ಗುರುವಾರ , ನವೆಂಬರ್ 14, 2019
19 °C
ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಎದುರಿನ ಕೊನೆಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಜಯಭೇರಿ

ಸರಣಿ ವೈಟ್ ವಾಷ್‌; ಸ್ಪಿನ್ನರ್‌ಗಳು ಬೇಷ್

Published:
Updated:
Prajavani

ವಡೋದರ: ಕಡಿಮೆ ಮೊತ್ತ ಕಲೆ ಹಾಕಿದರೂ ಎದುರಾಳಿಗಳನ್ನು ಸ್ಪಿನ್ ಬಲೆಯಲ್ಲಿ ಕೆಡವಿದ ಭಾರತ ಮಹಿಳಾ ತಂಡದವರು ದಕ್ಷಿಣ ಆಫ್ರಿಕಾ ಮಹಿಳೆಯರ ಎದುರು ರೋಚಕ ಜಯ ಗಳಿಸಿ ಸಂಭ್ರಮಿಸಿದರು.

ಇಲ್ಲಿ ಸೋಮವಾರ ನಡೆದ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 146 ರನ್ ಗಳಿಸಿದ ಮಿತಾಲಿ ರಾಜ್ ಬಳಗವು ಸೂನ್ ಲೂಜ್ ನೇತೃತ್ವದ ತಂಡವನ್ನು 140 ರನ್‌ಗಳಿಗೆ ಕಟ್ಟಿ ಹಾಕಿ ಪ್ರೇಕ್ಷಕರನ್ನು ರಂಜಿಸಿದರು.

ಈ ಗೆಲುವಿನ ಮೂಲಕ ತಂಡ ಸರಣಿಯಲ್ಲಿ 3–0 ವೈಟ್ ವಾಷ್ ಸಾಧಿಸಿತು. ಸ್ಪಿನ್ನರ್‌ಗಳಾದ ಏಕ್ತಾ ಬಿಷ್ಠ್‌, ದೀಪ್ತಿ ಶರ್ಮಾ ಮತ್ತು ಕನ್ನಡತಿ ರಾಜೇಶ್ವರಿ ಗಾಯಕವಾಡ್ ಗೆಲುವಿನ ರೂವಾರಿಗಳಾದರು. 

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತವನ್ನು 45.5 ಓವರ್‌ಗಳಲ್ಲಿ ಆಲ್‌ ಔಟ್ ಮಾಡಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸುವತ್ತ ಹೆಜ್ಜೆ ಹಾಕಿತ್ತು. 17 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರೂ ನಂತರ ಚೇತರಿಸಿಕೊಂಡ ತಂಡ ಲಾರಾ ಒಲ್ವಾರ್ಟ್, ನಾಯಕಿ ಲೂಜ್ ಮತ್ತು ಮರಿಜಾನೆ ಕಾಪ್ ಅವರ ಅಮೋಘ ಆಟದ ಬಲದಿಂದ ದಿಟ್ಟ ಹೋರಾಟ ನಡೆಸಿತ್ತು.

ಆದರೆ ನಿರ್ಣಾಯಕ ಹಂತಗಳಲ್ಲಿ ವಿಕೆಟ್‌ ಉರುಳಿಸಿದ ಭಾರತದ ಬೌಲರ್‌ಗಳು ಪಂದ್ಯವನ್ನು ರೋಚಕವಾಗಿಸಿದರು. ಕೊನೆಯ ಗಳಿಗೆಯಲ್ಲಿ ಬ್ಯಾಟ್ಸ್‌ವುಮನ್‌ಗಳಾದ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ವಿಕೆಟ್‌ಗಳನ್ನು ಗಳಿಸಿ ದಕ್ಷಿಣ ಆಫ್ರಿಕಾ ಆಟಗಾರ್ತಿಯರನ್ನು ದಂಗುಬಡಿಸಿದರು. ರಾಡ್ರಿಗಸ್ ಎಸೆತದಲ್ಲಿ ತೂಮಿ ಶೆಕುನೆ ಅವರನ್ನು ದೀಪ್ತಿ ಶರ್ಮಾ ಕ್ಯಾಚ್ ಮಾಡುತ್ತಿದ್ದಂತೆ ಅಂಗಣದಲ್ಲಿ ಮಿಂಚಿನ ಸಂಚಾರವಾಯಿತು.

ಮುಗ್ಗರಿಸಿದ ಆರಂಭಿಕ ಜೋಡಿ: ಭಾರತದ ಆರಂಭಿಕ ಜೋಡಿ ಪ್ರಿಯಾ ಪೂನಿಯಾ ಮತ್ತು ಜೆಮಿಮಾ ರಾಡ್ರಿಗಸ್ ಎದುರಾಳಿ ಬೌಲರ್‌ಗಳ ದಾಳಿಗೆ ನಲುಗಿದರು. 5 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ತಂಡ 55 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್ ಕೊಟ್ಟು ನಿರಾಸೆಗೆ ಒಳಗಾಯಿತು. ಈ ಸಂದರ್ಭದಲ್ಲಿ ಜೊತೆಗೂಡಿದ ಹರ್ಮನ್‌ಪ್ರೀತ್ ಕೌರ್ (38; 76 ಎಸೆತ, 5 ಬೌಂಡರಿ) ಮತ್ತು ಶಿಖಾ ಪಾಂಡೆ (35; 40 ಎಸೆತ, 6 ಬೌಂಡರಿ) 38 ರನ್ ಸೇರಿಸಿದರು. ಮಾನಸಿ ಜೋಶಿ 2 ಬೌಂಡರಿಗಳೊಂದಿಗೆ 12 ರನ್ ಗಳಿಸಿ ತಂಡದ ಮೊತ್ತವನ್ನು 150ರ ಸನಿಹ ಕೊಂಡೊಯ್ದರು.

ಸಂಕ್ಷಿಪ್ತ ಸ್ಕೋರು: ಭಾರತ: 45.5 ಓವರ್‌ಗಳಲ್ಲಿ 146 (ಪೂನಮ್ ರಾವತ್ 15, ಹರ್ಮನ್‌ಪ್ರೀತ್ ಕೌರ್ 38, ಶಿಖಾ ಪಾಂಡೆ 35, ಮಾನಸಿ ಜೋಶಿ 12; ಶಬ್ನಿಮ್ ಇಸ್ಮಾಯಿಲ್ 18ಕ್ಕೆ2, ಮರಿಜಾನೆ ಕಾಪ್ 20ಕ್ಕೆ3, ಅಯಬೋಂಗ ಕಾಕ 33ಕ್ಕೆ2); ದಕ್ಷಿಣ ಆಫ್ರಿಕಾ: 48 ಓವರ್‌ಗಳಲ್ಲಿ 140 (ಲಾರಾ ವೊಲ್ವಾರ್ಟ್ 23, ಸೂನ್ ಲೂಜ 24, ಮರಿಜಾನೆ ಕಾಪ್ 29; ಮಾನಸಿ ಜೋಶಿ 15ಕ್ಕೆ1, ಏಕ್ತಾ ಬಿಷ್ಠ್ 32ಕ್ಕೆ3, ದೀಪ್ತಿ ಶರ್ಮಾ 24ಕ್ಕೆ2, ರಾಜೇಶ್ವರಿ ಗಾಯಕವಾಡ್ 22ಕ್ಕೆ2, ಹರ್ಮನ್‌ಪ್ರೀತ್ ಕೌರ್ 14ಕ್ಕೆ1, ಜೆಮಿಮಾ ರಾಡ್ರಿಗಸ್ 1ಕ್ಕೆ1). ಫಲಿತಾಂಶ: ಭಾರತಕ್ಕೆ 6 ರನ್‌ಗಳ ಜಯ; 3 ಪಂದ್ಯಗಳ ಸರಣಿಯಲ್ಲಿ 3–0 ಗೆಲುವು. ಪಂದ್ಯದ ಶ್ರೇಷ್ಠ ಆಟಗಾರ್ತಿ: ಏಕ್ತಾ ಬಿಷ್ಠ್‌; ಸರಣಿಯ ಆಟಗಾರ್ತಿ: ಮರಿಜಾನೆ ಕಾಪ್.

ಪ್ರತಿಕ್ರಿಯಿಸಿ (+)