ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL 1st T20: ಭಾರತಕ್ಕೆ 2 ರನ್‌ಗಳ ರೋಚಕ ಜಯ

ಕ್ರಿಕೆಟ್: ಅಕ್ಷರ್ ಆಲ್‌ರೌಂಡ್ ಆಟ, ಮಾವಿಗೆ 4 ವಿಕೆಟ್; ಹೂಡಾ ಮಿಂಚು
Last Updated 4 ಜನವರಿ 2023, 3:12 IST
ಅಕ್ಷರ ಗಾತ್ರ

ಮುಂಬೈ: ಅಕ್ಷರ್ ಪಟೇಲ್ ಆಲ್‌ರೌಂಡ್ ಆಟ ಹಾಗೂ ಶಿವಂ ಮಾವಿ ಅಮೋಘ ಬೌಲಿಂಗ್‌ನಿಂದ ಭಾರತ ತಂಡವು ಶ್ರೀಲಂಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯವು ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿತ್ತು. 162 ರನ್‌ಗಳ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ತಂಡಕ್ಕೆ ಪಂದ್ಯದ ಕೊನೆಯ ಓವರ್‌ನಲ್ಲಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 13 ರನ್‌ಗಳ ಅವಶ್ಯಕತೆ ಇತ್ತು. ಈ ಓವರ್ ಬೌಲಿಂಗ್ ಮಾಡಿದ ಎಡಗೈ ಸ್ಪಿನ್ನರ್ ಅಕ್ಷರ್ ಕೇವಲ 11 ರನ್ ನೀಡಿದರು. ಇದರಿಂದಾಗಿ ಭಾರತ ತಂಡವು 2 ರನ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಆತಿಥೇಯ ತಂಡವು ಹೋರಾಟದ ಮೊತ್ತ ಗಳಿಸಲು ಕೂಡ ಅಕ್ಷರ್ ಬ್ಯಾಟಿಂಗ್ ಕಾರಣವಾಗಿತ್ತು. ಅಕ್ಷರ್‌ (ಅಜೇಯ 31; 20ಎ, 4X3, 6X1) ಮತ್ತು ದೀಪಕ್ ಹೂಡಾ (ಅಜೇಯ 41; 23ಎ, 4X1, 6X4) ಇನಿಂಗ್ಸ್‌ನ ಕೊನೆಯ 35 ಎಸೆತಗಳಲ್ಲಿ 68 ರನ್‌ಗಳನ್ನು ಸೂರೆ ಮಾಡಿದರು.

ಲಂಕಾ ಸ್ಪಿನ್ನರ್‌ಗಳ ದಾಳಿಯ ಮುಂದೆ 94 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಆತಿಥೇಯ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 162 ರನ್‌ ಗಳಿಸಿತು.

ಆರಂಭಿಕ ಬ್ಯಾಟರ್ ಇಶಾನ್ ಕಿಶನ್ (37; 29ಎ) ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಆದರೆ, ಪದಾರ್ಪಣೆ ಪಂದ್ಯವಾಡಿದ ಶುಭಮನ್ ಗಿಲ್, ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಒಂದಂಕಿ ಗಳಿಸಿ ನಿರ್ಗಮಿಸಿದರು. ಇದರಿಂದಾಗಿ ತಂಡದ ರನ್‌ ಗಳಿಕೆ ವೇಗ ಕುಂಠಿತವಾಯಿತು.

ಇಶಾನ್ ಜೊತೆಗೂಡಿದ ನಾಯಕ ಹಾರ್ದಿಕ್ ಪಾಂಡ್ಯ (29; 27ಎ, 4X4) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 31 ರನ್‌ ಸೇರಿಸಿದರು. ಇಶಾನ್ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಬಾರಿಸಿದರು. ಒಂದು ಬಾರಿ ಜೀವದಾನ ಪಡೆದ ಹಾರ್ದಿಕ್ ನಾಲ್ಕು ಬಾರಿ ಚೆಂಡನ್ನು ಬೌಂಡರಿಗೆರೆ ದಾಟಿಸಿದರು. ವಣಿಂದು ಹಸರಂಗಾ ಎಸೆತದಲ್ಲಿ ಇಶಾನ್ ಔಟಾಗುವುದರೊಂದಿಗೆ ಜೊತೆಯಾಟ
ಮುರಿದುಬಿತ್ತು.

ಶಿವಂ ಮಾವಿಗೆ ನಾಲ್ಕು ವಿಕೆಟ್: ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮಧ್ಯಮವೇಗಿ ಶಿವಂ ಮಾವಿ (22ಕ್ಕೆ4) ಮಿಂಚಿದರು. ತಮ್ಮ ಮೊದಲ ಓವರ್‌ನಲ್ಲಿಯೇ ಪಥುಮ್ ನಿಸಾಂಖಾ ಅವರ ವಿಕೆಟ್ ಕಬಳಿಸಿದರು. ಕುಶಾಲ ಮೆಂಡಿಸ್, ಧನಂಜಯ್ ಡಿಸಿಲ್ವಾ ಮತ್ತು ವಣಿಂದು ಹಸರಂಗಾ ವಿಕೆಟ್‌ಗಳನ್ನೂ ಅವರು ಕಬಳಿಸಿದರು. ಇದರಿಂದಾಗಿ ಲಂಕಾ ತಂಡದ ಗೆಲುವಿನ ಅಂತರ ಹೆಚ್ಚಿತ್ತು.

ಹರ್ಷಲ್ ಪಟೇಲ್ ಹಾಕಿದ 19ನೇ ಓವರ್‌ನಲ್ಲಿ 16 ರನ್‌ಗಳನ್ನು ಕೊಟ್ಟಿದ್ದರಿಂದ ಕೊನೆಯ ಓವರ್‌ನಲ್ಲಿ ಗೆಲ್ಲುವ ಅವಕಾಶ ಶ್ರೀಲಂಕಾ ಪಾಲಿಗಿತ್ತು. ಆದರೆ ಅಕ್ಷರ್ ಪಟೇಲ್ ಚಾಣಾಕ್ಷತೆಯಿಂದ ಈ ಆತಂಕ ದೂರ ಮಾಡಿದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 162 (ಇಶಾನ್ ಕಿಶನ್ 37, ಹಾರ್ದಿಕ್ ಪಾಂಡ್ಯ 29, ದೀಪಕ್ ಹೂಡಾ ಔಟಾಗದೆ 41, ಅಕ್ಷರ್ ಪಟೇಲ್ ಔಟಾಗದೆ 31, ದಿಲ್ಶಾನ್ ಮಧುಶಂಕಾ 35ಕ್ಕೆ1, ತೀಕ್ಷಣ 29ಕ್ಕೆ1, ಚಾಮಿಕಾ ಕರುಣಾರತ್ನೆ 22ಕ್ಕೆ1, ಧನಂಜಯ್ ಡಿಸಿಲ್ವಾ 6ಕ್ಕೆ1, ಹಸರಂಗಾ 22ಕ್ಕೆ1) .

ಶ್ರೀಲಂಕಾ: 20 ಓವರ್‌ಗಳಲ್ಲಿ 160 (ದಸುನ್ ಶನಕ 45, ವನಿಂದು ಹಸರಂಗ ಡಿಸಿಲ್ವಾ 21, ಚಾಮಿಕಾ ಕರುಣಾರತ್ನೆ 23; ಶಿವಂ ಮಾವಿ 22ಕ್ಕೆ 4, ಉಮ್ರನ್ ಮಲಿಕ್‌ 27ಕ್ಕೆ 2, ಹರ್ಷಲ್ ಪಟೇಲ್‌ 41ಕ್ಕೆ 2).

ಫಲಿತಾಂಶ: ಭಾರತಕ್ಕೆ ಎರಡು ರನ್‌ಗಳ ಜಯ. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT