ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡದಂಡೆ ನಾಲೆಯ ಸಮಸ್ಯೆಗೆ ಶಾಶ್ವತ ಪರಿಹಾರ

Last Updated 18 ಜೂನ್ 2018, 7:15 IST
ಅಕ್ಷರ ಗಾತ್ರ

ಸಿಂಧನೂರು: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿರುವ ಸಂದರ್ಶನ..

ತಕ್ಷಣದ ಅಭಿವೃದ್ದಿ ಕೆಲಸಗಳೇನು?

ಸಿಂಧನೂರು ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಅವುಗಳಿಗೆ ಪುನಃ ಚಾಲನೆ ನೀಡಿ ಕ್ಷೇತ್ರದ ಬಹುತೇಕ ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆ ಸೇರಿದಂತೆ 2013 ಕ್ಕಿಂತ ಹಿಂದಿನ ಮತ್ತು ನಂತರದ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಲ್ಲದೆ ತಹಶೀಲ್ದಾರ್ ಕಚೇರಿ, ಭೂದಾಖಲೆಗಳ ಇಲಾಖೆಗಳಲ್ಲಿ ಎರಡು ವರ್ಷಗಳಿಂದ ವಿಲೇವಾರಿಯಾಗದ ಕಡತಗಳನ್ನು ಪರಿಶೀಲಿಸಿ ಚುರುಕುಗೊಳಿಸುವುದು. ಉಪನೋಂದಣಾಧಿಕಾರಿ ಕಚೇರಿ ಎಪಿಎಂಸಿ ಪ್ರಾಂಗಣದಲ್ಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಅದನ್ನು ಮಿನಿವಿಧಾನಸೌಧಕ್ಕೆ ಸ್ಥಳಾಂತರಿಸಲಾಗುವುದು.

ಸಮ್ಮಿಶ್ರ ಸರ್ಕಾರ ಅಭಿವೃದ್ದಿಗೆ ಹಿನ್ನೆಡೆಯಾಗಲಿದೆಯೇ?

ದೇಶದ ಹಲವಾರು ಕಡೆ ಸಮ್ಮಿಶ್ರ ಸರ್ಕಾರಗಳನ್ನು ರಚಿಸಲಾಗುತ್ತಿದೆ. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಜನರು ನೀಡುವ ತೀರ್ಪುಗಳಿಗೆ ಒಗ್ಗಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸಂಚರಿಸಿ ಯಾವುದೇ ತೊಂದರೆ ಉದ್ಬವಿಸದಂತೆ ಇಲಾಖೆಯ ಪ್ರಗತಿಯನ್ನು ಹೆಚ್ಚಿಸಲಾಗುವುದು. ಸಚಿವರಾದ ನಂತರ ನಾನು ಒಂದು ಪಕ್ಷಕ್ಕೆ ಸೀಮಿತವಾಗುವುದಿಲ್ಲ. ಎಲ್ಲ ಜನರ ಹಿತ ಕಾಯ್ದು ಕೊಳ್ಳಬೇಕಾಗುತ್ತದೆ. ಆಯಾ ಕ್ಷೇತ್ರದ ಶಾಸಕರು ಯಾವ ಪಕ್ಷದವರೇ ಆಗಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತೇನೆ. ಪಶುಸಂಗೋಪನಾ ಇಲಾಖೆ ವ್ಯಾಪ್ತಿಗೊಳಪಡುವ ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಮೀನು ಸಾಕಾಣಿಕೆ ಮಾಡುವ ಮೂಲಕ ರೈತರು ಆರ್ಥಿಕ ಅಭಿವೃದ್ದಿಯಾಗುವಂತೆ ಸೂಕ್ತ ವಾತವರಣ ನಿರ್ಮಿಸುವುದು ನನ್ನ ಉದ್ದೇಶವಾಗಿದೆ.

ಕ್ಷೇತ್ರದಲ್ಲಿ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಏನು?

ಸಿಂಧನೂರು ನಗರಕ್ಕೆ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ, ಉದ್ಯಾನವನ ನಿರ್ಮಾಣ ಸೇರಿದಂತೆ ಹಿಂದಿನ ಶಾಸಕರ ಅವಧಿಯಲ್ಲಿ ಅಪೂರ್ಣಗೊಂಡ ಕೆಲಸ ಪೂರ್ಣಗೊಳಿಸಲಾಗುವುದು. ಮುಖ್ಯವಾಗಿ ನಗರದ ವಿವಿಧ ವಾರ್ಡುಗಳಲ್ಲಿ ಹದಗೆಟ್ಟಿರುವ ರಸ್ತೆಗಳಿಗೆ ಡಾಂಬರೀಕರಣ, ಒಳರಸ್ತೆಗಳಿಗೆ ಸಿಸಿ ರಸ್ತೆ ಮಾಡಲಾಗುವುದು. ರಾಯಚೂರು, ಗಂಗಾವತಿ, ಕುಷ್ಟಗಿ ಮುಖ್ಯರಸ್ತೆಗಳಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ಮಿಸಲಾಗುವುದು. ವಳಬಳ್ಳಾರಿ, ಆಯನೂರು ಮತ್ತಿತರ ಎಲ್ಲ ಏತನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರುಣಿಸಲು ಪ್ರಯತ್ನಿಸಲಾಗುವುದು. ಕ್ಯಾಂಪ್‍ಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವುದು, ಹಲವಾರು ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ನೀಗಿಸುವುದು, ತಾಲ್ಲೂಕಿನ ಎಲ್ಲ ಗ್ರಾಮ ಮತ್ತು ಕ್ಯಾಂಪ್‍ಗಳಿಗೆ ಮೂಲಸೌಕರ್ಯ ಒದಗಿಸುವುದು ನನ್ನ ಗುರಿಯಾಗಿದೆ.

ಕ್ಷೇತ್ರಕ್ಕೆ ಹೊಸ ಯೋಜನೆಗಳನ್ನು ತರಲು ಹೇಗೆ ಪ್ರಯತ್ನಿಸುತ್ತೀರಿ?

ಪಶುಸಂಗೋಪನೆ ಮತ್ತು ಮೀನುಗಾರಿಕೆ ವಿಸ್ತಾರವಾದ ಇಲಾಖೆಯಾಗಿದ್ದು, ಜನರ ಅಭಿವೃದ್ದಿಗೆ ಕೆಲಸ ಮಾಡಲು ವಿಫುಲ ಅವಕಾಶವಿದೆ. ಕ್ಷೇತ್ರದ ರೈತರು ಕೃಷಿಯ ಜೊತೆಗೆ ಉಪಕಸಬುಗಳಾದ ಹೈನುಗಾರಿಕೆ ಮೀನು, ಕೋಳಿ, ಕುರಿ ಸಾಕಾಣಿಕೆ ಉದ್ಯೋಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಅಭಿಯಾಗಲು ಸರ್ಕಾರದಿಂದ ವಿಶೇಷ ಅನುದಾನವನ್ನು ತರಲಾಗುವುದು. ತುಂತುರು ಹನಿ ನೀರಾವರಿ, ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಠಿ, ತುಂಗಭದ್ರಾ ಜಲಾಶಯದ ನೀರು ಪೋಲಾಗದಂತೆ ಸಿಂಧನೂರು, ಪೋತ್ನಾಳ ಮತ್ತಿತರ ಹಳ್ಳಗಳಿಗೆ ಅಲ್ಲಲ್ಲಿ ಬ್ಯಾರೇಜ್‍ಗಳನ್ನು ನಿರ್ಮಿಸಲು ಸಂಕಲ್ಪ ಮಾಡಿಕೊಂಡಿದ್ದೇನೆ.

ಪಶುಸಂಗೋಪನಾ ಇಲಾಖೆಯ ಸ್ಥಿತಿಗತಿ ಏನು?

ಇದೀಗ ಇಲಾಖೆಯ ಕಾರ್ಯಭಾರ ವಹಿಸಿಕೊಂಡಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಿ ಆಯಾ ಜಿಲ್ಲೆಗಳ ಪರಿಸ್ಥಿತಿಯನ್ನು ಅಭ್ಯಾಸ ಮಾಡುವೆ. ವಿಶ್ವವಿದ್ಯಾಲಯ, ಹಾಲು ಒಕ್ಕೂಟ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪಶುಸಂಗೋಪನೆ ಇಲಾಖೆಗೆ ಸಂಬಂಧಿಸಿದ ಲಕ್ಷಗಟ್ಟಲೆಯ ಜಮೀನು ಪಾಳು ಬಿದ್ದಿದೆ. ಅದನ್ನು ಹೇಗೆ ಉಪಯೋಗಿಸಬಹುದು ಎಂದು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವೆ. ಅಲ್ಲದೆ ಇಲಾಖೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಖಾಲಿಯಿರುವ ಪಶು ವೈದ್ಯ ಮತ್ತು ಇತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸೂಕ್ತ ಕ್ರಮಕೈಗೊಳ್ಳುವ ಮೂಲಕ ಇಲಾಖೆ ಪ್ರಗತಿಯತ್ತ ಹೆಜ್ಜೆ ಹಾಕುವೆ.

ನಿಮ್ಮ ಕಾರ್ಯವೈಖರಿ ಹೇಗಿರುತ್ತದೆ?

2008 ರಲ್ಲಿ ಸಿಂಧನೂರು ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಎಲ್ಲ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಶಾಲೆ, ವಿದ್ಯುತ್ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಒಬ್ಬ ಶಾಸಕ ಹೇಗಿರಬೇಕು ಎಂಬುವುದನ್ನು ಸಿಂಧನೂರು ಕ್ಷೇತ್ರದ ಜನರಿಗೆ ಪ್ರಥಮ ಬಾರಿಗೆ ತೋರಿಸಿಕೊಟ್ಟೆ. ಈಗ ಸಿಂಧನೂರು ಕ್ಷೇತ್ರದ ಜನರ, ಕುಮಾರಣ್ಣ ಮತ್ತು ದೇವರ ಕೃಪೆಯಿಂದ ಸಚಿವನಾಗಿದ್ದೇನೆ. ಒಬ್ಬ ಸಚಿವನಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ರಾಜ್ಯದ ಜನರಿಗೆ ತೋರಿಸಿ ಕೊಡಲು ಉತ್ಸುಕನಾಗಿರುವೆ.

ನೀರಾವರಿ ಸಮಸ್ಯೆಗೆ ನಿಮ್ಮ ಪರಿಹಾರವೇನು?

ತುಂಗಭದ್ರಾ ಎಡದಂಡೆ ನಾಲೆಯ ರೈತರು ಕಳೆದ ಮೂರು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಮುಂಗಾರು ಬೆಳೆ ಮಾತ್ರ ಸಿಗುತ್ತಿದೆ. ಕಳೆದ ವರ್ಷ ಮುಂಗಾರು ಬೆಳೆಗೂ ನೀರು ಸಿಗದಿರುವುದರಿಂದ ವರ್ಷಪೂರ್ತಿ ಹೊಲಗಳನ್ನು ಬೀಳು ಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ಶಾಶ್ವತ ಪರಿಹಾರ ಒದಗಿಸಲು ಪ್ರಥಮ ಆದ್ಯತೆ ನೀಡಲಾಗುವುದು.

ಪಶ್ಚಿಮ ವಾಹಿನಿ ನದಿಯಿಂದ ವರದಾ ನದಿಗೆ ಸಂಪರ್ಕ ಕಲ್ಪಿಸುವ ಮೂಲಕ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಸಂಗ್ರಹವಾಗುವಂತೆ ಮಾಡಿದರೆ ಎಡದಂಡೆ ನಾಲೆಯ ರೈತರ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ. ಈ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತನೆ ನಡೆಸಿ ಪ್ರಾಥಮಿಕ ವರದಿಯನ್ನು ತಯಾರಿಸಿವೆ. ಇನ್ನೆರಡು ತಿಂಗಳಲ್ಲಿ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ರೈತ ಮುಖಂಡರು, ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆಯ ನಿವೃತ್ತ ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಲಾಗುವುದು.

ತಜ್ಞರು ಈ ಯೋಜನೆ ಕಾರ್ಯಾನುಷ್ಠಾನಕ್ಕೆ ನಕಾರ ವ್ಯಕ್ತಪಡಿಸಿದರೆ, ಕೃಷ್ಣಾ ನದಿ ನೀರನ್ನು ಕೊಪ್ಪಳದ ಹಿರೇಹಳ್ಳಕ್ಕೆ ತರುವ ಮೂಲಕ ಎಡದಂಡೆ ನಾಲೆಯ ರೈತರಿಗೆ ಸಮರ್ಪಕ ನೀರು ದೊರೆಯುವಂತೆ ಮಾಡಲು ಸಂಕಲ್ಪ ಮಾಡಿಕೊಂಡಿದ್ದೇನೆ. ಈ ಕುರಿತು ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಕಳೆದ ವರ್ಷ ಮುಂಗಾರಿನಲ್ಲಿ ಜಲಾಶಯದಲ್ಲಿ 70 ಟಿಎಂಸಿ ನೀರಿರುವ ಸಮಯದಲ್ಲಿ ನಾಲೆಗೆ ನೀರು ಹರಿಸಲಿಲ್ಲ. ಅದರ ಪರಿಣಾಮ ರೈತ ಸಮುದಾಯ ಸಂಕಷ್ಟಕ್ಕೆ ತುತ್ತಾಯಿತು. ಈ ಬಾರಿ 40 ಟಿಎಂಸಿ ನೀರು ಸಂಗ್ರಹವಿದ್ದರೂ ಎಡದಂಡೆ ನಾಲೆಗೆ ನೀರು ಬಿಡಬಹುದೆಂದು ತೋರಿಸಿ ಕೊಡುತ್ತೇನೆ.

- ಡಿ.ಎಚ್.ಕಂಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT