ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್‌ ಇಂಡೀಸ್ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್: ಭಾರತಕ್ಕೆ 59 ರನ್‌ಗಳ ಜಯ

ಮೊದಲ ಪಂದ್ಯಕ್ಕೇ ಮಳೆ ಅಡ್ಡಿ | ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1–0 ಮುನ್ನಡೆ
Last Updated 12 ಆಗಸ್ಟ್ 2019, 3:12 IST
ಅಕ್ಷರ ಗಾತ್ರ

ಪೋರ್ಟ್ ಆಫ್‌ ಸ್ಪೇನ್:ನಾಯಕ ವಿರಾಟ್ ಕೊಹ್ಲಿ ಅವರ ಸುಂದರ ಶತಕದ ನೆರವಿನಿಂದ ವೆಸ್ಟ್‌ ಇಂಡೀಸ್ ವಿರುದ್ಧಇಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 59 ರನ್‌ಗಳಿಂದ ಜಯ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡವು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 279 ರನ್‌ ಕಲೆ ಹಾಕಿತ್ತು. ಇದರಲ್ಲಿ ಕೊಹ್ಲಿ ಅವರಶತಕವೂ (120; 125ಎಸೆತ, 14ಬೌಂಡರಿ, 1ಸಿಕ್ಸರ್) ಸೇರಿತ್ತು. ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದ ಕಾರಣ ವೆಸ್ಟ್‌ ಇಂಡೀಸ್ ತಂಡಕ್ಕೆಡಕ್ವರ್ಥ್ ಲೂಯಿಸ್ ನಿಯಮಪ್ರಕಾರ ಓವರ್‌ ಮತ್ತು ಟಾರ್ಗೆಟ್‌ ಅನ್ನು ಕಡಿತಗೊಳಿಸಲಾಯಿತು. 46 ಓವರ್‌ಗಳಲ್ಲಿ 270 ರನ್‌ ಗುರಿ ನಿಗದಿಪಡಿಸಲಾಯಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್‌ ಇಂಡೀಸ್ ತಂಡ 42 ಓವರ್‌ಗಳಲ್ಲಿ 210 ರನ್‌ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು. ಪರಿಣಾಮವಾಗಿ ಭಾರತ ತಂಡವು ಸರಣಿಯಲ್ಲಿ1–0 ಮುನ್ನಡೆ ಸಾಧಿಸಿತು.ವೆಸ್ಟ್‌ ಇಂಡೀಸ್ ಪರ ಎವಿನ್‌ ಲೂಯಿಸ್ ಅತಿ ಹೆಚ್ಚು, ಅಂದರೆ 65 ರನ್‌ (80 ಎಸೆತ, 8ಬೌಂಡರಿ, 1 ಸಿಕ್ಸ್‌) ರನ್‌ ಗಳಿಸಿದ್ದು ಬಿಟ್ಟರೆ ಇನ್ಯಾರಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ದಾಖಲಾಗಲಿಲ್ಲ.

ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ

ಭಾರತಕ್ಕೆ ‘ವಿರಾಟ್’ ಶತಕದ ನೆರವು:ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡವು ಆರಂಭದಲ್ಲಿ ಆಘಾತ ಅನುಭವಿಸಿತು.ಶೆಲ್ಡನ್ ಕಾಟ್ರೆಲ್ ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ಶಿಖರ್ ಧವನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಎರಡು ರನ್ ಗಳಿಸಿದ್ದ ಶಿಖರ್ ಪೆವಿಲಿಯನ್‌ಗೆ ಮರಳಿದರು. ಆಗ ಕ್ರೀಸ್‌ಗೆ ಬಂದ ಕೊಹ್ಲಿ ಬೌಲರ್‌ಗಳನ್ನು ಸರಾಗವಾಗಿ ಎದುರಿಸಿದರು. ಆದರೆ, ಇನ್ನೊಂದೆಡೆ ಕ್ರೀಸ್‌ ನಲ್ಲಿದ್ದ ರೋಹಿತ್ ಶರ್ಮಾ ಮಾತ್ರ ಎಚ್ಚರಿಕೆಯ ಆಟವಾಡಿದರು. ಅದರಿಂದಾಗಿ 57 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ರೋಹಿತ್ ಜೊತೆಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 74 ರನ್‌ಗಳನ್ನು ಸೇರಿಸಿದರು.

16ನೇ ಓವರ್‌ನಲ್ಲಿ ರಾಸ್ಟನ್ ಚೇಸ್ ಅವರ ಎಸೆತವನ್ನು ಆಡಿದ ರೋಹಿತ್ ಅವರು ನಿಕೊಲಸ್ ಪೂರನ್‌ಗೆ ಕ್ಯಾಚಿತ್ತರು. ಇದರ ನಂತರ ಕೊಹ್ಲಿ ರನ್‌ ಗಳಿಕೆಯ ವೇಗ ತಗ್ಗಿತು. ಅವರೂ ಹೆಚ್ಚು ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ರಿಷಭ್ ಪಂತ್ (20 ರನ್) ಜೊತೆಗೆ ಮೂರನೇ ವಿಕೆಟ್‌ಗೆ 25 ರನ್‌ ಕಲೆಹಾಕಿದರು.

ವೇಗದ ಬೌಲರ್‌ ಕಾರ್ಲೊಸ್ ಬ್ರಾಥ್‌ವೇಟ್ ಅವರ ಎಸೆತದಲ್ಲಿ ಪಂತ್ ಕ್ಲೀನ್‌ಬೌಲ್ಡ್ ಆದರು.

ಕೊಹ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ ರನ್‌ ಗಳಿಕೆಗೆ ವೇಗ ನೀಡಿದರು. ಕ್ರೀಸ್‌ಗೆ ಬಂದವರೇ ಏಕಾಗ್ರತೆ ಸಾಧಿಸಿದರು.

ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದ ಶ್ರೇಯಸ್ ಪಟಪಟನೆ ರನ್ ಗಳಿಸಿದರು. ಕೊಹ್ಲಿ ಕೂಡ ಶ್ರೇಯಸ್‌ಗೆ ಹೆಚ್ಚು ಬ್ಯಾಟಿಂಗ್ ಸಿಗುವಂತೆ ನೋಡಿಕೊಂಡರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 125 ರನ್‌ಗಳು ಸೇರಿದವು. 42ನೇ ಓವರ್‌ನಲ್ಲಿ ವಿರಾಟ್ ವಿಕೆಟ್ ಗಳಿಸಿದ ಬ್ರಾಥ್‌ವೇಟ್ ಸಂಭ್ರಮಿಸಿದರು. ಅಮೋಘ ಜೊತೆಯಾಟವನ್ನೂ ಮುರಿದರು. ಇದಾಗಿ ಒಂದು ಓವರ್ ನಂತರ ಮಳೆ ಆರಂಭವಾಯಿತು. ಸುಮಾರು 20 ನಿಮಿಷ ಮಳೆ ನಿಂತಿತು.ಆಟ ಮುಂದುವರಿಯಿತು.ಶ್ರೇಯಸ್, ಕೇದಾರ್ ಜಾಧವ್ ಮತ್ತು ರವೀಂದ್ರ ಜಡೇಜ ತಂಡದ ಮೊತ್ತ ಹೆಚ್ಚಿಸಲು ಕಾಣಿಕೆ ನೀಡಿದರು.

ಆರಂಭಿಕ ಆಘಾತದಿಂದ ಚೇತರಿಸದ ವೆಸ್ಟ್‌ ಇಂಡೀಸ್:ಭಾರತ ನೀಡಿದ ಗುರಿ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದವೆಸ್ಟ್‌ ಇಂಡೀಸ್ 45 ರನ್‌ ಗಳಿಸಿರುವಾಗ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರನ್ನು ಭುವನೇಶ್ವರ್ ಕುಮಾರ್ ಎಲ್‌ಬಿ ಬಲೆಗೆ ಕೆಡವಿದರು. ಇದರ ಬೆನ್ನಲ್ಲೇಶೈ ಹೋಪ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಖಲೀಲ್ ಅಹ್ಮದ್ ಯಶಸ್ವಿಯಾದರು. ಪರಿಣಾಮವಾಗಿವೆಸ್ಟ್‌ ಇಂಡೀಸ್ ತಂಡ 12.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು55 ರನ್ ಗಳಿಸಿತ್ತು. ಈ ವೇಳೆ ಮತ್ತೆ ಮಳೆ ಸುರಿಯಿತು. ನಂತರ ಪಂದ್ಯ ಆರಂಭವಾದಾಗಎವಿನ್‌ ಲೂಯಿಸ್ ಎಚ್ಚರಿಕೆಯ ಆಟವಾಡುವ ಮೂಲಕ ತಂಡವನ್ನು ಚೇತರಿಕೆಯ ಹಾದಿಯಲ್ಲಿ ಮುನ್ನಡೆಸಿದರು. ಆದರೆಲೂಯಿಸ್ ಜತೆ ಉತ್ತಮ ಜತೆಯಾಟ ಪೇರಿಸುತ್ತಿದ್ದ ನಿಖೋಲಸ್ ಪೂರನ್ (42ರನ್, 52ಎಸೆತ, 4 ಬೌಂಡರಿ, 1 ಸಿಕ್ಸರ್) ಭುವನೇಶ್ವರ್‌ ಕುಮಾರ್‌ ಬೌಲಿಂಗ್‌ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಭಾರತದ್ದೇ ಮೇಲುಗೈಯಾಯಿತು.

ಭಾರತದ ಪರ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದು ಮಿಂಚಿದರು.

26 ವರ್ಷ ಹಿಂದಿನ ಮಿಯಾಂದಾದ್ ದಾಖಲೆ ಮುರಿದ ವಿರಾಟ್

ವಿರಾಟ್ ಕೊಹ್ಲಿ ಭಾನುವಾರ ಪಾಕಿಸ್ತಾನ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರು 26 ವರ್ಷಗಳ ಹಿಂದೆ ಮಾಡಿದ್ದ ದಾಖಲೆಯನ್ನು ಪುಡಿಗಟ್ಟಿದರು.ಅವರು ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜಾವೇದ್ ಗಳಿಸಿದ್ದ 1930(64 ಪಂದ್ಯಗಳು)ರನ್ ಗಳಿಸಿದ್ದು ಇದುವರೆಗೆ ದಾಖಲೆಯಾಗಿತ್ತು.ವೆಸ್ಟ್ ಇಂಡೀಸ್ ಎದುರಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಅವರು 19 ರನ್ ಗಳಿಸಿದಾಗ ದಾಖಲೆಯ ಗೆರೆಯನ್ನು ದಾಟಿದರು.

ಕ್ರಿಸ್ ಗೇಲ್ ತ್ರಿಶತಕ

ವಿಂಡೀಸ್ ತಂಡದ ಸ್ಫೊಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರು 300ನೇ ಏಕದಿನ ಪಂದ್ಯ ಆಡಿದರು. ಇದರೊಂದಿಗೆ ವಿಂಡೀಸ್ ಪರ ಹೆಚ್ಚು ಪಂದ್ಯಗಳನ್ನು ಆಡಿದ ಸಾಧನೆ ಮಾಡಿದರು. ಈ ಹಾದಿಯಲ್ಲಿ ಅವರು ಬ್ರಯನ್ ಲಾರಾ (299) ದಾಖಲೆ ಮೀರಿ ನಿಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT