ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಜಯದ ಮೇಲೆ ವಿರಾಟ್ ಬಳಗದ ಕಣ್ಣು

ಭಾರತ–ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟಿ20 ಇಂದು; ಸಮಬಲ ಸಾಧಿಸುವತ್ತ ಕ್ವಿಂಟನ್ ಪಡೆಯ ಚಿತ್ತ
Last Updated 21 ಸೆಪ್ಟೆಂಬರ್ 2019, 20:52 IST
ಅಕ್ಷರ ಗಾತ್ರ

ಬೆಂಗಳೂರು:ವಿರಾಟ್..ವಿರಾಟ್‌..ವಿರಾಟ್‌.. ಶನಿವಾರ ಮಧ್ಯಾಹ್ನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಾಲಿಟ್ಟ ಗ್ಯಾಲರಿಯೊಂದರಲ್ಲಿ ಸೇರಿದ್ದ ಪ್ರೇಕ್ಷಕರು ಖುಷಿಯಿಂದ ಕೂಗಿದರು. ಎರಡು ಬ್ಯಾಟ್‌ಗಳೊಂದಿಗೆ ಅಂಗಳಕ್ಕೆ ಕಾಲಿಟ್ಟ ವಿರಾಟ್ ನೆಟ್‌ ಪ್ರಾಕ್ಟಿಸ್ ನೋಡುವ ತವಕದಲ್ಲಿ ಜನರಿದ್ದರು. ಆದರೆ, ಅಭಿಮಾನಿಗಳ ಉತ್ಸಾಹದ ಕೂಗು ಕರಗುವ ಮುನ್ನವೇ ವಿರಾಟ್ ಪೆವಿಲಿಯನ್‌ಗೆ ಮರಳಿದರು.

ಆದರೆ, ಭಾನುವಾರ ನಡೆಯಲಿರು ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸುವ ವಿಶ್ವಾಸ ಜನರಲ್ಲಿ ಕಮರಿಲ್ಲ. ಏಕೆಂದರೆ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ಕೊಹ್ಲಿಗೆ ಇದು ‘ತವರಿನ ಅಂಗಳ’. ಆರ್‌ಸಿಬಿ ಇದುವರೆಗೆ ಪ್ರಶಸ್ತಿ ಗೆದ್ದಿಲ್ಲ. ಆದರೆ, ಕೊಹ್ಲಿ ಇಲ್ಲಿ ಸಾಕಷ್ಟು ರನ್‌ ಹರಿಸಿದ್ದಾರೆ. ಆದ್ದರಿಂದ ಈ ಪಂದ್ಯದಲ್ಲಿ ಅವರು ಮಿಂಚುವ ಭರವಸೆ ಬೆಂಗಳೂರು ಅಭಿಮಾನಿಗಳದ್ದು.

ಅಷ್ಟ್ರೇ ಅಲ್ಲ ಇಲ್ಲಿಯ ಕ್ರಿಕೆಟ್‌ಪ್ರೇಮಿಗಳು ಆರು ತಿಂಗಳುಗಳ ನಂತರ ಅಂತರರಾಷ್ಟ್ರೀಯ ಪಂದ್ಯವೊಂದನ್ನು ಕಣ್ತುಂಬಿಕೊಳ್ಳುವ ಸಡಗರದಲ್ಲಿದ್ದಾರೆ. ಹೋದ ಫೆಬ್ರುವರಿಯಲ್ಲಿ ಆಸ್ಟ್ರೇಲಿಯಾ ಎದುರು ಚುಟುಕು ಪಂದ್ಯ ನಡೆದಿತ್ತು. ಈ ಸರಣಿಯಲ್ಲಿ ಈಗಾಗಲೇ 1–0 ಮುನ್ನಡೆ ಸಾಧಿಸಿರುವ ಭಾರತವು ಇಲ್ಲಿಯೂ ಅಜೇಯ ಓಟವನ್ನು ಮುಂದುವರಿಸುವ ಛಲದಲ್ಲಿದೆ. ಸರಣಿಯ ಮೊದಲ ಪಂದ್ಯವು ಮಳೆಗೆ ಮುಳುಗಿತ್ತು. ಮೊಹಾಲಿಯಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ವಿರಾಟ್ ಅಜೇಯ ಅರ್ಧಶತಕದ ಬಲದಿಂದ ಮತ್ತು ಯುವ ಮಧ್ಯಮವೇಗಿ ದೀಪಕ್ ಚಾಹರ್ ಅವರ ಅಮೋಘ ಬೌಲಿಂಗ್‌ನಿಂದ ಗೆದ್ದಿತ್ತು.

ರಿಷಭ್ ಮೇಲೆ ಕಣ್ಣು: ಮಹೇಂದ್ರಸಿಂಗ್ ಧೋನಿಯ ಸ್ಥಾನ ತುಂಬುವ ಆಟಗಾರ ಎಂದೇ ಬಿಂಬಿಸಲಾಗಿದ್ದ ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಈ ಸರಣಿಯು ಅವರ ಪಾಲಿಗೆ ಸತ್ವಪರೀಕ್ಷೆಯ ಕಣವಾಗಿದೆ. ಹೋದ ಪಂದ್ಯದಲ್ಲಿಯೂ ಅವರು ತಮಗೆ ಲಭ್ಯವಾದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಕೆಟ್ಟ ಹೊಡೆತ ಆಡಿ ವಿಕೆಟ್ ಚೆಲ್ಲುವ ಅವರ ದೌರ್ಬಲ್ಯ ಮತ್ತೊಮ್ಮೆ ಬಹಿರಂಗವಾಯಿತು.

ಮುಂದಿನ ವರ್ಷದ ಟ್ವೆಂಟಿ–20 ವಿಶ್ವಕಪ್ ಟೂರ್ನಿಗೆ ತಂಡವನ್ನು ಸಿದ್ಧಗೊಳಿಸುತ್ತಿರುವ ತಂಡದ ಮ್ಯಾನೇಜ್‌ಮೆಂಟ್‌ ಯುವ ಆಟಗಾರರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಸಿಗುವ ಕಡಿಮೆ ಅವಕಾಶಗಳಲ್ಲಿಯೇ ಅವರು ಸಾಧನೆ ಮಾಡಬೇಕು ಎಂದು ಈಚೆಗೆ ಕೊಹ್ಲಿ ಹೇಳಿದ್ದಾರೆ. ಆದ್ದರಿಂದ ರಿಷಭ್ ಇಲ್ಲಿ ಚೆನ್ನಾಗಿ ಆಡದಿದ್ದರೆ ಅವರ ಭವಿಷ್ಯ ಮಂಕಾಗಬಹುದು.

ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಕನ್ನಡಿಗ ಕೆ.ಎಲ್. ರಾಹುಲ್ ಇಲ್ಲಿ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯುವುದೇ ಅನುಮಾನ. ಮೊಹಾಲಿಯಲ್ಲಿ ಶಿಖರ್ ಧವನ್ 40 ರನ್ ಗಳಿಸಿ ಲಯಕ್ಕೆ ಮರಳಿದ್ದರು.ಆದರೆ ರೋಹಿತ್ ಬೇಗ ಔಟಾಗಿದ್ದರು. ಆದರೂ ರೋಹಿತ್ ಈ ಪಂದ್ಯದಲ್ಲಿ ಶಿಖರ್ ಜೊತೆಗೆ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ.

ಕರ್ನಾಟಕದ ಇನ್ನೊಬ್ಬ ಆಟಗಾರ ಮನೀಷ್ ಪಾಂಡೆಗೂ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಸಿಗುವುದು ಕಷ್ಟ. ಏಕೆಂದರೆ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಚೆನ್ನಾಗಿ ಆಡುತ್ತಿರುವುದರಿಂದ ಪಾಂಡೆ ಬೆಂಚ್‌ ಕಾಯುವುದು ಅನಿವಾರ್ಯವಾಗಬಹುದು.

ತಂಡದ ಬೌಲಿಂಗ್ ವಿಭಾಗದ ವಿಶೇಷವೆಂದರೆ ಬಹುತೇಕ ಎಲ್ಲರೂ ಉತ್ತಮ ಲಯದಲ್ಲಿದ್ದಾರೆ. ಆದ್ದರಿಂದ ಯಾರಿಗೆ ಅವಕಾಶ ನೀಡಬೇಕು ಎಂಬ ತಲೆನೋವು ತಂಡಕ್ಕಿದೆ. ಹೋದ ಪಂದ್ಯದಲ್ಲಿ ಮಿಂಚಿರುವ ದೀಪಕ್ ಚಾಹರ್, ನವದೀಪ್ ಸೈನಿ, ಅನುಭವಿ ಬೌಲರ್ ಜಸ್‌ಪ್ರೀತ್ ಬೂಮ್ರಾ, ಯುವ ಎಡಗೈ ಮಧ್ಯಮವೇಗಿ ಖಲೀಲ್ ಮೊಹಮ್ಮದ್ ರೇಸ್‌ನಲ್ಲಿದ್ದಾರೆ.

ಆಲ್‌ರೌಂಡರ್ ವಿಭಾಗದಲ್ಲಿಯೂ ಹಾರ್ದಿಕ್ ಪಾಂಡ್ಯ, ಅವರ ಸಹೋದರ ಕೃಣಾಲ್, ರವೀಂದ್ರ ಜಡೇಜ ಅವರ ನಡುವೆ ಸ್ಥಾನ ಪಡೆಯಲು ಪೈಪೋಟಿ ಇದೆ. ಸ್ಪಿನ್ ವಿಭಾಗದಲ್ಲಿ ‘ಹೊಸ ಚೆಂಡಿನ ಸ್ಪಿನ್ನರ್’ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಯೇ ಹೆಚ್ಚು.

ಮೊಹಾಲಿಯಲ್ಲ ಪ್ರವಾಸಿ ಬಳಗದ ಬ್ಯಾಟಿಂಗ್ ಪಡೆ ನಿರೀಕ್ಷಿತ ಮಟ್ಟದಲ್ಲಿ ಆಡಿರಲಿಲ್ಲ. ನಾಯಕ ಕ್ವಿಂಟನ್ ಮತ್ತು ಯುವ ಆಟಗಾರ ತೆಂಬಾ ಮಾತ್ರ ಮಿಂಚಿದ್ದರು. ಆದರೆ, ತಂಡವು ಗಳಿಸಿದ್ದ ಸಾಧಾರಣ ಮೊತ್ತವು ಭಾರತಕ್ಕೆ ಸುಲಭದ ತುತ್ತಾಯಿತು. ಕ್ವಿಂಟನ್ ಬಳಗಕ್ಕೆ ಆತಿಥೇಯ ಬೌಲಿಂಗ್ ಪಡೆಯನ್ನು ಎದುರಿಸುವುದೇ ಪ್ರಮುಖ ಸವಾಲಾಗಿದೆ.

‍‍‍ಪಿಚ್ ಹೇಗಿದೆ?
ಇಲ್ಲಿಯ ಪಿಚ್‌ನಲ್ಲಿ ಚೆಂಡು ಉತ್ತಮವಾಗಿ ಪುಟಿದೇಳುತ್ತದೆ. ಇದರಿಂದ ಬ್ಯಾಟ್ಸ್‌ಮನ್‌ಗಳು ಉತ್ತಮ ಹೊಡೆತಗಳನ್ನು ಪ್ರಯೋಗಿಸುವ ಅವಕಾಶ ಸಿಗುತ್ತದೆ. ಚಾಣಾಕ್ಷತೆಯಿಂದ ಬೌಲಿಂಗ್ ಮಾಡುವ ಮಧ್ಯಮವೇಗಿಗಳೂ ಸಫಲರಾಗುತ್ತಾರೆ. ಆದರೆ ಸ್ಪಿನ್ನರ್‌ಗಳಿಗೆ ತುಸು ಸವಾಲು ಎದುರಾಗಲಿದೆ. ಸಂಜೆ ಹೊತ್ತಿನಲ್ಲಿ ಇಬ್ಬನಿಯೂ ಪ್ರಮುಖ ಪಾತ್ರ ವಹಿಸಲಿದೆ. ಹೋದ ಐಪಿಎಲ್‌ ಟೂರ್ನಿಯಲ್ಲಿ ಇಲ್ಲಿ ದಾಖಲಾದ ಗರಿಷ್ಠ ಸ್ಕೋರ್ 180 ರನ್. ಇಲ್ಲಿಯ ಅತ್ಯಂತ ಯಶಸ್ವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಈ ತಂಡದಲ್ಲಿ ಇಲ್ಲ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತೇನೆ: ಶಿಖರ್
‘ಟೆಸ್ಟ್ ತಂಡದಲ್ಲಿ ನಾನು ಸ್ಥಾನ ಪಡೆದಿಲ್ಲ. ಆದ್ದರಿಂದ ಇದೇ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತೇನೆ. ನಮ್ಮ ಕೌಶಲ್ಯ ಸುಧಾರಿಸಿಕೊಳ್ಳಲು ದೇಶಿ ಕ್ರಿಕೆಟ್ ಉತ್ತಮ’ ಎಂದು ಭಾರತ ತಂಡದ ಆಟಗಾರ ಶಿಖರ್ ಧವನ್ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ‌ದ ಅವರು, ‘ತಂಡದಲ್ಲಿ ಈಗ ಆರೋಗ್ಯಕರ ಪೈಪೋಟಿ ಇದೆ. ಯುವ ಮತ್ತು ಅನುಭವಿ ಆಟಗಾರರ ನಡುವೆ ಪೈಪೋಟಿಯೂ ಇದೆ. ಸೌಹಾರ್ದತೆಯೂ ಇದೆ. ತಂಡಕ್ಕೆ ಬರುವ ಜೂನಿಯರ್ ಆಟಗಾರರಿಗೆ ಸಲಹೆ ನೀಡಲು ಸೀನಿಯರ್ ಆಟಗಾರರು ಹಿಂಜರಿಯುವುದಿಲ್ಲ. ತಂಡಕ್ಕೆ ಒಳ್ಳೆಯದಾಗಬೇಕು ಎಂಬುದಷ್ಟೇ ಎಲ್ಲರ ಉದ್ದೇಶ’ ಎಂದರು.

‘ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್ ಉತ್ತಮವಾಗಿ ಆಡುತ್ತಿದ್ದಾರೆ. ಹೊಸದಾಗಿ ಬರುತ್ತಿರುವ ಹುಡುಗರು ಪ್ರತಿಭಾವಂತರಾಗಿದ್ದಾರೆ’ ಎಂದು ಶ್ಲಾಘಿಸಿದರು.

ತಂಡಗಳು
ಭಾರತ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉಪನಾಯಕ), ಶಿಖರ್ ಧವನ್, ರಿಷಭ್ ಪಂತ್(ವಿಕೆಟ್‌ಕೀಪರ್), ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಾಹರ್, ಖಲೀಲ್ ಅಹಮದ್, ದೀಪಕ್ ಚಾಹರ್, ನವದೀಪ್ ಸೈನಿ

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ನಾಯಕ), ರಸ್ಸೀ ವ್ಯಾನ್ ಡರ್ ಡಸೆ (ಉಪನಾಯಕ), ತೆಂಬಾ ಬವುಮಾ, ಜೂನಿಯರ್ ಡಲಾ, ಜಾನ್ ಫಾರ್ಚೂನ್, ಬೇರನ್ ಹೆನ್ರಿಕ್ಸ್‌, ರೀಜಾ ಹೆನ್ರಿಕ್ಸ್‌, ಡೇವಿಡ್ ಮಿಲ್ಲರ್, ಎನ್ರಿಚ್ ನೋರ್ಜೆ, ಆ್ಯಂಡಿಲೆ ಪಿಶುವಾಯೊ, ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೇಜ್ ಶಂಸಿ, ಜಾನ್ ಜಾನ್‌ ಸ್ಮಟ್ಸ್‌.

ಪಂದ್ಯ ಆರಂಭ: ಸಂಜೆ7‌
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

*
ಮೊಹಾಲಿ ಕ್ರೀಡಾಂಗಣವು ದೊಡ್ಡದಾಗಿತ್ತು.ಚಿನ್ನಸ್ವಾಮಿಯಲ್ಲಿ ಬೌಂಡರಿಗಳ ಗಳಿಕೆ ಹೆಚ್ಚಿದೆ. ಆದ್ದರಿಂದ ಈ ಪಂದ್ಯ ವಿಭಿನ್ನವಾಗಲಿದೆ.
-ವ್ಯಾನ್‌ ಡರ್ ಡಸೆ, ದ.ಆಫ್ರಿಕಾ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT