ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 LSG vs SRH: ರಾಹುಲ್ ಬಳಗಕ್ಕೆ ಸನ್‌ರೈಸರ್ಸ್ ಸವಾಲು

ಗೆಲುವಿನ ಖಾತೆ ತೆರೆಯುವ ತವಕದಲ್ಲಿ ಕೇನ್ ವಿಲಿಯಮ್ಸನ್ ಬಳಗ; ಹುಮ್ಮಸ್ಸಿನಲ್ಲಿ ಲಖನೌ ಸೂಪರ್ ಜೈಂಟ್ಸ್
Last Updated 3 ಏಪ್ರಿಲ್ 2022, 19:12 IST
ಅಕ್ಷರ ಗಾತ್ರ

ನವಿ ಮುಂಬೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಗೆದ್ದು ಬೀಗುತ್ತಿರುವ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್ ತಂಡವು ಸೋಮವಾರ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ.

ಡಾ.ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ತಂಡವು ಗೆಲುವಿನ ಖಾತೆ ತೆರೆಯುವ ತವಕದಲ್ಲಿದೆ. ಕೇನ್ ಬಳಗವು ಟೂರ್ನಿಯಲ್ಲಿ ಇದುವರೆಗೆ ಆಡಿರುವ ಏಕೈಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಸೋತಿತ್ತು.

ಹೈದರಾಬಾದ್ ತಂಡದ ಪ್ರಮುಖ ಶಕ್ತಿಯಾಗಿರುವ ಬೌಲರ್‌ಗಳೇ ಆ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಅದರಿಂದಾಗಿ ರಾಜಸ್ಥಾನ ತಂಡವು 210 ರನ್‌ಗಳ ದೊಡ್ಡ ಸವಾಲನ್ನು ಕೇನ್‌ ಬಳಗಕ್ಕೆ ಒಡ್ಡಿತ್ತು. ಏಡನ್ ಮರ್ಕರಂ ಅರ್ಧಶತಕ ಮತ್ತು ವಾಷಿಂಗ್ಟನ್ ಸುಂದರ್ 14 ಎಸೆತಗಳಲ್ಲಿ 40 ರನ್‌ಗಳನ್ನು ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ನೆಲಕಚ್ಚಿದ್ದರು. ಆದ್ದರಿಂದ ಈ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲಿಯೂ ಸುಧಾರಿತ ಪ್ರದರ್ಶನ ನೀಡುವುದು ತಂಡಕ್ಕೆ ಅನಿವಾರ್ಯವಾಗಿದೆ.

ಅದರಲ್ಲೂ ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಮತ್ತು ಅಭಿಷೇಕ್ ಶರ್ಮಾ ತಮ್ಮ ಅನುಭವಕ್ಕೆ ತಕ್ಕಂತೆ ಆಡಿದರೆ ತಂಡಕ್ಕೆ ಹೆಚ್ಚು ಉಪಯುಕ್ತವಾಗಬಹುದು. ಅಮೋಘ ಲಯದಲ್ಲಿರುವ ಲಖನೌ ತಂಡದ ರಾಹುಲ್, ಕ್ವಿಂಟನ್ ಡಿಕಾಕ್, ಎವಿನ್ ಲೂಯಿಸ್ ಮತ್ತು ಆಯುಷ್ ಬದೋನಿ ಅವರಿಗೆ ತಡೆಯೊಡ್ಡುವ ಸವಾಲು ಬೌಲರ್‌ಗಳ ಮುಂದಿದೆ.

ಲಖನೌ ಸ್ಪಿನ್ನರ್ ರವಿ ಬಿಷ್ಣೋಯಿ, ವೇಗಿ ಆವೇಶ್ ಖಾನ್ ಅವರ ಎಸೆತಗಳನ್ನು ದಿಟ್ಟತನದಿಂದ ಎದುರಿಸಿದರೆ ಕೇನ್ ಬಳಗವು ಗೆಲುವಿನ ಹಾದಿ ತುಳಿಯಬಹುದು.

ತಂಡಗಳು:

ಲಖನೌ ಸೂಪರ್‌ಜೈಂಟ್ಸ್: ಕೆ.ಎಲ್. ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಎವಿನ್ ಲೂಯಿಸ್, ಮನೀಷ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬದೋನಿ, ಕೃಣಾಲ್ ಪಾಂಡ್ಯ, ದುಷ್ಮಂತ ಚಮೀರಾ, ಆ್ಯಂಡ್ರ್ಯೂ ಟೈ, ರವಿ ಬಿಷ್ಣೋಯಿ, ಆವೇಶ್ ಖಾನ್, ಮನನ್ ವೊಹ್ರಾ, ಕೃಷ್ಣಪ್ಪ ಗೌತಮ್, ಶಾಬಾಜ್ ನದೀಂ.

ಸನ್‌ರೈಸರ್ಸ್‌ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್ (ವಿಕೆಟ್‌ಕೀಪರ್), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮರ್ಕರಂ, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮೆರಿಯಾ ಶೇಫರ್ಡ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಉಮ್ರನ್ ಮಲಿಕ್, ಆರ್. ಸಮರ್ಥ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ವಿಷ್ಣು ವಿನೋದ್, ಪ್ರಿಯಂ ಗರ್ಗ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT