿದ ದೀಪಕ್ ಚಾಹರ್: ಕ್ವಿಂಟನ್ ಡಿ ಕಾಕ್ ಅರ್ಧಶತಕ ವ್ಯರ್ಥ

ಮೊಹಾಲಿಯಲ್ಲಿ ಭಾರತ ಜಯಶಾಲಿ

Published:
Updated:
Prajavani

ಮೊಹಾಲಿ: ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಬುಧವಾರ ಇಬ್ಬರು ನಾಯಕರ ಪೈಪೋಟಿ ರಂಗೇರಿತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾ ತಂಡದ ಕ್ವಿಂಟನ್ ಡಿ ಕಾಕ್  ಅವರಿಬ್ಬರೂ ಅರ್ಧಶತಕಗಳನ್ನು ಬಾರಿ ಸಿದರು. ಆದರೆ, ಅದರಲ್ಲಿ ಗೆದ್ದಿದ್ದು ಮಾತ್ರ ವಿರಾಟ್. 

ಕೊಹ್ಲಿಯ ಅಜೇಯ ಅರ್ಧಶತಕದ (72; 52ಎಸೆತ, 4ಬೌಂಡರಿ, 3ಸಿಕ್ಸರ್) ಬಲದಿಂದ ಭಾರತ ತಂಡವು ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯ ಸಾಧಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.

ಮೊದಲ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಕೊನೆಯ ಪಂದ್ಯವು ಇದೇ 22ರಂದು ಬೆಂಗಳೂರಿನಲ್ಲಿ ನಡೆಯಲಿದೆ.  ತಮ್ಮ ಸಾಮರ್ಥ್ಯ ಸಾಬೀತುಪಡಿಸು ವಲ್ಲಿ ರಿಷಭ್ ಪಂತ್ (4 ರನ್) ವಿಫಲರಾದರು. ಆದರೆ, ಯುವ ಬೌಲರ್‌ ದೀಪಕ್ ಚಾಹರ್ ಪಾಸ್ ಆದರು.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದೀಪಕ್  (22ಕ್ಕೆ2) ಅವರು ಉತ್ತಮ ಬೌಲಿಂಗ್ ಮಾಡಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 149 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ 19 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 151 ರನ್ ಗಳಿಸಿತು.

ಭಾರತದ ಬೌಲರ್‌ಗಳ ಉತ್ತಮ ದಾಳಿಯ ಮುಂದೆ ಕುಸಿಯವ ಭೀತಿ ಎದುರಿಸಿದ ಪ್ರವಾಸಿ ತಂಡಕ್ಕೆ ನಾಯಕ ಕ್ವಿಂಟನ್  (52; 37ಎಸೆತ, 8ಬೌಂಡರಿ) ಅರ್ಧಶತಕ ಬಾರಿಸಿ ಚೇತರಿಕೆ ನೀಡಿದರು. ಪದಾರ್ಪಣೆ ಪಂದ್ಯ ಆಡಿದ ತೆಂಬಾ ಬವುಮಾ (49; 43ಎಸೆತ, 3ಬೌಂಡರಿ, 1ಸಿಕ್ಸರ್)  ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು.  ‌

ವಿರಾಟ್, ಶಿಖರ್ ಆಟ: ಗುರಿ ಬೆನ್ನತ್ತಿದ ಆತಿಥೇಯ ಬಳಗಕ್ಕೆ ಆ್ಯಂಡಿಲೆ ಪಿಶುವಾಯೊ ಪೆಟ್ಟು ನೀಡಿದರು. ರೋಹಿತ್ ಶರ್ಮಾ (12ರನ್) ವಿಕೆಟ್ ಕಬಳಿಸಿದರು.  ಎಡಗೈ ಬ್ಯಾಟ್ಸ್‌ಮನ್ ಶಿಖರ್ ಜೊತೆಗೂಡಿದ ವಿರಾಟ್ ಬೀಸಾಟವಾಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ’ದೆಹಲಿ ಜೋಡಿ’ 61 ರನ್ ಸೇರಿಸಿತು. ಅರ್ಧಶತಕದ ಸಮೀಪದಲ್ಲಿ ಶಿಖರ್ (40; 31ಎಸೆತ, 4ಬೌಂಡರಿ, 1ಸಿಕ್ಸರ್) ಔಟಾದರು. ಆದರೆ ವಿರಾಟ್ ಅವರ ಆಟದ ಸೊಬಗು ಕಣ್ಮನ ಸೆಳೆಯಿತು. 2016ರಲ್ಲಿ ಇದೇ ಅಂಗಳದಲ್ಲಿ ಅವರು ಅರ್ಧಶತಕ ಬಾರಿಸಿದ್ದರು.

ಶಿಸ್ತಿನ ಬೌಲಿಂಗ್: ಭಾರತದ ಬೌಲರ್‌ಗಳು ಮಾಡಿದ ಕಟ್ಟುನಿಟ್ಟಿನ ದಾಳಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಭಾರತದ ಮೂವರು ಸ್ಪಿನ್ನರ್ ಮತ್ತು ಮೂವರು ಮಧ್ಯಮವೇಗಿಗಳು ಒಂದೂ ನೋಬಾಲ್ ಮತ್ತು ವೈಡ್ ಬಾಲ್ ಹಾಕಲಿಲ್ಲ. ಉತ್ತಮ ಲೈನ್ ಮತ್ತು ಲೆಂಗ್ತ್‌ ಕಾಪಾಡಿಕೊಂಡರು.

 

-52 ಎಸೆತಗಳಲ್ಲಿ 72 ರನ್ ಗಳಿಸಿದ ವಿರಾಟ್ ಕೊಹ್ಲಿ

-ಎರಡನೇ ವಿಕೆಟ್‌ಗೆ 61 ರನ್‌ ಸೇರಿಸಿದ ದೆಹಲಿ ಜೋಡಿ

-22 ರನ್‌ಗಳಿಗೆ 2 ವಿಕೆಟ್ ಗಳಿಸಿದ ದೀಪಕ್ ಚಾಹರ್

 

ಪ್ರತಿಕ್ರಿಯಿಸಿ (+)