ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷಗಳ ನಂತರ ರಣಜಿ ಟೂರ್ನಿಯ ಪಂದ್ಯಗಳು ಗುರುವಾರ ಆರಂಭ

ದೇಶಿ ಕ್ರಿಕೆಟ್‌ನ ಸಂಭ್ರಮಕ್ಕೆ ಹೊಸ ಹುರುಪು: 9 ಅಂಗಣಗಳಲ್ಲಿ ಹಣಾಹಣಿ
Last Updated 16 ಫೆಬ್ರುವರಿ 2022, 13:02 IST
ಅಕ್ಷರ ಗಾತ್ರ

ಅಹಮದಾಬಾದ್‌: ದೇಶಿ ಕ್ರಿಕೆಟ್‌ನ ರಾಜ ಎಂದೇ ಪರಿಗಣಿಸಲಾಗಿರುವ ರಣಜಿ ಕ್ರಿಕೆಟ್ ಟೂರ್ನಿಯ ಈ ಋತುವಿನ ಪಂದ್ಯಗಳಿಗೆ ಗುರುವಾರ ಚಾಲನೆ ಸಿಗಲಿದೆ. ಕೋವಿಡ್‌ ಕಾರಣದಿಂದಾಗಿ ಎರಡು ವರ್ಷ ಟೂರ್ನಿ ನಡೆದಿರಲಿಲ್ಲ. ಆದ್ದರಿಂದ ಈಗ ಕುತೂಹಲ ಹೆಚ್ಚಿದೆ.

ಯುವ ಆಟಗಾರರಿಗೆ ಈ ಟೂರ್ನಿ ಭವಿಷ್ಯದ ಚಿಮ್ಮುಹಲಗೆ. ಇದೇ ಸಂದರ್ಭದಲ್ಲಿ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಂಥ ಅನುಭವಿ ಆಟಗಾರರಿಗೆ ದೀರ್ಘ ಮಾದರಿಯ ಕ್ರಿಕೆಟ್‌ಗೆ ಮರಳಲು ಮತ್ತೊಮ್ಮೆ ಅವಕಾಶದ ಬಾಗಿಲು. ಬಯೊಬಬಲ್‌ ವ್ಯವಸ್ಥೆಯಡಿಯಲ್ಲಿ ಈ ಬಾರಿ ಟೂರ್ನಿ ನಡೆಯುತ್ತಿರುವುದು ವಿಶೇಷ.

ಮೊದಲ ಸುತ್ತಿನ ಪಂದ್ಯಗಳ ಪೈಕಿ ಹಾಲಿ ಚಾಂಪಿಯನ್ ಸೌರಾಷ್ಟ್ರ ಮತ್ತು ದಾಖಲೆ 41 ಬಾರಿಯ ಪ್ರಶಸ್ತಿ ವಿಜೇತ ಮುಂಬೈ ತಂಡಗಳ ನಡುವಿನ ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ. ಮುಂಬೈ ತಂಡದಲ್ಲಿ ರಹಾನೆ ಮತ್ತು ಸೌರಾಷ್ಟ್ರ ಪರವಾಗಿ ಚೇತೇಶ್ವರ ಪೂಜಾರ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ಇವರಿಬ್ಬರು ಟೂರ್ನಿಯಲ್ಲಿ ಚೇತರಿಸಿಕೊಳ್ಳುವರೇ ಎಂಬುದನ್ನು ಕಾದುನೋಡಬೇಕು.

ಒಂಬತ್ತು ಬಯೊಬಬಲ್‌ಗಳು

ದೇಶದ ಉದ್ದಗಲಕ್ಕೂ ಒಂಬತ್ತು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಒಂಬತ್ತು ಬಯೊಬಬಲ್‌ಗಳನ್ನು ಸಿದ್ಧಪಡಿಸಲಾಗಿದೆ. ಐದು ದಿನಗಳ ಕ್ವಾರಂಟೈನ್‌ನಲ್ಲಿದ್ದ ಆಟಗಾರರಿಗೆ ಎರಡು ದಿನಗಳ ಅಭ್ಯಾಸಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಿದ್ದೂ ಆಟಗಾರರ ಮುಖದಲ್ಲಿ ಮುನಿಸು ಇಲ್ಲ. ಕೊನೆಗೂ ಟೂರ್ನಿ ಆರಂಭವಾಗುತ್ತಿರುವುದರ ಖುಷಿಯಲ್ಲಿದ್ದಾರೆ ಅವರು.

ಟೂರ್ನಿಯು ಬ್ಯಾಟರ್‌ ಮತ್ತು ಬೌಲರ್‌ಗಳಿಬ್ಬರಿಗೂ ಸವಾಲಿನದ್ದಾಗಲಿದೆ. ಅನಗತ್ಯ ಹೊಡೆತಗಳಿಗೆ ಕೈಹಾಕದೆ ಚೆಂಡನ್ನು ವಿಕೆಟ್ ಕೀಪರ್‌ ಬಳಿಗೆ ಬಿಡುವ ‘ಕಲೆ’ಯನ್ನು ಬ್ಯಾಟರ್‌ಗಳು ಮತ್ತೆ ರೂಢಿಸಿಕೊಳ್ಳಬೇಕಾಗಿದೆ. ಬೌಲರ್‌ಗಳು ಸುದೀರ್ಘ ಸ್ಪೆಲ್‌ಗಳಿಗೆ ತಮ್ಮನ್ನು ಹೊಂದಿಸಿಕೊಳ್ಳಬೇಕಾಗಿದೆ. ಈ ಬಾರಿ ಟೂರ್ನಿಯಲ್ಲಿ ಹಿಂದಿನಷ್ಟು ಹೆಚ್ಚು ಪಂದ್ಯಗಳು ಇರುವುದಿಲ್ಲ. ಪ್ರತಿ ತಂಡಗಳಿಗೆ ಮೂರು ಲೀಗ್ ಪಂದ್ಯಗಳು ಮಾತ್ರ ಸಿಗಲಿವೆ.

ಎಲೀಟ್‌ ಹಂತದಲ್ಲಿ ಎಂಟು ತಂಡಗಳು

ಎಲೀಟ್ ಹಂತದಲ್ಲಿ ನಾಲ್ಕು ತಂಡಗಳ ಎಂಟು ಗುಂಪುಗಳನ್ನು ಮಾಡಲಾಗಿದೆ. ಪ್ಲೇಟ್ ಗುಂಪಿನಲ್ಲಿ ಆರು ತಂಡಗಳು ಇವೆ. ಗುಂಪಿನಿಂದ ಒಂದು ತಂಡಜಕ್ಕೆ ಮಾತ್ರ ಕ್ವಾರ್ಟರ್ ಫೈನಲ್ ಹಂತದಲ್ಲಿ ಆಡಲು ಅವಕಾಶ ಇರುವುದರಿಂದ ಲೀಗ್‌ ಪಂದ್ಯಗಳಲ್ಲಿ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ನಾಕೌಟ್ ಹಂತದ ಪಂದ್ಯಗಳು ಐಪಿಎಲ್ ಟೂರ್ನಿಯ ನಂತರ ನಡೆಯಲಿವೆ.

ಟೂರ್ನಿಯಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯವರು ಹೊಸ ಪ್ರತಿಭೆಗಳನ್ನು ಹುಡುಕಲಿದ್ದಾರೆ. ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ತಂಡದಿಂದ ಹೊರಗಿರಿಸಲಾಗಿದ್ದ ಪ್ರಿಯಾಂಕ್ ಪಾಂಚಾಲ್‌, ಅಭಿಮನ್ಯು ಈಶ್ವರನ್‌ ಮತ್ತು ಹನುಮ ವಿಹಾರಿ ಮೇಲೆ ಕ್ರಿಕೆಟ್ ಪ್ರೇಮಿಗಳು ದೃಷ್ಟಿ ನೆಟ್ಟಿದ್ದಾರೆ. 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಿದ್ದ ಯಶ್‌ ಧೂಳ್‌ ಮತ್ತು ರಾಜ್‌ ಅಂಗದ್ ಬಾವ ಅವರ ಪ್ರಥಮ ದರ್ಜೆ ಕ್ರಿಕೆಟ್‌ ಪದಾರ್ಪಣೆಗೆ ಟೂರ್ನಿ ಅವಕಾಶ ಒದಿಗಿಸುವ ಸಾಧ್ಯತೆ ಇದೆ.

ವಿಶ್ವಾಸದಲ್ಲಿ ಮನೀಷ್ ಬಳಗ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕರ್ನಾಟಕ ತಂಡ ರೈಲ್ವೇಸ್‌ ಎದುರಿನ ಮೊದಲ ಪಂದ್ಯದಲ್ಲಿ ಜಯ ಗಳಿಸುವ ವಿಶ್ವಾಸದಲ್ಲಿದೆ. ಈ ಎರಡು ತಂಡಗಳು ಮುಖಾಮುಖಿಯಾದಾಗಲೆಲ್ಲ ಕರ್ನಾಟಕ ಮೇಲುಗೈ ಸಾಧಿಸಿದೆ. ಹಿಂದಿನ ಐದು ಪಂದ್ಯಗಳಲ್ಲಿ ಏಕಪಕ್ಷೀಯ ಆಟವಾಡಿರುವುದರಿಂದ ಭರವಸೆಯಲ್ಲಿದೆ.

2020ರಲ್ಲಿ ನಡೆದ ಪಂದ್ಯದಲ್ಲಿ ರೈಲ್ವೇಸ್ ಎದುರು ಕರ್ನಾಟಕ 10 ವಿಕೆಟ್‌ಗಳ ಜಯ ಸಾಧಿಸಿತ್ತು. 2018ರಲ್ಲಿ 176 ರನ್‌ಗಳಿಂದ, 2017ರಲ್ಲಿ 209 ರನ್‌ಗಳಿಂದ, 2014ರಲ್ಲಿ 136 ರನ್‌ಗಳಿಂದ ಮತ್ತು 2011ರಲ್ಲಿ 51 ರನ್‌ಗಳಿಂದ ಗೆಲುವು ಸಾಧಿಸಿತ್ತು.

ಈ ಬಾರಿ ಮನೀಷ್ ಪಾಂಡೆ ತಂಡವನ್ನು ಮುನ್ನಡೆಸುತ್ತಿದ್ದು ಮಯಂಕ್ ಅಗರವಾಲ್, ದೇವದತ್ತ ಪಡಿಕ್ಕಲ್‌, ಆರ್‌.ಸಮರ್ಥ್‌, ಕರುಣ್ ನಾಯರ್ ಮುಂತಾದ ಅನುಭವಿ ಬ್ಯಾಟರ್‌ಗಳ ಬಲ ತಂಡಕ್ಕಿದೆ. ಕೃಷ್ಣಪ್ಪ ಗೌತಮ್‌, ರೋನಿತ್ ಮೋರೆ, ಶ್ರೇಯಸ್ ಗೋಪಾಲ್ ಮುಂತಾದವರು ಬೌಲಿಂಗ್ ವಿಭಾಗದ ಹೊಣೆ ಹೊರಲಿದ್ದಾರೆ.

ಅಮಿತ್ ಮಿಶ್ರಾ, ಅರಿಂದಂ ಘೋಷ್‌, ಕರ್ಣ ಶರ್ಮಾ, ಹಿಮಾಂಶು ಸಾಂಗ್ವಾನ್ ಅವರ ಮೇಲೆ ರೈಲ್ವೇಸ್ ಭರವಸೆ ಇರಿಸಿಕೊಂಡಿದೆ.

ಮೊದಲ ಸುತ್ತಿನ ಪಂದ್ಯಗಳ ವಿವರ

ಸೆಣಸುವ ತಂಡಗಳು;ಗುಂಪು;ಪಂದ್ಯ ನಡೆಯುವ ಸ್ಥಳ

ಕರ್ನಾಟಕ–ರೈಲ್ವೇಸ್;ಎಲೀಟ್ ‘ಸಿ’;ಚೆನ್ನೈ

ಹೈದರಾಬಾದ್‌–ಚಂಡೀಗಢ;ಎಲೀಟ್ ‘ಬಿ’;ಭುವನೇಶ್ವರ್‌

ಬೆಂಗಾಲ್–ಬರೋಡ;ಎಲೀಟ್ ‘ಬಿ’;ಕಟಕ್‌

ಕೇರಳ–ಮೇಘಾಲಯ;ಎಲೀಟ್ ‘ಎ’;ರಾಜ್‌ಕೋಟ್‌

ಗುಜರಾತ್‌–ಮಧ್ಯಪ್ರದೇಶ;ಎಲೀಟ್ ‘ಎ’;ರಾಜ್‌ಕೋಟ್‌

ಮಣಿಪುರ–ಅರುಣಾಚಲಪ್ರದೇಶ;ಪ್ಲೇಟ್‌;ಕೋಲ್ಕತ್ತ

ಜಮ್ಮು ಮತ್ತು ಕಾಶ್ಮೀರ–ಪುದುಚೇರಿ;ಎಲೀಟ್ ‘ಸಿ’;ಚೆನ್ನೈ

ಸೌರಾಷ್ಟ್ರ–ಮುಂಬೈ;ಎಲೀಟ್ ‘ಡಿ’;ಅಹಮದಾಬಾದ್

ಒಡಿಶಾ–ಗೋವಾ;ಎಲೀಟ್ ‘ಡಿ’;ಅಹಮದಾಬಾದ್

ನಾಗಾಲ್ಯಾಂಡ್‌–ಸಿಕ್ಕಿಂ;ಪ್ಲೇಟ್‌;ಕೋಲ್ಕತ್ತ

ಬಿಹಾರ್‌–ಮಿಜೋರಾಂ;ಪ್ಲೇಟ್‌;ಕೋಲ್ಕತ್ತ

ಜಾರ್ಖಂಡ್‌–ಛತ್ತೀಸ್‌ಗಢ;ಎಲೀಟ್ ‘ಎಚ್‌’;ಗುವಾಹಟಿ

ದೆಹಲಿ–ತಮಿಳುನಾಡು;ಎಲೀಟ್ ‘ಎಚ್‌’;ಗುವಾಹಟಿ

ಮಹಾರಾಷ್ಟ್ರ–ಅಸ್ಸಾಂ;ಎಲೀಟ್ ‘ಜಿ’;ರೋಹ್ಟಕ್‌

ವಿದರ್ಭ–ಉತ್ತರಪ್ರದೇಶ;ಎಲೀಟ್ ‘ಜಿ’;ಗುರುಗಾಂವ್‌

ಹರಿಯಾಣ–ತ್ರಿಪುರ;ಎಲೀಟ್ ‘ಎಫ್’;ದೆಹಲಿ

ಪಂಜಾಬ್‌–ಹಿಮಾಚಲಪ್ರದೇಶ;ಎಲೀಟ್ ‘ಎಫ್‌’;ದೆಹಲಿ

ಸರ್ವಿಸಸ್‌–ಉತ್ತರಾಖಂಡ;ಎಲೀಟ್ ‘ಇ’;ತಿರುವನಂತಪುರ

ಆಂಧ್ರ–ರಾಜಸ್ಥಾನ;ಎಲೀಟ್ ‘ಇ’;ತಿರುವನಂತಪುರ

ಕರ್ನಾಟಕ–ರೈಲ್ವೇಸ್ ಮುಖಾಮುಖಿ

ಪಂದ್ಯ 10

ಕರ್ನಾಟಕ ಜಯ 6

ರೈಲ್ವೇಸ್‌ ಜಯ 1

ಡ್ರಾ 3

ಕರ್ನಾಟಕಕ್ಕಾಗಿ ಗರಿಷ್ಠ ರನ್‌ ಗಳಿಸಿದ ಮೂವರು

ಬ್ಯಾಟರ್;ರನ್‌;ಸ್ಥಳ;ವರ್ಷ

ಮಯಂಕ್ ಅಗರವಾಲ್‌;173;ದೆಹಲಿ;2017

ವಿಜಯ್ ಭರತ್;164;ಬೆಂಗಳೂರು;1997

ಮಯಂಕ್ ಅಗರವಾಲ್;134;ದೆಹಲಿ;2017

ಇನಿಂಗ್ಸ್‌ನಲ್ಲಿ 5 ವಿಕೆಟ್ ಗಳಿಸಿದ ಮೂವರು

ಬೌಲರ್‌;ವಿಕೆಟ್‌;ಸ್ಥಳ;ವರ್ಷ

ಅನಿಲ್ ಕುಂಬ್ಳೆ;69ಕ್ಕೆ6;ಬೆಂಗಳೂರು;1997

ಎನ್‌.ಸಿ.ಅಯ್ಯಪ್ಪ;63ಕ್ಕೆ5;ಬೆಂಗಳೂರು;2004

ಆರ್‌.ವಿಜಕುಮಾರ್‌;65ಕ್ಕೆ5;ದೆಹಲಿ;2005

ಪಂದ್ಯದಲ್ಲಿ 10 ವಿಕೆಟ್ ಸಾಧನೆ

ಬೌಲರ್‌;ವಿಕೆಟ್‌;ಸ್ಥಳ;ವರ್ಷ

ಅನಿಲ್ ಕುಂಬ್ಳೆ;150ಕ್ಕೆ10;ಬೆಂಗಳೂರು;1997

ಕೆ.ಪಿ.ಅಪ್ಪಣ್ಣ;107ಕ್ಕೆ11;ದೆಹಲಿ;2011

ಕೆ.ಗೌತಮ್‌;142ಕ್ಕೆ10;ದೆಹಲಿ;2017

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT