ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ಗೆಲುವಿನ ಉಡುಗೊರೆ

ವೆಸ್ಟ್ ಇಂಡೀಸ್ ಎದುರಿನ ಸರಣಿಯ ಎರಡನೇ ಟ್ವೆಂಟಿ–20 ಪಂದ್ಯ
Last Updated 7 ನವೆಂಬರ್ 2018, 20:37 IST
ಅಕ್ಷರ ಗಾತ್ರ

ಲಖನೌ: ನರಕ ಚತುರ್ದಶಿಯ ದಿನ ರೋಹಿತ್ ಶರ್ಮಾ ಸಿಡಿಸಿದ ‘ಪಟಾಕಿ’ಗಳ ಅಬ್ಬರಕ್ಕೆ ವೆಸ್ಟ್ ಇಂಡೀಸ್ ತಂಡ ತತ್ತರಿಸಿತು. ತಮ್ಮ ನಗರದ ಮೈದಾನದಲ್ಲಿ ಮೊದಲ ಟ್ವೆಂಟಿ–20 ಅಂತರರಾಷ್ಟ್ರೀಯ ಪಂದ್ಯವನ್ನು ಕಣ್ತುಂಬಿಕೊಂಡ ಕ್ರಿಕೆಟ್‌ ಪ್ರಿಯರ ದೀಪಾವಳಿ ಸಂಭ್ರಮ ಇಮ್ಮಡಿಯಾಯಿತು.

ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 71 ರನ್‌ಗಳಿಂದ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ (111; 61ಎಸೆತ, 8ಬೌಂಡರಿ, 7ಸಿಕ್ಸರ್) ಶತಕ ಹೊಡೆದು ದಾಖಲೆ ಬರೆದರು. ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ದಾಖಲಿಸಿದರು. ಈ ಸಾಧನೆ ಮಾಡಿದ ಮೊದಲಿಗರಾದರು. ಇದರಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 195 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ವಿಂಡೀಸ್ ಬಳಗವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 124 ರನ್‌ ಗಳಿಸಿತು. ಆತಿಥೇಯರು 2–0ಯಿಂದ ಸರಣಿಯನ್ನು ಕೈವಶ ಮಾಡಿಕೊಂಡರು.

ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿರುವ ಕಾರಣಕ್ಕೆ ತಂಡದ ನಾಯಕತ್ವ ವಹಿಸಿರುವ ರೋಹಿತ್, ತಮ್ಮ ಎಂದಿನ ಸ್ಫೋಟಕ ಶೈಲಿಯ ಬ್ಯಾಟಿಂಗ್‌ ಮಾಡಿದರು. ಈ ಕ್ರೀಡಾಂಗಣದಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪಂದ್ಯವು ಸ್ಥಳೀಯರಿಗೆ ಸವಿನೆನಪಾಗಿ ಉಳಿಯುವಂತೆ ಮಾಡಿದರು. ಕೊಹ್ಲಿಯ ದಾಖಲೆಯನ್ನು (58 ಇನಿಂಗ್ಸ್‌ಗಳಲ್ಲಿ 2102ರನ್) ದಾಖಲೆಯನ್ನೂ ಮೀರಿ ನಿಂತರು. ಒಟ್ಟು 79 ಇನಿಂಗ್ಸ್‌ಗಳಿಂದ 2203 ರನ್‌ಗಳನ್ನು ಪೇರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.

ವಿಂಡೀಸ್ ಬೌಲರ್‌ಗಳು ರೋಹಿತ್‌ಗೆ ಯಾವ ರೀತಿಯ ಎಸೆತಗಳನ್ನು ಹಾಕಬೇಕೆಂಬ ಸವಾಲು ಎದುರಿಸಿದರು. ಅವರ ಫ್ರಂಟ್‌ಫುಟ್‌ ಮತ್ತು ಬ್ಯಾಕ್‌ ಫುಟ್‌ ಡ್ರೈವ್‌ಗಳಿಗೆ ಫೀಲ್ಡರ್‌ಗಳು ಮೂಕಪ್ರೇಕ್ಷಕರಾದರು. ಅವರು ಸಿಡಿ ಸಿದ ಏಳು ಸಿಕ್ಸರ್‌ಗಳಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿತ್ತು. ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್ (103) ಮತ್ತು ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (103) ಅವರ ದಾಖಲೆ ಮುರಿಯಲು ಇನ್ನೂ ಏಳು ಸಿಕ್ಸರ್‌ಗಳು ಮಾತ್ರ ಅವರಿಗೆ ಬೇಕು.

ಮೊದಲ ವಿಕೆಟ್ ಜೊತೆಯಾಟದಲ್ಲಿ ರೋಹಿತ್ ಅವರು ಶಿಖರ್ ಧವನ್ ಜೊತೆಗೆ ಸೇರಿಸಿದ 123 ರನ್‌ಗಳೂ ಕೂಡ ದಾಖಲೆಯೇ.

ಅವರಿಬ್ಬರೂ 39 ಇನಿಂಗ್ಸ್‌ಗಳಲ್ಲಿಆಡಿದ ಜೊತೆಯಾಟಗಳಿಂದ ಒಟ್ಟು 1268 ರನ್‌ಗಳನ್ನು ಸೇರಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ ತಂಡದ ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಶೇನ್ ವಾಟ್ಸನ್‌ ಅವರ ಜೊತೆಯಾಟದ 1154 ರನ್‌ಗಳ ದಾಖಲೆಯನ್ನು ಮುರಿದರು.

ರೋಹಿತ್ ದಾಖಲೆಗಳ ಭರಾಟೆ ಯಲ್ಲಿ ವಿಂಡೀಸ್ ಆಟದ ಲಯವನ್ನೇ ಕಳೆದುಕೊಂಡಿತು. ಇದರ ಲಾಭ ಪಡೆದ ಆತಿಥೇಯ ಬೌಲರ್‌ಗಳು ಮೇಲುಗೈ ಸಾಧಿಸಿದರು.

ಅಪಾಯದಿಂದ ಪಾರಾದ ಗಾವಸ್ಕರ್–ಮಾಂಜ್ರೇಕರ್
ಲಖನೌ:
ವೀಕ್ಷಕ ವಿವರಣೆಕಾರರಾದ ಸುನಿಲ್ ಗಾವಸ್ಕರ್ ಮತ್ತು ಸಂಜಯ್ ಮಾಂಜ್ರೇಕರ್ ಇಲ್ಲಿ ಮಂಗಳವಾರ ನಡೆದ ಕ್ರಿಕೆಟ್‌ ಪಂದ್ಯದ ವೇಳೆ ನಡೆದ ಅವಘಡವೊಂದರಲ್ಲಿ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಕಾಮೆಂಟರಿ ಬಾಕ್ಸ್‌ನ ದೊಡ್ಡ ಕಿಟಕಿಯ ಗಾಜು ಒಡೆದು ಬಿದ್ದಿತು. ಅದೇ ಸಂದರ್ಭದಲ್ಲಿ ಗಾವಸ್ಕರ್ ಮತ್ತು ಮಾಂಜ್ರೇಕರ್ ಅವರು ಕೊಠಡಿ ಪ್ರವೇಶಿಸುತ್ತಿದ್ದರು. ಆದರೆ ಅವರ ಕಾಲ ಬಳಿಯೇ ಗಾಜಿನ ಚೂರುಗಳು ಬಂದು ಬಿದ್ದವು. ಇಬ್ಬರೂ ಕೂಡಲೇ ಹಿಂದೆ ಸರಿದಿದ್ದರಿಂದ ಗಾಯಗಳಾಗಲಿಲ್ಲ ಎಂದು ವರದಿಯಾಗಿದೆ.

ಏಕನಾ ಸ್ಪೋರ್ಟ್ಸ್‌ ಸಿಟಿಯಲ್ಲಿರುವು ಈ ಕ್ರೀಡಾಂಗಣವನ್ನು ಖಾಸಗಿ ಸಂಸ್ಥೆಯು ನಿರ್ವಹಿಸುತ್ತಿದೆ. ಇದೇ ಮೊದಲ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯವನ್ನು ಇಲ್ಲಿ ಆಯೋಜಿಸಲಾಗಿತ್ತು. ಇಲ್ಲಿ ಸೌಲಭ್ಯಗಳ ಕೊರತೆಯೂ ಇತ್ತು ಎಂದು ಕೆಲವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT