ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೀಡಂ ಟೆಸ್ಟ್: ಅಶ್ವಿನ್ ಛಲದ ಆಟ, ಮಹಾರಾಜನ ಕಾಡಾಟ!

ಮೊದಲ ಇನಿಂಗ್ಸ್‌ನಲ್ಲಿ 326 ರನ್‌ ಮುನ್ನಡೆ ಗಳಿಸಿದ ಭಾರತ; ಅಶ್ವಿನ್‌ಗೆ ನಾಲ್ಕು ವಿಕೆಟ್, ಫಾಫ್ ಅರ್ಧಶತಕ
Last Updated 12 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಪುಣೆ:ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನದಾಟವು ಇಬ್ಬರು ಸ್ಪಿನ್‌ ಆಲ್‌ರೌಂಡರ್‌ಗಳ ನಡುವಣ ಹಣಾಹಣಿಗೆ ವೇದಿಕೆಯಾಯಿತು.

ಶನಿವಾರ ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರ ಶಿಸ್ತಿನ ಬೌಲಿಂಗ್‌ಗೆ ಅಲ್ಪಮೊತ್ತಕ್ಕೆ ಕುಸಿಯಬೇಕಿದ್ದ ದಕ್ಷಿಣ ಆಫ್ರಿಕಾದ ಇನಿಂಗ್ಸ್‌ ಅನ್ನು ಲಂಬಿಸಿದ ಶ್ರೇಯ ಕೇಶವ್ ಮಹಾರಾಜ್ ಅವರದ್ದಾಯಿತು. ತಮ್ಮ ಬೌಲಿಂಗ್‌ನಲ್ಲಿ ಬಹಳಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದ ಕೇಶವ್ (72; 132ಎಸೆತ, 12ಬೌಂಡರಿ)ತಮ್ಮ ತಾಳ್ಮೆಯ ಮತ್ತು ಆಕರ್ಷಕ ಬ್ಯಾಟಿಂಗ್‌ನಿಂದ ಮನ ಗೆದ್ದರು. ಆದರೂ ಅಶ್ವಿನ್ ಅವರ ಬೌಲಿಂಗ್‌ ತಂತ್ರವೇ ಮೇಲುಗೈ ಸಾಧಿಸಿತು. ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 326 ರನ್‌ಗಳ ಮುನ್ನಡೆ ಗಳಿಸಿತು.

ಮಯಂಕ್ ಅಗರವಾಲ್ ಶತಕ ಮತ್ತು ನಾಯಕ ವಿರಾಟ್ ಕೊಹ್ಲಿಯ ದ್ವಿಶತಕದ ಬಲದಿಂದ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 601 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಶುಕ್ರವಾರ ಸಂಜೆ ಬ್ಯಾಟಿಂಗ್ ಆರಂಭಿಸಿದ್ದ ಪ್ರವಾಸಿ ಬಳಗವು 15 ಓವರ್‌ಗಳಲ್ಲಿ 36 ರನ್‌ ಗಳಿಸಿ ಮೂರು ವಿಕೆಟ್ ಕಳೆದುಕೊಂಡಿತ್ತು. ಮೂರನೇ ದಿನದಾಟದ ಮೂರನೇ ಓವರ್‌ನಲ್ಲಿ ಮೊಹಮ್ಮದ್ ಶಮಿಯ ಸ್ವಿಂಗ್‌ ಎಸೆತವನ್ನು ತಪ್ಪಾಗಿ ಅಂದಾಜಿಸಿ ಆಡಿದ ಎನ್ರಿಜ್ ನೊರ್ಟೆ ದಂಡ ತೆತ್ತರು. 21ನೇ ಓವರ್‌ನಲ್ಲಿ ತಿಯಾನಿಸ್ ಡಿ ಬ್ರಯನ್ ಅವರಿಗೆ ಉಮೇಶ್ ಯಾದವ್ ಪೆವಲಿಯನ್‌ ದಾರಿ ತೋರಿಸಿದರು. ಇದರಿಂದಾಗಿ ತಂಡವು 53 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಫಾಫ್ ಡುಪ್ಲೆಸಿ ಮತ್ತು ಕ್ವಿಂಟನ್ ಡಿ ಕಾಕ್ (31;48ಎ, 7ಬೌಂ) ಅವರು ಇನಿಂಗ್ಸ್‌ಗೆ ಜೀವ ತುಂಬಲು ಪ್ರಯತ್ನಿಸಿದರು. ಈ ಜೊತೆಯಾಟ ಮುರಿಯುವದರೊಂದಿಗೆ ಅಶ್ವಿನ್ ತಮ್ಮ ಬೇಟೆ ಆರಂಭಿಸಿದರು.38ನೇ ಓವರ್‌ನಲ್ಲಿ ಅಶ್ವಿನ್ ಎಸೆತ ಹಾಕಿದ ಟಾಸ್‌ ಬಾಲ್‌ನ ತಿರುವು ಗುರುತಿಸುವಲ್ಲಿ ಎಡವಟ್ಟು ಮಾಡಿಕೊಂಡ ಕ್ವಿಂಟನ್ ಕ್ಲೀನ್‌ಬೌಲ್ಡ್ ಆದರು. ಇದರೊಂದಿಗೆ 75 ರನ್‌ಗಳ ಜೊತೆಯಾಟ ಅಂತ್ಯವಾಯಿತು. ಸೆನುರನ್ ಮುತ್ತುಸ್ವಾಮಿ ಹೆಚ್ಚು ಹೊತ್ತು ಆಡಲಿಲ್ಲ. ಜಡೇಜ ಬೀಸಿದ ಎಲ್‌ಬಿ ಬಲೆಯಲ್ಲಿ ಬಿದ್ದರು.

ಅರ್ಧಶತಕ ಗಳಿಸಿದ್ದ ಫಾಫ್ (64;117ಎ, 9ಬೌಂ, 1ಸಿ) ತಾಳ್ಮೆಯಿಂದ ಬ್ಯಾಟಿಂಗ್ ಮಾಡುತ್ತಿದ್ದರು. ಅವರಿಗೂ ಅಶ್ವಿನ್ ಎಸೆತದ ತಿರುವು ಗುರುಇಸುವುದು ಸಾಧ್ಯವಾಗಲಿಲ್ಲ. ಬ್ಯಾಟ್‌ ಅಂಚು ಸವರಿ ಹೋದ ಚೆಂಡನ್ನು ಸ್ಲಿಪ್‌ನಲ್ಲಿ ಅಜಿಂಕ್ಯ ರಹಾನೆ ಚುರುಕಾಗಿ ಕ್ಯಾಚ್ ಪಡೆದರು. ಅಲ್ಲಿಗೆ ದಕ್ಷಿಣ ಆಫ್ರಿಕಾ ಬಳಗದ ಪ್ರಮುಖ ಬ್ಯಾಟಿಂಗ್‌ ಲೈನ್ ಅಪ್ ಮುಗಿಯಿತು ಎಂದುಕೊಂಡವರಿಗೆ ಮಹಾರಾಜ್ ಮತ್ತು ವೆರ್ನಾನ್ ಫಿಲಾಂಡರ್ ತಿರುಗೇಟು ನೀಡಿದರು!

ಅಶ್ವಿನ್‌ಗೆ ಮಹಾರಾಜ್ ಸವಾಲು: ಮಹಾರಾಜ್ ಮತ್ತು ವೆರ್ನಾನ್ ಅವರ ನಡುವಣ ಒಂಬತ್ತನೇ ವಿಕೆಟ್ ಜೊತೆಯಾಟವನ್ನು ಮುರಿಯವುದು ಅಶ್ವಿನ್‌ಗೆ ಸವಾಲಾಯಿತು. ಉಳಿದ ಬೌಲರ್‌ಗಳ ಪ್ರಯತ್ನವೂ ಫಲ ಕೊಡಲಿಲ್ಲ. ವಿರಾಟ್ ಮಾಡಿದ ಪ್ರಯೋಗಗಳನ್ನೂ ಈ ಜೋಡಿಯು ಹುಸಿ ಮಾಡಿತು.

ಮಹಾರಾಜ್ 96 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇನ್ನೊಂದೆಡೆ ಅವರಿಗೆ ಉತ್ತಮ ಜೊತೆ ನೀಡಿದ ವೆರ್ನಾನ್ ಎಚ್ಚರಿಕೆಯಿಂದ ಆಡಿದರು. 91ನೇ ಓವರ್‌ನಲ್ಲಿ ಅಶ್ವಿನ್ ತಮ್ಮದೇ ಓವರ್‌ನಲ್ಲಿ ಮಹಾರಾಜ್‌ಗೆ ಜೀವದಾನ ನೀಡಿದರು. 102ನೇ ಓವರ್‌ ಬೌಲಿಂಗ್ ಮಾಡಿದ ಅಶ್ವಿನ್ ಕಡೆಗೂ ಯಶಸ್ವಿಯಾದರು. ಅಶ್ವಿನ್ ಲೆಗ್‌ಸ್ಟಂಪ್‌ಗೆ ನೇರವಾಗಿ ಹಾಕಿದ್ದ ಎಸೆತವನ್ನು ಫ್ಲಿಕ್ ಮಾಡುವ ಮಹಾರಾಜ್ ಯತ್ನ ಫಲಿಸಲಿಲ್ಲ. ಅವರ ಬ್ಯಾಟ್‌ಗೆ ತಾಗಿದ ಚೆಂಡು ಚಿಮ್ಮಿತು. ಫೀಲ್ಡರ್ ರೋಹಿತ್ ಶರ್ಮಾ ಕ್ಯಾಚ್ ಪಡೆದು ಸಂಭ್ರಮಿಸಿದರು.

ಕಗಿಸೊ ರಬಾಡ ಕೇವಲ ಎರಡು ರನ್ ಗಳಿಸಿ ಅಶ್ವಿನ್ ಅವರ ಎಲ್‌ಬಿ ಬಲೆಗೆ ಬಿದ್ದರು. ಇದರೊಂದಿಗೆ ಇನಿಂಗ್ಸ್‌ ಅಂತ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT