ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೀಡಂ ಟೆಸ್ಟ್‌: ತವರಿನಲ್ಲಿ ಸರಣಿ ಜಯದ ವಿಶ್ವದಾಖಲೆ

ಉಮೇಶ್, ಜಡೇಜ ಬೌಲಿಂಗ್‌ಗೆ ಆಫ್ರಿಕಾ ದೂಳೀಪಟ
Last Updated 13 ಅಕ್ಟೋಬರ್ 2019, 20:29 IST
ಅಕ್ಷರ ಗಾತ್ರ

ಪುಣೆ: ಇಲ್ಲಿಯ ಪಂದ್ಯ ಮುಗಿಯಲು ಇನ್ನೂ ಒಂದು ದಿನ ಮತ್ತು ಸರಣಿ ಮುಕ್ತಾಯಕ್ಕೆ ಇನ್ನೊಂದು ಪಂದ್ಯ ಬಾಕಿಯಿರುವಾಗಲೇ ಭಾರತ ತಂಡವು ಫ್ರೀಡಂ ಕಪ್ ಟೆಸ್ಟ್ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಎದುರಿನ ಫ್ರೀಡಂ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಇನಿಂಗ್ಸ್ ಮತ್ತು 137 ರನ್‌ಗಳಿಂದ ಭಾರತ ತಂಡವು ಜಯಿಸಿತು.

ತವರಿನಲ್ಲಿ ಸತತ 11ನೇ ಟೆಸ್ಟ್‌ ಸರಣಿಯನ್ನು ಜಯಿಸಿದ ದಾಖಲೆ ಭಾರತದ ಪಾಲಾಯಿತು. ಇದರೊಂದಿಗೆ ಆಸ್ಟ್ರೆಲಿಯಾ ತಂಡವು ತನ್ನ ತವರಿನಲ್ಲಿ ಸತತವಾಗಿ ಹತ್ತು ಸರಣಿಗಳನ್ನು ಗೆದ್ದಿದ್ದ ದಾಖಲೆಯನ್ನು ಮೀರಿತು. ಈ ಹಾದಿಯಲ್ಲಿ ಒಟ್ಟು 31 ಪಂದ್ಯಗಳನ್ನು ಆಡಿರುವ ತಂಡವು 25ರಲ್ಲಿ ಜಯಿಸಿದೆ. ಐದುಪಂದ್ಯಗಳು ಡ್ರಾ ಆಗಿವೆ. ಒಂದರಲ್ಲಿ ಮಾತ್ರ ಸೋತಿದೆ. 2013ರಿಂದ ಇಲ್ಲಿಯವರೆಗಿನ ಸಾಧನೆ ಇದಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ 50 ಟೆಸ್ಟ್‌ಗಳಲ್ಲಿ ಇದು 30ನೇ ಜಯವಾಗಿದೆ.

ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 601 ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಅದಕ್ಕುತ್ತರವಾಗಿ ಪ್ರವಾಸಿ ತಂಡವು ಶನಿವಾರ ದಿನದಾಟದ ಕೊನೆಗೆ ಮೊದಲ ಇನಿಂಗ್ಸ್‌ನಲ್ಲಿ 275 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತ್ತು. ಅಶ್ವಿನ್ ನಾಲ್ಕು ಮತ್ತು ಉಮೇಶ್ ಯಾದವ್ ಮೂರು ವಿಕೆಟ್ ಗಳಿಸಿದ್ದರು. ಭಾರತ ತಂಡವು ಫಾಫ್ ಡು ಪ್ಲೆಸಿ ಬಳಗದ ಮೇಲೆ ಫಾಲೋ ಆನ್ ಹೇರಿತು.

ನಾಲ್ಕನೇ ದಿನವಾದ ಬೆಳಿಗ್ಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಬಳಗವು ಚಹಾ ವಿರಾಮದ ಮುಗಿದ ಇಪ್ಪತ್ತು ನಿಮಿಷಗಳಲ್ಲಿ ಆಟ ಮುಗಿಸಿತು. ಫಾಫ್ ಬಳಗವನ್ನು 189 ರನ್ (67.2 ಓವರ್‌) ಗಳಿಗೆ ಹೆಡೆಮುರಿ ಕಟ್ಟಿದ ಭಾರತದ ಬೌಲರ್‌ಗಳು ಕೇಕೆ ಹಾಕಿದರು. ಅದರಲ್ಲೂ ಉಮೇಶ್ ಯಾದವ್ (22ಕ್ಕೆ3) ಮತ್ತೊಮ್ಮೆ ತಮ್ಮ ರಿವರ್ಸ್‌ ಸ್ವಿಂಗ್ ಸಾಮರ್ಥ್ಯ ಮೆರೆದರು. ಎಡಗೈ ಸ್ಪಿನ್ನರ್ ರವೀಂದ್ ಜಡೇಜ ಮೂರು ಮತ್ತು ಅಶ್ವಿನ್ ಎರಡು ವಿಕೆಟ್ ಗಳಿಸಿದರು.

ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ (48; 72ಎಸೆತ, 8ಬೌಂಡರಿ) ಕೆಲವು ಉತ್ತಮ ಹೊಡೆತಗಳ ಮೂಲಕ ಗಮನ ಸೆಳೆದರು. ತಂಡದ ಹೋರಾಟವನ್ನು ಜೀವಂತವಾಗಿಡುವ ಪ್ರಯತ್ನ ಮಾಡಿದರು. ಆದರೆ, ಅಶ್ವಿನ್ ಸ್ಪಿನ್‌ಗೆ ವಿಕೆಟ್ ಒಪ್ಪಿಸಿದರು. ಮಧ್ಯಮಕ್ರಮಾಂಕದಲ್ಲಿ ತೆಂಬಾ ಬವುಮಾ (38; 63ಎಸೆತ, 4ಬೌಂಡರಿ, 1ಸಿಕ್ಸರ್) ಸ್ವಲ್ಪ ಆತ್ಮವಿಶ್ವಾಸದಿಂದ ಆಡಿದರು. ಆದರೆ ಉಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಒಂದಂಕಿಗೆ ಮರಳಿದರು.

ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ಕೆಳಕ್ರಮಾಂಕದ ವೆರ್ನಾನ್ ಫಿಲಾಂಡರ್ (37; 72ಎ, 2ಬೌಂ, 2ಸಿ) ಮತ್ತು ಕೇಶವ್ ಮಹಾರಾಜ್ (22; 65ಎ, 3ಬೌಂ) ಮತ್ತೊಮ್ಮೆ ಇನಿಂಗ್ಸ್‌ ಬೆಳೆಸುವ ಪ್ರಯತ್ನ ಮಾಡಿದರು. ಎಂಟನೇ ವಿಕೆಟ್ ಜೊತೆಯಾಟದಲ್ಲಿ 56 ರನ್‌ ಸೇರಿಸಿದರು. ಅವರ ಆಟದಿಂದಾಗಿಯೇ ಪಂದ್ಯವು ಚಹಾ ವಿರಾಮದವರೆಗೂ ಲಂಬಿಸಿತ್ತು.

67ನೇ ಓವರ್‌ನಲ್ಲಿ ಉಮೇಶ್ ಯಾದವ್ ಹಾಕಿದ ಲೆಗ್ ಸೈಡ್ ಎಸೆತವನ್ನು ಫ್ಲಿಕ್ ಮಾಡುವ ಭರದಲ್ಲಿ ವೆರ್ನಾನ್ ಎಡವಟ್ಟು ಮಾಡಿಕೊಂಡರು. ಬ್ಯಾಟ್‌ಗೆ ಸವರಿದ ಚೆಂಡು ಹಿಂದೆ ನುಗ್ಗಿತು. ವಿಕೆಟ್‌ಕೀಪರ್ ಸಹಾ ತಮ್ಮ ಎಡಕ್ಕೆ ಚಲಿಸಿ ಚಾಕಚಕ್ಯತೆಯಿಂದ ಕ್ಯಾಚ್ ಪಡೆದರು. ಅವರು ಔಟಾದ ನಂತರ ಏಳು ಎಸೆತಗಳಲ್ಲಿ ಇನಿಂಗ್ಸ್‌ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT