ಗುರುವಾರ , ಡಿಸೆಂಬರ್ 5, 2019
19 °C
ರೋಹಿತ್‌ಗೆ ವಿಶ್ರಾಂತಿ ಸಾಧ್ಯತೆ

ವಿಂಡೀಸ್‌ ವಿರುದ್ಧ ಸರಣಿ: ಭಾರತ ತಂಡದ ಆಯ್ಕೆ ಇಂದು

Published:
Updated:

ಕೋಲ್ಕತ್ತ: ಉಪನಾಯಕ ರೋಹಿತ್‌ ಶರ್ಮಾ ಮೇಲಿನ ಹೊರೆ, ಶಿಖರ್‌ ಧವನ್‌ ಅವರ ವೈಫಲ್ಯ– ಈ ಎರಡು ವಿಷಯಗಳು ವೆಸ್ಟ್‌ ಇಂಡೀಸ್‌ ವಿರುದ್ಧ ಸೀಮಿತ ಓವರುಗಳ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲು ಗುರುವಾರ ನಡೆಯುವ ಆಯ್ಕೆ ಸಮಿತಿ ಸಭೆಯ ವೇಳೆ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.

ಈ ಸಭೆ, ಎಂ.ಎಸ್‌.ಕೆ. ಪ್ರಸಾದ್‌ ಅಧ್ಯಕ್ಷತೆಯಲ್ಲಿ ಬಹುತೇಕ ಕೊನೆಯ ಸಭೆಯಾಗುವ ಸಾಧ್ಯತೆಯಿದೆ. ಅವರು ಮತ್ತು ಕೇಂದ್ರ ವಲಯದ ಆಯ್ಕೆಗಾರ ಗಗನ್‌ ಖೋಡಾ ಅವರ ನಾಲ್ಕು ವರ್ಷಗಳ ಅವಧಿ ಮುಗಿಯುವ ಹಂತದಲ್ಲಿದೆ.

ವೆಸ್ಟ್ ಇಂಡೀಸ್‌ ವಿರುದ್ಧ ಭಾರತ ಮೂರು ಟಿ–20 ಪಂದ್ಯಗಳನ್ನು ಆಡಲಿದೆ. ಮುಂಬೈನಲ್ಲಿ ಡಿಸೆಂಬರ್‌ 6ರಂದು ಮೊದಲ ಪಂದ್ಯ ನಿಗದಿಯಾಗಿದೆ. ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ತಿರುವನಂತರಪುರ (ಡಿ. 8) ಮತ್ತು ಹೈದರಾಬಾದ್‌ನಲ್ಲಿ (ಡಿ.11) ನಡೆಯಲಿವೆ.

ಏಕದಿನ ಪಂದ್ಯಗಳನ್ನು ಚೆನ್ನೈ (ಡಿ. 15), ವಿಶಾಖಪಟ್ಟಣ (ಡಿ. 18) ಮತ್ತು ಕಟಕ್‌ (ಡಿ. 22)ನಲ್ಲಿ ಆಡಲಾಗುವುದು.

ಎಲ್ಲವೂ ನಿರೀಕ್ಷೆಯಂತೆ ನಡೆದರೆ, ಕೆರೀಬಿಯನ್ನರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ರೋಹಿತ್‌ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಅಧಿಕ. ಅವರು ಈ ವರ್ಷ ಐಪಿಎಲ್‌ ಸೇರಿದಂತೆ 60 ಪಂದ್ಯಗಳನ್ನು ಆಡಲಿದ್ದಾರೆ. ಅವರು ಕೊಹ್ಲಿಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಕೊಹ್ಲಿ ಈ ವರ್ಷ ಎರಡು ಬಾರಿ ವಿಶ್ರಾಂತಿ ಪಡೆದಿದ್ದಾರೆ.

ಮುಂದಿನ ವರ್ಷದ ನ್ಯೂಜಿಲೆಂಡ್‌ ಪ್ರವಾಸಕ್ಕೆ ಹೊಸ ಹುರುಪಿನೊಡನೆ ತಂಡಕ್ಕೆ ವಾಪಸಾಗುವಂತೆ ರೋಹಿತ್‌ಗೆ ಅವಕಾಶ ಕಲ್ಪಿಸುವ ಉದ್ದೇಶ ಅವರಿಗೆ ವಿಶ್ರಾಂತಿ ಕೊಡುವುದರ ಹಿಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಇನ್ನೊಬ್ಬ ಆರಂಭ ಆಟಗಾರ ಶಿಖರ್‌ ಧವನ್‌ ಅವರಿಗೂ ಬಿಸಿ ತಟ್ಟುವ ಸಾಧ್ಯತೆಯಿದೆ. ಜೂನ್‌ನಲ್ಲಿ ವಿಶ್ವಕಪ್‌ ಆರಂಭದಲ್ಲೇ ಗಾಯಾಳಾಗಿ ಇಂಗ್ಲೆಂಡ್‌ನಿಂದ ತವರಿಗೆ ಮರಳಿದ್ದ ಧವನ್‌, ನಂತರ ಯಶಸ್ಸು ಕಾಣುತ್ತಿಲ್ಲ.

ಮೂರನೇ ಓಪನರ್‌ ಅವಕಾಶಕ್ಕೆ ಆಯ್ಕೆಗಾರರು ಒಲವು ತೋರಿದರೆ, ಉತ್ತಮ ಲಯದಲ್ಲಿರುವ ಮಯಂಕ್‌ ಅವರಿಗೆ ಆದ್ಯತೆ ನೀಡಬಹುದು. ಟೆಸ್ಟ್‌ನಲ್ಲಿ ಅಮೋಘ ಯಶಸ್ಸು, ದೇಶಿಯ ಟೂರ್ನಿಗಳಲ್ಲೂ 50ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಶೀಘ್ರದಲ್ಲೇ 34ನೇ ವಸಂತ ಕಾಣಲಿರುವ ಧವನ್‌, ಹೆಚ್ಚು ವರ್ಷ ಆಡುವ ಸಾಧ್ಯತೆ ಕಡಿಮೆ. ಬಾಂಗ್ಲಾದೇಶ ವಿರುದ್ಧ ಹೆಚ್ಚು ಯಶಸ್ಸು ಕಂಡಿರಲಿಲ್ಲ. ನಂತರ ದೇಶಿಯ ಕ್ರಿಕೆಟ್‌ ಟೂರ್ನಿಗಳಲ್ಲೂ ರನ್‌ ಬರ ಎದುರಿಸಿದ್ದಾರೆ. ಆದರೆ ಅನುಭವದ ಕಾರಣ ನೀಡಿ ಅವರಿಗೆ ಕೊನೆಯ ಅವಕಾಶ ಕೊಟ್ಟರೂ ಅಚ್ಚರಿಯಿಲ್ಲ.

ರಿಷಭ್‌ ಪಂತ್‌ ಕೂಡ ಪರೀಕ್ಷೆಗೊಳಪಡಲಿದ್ದಾರೆ. ಸಂಜು ಸ್ಯಾಮ್ಸನ್‌ ವಿಕೆಟ್‌ ಕೀಪರ್ ಸ್ಥಾನಕ್ಕಾಗಿ ಪೈಪೋಟಿಯಲ್ಲಿದ್ದಾರೆ. ಹಳೆಯ ಹುಲಿ ಧೋನಿ ಕೂಡ ಅಭ್ಯಾಸ ಆರಂಭಿಸಿದ್ದಾರೆ. ಪಂತ್‌ ನಿರ್ವಹಣೆ ಸುಧಾರಿಸದಿದ್ದರೆ, ಅನುಭವಿ ಧೋನಿ ಅವರಿಂದ ತೀವ್ರ ಪೈಪೋಟಿ ಎದುರಿಸಬೇಕಾಗಬಹುದು.

ಗಾಯಾಳಾಗಿದ್ದ ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ, ನವದೀಪ್‌ ಸೈನಿ ಮತ್ತು ಭುವನೇಶ್ವರ ಕುಮಾರ್‌ ಇನ್ನೂ ಚೇತರಿಸಿಕೊಳ್ಳುತ್ತಿರುವ ಕಾರಣ ಶಿವಂ ದುಬೆ ಮತ್ತು ಶಾರ್ದೂಲ್‌ ಠಾಕೂರ್ ತಂಡದಲ್ಲಿ ಮುಂದುವರಿಯುವುದು ಖಚಿತ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು