ಲಂಡನ್: ಆರಂಭಿಕ ಜೋಡಿ ಶತಕದ ಜೊತೆಯಾಟವಾಡಿ ಆತಂಕ ಮೂಡಿಸಿದರೂ ವಿರಾಟ್ ಕೊಹ್ಲಿ ಬಳಗ ವಿಚಲಿತಗೊಳ್ಳಲಿಲ್ಲ. ವೇಗ ಮತ್ತು ಸ್ಪಿನ್ ದಾಳಿಯ ಮೂಲಕ ಎದುರಾಳಿಗಳನ್ನು ಕಂಗೆಡಿಸಿದ ಭಾರತ ತಂಡ ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 157 ರನ್‌ಗಳ ಗೆಲುವು ಸಾಧಿಸಿತು.
ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಬಿಟ್ಟುಕೊಟ್ಟರೂ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಭಾರತ ಮುಂದಿಟ್ಟ 368 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯ ತಂಡ 92.2 ಓವರ್‌ಗಳಲ್ಲಿ 210 ರನ್‌ಗಳಿಗೆ ಪತನಗೊಂಡಿತು. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1 ಮುನ್ನಡೆ ಸಾಧಿಸಿತು.
ನಾಲ್ಕನೇ ದಿನವಾದ ಭಾನುವಾರ 77 ರನ್ ಸೇರಿಸಿದ್ದ ಆರಂಭಿಕ ಜೋಡಿ ರೋರಿ ಬರ್ನ್ಸ್ ಮತ್ತು ಹಸೀಬ್ ಹಮೀದ್ ಸೋಮವಾರ ಆರಂಭದಲ್ಲಿ ಭಾರತದ ಬೌಲರ್‌ಗಳನ್ನು ಕಾಡಿದರು. ಅವರಿಬ್ಬರು ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಅರ್ಧಶತಕ ಗಳಿಸಿದ ರೋರಿ ಬರ್ನ್ಸ್ ವಿಕೆಟ್ ಉರುಳಿಸಿ ಶಾರ್ದೂಲ್ ಠಾಕೂರ್ ಮಹತ್ವದ ತಿರುವು ನೀಡಿದರು. ನಂತರ ಎಡಗೈ ಸ್ಪಿನ್ನರ್ ಜಡೇಜ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ಕರಾಮತ್ತು ತೋರಿದರು. ಡೇವಿಡ್ ಮಲಾನ್ ರನ್ ಔಟ್ ಆದದ್ದು ಇಂಗ್ಲೆಂಡ್ ಪಾಲಿಗೆ ದುಬಾರಿಯಾಯಿತು.
147 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಭೋಜನಕ್ಕೆ ತೆರಳಿದ ಇಂಗ್ಲೆಂಡ್‌ಗೆ ವಿರಾಮದ ನಂತರ ಶಾರ್ದೂಲ್ ಮತ್ತೊಮ್ಮೆ ಪೆಟ್ಟು ನೀಡಿದರು. ನಾಯಕ ಜೋ ರೂಟ್ ವಿಕೆಟ್ ಉರುಳಿಸಿ ಸಂಭ್ರಮಿಸಿದರು. ಚಹಾ ವಿರಾಮದ ವೇಳೆ ತಂಡ 193 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತು.
ಮೂರಂಕಿ ದಾಟಿದ ಬೂಮ್ರಾ
ಭಾನುವಾರ 43 ರನ್ ಗಳಿಸಿದ್ದ ಹಸೀಬ್ ಹಮೀದ್ ರಕ್ಷಣಾತ್ಮಕ ಆಟದ ಮೂಲಕ ನೆಲಕಚ್ಚಿ ನಿಂತರು. ಸೋಮವಾರ 20 ರನ್ ಗಳಿಸಲು ಅವರು 108 ಎಸೆತಗಳನ್ನು ಬಳಸಿಕೊಂಡರು. ಆದರೆ ಆಫ್‌ಸ್ಟಂಪ್ ಉರುಳಿಸುವ ಮೂಲಕ ಅವರನ್ನು ಜಡೇಜ ವಾಪಸ್ ಕಳುಹಿಸಿದರು. ಮೊದಲ ಇನಿಂಗ್ಸ್‌ನಲ್ಲಿ 81 ರನ್ ಗಳಿಸಿದ್ದ ಒಲಿ ಪೋಪ್ ಅವರು ಜಸ್‌ಪ್ರೀತ್ ಬೂಮ್ರಾ ಹಾಕಿದ ರಿವರ್ಸ್ ಸ್ವಿಂಗ್‌ಗೆ ಬಲಿಯಾದರು. ಈ ಮೂಲಕ ಬೂಮ್ರಾ ವಿಕೆಟ್ ಗಳಿಕೆಯಲ್ಲಿ ಮೂರಂಕಿ ಮೊತ್ತ ದಾಟಿದರು. ತಮ್ಮ ಮುಂದಿನ ಓವರ್‌ನಲ್ಲಿ ಜಸ್‌ಪ್ರೀತ್ ಮೋಹಕ ಯಾರ್ಕರ್ ಮೂಲಕ ಜಾನಿ ಬೆಸ್ಟೊ ಅವರನ್ನು ವಾಪಸ್ ಕಳುಹಿಸಿದರು. ಕೊನೆಯ ಮೂರು ವಿಕೆಟ್‌ಗಳನ್ನು ಉಮೇಶ್ ಯಾದವ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್ ಪಟ್ಟಿ ಇಂತಿದೆ:
ಭಾರತ ಮೊದಲ ಇನ್ನಿಂಗ್ಸ್ 191ಕ್ಕೆ ಆಲೌಟ್ (ವಿರಾಟ್ ಕೊಹ್ಲಿ 50, ಶಾರ್ದೂಲ್ ಠಾಕೂರ್ 57, ಕ್ರಿಸ್ ವೋಕ್ಸ್ 55ಕ್ಕೆ 4 ವಿಕೆಟ್)
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 290 ರನ್ನಿಗೆ ಆಲೌಟ್ (ಒಲಿ ಪಾಪ್ 81, ಕ್ರಿಸ್ ವೋಕ್ಸ್ 50, ಉಮೇಶ್ ಯಾವದ್ 76ಕ್ಕೆ 3 ವಿಕೆಟ್)
ಭಾರತ ದ್ವಿತೀಯ ಇನ್ನಿಂಗ್ಸ್ 466ಕ್ಕೆ ಆಲೌಟ್ (ರೋಹಿತ್ ಶರ್ಮಾ 127, ಪೂಜಾರ 61, ಠಾಕೂರ್ 60, ಪಂತ್ 50, ಕ್ರಿಸ್ ವೋಕ್ಸ್ 83ಕ್ಕೆ 3 ವಿಕೆಟ್ )
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ 210ಕ್ಕೆ ಆಲೌಟ್ (ಹಸೀಬ್ ಹಮೀದ್ 63, ರೋರಿ ಬರ್ನ್ಸ್ 50, ಉಮೇಶ್ ಯಾದವ್ 60ಕ್ಕೆ 3 ವಿಕೆಟ್ )
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.