ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಅಜೇಯ; ವಿಂಡೀಸ್ ದೂಳೀಪಟ

ಓಲ್ಡ್‌ ಟ್ರಾಫರ್ಡ್‌ನಲ್ಲಿ ಕೊಹ್ಲಿ ಬಳಗದ ವಿಜಯ; ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ
Last Updated 27 ಜೂನ್ 2019, 20:08 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಭಾರತ ತಂಡವು ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್‌ಗೆ ಗುರುವಾರ ಸೋಲಿನ ಕಹಿ ಉಣಿಸಿತು.

ವಿರಾಟ್ ಕೊಹ್ಲಿ ಮತ್ತು ಮಹೇಂದ್ರಸಿಂಗ್ ಧೋನಿಯವರ ಅಮೋಘ ಆಟದ ಬಲದಿಂದ ಭಾರತ ತಂಡವು ಅಜೇಯ ಓಟವನ್ನು ಮುಂದು ವರಿಸಿತು.

ವಿಂಡೀಸ್ ವಿರುದ್ಧ 125 ರನ್‌ಗಳ ಅಮೋಘ ಜಯ ಸಾಧಿಸಿತು. ಸೆಮಿಫೈನಲ್‌ ಹಂತದತ್ತ ಮತ್ತೊಂದು ಹೆಜ್ಮೆಯನ್ನು ಮುಂದಿಟ್ಟಿತು.

ಆದರೆ ಜೇಸನ್ ಹೋಲ್ಡರ್ ಬಳಗವು ಟೂರ್ನಿಯಿಂದ ಹೊರಬಿದ್ದಿತು. ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 268 ರನ್‌ ಗಳಿಸಿತ್ತು. ಮೊಹಮ್ಮದ್ ಶಮಿ (16ಕ್ಕೆ4) ಮತ್ತು ಜಸ್‌ಪ್ರೀತ್ ಬೂಮ್ರಾ (9ಕ್ಕೆ2) ಅವರ ಬೌಲಿಂಗ್‌ ಮುಂದೆ ವಿಂಡೀಸ್ ತಂಡವು 34.2 ಓವರ್‌ಗಳಲ್ಲಿ 143 ರನ್‌ಗಳಿಗೆ ಆಲೌಟ್ ಆಯಿತು.

ರಾಹುಲ್ ವಿರಾಟ್ ಜೊತೆಯಾಟ: ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಪಿಚ್‌ನಲ್ಲಿ ಚೆಂಡು ನಿಧಾನಗತಿಯಲ್ಲಿ ಪುಟಿದೆದ್ದು ಬರುತ್ತಿತ್ತು. ಬ್ಯಾಟಿಂಗ್ ಸುಲಭವಾಗಿರಲಿಲ್ಲ. ಟೂರ್ನಿಯ ಎರಡು ಪಂದ್ಯಗಳಲ್ಲಿ ಶತಕ ಹೊಡೆದಿರುವ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (18; 23ಎಸೆತ, 1ಬೌಂಡರಿ, 1ಸಿಕ್ಸರ್) ಇಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಸಫಲರಾಗಲಿಲ್ಲ.

ಇನ್ನೊಂದು ಕಡೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡುತ್ತಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ರನ್ ಗಳಿಸಿದರು. ಬೌಲರ್‌ಗಳಿಗೆ ತಲೆನೋವು ತಂದರು. ಲೆಗ್ ಕಟರ್, ಇನ್‌ಸ್ವಿಂಗರ್‌ಗಳಿಗೆ ತಾಳ್ಮೆಯ ಉತ್ತರ ಕೊಟ್ಟ ಇಬ್ಬರೂ ಆಟಗಾರರು ಅವಕಾಶ ಸಿಕ್ಕಾಗ ರನ್‌ಗಳನ್ನು ಗಳಿಸಿದರು.

ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 69 ರನ್ ಗಳಿಸಿದರು. ಅರ್ಧಶತಕದತ್ತ ಹೆಜ್ಜೆಯಿಟ್ಟಿದ ರಾಹುಲ್ (48; 64ಎಸೆತ, 6ಬೌಂಡರಿ) ಅವರನ್ನು ಜೇಸನ್ ಹೋಲ್ಡರ್ 21ನೇ ಓವರ್‌ನಲ್ಲಿ ಕ್ಲೀನ್‌ಬೌಲ್ಡ್‌ ಮಾಡಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ವಿಜಯಶಂಕರ್ ದೊಡ್ಡ ಆಟ ಆಡುವಲ್ಲಿ ವಿಫಲರಾದರು. ಕೇವಲ 14 ರನ್ ಗಳಿಸಿದವರನ್ನು ಕೆಮರ್ ರೋಚ್ ಔಟ್ ಮಾಡಿದರು. ಹೋದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಕೇದಾರ ಜಾಧವ್ ಆಟ ಇಲ್ಲಿ ನಡೆಯಲಿಲ್ಲ. ಅವರಿಗೂ ರೋಚ್ ಪೆವಿಲಿಯನ್ ದಾರಿ ತೋರಿಸಿದರು.

ಈ ಹಂತದಲ್ಲಿ ಕ್ರೀಸ್‌ಗೆ ಬಂದ ಮಹೇಂದ್ರಸಿಂಗ್ ಧೋನಿ ತಾಳ್ಮೆಯ ಆಟಕ್ಕೆ ಮೊರೆಹೋದರು. ಈ ನಡುವೆ ಕೊಹ್ಲಿ ಟೂರ್ನಿಯಲ್ಲಿ ತಮ್ಮ ನಾಲ್ಕನೇ ಅರ್ಧಶತಕವನ್ನು ಪೂರೈಸಿದರು. ವಿಶ್ವಕಪ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅವರು ಶತಕ ಗಳಿಸುವ ನಿರೀಕ್ಷೆ ಮೂಡಿತ್ತು. ಆದರೆ 82 ಎಸೆತಗಳಲ್ಲಿ 72 ರನ್‌ ಗಳಿಸಿದ ಅವರಿಗೆ ಹೋಲ್ಡರ್ ಪೆವಿಲಿಯನ್ ದಾರಿ ತೋರಿಸಿದರು. ಅದರಲ್ಲಿ ಎಂಟು ಬೌಂಡರಿಗಳಿದ್ದವು.

ಧೋನಿ–ಪಾಂಡ್ಯ ಆಟ: ಅಫ್ಗನ್ ವಿರುದ್ಧದ ಪಂದ್ಯದಲ್ಲಿ ಹೆಚ್ಚು ಎಸೆತ ಆಡಿ ಕಡಿಮೆ ರನ್‌ ಗಳಿಸಿದ್ದಕ್ಕಾಗಿ ಟೀಕೆಗೊಳಗಾಗಿದ್ದ ಮಹೇಂದ್ರಸಿಂಗ್ ಧೋನಿ ಇಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದರು.

ಕ್ರೀಸ್‌ಗೆ ಬಂದ ಆರಂಭಿಕ ಹಂತದಲ್ಲಿ ಅವರು ನಿಧಾನವಾಗಿಯೇ ಆಡಿದರು. 50ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟಿಂಗ್ ಮಾಡಿದರು. ವಿರಾಟ್ ಔಟಾದ ಮೇಲೆ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ಎಂದಿನಂತೆ ತಮ್ಮ ಬೀಸಾಟವನ್ನು ಆಡಿದರು. ಇದರಿಂದಾಗಿ ಒಂದು ಹಂತದಲ್ಲಿ ಪಾಂಡ್ಯ ಅವರು ಧೋನಿಗಿಂತಲೂ ರನ್‌ ಗಳಿಕೆಯಲ್ಲಿ ಮುಂದೆ ಹೋಗಿದ್ದರು. 42 ಓವರ್‌ ದಾಟಿದ ನಂತರ ಧೋನಿ ಕೂಡ ಆತ್ಮವಿಶ್ವಾಸದಿಂದ ಆಡಿದರು. ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದರು. ಅವರ ಸ್ಟ್ರೈಕ್‌ರೇಟ್ 90ರ ಸರಾಸರಿಯನ್ನು ದಾಟಿತು.

ಕೊಹ್ಲಿ 20 ಸಾವಿರ ರನ್‌

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಗುರುವಾರ ಹೊಸ ಮೈಲುಗಲ್ಲು ಸ್ಥಾಪಿಸಿದರು. ಅವರು ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 20 ಸಾವಿರ ರನ್‌ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಭಾರತದ ಸಚಿನ್‌ ತೆಂಡೂಲ್ಕರ್‌ ಮತ್ತು ವೆಸ್ಟ್‌ ಇಂಡೀಸ್‌ನ ಬ್ರಯನ್‌ ಲಾರಾ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಕೊಹ್ಲಿ ಅವರು 417ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಲಾರಾ ಮತ್ತು ಸಚಿನ್‌ ಈ ದಾಖಲೆ ನಿರ್ಮಿಸಲು 453 ಇನಿಂಗ್ಸ್‌ ತೆಗೆದುಕೊಂಡಿದ್ದರು.

ವಿರಾಟ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್‌ ಪೂರೈಸಿದ ಭಾರತದ ಮೂರನೇ ಬ್ಯಾಟ್ಸ್‌ಮನ್‌. ಸಚಿನ್‌ ಮತ್ತು ದ್ರಾವಿಡ್‌ ಮೊದಲು ಈ ಸಾಧನೆ ಮಾಡಿದ್ದರು. 30 ವರ್ಷ ವಯಸ್ಸಿನ ಕೊಹ್ಲಿ ಟೆಸ್ಟ್‌ನಲ್ಲಿ 6,613, ಟ್ವೆಂಟಿ–20ಯಲ್ಲಿ 2,263 ಹಾಗೂ ಏಕದಿನ ಮಾದರಿಯಲ್ಲಿ 11,159ರನ್‌ ಪೇರಿಸಿದ್ದಾರೆ.

ವಿಶ್ವಕಪ್‌ ಟೂರ್ನಿಯೊಂದರಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ ವಿಶ್ವದ ಮೂರನೇ ನಾಯಕ ಎಂಬ ಹಿರಿಮೆಗೂ ಕೊಹ್ಲಿ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT