ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ಸರಣಿ ಮುಂದಕ್ಕೆ

Last Updated 24 ಏಪ್ರಿಲ್ 2020, 19:43 IST
ಅಕ್ಷರ ಗಾತ್ರ

ಲಂಡನ್‌: ಭಾರತ ಮತ್ತು ಇಂಗ್ಲೆಂಡ್‌ ಮಹಿಳಾ ತಂಡಗಳ ನಡುವಣ ಕ್ರಿಕೆಟ್‌ ಸರಣಿಯನ್ನು ಕೋವಿಡ್‌–19 ಪಿಡುಗಿನಿಂದಾಗಿ ಮುಂದೂಡಲಾಗಿದೆ.

ಭಾರತ ತಂಡವು ನಾಲ್ಕು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟ್ವೆಂಟಿ–20 ಕ್ರಿಕೆಟ್‌ ಸರಣಿಗಳನ್ನು ಆಡಲು ಜೂನ್‌ನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಬೇಕಿತ್ತು. ಈ ಸರಣಿಗಳು ಜೂನ್‌ 25ರಿಂದ ಜುಲೈ 9ರವರೆಗೆ ನಿಗದಿಯಾಗಿದ್ದವು.

ಭಾರತ ತಂಡವು ಟ್ವೆಂಟಿ–20 ಸರಣಿಯ ಪಂದ್ಯಗಳನ್ನು ಟೌಂಟನ್‌ ಹಾಗೂ ಬ್ರಿಸ್ಟಲ್‌ನಲ್ಲಿ, ಏಕದಿನ ಸರಣಿಯ ಪಂದ್ಯಗಳನ್ನು ವೊರ್ಷೆಸ್ಟರ್‌, ಚೆಮ್ಸ್‌ಫೋರ್ಡ್‌, ಕ್ಯಾಂಟರ್‌ಬರಿ ಹಾಗೂ ಹೋವ್‌ನಲ್ಲಿ ಆಡುವ ಸಾಧ್ಯತೆ ಇತ್ತು.

ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜುಲೈ ಒಂದರವರೆಗೆ ಯಾವುದೇ ಕ್ರಿಕೆಟ್‌ ಟೂರ್ನಿಗಳನ್ನು ನಡೆಸದಿರಲು ತೀರ್ಮಾನಿಸಿದೆ.

‘ಕೊರೊನಾ ವೈರಾಣುವಿನ ಉಪಟಳ ಹೆಚ್ಚುತ್ತಲೇ ಇದೆ. ಈ ಸಮಯದಲ್ಲಿ ದೇಶಿ ಕ್ರಿಕೆಟ್‌ ಟೂರ್ನಿಗಳು ಹಾಗೂ ದ್ವಿ‍ಪಕ್ಷೀಯ ಸರಣಿಗಳನ್ನು ಆಯೋಜಿಸುವುದು ಸರಿಯಲ್ಲ. ಆಟಗಾರರು, ಅಭಿಮಾನಿಗಳು ಹಾಗೂ ಅಧಿಕಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಇಸಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಟಾಮ್‌ ಹ್ಯಾರಿಸನ್‌, ಶುಕ್ರವಾರ ತಿಳಿಸಿದ್ದಾರೆ.

‘ಕೊರೊನಾ ಬಿಕ್ಕಟ್ಟು ಬಗೆಹರಿದ ಬಳಿಕ ಮುಂದೂಡಲ್ಪಟ್ಟ ಟೂರ್ನಿಗಳನ್ನು ನಡೆಸುತ್ತೇವೆ. ಹೊಸ ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟಿಸುತ್ತೇವೆ’ ಎಂದಿದ್ದಾರೆ.

ಇಂಗ್ಲೆಂಡ್‌ ಪುರುಷರ ಹಾಗೂ ಮಹಿಳಾ ತಂಡಗಳ ಸರಣಿಗಳನ್ನು ಜುಲೈನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ನಡೆಸಲು ಇಸಿಬಿ ಚಿಂತಿಸಿದೆ ಎಂಬ ಮಾತುಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT