ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA: ಚಿನ್ನಸ್ವಾಮಿ ಅಂಗಳದಲ್ಲಿ ‘ಫೈನಲ್’

ಭಾರತ–ದಕ್ಷಿಣ ಆಫ್ರಿಕಾ ಟಿ20 ಸರಣಿ ಕೊನೆ ಪಂದ್ಯ ಇಂದು; ದಿನೇಶ್ ಕಾರ್ತಿಕ್ ಆಕರ್ಷಣೆ; ಮಳೆ ಬರುವ ಸಾಧ್ಯತೆ
ಅಕ್ಷರ ಗಾತ್ರ

ಬೆಂಗಳೂರು: ಸಿಲಿಕಾನ್ ನಗರಿಯ ಎಲ್ಲ ಹಾದಿಗಳೂ ಈಗ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಬಂದು ಸೇರುತ್ತಿವೆ. ಅಷ್ಟೇ ಅಲ್ಲ; ಮಳೆ ಮೋಡಗಳ ಚಿತ್ತ ಕೂಡ ಈ ಕ್ರಿಕೆಟ್ ಅಂಗಳದತ್ತಲೇ ನೆಟ್ಟಿವೆ!

ಭಾನುವಾರ ರಾತ್ರಿ ಇಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಟಿ20 ಸರಣಿಯ ಕೊನೆಯ ಪಂದ್ಯವು ರೋಚಕ ರಸದೌತಣ ನೀಡುವ ನಿರೀಕ್ಷೆಯಲ್ಲಿ ಕ್ರಿಕೆಟ್‌ಪ್ರೇಮಿಗಳಿದ್ದಾರೆ. ಆದರೆ ಕಳೆದ ಮೂರು ದಿನಗಳಿಂದ ರಾತ್ರಿ ಹೊತ್ತಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪಂದ್ಯ ದಿನ ಕೂಡ ಮಳೆಯಾಗುವ ಸಾಧ್ಯತೆ ಇದೆ.

ಆದರೆ, ಮಹಾನಗರಿಯ ಕ್ರಿಕೆಟ್ ರಸಿಕರ ಉತ್ಸಾಹ ಮಾತ್ರ ಕುಂದಿಲ್ಲ. ಟಿಕೆಟ್‌ ಪಡೆಯುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಇಷ್ಟೊಂದು ಬೇಡಿಕೆ ಕುದುರಲು ಪ್ರಮುಖ ಕಾರಣವೆಂದರೆ, ಐದು ಪಂದ್ಯಗಳ ಸರಣಿಯ ಉಭಯ ತಂಡಗಳು 2–2ರಿಂದ ಸಮಬಲ ಸಾಧಿಸಿರುವುದು. ಇದರಿಂದಾಗಿ ಇಲ್ಲಿಯ ಪಂದ್ಯವು ನಿರ್ಣಾಯಕವಾಗಲಿದೆ.

ಅಲ್ಲದೇ; ಮೂರು ವರ್ಷಗಳ ನಂತರ ನಗರದಲ್ಲಿ ಅಂತರರಾಷ್ಟ್ರೀಯ ಟಿ20 ಪಂದ್ಯ ನಡೆಯುತ್ತಿರುವುದರಿಂದಲೂ ಜನರ ಕುತೂಹಲ ಹೆಚ್ಚಿದೆ. ಕೋವಿಡ್ ಕಾರಣದಿಂದ ಎರಡು ವರ್ಷ ಇಲ್ಲಿ ಐಪಿಎಲ್ ಮತ್ತು ಏಕದಿನ ಪಂದ್ಯಗಳೂ ನಡೆದಿಲ್ಲ. ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಭಾರತ–ಶ್ರೀಲಂಕಾ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೂ ಜನಸಾಗರ ಹರಿದು ಬಂದಿತ್ತು.

ಡಿ.ಕೆ ಆಕರ್ಷಣೆ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಅವರಂತಹ ಖ್ಯಾತನಾಮರು ಈ ಸರಣಿಯಲ್ಲಿ ಆಡುತ್ತಿಲ್ಲ.

ಯುವನಾಯಕ ರಿಷಭ್ ಪಂತ್ ಮುನ್ನಡೆಸುತ್ತಿರುವ ಈ ತಂಡದಲ್ಲಿ ದಿನೇಶ್ ಕಾರ್ತಿಕ್ ಅವರೇ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಿಂಚಿದ್ದರು. ಈ ತಂಡಕ್ಕೆ ಬಂದ ಮೇಲೆ ಮೊದಲ ಸಲ ಅವರು ಇಲ್ಲಿ ಆಡಲಿದ್ದಾರೆ.

ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತ್ತು. ಮೂರನೇ ಪಂದ್ಯದಲ್ಲಿ ಆತಿಥೇಯ ತಂಡದ ಆರಂಭಿಕ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಪ್ರತಾಪ ಮೆರೆದು ಜಯಕ್ಕೆ ಕಾರಣರಾಗಿದ್ದರು. ರಾಜ್‌ಕೋಟ್‌ನಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಮಿಂಚಿನ ಅರ್ಧಶತಕ ಹೊಡೆದಿದ್ದ ದಿನೇಶ್ ಗೆಲುವಿನ ರೂವಾರಿಯಾಗಿದ್ದರು. ಅವರೊಂದಿಗೆ ಹಾರ್ದಿಕ್ ಪಾಂಡ್ಯ ಕೂಡ ಮಿಂಚಿದ್ದರು.

ಆದರೆ, ನಾಯಕ ರಿಷಭ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಸರಣಿಯಲ್ಲಿ ಎರಡು ಅರ್ಧಶತಕ ಹೊಡೆದಿರುವ ಇಶಾನ್ ಉತ್ತಮ ಲಯದಲ್ಲಿದ್ದು, ಋತುರಾಜ್ ಮತ್ತು ಶ್ರೇಯಸ್ ಅಸ್ಥಿರ ಪ್ರದರ್ಶನ ನೀಡಿದ್ದಾರೆ. ಆರ್‌ಸಿಬಿಯ ಪ್ರತಿಭೆ, ಮಧ್ಯಮವೇಗಿ ಹರ್ಷಲ್ ಪಟೇಲ್, ಆವೇಶ್ ಖಾನ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಪ್ರವಾಸಿ ಬಳಗದ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಕ್ವಿಂಟನ್ ಡಿಕಾಕ್, ರಸಿ ವ್ಯಾನ್ ಡರ್ ಡಸೆ, ಕ್ಲಾಸನ್, ಡೇವಿಡ್ ಮಿಲ್ಲರ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಆತಿಥೇಯ ಬೌಲರ್‌ಗಳಿಗೆ ಕಷ್ಟವಾಗುವುದು ಖಚಿತ. ಬೌಲಿಂಗ್ ಪಡೆಯು ಸಮತೋಲನದಿಂದ ಕೂಡಿದೆ. ಆತಿಥೇಯ ಬ್ಯಾಟರ್‌ಗಳಿಗೆ ಸವಾಲೊಡ್ಡಲು ಸಿದ್ಧವಾಗಿದೆ.

ಉಭಯ ತಂಡಗಳು 2019ರಲ್ಲಿ ಇಲ್ಲಿ ಮುಖಾಮುಖಿಯಾಗಿದ್ದವು. ಅದರಲ್ಲಿ ದಕ್ಷಿಣ ಆಫ್ರಿಕಾ ಜಯಭೇರಿ ಬಾರಿಸಿತ್ತು. ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ಭಾರತ ತಂಡವಿದೆ.

ಪಿಚ್ ಹೇಗಿದೆ?

ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುವ ಪಿಚ್ ಇದಾಗಿದೆ. ಚಾಣಾಕ್ಷತನದಿಂದ ಬೌಲಿಂಗ್ ಮಾಡುವ ಮಧ್ಯಮವೇಗಿಗಳಿಗೆ ಒಂದಿಷ್ಟು ನೆರವು ಸಿಗಬಹುದು. ಆದರೆ ಸ್ಪಿನ್ನರ್‌ಗಳಿಗೆ ತುಸು ಕಷ್ಟ. ಮೂರು ವರ್ಷಗಳಿಂದ ಇಲ್ಲಿ ಸೀಮಿತ ಓವರ್‌ಗಳ ಪಂದ್ಯಗಳು ನಡೆದಿಲ್ಲ.

ದ್ರಾವಿಡ್ ಭೇಟಿ

ಶುಕ್ರವಾರ ರಾಜ್‌ಕೋಟ್‌ನಲ್ಲಿ ಪಂದ್ಯ ಆಡಿದ ಉಭಯ ತಂಡಗಳು ಶನಿವಾರ ಸಂಜೆಯ ವೇಳೆಗೆ ಬೆಂಗಳೂರಿಗೆ ಬಂದಿಳಿದವು. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸಂಜೆ ಆರು ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಮರಳಿದರು.

ರಾಹುಲ್ ಭಾರತ ತಂಡದ ಕೋಚ್ ಆದ ನಂತರ ಅವರ ತವರಿನಂಗಳದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT