ಶನಿವಾರ, ಮೇ 15, 2021
25 °C
ಮಿನುಗಿದ ಶೆಫಾಲಿ, ದೀಪ್ತಿ

ಮಹಿಳಾ ಕ್ರಿಕೆಟ್‌: ವೆಸ್ಟ್‌ ಇಂಡೀಸ್‌ ಎದುರು ಭಾರತ ಜಯಭೇರಿ

ಪಿಟಿಐ Updated:

ಅಕ್ಷರ ಗಾತ್ರ : | |

ಗ್ರಾಸ್‌ ಐಲ್‌, ಸೇಂಟ್‌ ಲೂಸಿಯಾ: ಶೆಫಾಲಿ ವರ್ಮಾ ಸತತ ಎರಡನೇ ಅರ್ಧಶತಕ ಸಿಡಿಸಿದರು. ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಮಿನುಗಿದರು. ಇವರಿಬ್ಬರ ಆಟದ ಬಲದಿಂದ ಭಾರತ ಮಹಿಳಾ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಪಡೆಯಿತು.

ಭಾನುವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ಮಹಿಳೆಯರು ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 103 ರನ್‌ ಗಳಿಸಿದರು. ದೀಪ್ತಿ ಶರ್ಮಾ ಜೀವನಶ್ರೇಷ್ಠ ಸಾಧನೆ (10ಕ್ಕೆ 4) ಕೆರಿಬಿಯನ್‌ ಪಡೆಯ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು.

ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಚೆಡೀನ್‌ ನೇಷನ್‌ (32) ಹಾಗೂ ಹೇಯ್‌ಲಿ ಮ್ಯಾಥ್ಯುಸ್‌ (23) ಅಲ್ಪ ಪ್ರತಿರೋಧ ತೋರದಿದ್ದರೆ ಆ ತಂಡ ಇನ್ನಷ್ಟು ಕಳಪೆ ಮೊತ್ತಕ್ಕೆ ಕುಸಿಯುತ್ತಿತ್ತು. ಇವರಿಬ್ಬರ ಜೊತೆಯಾಟದಲ್ಲಿ 32 ರನ್‌ಗಳು ಬಂದವು. ಬಳಿಕ ಆತಿಥೇಯರು ನಿರಂತರವಾಗಿ ವಿಕೆಟ್‌ ಕಳೆದುಕೊಂಡರು.

ಸಾಧಾರಣ ಗುರಿ ಬೆನ್ನತ್ತಿದ ಪ್ರವಾಸಿ ತಂಡದ ಪರ ಶೆಫಾಲಿ ಸ್ಫೋಟಕ ಆಟ (ಔಟಾಗದೆ 69 ರನ್‌, 35 ಎಸೆತ, 10 ಬೌ, 2 ಸಿ) ಆಡಿದರು. ಸ್ಮೃತಿ ಮಂದಾನ (ಔಟಾಗದೆ 30 ರನ್‌, 4 ಬೌ) ಅವರಿಗೆ ಉತ್ತಮ ಬೆಂಬಲ ನೀಡಿ ಗೆಲುವಿಗೆ ಕಾರಣವಾದರು. 10.3 ಓವರುಗಳಲ್ಲಿ ತಂಡ ಗೆಲುವಿನ ಗುರಿ ತಲುಪಿ ಸಂಭ್ರಮಿಸಿತು. ಎದುರಾಳಿ ತಂಡದ ನಾಯಕಿ ಅನೀಸಾ ಮೊಹಮ್ಮದ್‌ ಏಳು ಬೌಲರ್‌ಗಳನ್ನು ದಾಳಿಗಿಳಿಸಿದರೂ ಫಲ ಲಭಿಸಲಿಲ್ಲ.

ಮೂರನೇ ಪಂದ್ಯ ಗಯಾನಾದಲ್ಲಿ ನವೆಂಬರ್‌ 14ರಂದು ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್‌: 20 ಓವರುಗಳಲ್ಲಿ 7 ವಿಕೆಟ್‌ಗೆ 103 (ಚೆಡೀನ್‌ ನೇಷನ್‌ 32, ಹೇಯ್‌ಲಿ ಮ್ಯಾಥ್ಯೂಸ್‌ 23; ದೀಪ್ತಿ ಶರ್ಮಾ 10ಕ್ಕೆ 4, ಶಿಖಾ ಪಾಂಡೆ 18ಕ್ಕೆ 1) ಭಾರತ: 10.3 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 104 (ಶೆಫಾಲಿ ವರ್ಮಾ ಔಟಾಗದೆ 69, ಸ್ಮೃತಿ ಮಂದಾನ ಔಟಾಗದೆ 30) ಫಲಿತಾಂಶ: ಭಾರತಕ್ಕೆ 10 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ ಆಟಗಾರ್ತಿ: ದೀಪ್ತಿ ಶರ್ಮಾ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು