ಸೋಮವಾರ, ಡಿಸೆಂಬರ್ 9, 2019
21 °C

ವೇಗದ ಮೋಡಿಗಾರರು

Published:
Updated:
Deccan Herald

ಈ ವರ್ಷದ ಜನವರಿಯಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯವದು. ಮೊದಲ ಎರಡು ಪೈಪೋಟಿಗಳಲ್ಲಿ ಸೋತು ಸೊರಗಿದ್ದ ಭಾರತದ ಪಾಲಿಗೆ ಆ ಹೋರಾಟ ಪ್ರತಿಷ್ಠೆಯ ಕಣವಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಪಡೆಯ ಬ್ಯಾಟ್ಸ್‌ಮನ್‌ಗಳು ತರಗೆಲೆಗಳ ಹಾಗೆ ಉದುರಿದಾಗ ‘ಹ್ಯಾಟ್ರಿಕ್‌’ ಸೋಲಿನ ಛಾಯೆ ಆವರಿಸಿತ್ತು. ಆಗ ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌ ಮತ್ತು ಇಶಾಂತ್‌ ಶರ್ಮಾ ಪ್ರವಾಸಿ ಪಡೆಗೆ ಆಪದ್ಬಾಂಧವರಾಗಿದ್ದರು.

ಹರಿಣಗಳ ನಾಡಿನ ಪುಟಿದೇಳುವ ಪಿಚ್‌ಗಳಲ್ಲಿ ಪರಿಣಾಮಕಾರಿ ದಾಳಿ ನಡೆಸಿದ್ದ ಇವರು ಫಾಫ್‌ ಡು ಪ್ಲೆಸಿ ಬಳಗದ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿ ಕೊಹ್ಲಿ ಪಡೆಗೆ ಜಯದ ಸಿಹಿ ಉಣಬಡಿಸಿದ್ದರು. ಭಾರತ ತಂಡ ವೇಗದ ಬೌಲಿಂಗ್‌ ವಿಭಾಗದ ಶಕ್ತಿಕೇಂದ್ರವಾಗುತ್ತಿದೆ ಎಂಬ ಕೂಗಿಗೆ ಆ ಗೆಲುವು ಬಲ ತುಂಬಿತ್ತು. ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕೊಹ್ಲಿ ಬಳಗದಲ್ಲಿ ಹೊಸ ಆಶಾಕಿರಣ ಮೂಡುವಂತೆಯೂ ಮಾಡಿತ್ತು.

ಮೊದಲೆಲ್ಲಾ ಭಾರತ ತಂಡದ ವಿಷಯ ಬಂದಾಗ ಬ್ಯಾಟಿಂಗ್‌ ಮತ್ತು ಸ್ಪಿನ್ ಬೌಲಿಂಗ್‌ ವಿಭಾಗದ ಕುರಿತೇ ಹೆಚ್ಚು ಚರ್ಚೆಗಳು ನಡೆಯುತ್ತಿದ್ದವು. ಕ್ರಮೇಣ ಈ ಪರಿಸ್ಥಿತಿ ಬದ ಲಾಗುತ್ತಾ ಬಂದಿದೆ. ಈಗ ವೇಗದ ಬೌಲರ್‌ಗಳು ತಂಡದ ಆಧಾರ ಸ್ಥಂಭಗಳಾಗಿದ್ದಾರೆ.

1932ರ ಮಾತು. ಆಗ ಭಾರತ ತಂಡ ಟೆಸ್ಟ್‌ ಪಂದ್ಯ ಆಡಲು ಇಂಗ್ಲೆಂಡ್‌ಗೆ ಹೋಗಿತ್ತು. ಲಾರ್ಡ್ಸ್‌ ಅಂಗಳದಲ್ಲಿ ನಡೆದಿದ್ದ ಹಣಾಹಣಿಯಲ್ಲಿ ಮೊಹಮ್ಮದ್‌ ನಿಸಾರ್‌, ಎಂ.ಜಹಾಂಗೀರ್‌ ಖಾನ್‌ ಮತ್ತು ಅಮರ್‌ ಸಿಂಗ್‌ ಅವರ ಬಿರುಗಾಳಿ ವೇಗದ ಎಸೆತಗಳನ್ನು ಎದುರಿಸಲು ಆಂಗ್ಲರ ನಾಡಿನ ಬ್ಯಾಟ್ಸ್‌ಮನ್‌ಗಳು ಪರದಾಡಿದ್ದರು. ಆ ಪಂದ್ಯದಲ್ಲಿ  ಭಾರತದ ವೇಗದ ಬೌಲಿಂಗ್‌ ಶಕ್ತಿ ಜಗಜ್ಜಾಹೀರುಗೊಂಡಿತ್ತು.

ದೇಶ ವಿಭಜನೆಯ ನಂತರ ನಿಸಾರ್‌ ಮತ್ತು ಜಹಾಂಗೀರ್‌ ಪಾಕಿಸ್ತಾನ ಸೇರಿದರು. ನ್ಯೂಮೋನಿಯಾದಿಂದ ಬಳಲಿದ ಅಮರ್‌ 29ನೇ ವಯಸ್ಸಿನಲ್ಲಿ ನಿಧನರಾದರು. ಅನಂತರ ವೇಗದ ಬೌಲಿಂಗ್‌ ಪಡೆಯ ಸಾರಥಿ ಯಾರು ಎಂಬ ಪ್ರಶ್ನೆ ಎದುರಾದಾಗ ಅದಕ್ಕೆ ಉತ್ತರವಾಗಿ ಸಿಕ್ಕಿದ್ದು ಕಪಿಲ್‌ ದೇವ್‌.

1978ರಲ್ಲಿ ಟೆಸ್ಟ್‌ ಮತ್ತು ಏಕದಿನ ಮಾದರಿಗಳಿಗೆ ಪದಾರ್ಪಣೆ ಮಾಡಿದ್ದ ಕಪಿಲ್, ವೇಗದ ಬೌಲಿಂಗ್‌ ಪರಂಪರೆಗೆ ಹೊಸ ಮೆರುಗು ನೀಡಿದ್ದರು. ಟೆಸ್ಟ್‌ ಮಾದರಿಯಲ್ಲಿ 434 ವಿಕೆಟ್‌ ಉರುಳಿಸಿ ಹಲವರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು.

ಕಪಿಲ್‌ ನಿವೃತ್ತಿಯ ನಂತರ ಭಾರತಕ್ಕೆ ವೇಗಿಗಳ ಕೊರತೆ ಕಾಡಲಿಲ್ಲ. ಇದಕ್ಕೆ ಕಾರಣ ಎಂಆರ್‌ಎಫ್‌ ಪೇಸ್‌ ಫೌಂಡೇಷನ್‌. 1987ರಲ್ಲಿ ಚೆನ್ನೈಯಲ್ಲಿ ಸ್ಥಾಪನೆಯಾದ ಈ ಸಂಸ್ಥೆ ವೇಗಿಗಳ ಉಗಮಕ್ಕೆ ನಾಂದಿ ಹಾಡಿತು. ಆಸ್ಟ್ರೇಲಿಯಾದ ಡೆನಿಸ್‌ ಲಿಲೀ ಸಾರಥ್ಯದ ಈ ಸಂಸ್ಥೆ ಎಳವೆಯಲ್ಲಿಯೇ ಪ್ರತಿಭೆಗಳನ್ನು ಗುರುತಿಸಿ ಸಾಣೆ ಹಿಡಿಯುವ ಕೆಲಸ ಮಾಡಿತು. ಇದರ ಫಲವಾಗಿ ಜಾವಗಲ್‌ ಶ್ರೀನಾಥ್‌, ವೆಂಕಟೇಶ್‌ ಪ್ರಸಾದ್‌, ಜಹೀರ್‌ ಖಾನ್‌ ಅವರಂತಹ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬಂದರು.

ನಂತರ ಆಸ್ಟ್ರೇಲಿಯಾದ ಮತ್ತೊಬ್ಬ ದಿಗ್ಗಜ ಬೌಲರ್‌ ಗ್ಲೆನ್‌ ಮೆಕ್‌ಗ್ರಾ ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ವರವಾದ ಐಪಿಎಲ್‌
ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕನಸಿನ ಕೂಸು ಐಪಿಎಲ್‌. ಈ ಲೀಗ್‌ ಶುರುವಾದ ನಂತರ ಹಲವು ಪ್ರತಿಭೆಗಳು ಮುಂಚೂಣಿಗೆ ಬಂದಿದ್ದಾರೆ. 2013ರ ಟೂರ್ನಿಯಲ್ಲಿ ಒಟ್ಟು 100 ಅತಿ ವೇಗದ ಎಸೆತಗಳು ದಾಖಲಾಗಿದ್ದವು. ಈ ಪೈಕಿ ಐದು ಎಸೆತಗಳನ್ನು ಉಮೇಶ್‌ ಯಾದವ್‌ ಹಾಕಿದ್ದರು. 2014ರಲ್ಲಿ ಈ ಪಟ್ಟಿ ಯಲ್ಲಿದ್ದದ್ದು ವರುಣ್‌ ಆ್ಯರನ್‌ ಮಾತ್ರ. ಈ ವರ್ಷದ ಲೀಗ್‌ನಲ್ಲಿ ದಾಖಲಾದ 50 ಅತಿ ವೇಗದ ಎಸೆತಗಳ ಪೈಕಿ 13 ಎಸೆತಗಳನ್ನು ಹಾಕಿದ್ದು ಭಾರತದ ಬೌಲರ್‌ಗಳು. ಮೊಹಮ್ಮದ್‌ ಸಿರಾಜ್‌ (149.94 ಕಿ.ಮೀ/ಗಂಟೆ), ಶಿವಂ ಮಾವಿ (149.85 ಕಿ.ಮೀ/ಗಂಟೆ), ಅವೇಶ್‌ ಖಾನ್‌ (149.12), ಉಮೇಶ್‌ ಯಾದವ್‌ (148.98), ಜಸ್‌ಪ್ರೀತ್‌ ಬೂಮ್ರಾ (148.15) ಮತ್ತು ಸಿದ್ದಾರ್ಥ್‌ ಕೌಲ್‌ (147.72) ಅವರು ಬಿಲ್ಲಿ ಸ್ಟಾನ್‌ಲೇಕ್‌, ಜೋಫ್ರಾ ಆರ್ಚರ್‌, ಬೆನ್‌ ಸ್ಟೋಕ್ಸ್‌ ಮತ್ತು ಆ್ಯಂಡ್ರೆ ರಸೆಲ್‌ ಅವರಂತಹ ಬೌಲರ್‌ಗಳನ್ನು ಹಿಂದಿಕ್ಕಿರುವುದು ಆಶಾದಾಯಕ ಬೆಳವಣಿಗೆ.

ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ
ಆರಂಭದಲ್ಲಿ ಭಾರತದ ವೇಗದ ಬೌಲರ್‌ಗಳು ಪದೇ ಪದೇ ಗಾಯಗೊಳ್ಳುತ್ತಿದ್ದರು. ಈ ಕಾರಣದಿಂದಾಗಿ ಬಿಸಿಸಿಐ ಆಟಗಾರರ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಯಿತು. ಸ್ಟ್ರೆಂತ್‌ ಆ್ಯಂಡ್‌ ಕಂಡಿಷನಿಂಗ್‌ ಕೋಚಿಂಗ್‌ಗೆ ಒತ್ತು ನೀಡಿತು. ಶಂಕರ್‌ ಬಸು ಅವರನ್ನು ಈ ವಿಭಾಗದ ತರಬೇತುದಾರರನ್ನಾಗಿ ನೇಮಿಸಿದ ಬಳಿಕ   ವೇಗದ ಬೌಲರ್‌ಗಳ ಸಾಮರ್ಥ್ಯ ವೃದ್ಧಿಸಿತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು