ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಶ್ರೇಷ್ಠ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ನಮಗಿದೆ: ಪೂಜಾರ

Last Updated 23 ಡಿಸೆಂಬರ್ 2021, 18:45 IST
ಅಕ್ಷರ ಗಾತ್ರ

ಸೆಂಚುರಿಯನ್: ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ಸ್ನೇಹಿ ಪಿಚ್‌ಗಳಲ್ಲಿ ಭಾರತದ ಬ್ಯಾಟರ್‌ಗಳು ಶ್ರೇಷ್ಠ ಸಾಮರ್ಥ್ಯ ತೋರಬಲ್ಲರು ಎಂದು ಮಧ್ಯಮಕ್ರಮಾಂಕದ ಬ್ಯಾಟರ್ ಚೇತೇಶ್ವರ್ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

‘ವಿದೇಶಗಳಿಗೆ ಪ್ರವಾಸ ಹೋಗುವಾಗ ಬೌನ್ಸ್ ಮತ್ತು ವೇಗದ ಎಸೆತಗಳಿಗೆ ಇರುವ ಪಿಚ್‌ಗಳಲ್ಲಿ ಆಡುವ ಸಿದ್ಧತೆ ಮಾಡಿಕೊಂಡೇ ತೆರಳುತ್ತೇವೆ. ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗಳಲ್ಲಿ ಟೆಸ್ಟ್ ವಿಜಯ ಸಾಧಿಸಿದರುವುದು ತಂಡದ ಆಟಗಾರರಲ್ಲಿ ಬಹಳಷ್ಟು ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿದೆ’ ಎಂದು ಬಿಸಿಸಿಐ ಟ್ವಿಟರ್‌ನಲ್ಲಿ ಹಾಕಿರುವ ವಿಡಿಯೋದಲ್ಲಿ ಪೂಜಾರ ಹೇಳಿದ್ದಾರೆ.

‘ಬ್ಯಾಟಿಂಗ್ ಕ್ರಮಾಂಕವು ಸಮತೋಲನವಾಗಿದೆ. ದಕ್ಷಿಣ ಆಫ್ರಿಕಾ ತಂಡದ ಎದುರು ಆಡಿದ ಅನುಭವ ನಮ್ಮಲ್ಲಿ ಬಹಳ ಮಂದಿಗೆ ಇದೆ. ಅವರ ತಂಡದಲ್ಲಿ ಉತ್ತಮ ಬೌಲಿಂಗ್ ಪಡೆ ಇದೆ. ಅವರು ತಮ್ಮ ತವರಿನಲ್ಲಿ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ನಾವು ಕೂಡ ಅಭ್ಯಾಸ ಮಾಡಿದ್ದೇವೆ’ ಎಂದು 33 ವರ್ಷದ ಪೂಜಾರ ಹೇಳಿದ್ದಾರೆ.

ಜನವರಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ 2–1ರಿಂದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಗೆದ್ದುಕೊಂಡಿತ್ತು. ಈಚೆಗೆ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2–1ರಿಂದ ಮುನ್ನಡೆ ಗಳಿಸಿತ್ತು. ಕೋವಿಡ್ ಕಾರಣದಿಂದಾಗಿ ಕೊನೆಯ ಒಂದು ಪಂದ್ಯವನ್ನು ಮಂದೂಡಲಾಗಿತ್ತು.

‘ಯಾವುದೇ ವಾತಾವರಣ ಮತ್ತು ಎದುರಾಳಿ ಇದ್ದರೂ ಗೆಲ್ಲುವ ಆತ್ಮವಿಶ್ವಾಸ ನಮಗೆ ಇದೆ. ದಕ್ಷಿಣ ಆಫ್ರಿಕಾದಲ್ಲಿಯೂ ಜಯ ಗಳಿಸುವ ಸಾಮರ್ಥ್ಯ ನಮಗೆ ಇದೆ’ ಹೇಳಿದ್ದಾರೆ.

2020ರಿಂದ ಇಲ್ಲಿಯವರೆಗೆ ಚೇತೇಶ್ವರ್ ಪೂಜಾರ ಅವರ ಬ್ಯಾಟಿಂಗ್ ಲಯದಲ್ಲಿಲ್ಲ. ಕಳೆದ 10 ಪಂದ್ಯಗಳಲ್ಲ ಅವರು ಎರಡು ಅರ್ಧಶತಕಗಳನ್ನು ಮಾತ್ರ ಗಳಿಸಿದ್ದಾರೆ.

ಬಯೋಬಬಲ್ ಕುರಿತು ಮಾತನಾಡಿರುವ ಅವರು, ‘ಇಲ್ಲಿ ಮಾಡಿರುವ ವ್ಯವಸ್ಥೆಯು ಉತ್ತಮವಾಗಿದೆ. ಬೇರೆಲ್ಲ ಕಡೆಗಿಂತ ಇಲ್ಲಿಯ ಅನುಭವ ಬೇರೆ ರೀತಿಯಾಗಿದೆ. ಮುಕ್ತವಾಗಿ ಓಡಾಡುವಂತಹ ಸ್ಥಳಾವಕಾಶ ಇದೆ. ಮಾನಸಿಕವಾಗಿ ಸದೃಢತೆ ಗಳಿಸಲು ಪೂರಕವಾದ ವಾತಾವರಣ ಇಲ್ಲಿದೆ’ ಎಂದು ಪೂಜಾರ ಹೇಳಿದ್ದಾರೆ.

ಕಠಿಣ ಪೈಪೋಟಿಯ ಸಾಧ್ಯತೆ: ಎಂಟಿನಿ
ಜೋಹಾನ್ಸ್‌ಬರ್ಗ್ (ಪಿಟಿಐ):
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳಲ್ಲಿ ಒಳ್ಳೆಯ ಬೌಲರ್‌ಗಳಿದ್ಧಾರೆ. ಆದ್ದರಿಂದ ತುರುಸಿನ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ತಂಡಕ್ಕೆ ತವರಿನ ವಾತಾವರಣದ ಲಾಭ ಸಿಗಬಹುದು ಎಂದು ಮಾಜಿ ಕ್ರಿಕೆಟಿಗ ಮಕಾಯ ಎಂಟಿನಿ ಅಭಿಪ್ರಾಯಪಟ್ಟಿದ್ದಾರೆ.

‘ಈ ಬಾರಿ ಬಂದಿರುವ ಭಾರತ ತಂಡವು ಬಲಿಷ್ಠವಾಗಿದೆ. ಅದನ್ನು ಎದುರಿಸಲು ಅನುಭವಿ ನಾಯಕ ಡೀನ ಎಲ್ಗರ್ ಮತ್ತು ತೆಂಬಾ ಬವುಮಾ ಅವರು ಉತ್ತಮ ತಂತ್ರಗಾರಿಕೆ ರೂಪಿಸುವ ಸಮರ್ಥರಾಗಿದ್ದಾರೆ. ರಸಿ (ವ್ಯಾನ್ ಡರ್ ಡಸೆ) ಕೂಡ ಭರವಸೆಯ ಆಟಗಾರ. ಕ್ವಿಂಟನ್ ಡಿ ಕಾಕ್‌ ಎಂತಹದ್ದೇ ಪರಿಸ್ಥಿತಿಯಲ್ಲಿಯೂ ಹೋರಾಟ ಮಾಡುವ ಆಟಗಾರ. ಇದರೊಂದಿಗೆ ಉತ್ತಮ ಬೌಲಿಂಗ್ ಪಡೆಯೂ ಇದೆ’ ಎಂದು ಎಂಟಿನಿ ಹೇಳಿದ್ದಾರೆ.

ಸಾಮರ್ಥ್ಯ ಸಾಬೀತು ಮಾಡುವ ಸಮಯ: ರವಿಶಾಸ್ತ್ರಿ
‘ವಿರಾಟ್ ಕೊಹ್ಲಿ ಬಳಗಕ್ಕೆ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯ ತೋರಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಗೆಲುವು ಸಾಧಿಸುವ ಎಲ್ಲ ಸಾಮರ್ಥ್ಯವೂ ಈ ತಂಡಕ್ಕೆ ಇದೆ’ ಎಂದುಭಾರತ ತಂಡ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

‘ದಕ್ಷಿಣ ಆಫ್ರಿಕಾ ತಂಡವು ತನ್ನ ತವರಿನಂಗಳದಲ್ಲಿ ಬಹಳ ಬಲಿಷ್ಠವಾಗಿದೆ. ಆದರೆ ನಮ್ಮ ತಂಡದಲ್ಲಿ ಅಪಾರ ಶಕ್ತಿಯಿದೆ. ವಿರಾಟ್ ಒಬ್ಬ ಶ್ರೇಷ್ಠ ನಾಯಕರಾಗಿದ್ದಾರೆ. ತಂಡದಲ್ಲಿರುವ ಆಟಗಾರರು ಪ್ರತಿಭಾನ್ವಿತರಾಗಿದ್ದಾರೆ’ ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಶಾಸ್ತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT