ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ತಂಡಕ್ಕೆ ರಾಮನ್‌ ಕೋಚ್‌?

ಕ್ರಿಕೆಟ್‌: 10 ಮಂದಿಯ ಸಂದರ್ಶನ ನಡೆಸಿದ ಬಿಸಿಸಿಐ ಅಡ್‌ಹಾಕ್‌ ಸಮಿತಿ
Last Updated 20 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಮುಂಬೈ: ಹಿರಿಯ ಆಟಗಾರ ಡಬ್ಲ್ಯು.ವಿ.ರಾಮನ್ ಅವರು ಭಾರತ ಮಹಿಳಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗುವ ಸಾಧ್ಯತೆ ಇದೆ.

ಕಪಿಲ್‌ ದೇವ್‌, ಅನ್ಶುಮಾನ್‌ ಗಾಯಕವಾಡ್‌ ಮತ್ತು ಶಾಂತಾ ರಂಗಸ್ವಾಮಿ ಅವರಿದ್ದ ಅಡ್‌ಹಾಕ್‌ ಸಮಿತಿಯು ಗುರುವಾರ 10 ಮಂದಿಯ ಸಂದರ್ಶನ ನಡೆಸಿದೆ. ಈ ಪೈಕಿ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌, ಭಾರತದ ಡಬ್ಲ್ಯು.ವಿ.ರಾಮನ್‌ ಹಾಗೂ ವೆಂಕಟೇಶ್‌ ಪ್ರಸಾದ್‌ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ. ಈ ಮೂವರ ಪೈಕಿ ಯಾರನ್ನು ಕೋಚ್‌ ಆಗಿ ನೇಮಿಸಬೇಕು ಎಂಬುದನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನಿಸಲಿದೆ.

ರಾಮನ್‌ ಅವರನ್ನು ಕೋಚ್‌ ಆಗಿ ನೇಮಿಸಲು ಬಿಸಿಸಿಐ ಒಲವು ತೋರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಬಿಸಿಸಿಐ ಅಧಿ ಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

ಮನೋಜ್‌ ಪ್ರಭಾಕರ್‌, ಟ್ರೆಂಟ್‌ ಜಾನ್‌ಸ್ಟನ್‌, ಡಿಮಿಟ್ರಿ ಮಸ್ಕರೆನ್ಹಾಸ್‌, ಬ್ರಾಡ್‌ ಹಾಗ್‌ ಮತ್ತು ಕಲ್ಪನಾ ವೆಂಕಟಾಚಾರ್‌ ಅವರೂ ಸಂದರ್ಶನಕ್ಕೆ ಹಾಜರಾಗಿದ್ದರು.

ಗ್ಯಾರಿ ಕರ್ಸ್ಟನ್‌ ‘ಸ್ಕೈಪ್‌’ ಮೂಲಕ, ಕಲ್ಪನಾ ಅವರು ದೂರವಾಣಿ ಮೂಲಕ ಅಡ್‌ಹಾಕ್ ಸಮಿತಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ತಮಿಳುನಾಡಿನ ವೂರ್ಕೆರಿ ವೆಂಕಟ ರಾಮನ್‌ ಅವರು ಅನುಭವಿ ಕೋಚ್‌ಗಳಲ್ಲಿ ಒಬ್ಬರು. 11 ಟೆಸ್ಟ್‌ ಮತ್ತು 27 ಏಕದಿನ ಪಂದ್ಯಗಳನ್ನು ಆಡಿರುವ ಅವರು ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹಿರಿಮೆ ಹೊಂದಿದ್ದಾರೆ.

ಈ ಹಿಂದೆ ತಮಿಳುನಾಡು ಮತ್ತು ಬಂಗಾಳ ರಣಜಿ ತಂಡಗಳ ಕೋಚ್‌ ಆಗಿ ಕೆಲಸ ಮಾಡಿದ್ದ ರಾಮನ್‌, ಭಾರತದ 19 ವರ್ಷದೊಳಗಿನವರ ತಂಡದ ಮುಖ್ಯ ಕೋಚ್‌ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. 2009ರಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಮುಖ್ಯ ಕೋಚ್‌ ಆಗಿದ್ದ ಅವರು 2013ರಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಸಹಾಯಕ ಕೋಚ್‌ ಆಗಿ ನೇಮಕವಾಗಿದ್ದರು. 2014ರಲ್ಲಿ ನೈಟ್‌ರೈಡರ್ಸ್‌ ತಂಡದ ಬ್ಯಾಟಿಂಗ್‌ ಕೋಚ್‌ ಆಗಿಯೂ ಕೆಲಸ ಮಾಡಿದ್ದರು.

53 ವರ್ಷ ವಯಸ್ಸಿನ ರಾಮನ್‌, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಸದ್ಯ ಬ್ಯಾಟಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ಸ್ಟನ್‌ ಅವರು 2008ರಿಂದ 2011ರವರೆಗೆ ಭಾರತ ಪುರುಷರ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ ಮಹೇಂದ್ರ ಸಿಂಗ್‌ ಧೋನಿ ಬಳಗ 2011ರ ಏಕದಿನ ವಿಶ್ವಕಪ್‌ನಲ್ಲಿ ಟ್ರೋಫಿ ಜಯಿಸಿತ್ತು.

ನಂತರ ಗ್ಯಾರಿ, ಮೂರು ವರ್ಷಗಳ ಕಾಲ (2011ರಿಂದ 2013) ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ತರಬೇತಿ ನೀಡಿದ್ದರು. ಈಗ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡುತ್ತಿದ್ದಾರೆ.

2007ರಲ್ಲಿ ಭಾರತ ತಂಡ ಚೊಚ್ಚಲ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಾಗ ಕರ್ನಾಟಕದ ಪ್ರಸಾದ್‌ ಬೌಲಿಂಗ್‌ ಕೋಚ್‌ ಆಗಿದ್ದರು. ನಂತರ ಅವರು ಉತ್ತರ ಪ್ರದೇಶ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದರು. ಭಾರತ ಜೂನಿಯರ್‌ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಅವರು ಹಿಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಬೌಲಿಂಗ್‌ ಕೋಚ್‌ ಆಗಿ ಕೆಲಸ ಮಾಡಿದ್ದರು.

‘ನಾವು ನಮ್ಮ ಕೆಲಸವನ್ನು ಪ್ರಾಮಾ ಣಿಕವಾಗಿ ಮಾಡಿದ್ದೇವೆ. ಮೂವರ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿದ್ದೇವೆ. ಇವರ ಪೈಕಿ ಯಾರನ್ನು ಕೋಚ್‌ ಆಗಿ ನೇಮಿಸಬೇಕು ಎಂಬುದರ ಕುರಿತು ಬಿಸಿಸಿಐ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಅಡ್‌ಹಾಕ್‌ ಸಮಿತಿಯ ಸದಸ್ಯ ಅನ್ಸುಮಾನ್‌ ಗಾಯಕವಾಡ್‌ ಹೇಳಿದ್ದಾರೆ.

‘ಅಡ್‌ಹಾಕ್‌ ಸಮಿತಿಯು ಕರ್ಸ್ಟನ್‌ ಅವರ ಮೇಲೆ ಹೆಚ್ಚು ಒಲವು ತೋರಿದೆ. ಆದರೆ ಕರ್ಸ್ಟನ್‌, ಆರ್‌ಸಿಬಿ ಕೋಚ್‌ ಹುದ್ದೆ ತೊರೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರಾಮನ್‌ ಅವರ ಹಾದಿ ಸುಗಮವಾಗಿದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ತಂಡದ ಕೋಚ್‌ ಆಗಿದ್ದ ರಮೇಶ್‌ ಪೊವಾರ್‌ ಅವರ ಅವಧಿ ಹೋದ ತಿಂಗಳು ಮುಗಿದಿತ್ತು. ಹೀಗಾಗಿ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ನೂತನ ಕೋಚ್‌ ನೇಮಕಕ್ಕೆ ಮುಂದಾಗಿತ್ತು. ‍‍

ವಿನೋದ್‌ ರಾಯ್‌ ವಿರುದ್ಧ ಡಯಾನ, ಅನಿರುದ್ಧ್‌ ಚೌಧರಿ ಕಿಡಿ
ಭಾರತ ಮಹಿಳಾ ತಂಡಕ್ಕೆ ನೂತನ ಕೋಚ್‌ ನೇಮಿಸಲು ಮುಂದಾಗಿರುವ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಮುಖ್ಯಸ್ಥ ವಿನೋದ್‌ ರಾಯ್‌ ಮೇಲೆ ಸಿಒಎ ಸದಸ್ಯೆ ಡಯಾನ ಎಡುಲ್ಜಿ ಮತ್ತು ಬಿಸಿಸಿಐ ಖಜಾಂಚಿ ಅನಿರುದ್ಧ್‌ ಚೌಧರಿ ಹರಿಹಾಯ್ದಿದ್ದಾರೆ.

‘ಜನವರಿ 17ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಇದೆ. ಹೀಗಿರುವಾಗ ಸಂದರ್ಶನ ನಡೆಸಿ ಕೋಚ್‌ ನೇಮಿಸುವುದು ಸರಿಯಲ್ಲ. ಇದು ಕಾನೂನಿಗೆ ವಿರುದ್ಧವಾದ ನಡೆಯಾಗಲಿದೆ. ಇದರಿಂದ ನ್ಯಾಯಾಂಗ ನಿಂದನೆಗೆ ಗುರಿಯಾಗ ಬೇಕಾಗುತ್ತದೆ. ಹೀಗಾಗಿ ಕೋಚ್‌ ನೇಮಕ ಪ್ರಕ್ರಿಯೆಯನ್ನು ನಿಲ್ಲಿಸಬೇಕು’ ಎಂದು ಅನಿರುದ್ಧ್‌, ವಿನೋದ್‌ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಎಡುಲ್ಜಿ ಕೂಡಾ ಕೋಚ್‌ ನೇಮಕ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಗುರುವಾರ ಬೆಳಿಗ್ಗೆ ರಾಯ್‌ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ವಿನೋದ್‌ ಅವರು ಇದಕ್ಕೆ ಸೊಪ್ಪು ಹಾಕಿಲ್ಲ. ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಬಿ.ಎಂ.ಶ್ರೀಕೃಷ್ಣ ಅವರ ಸಲಹೆ ಪಡೆದ ಅವರು ಸಂದರ್ಶನ ನಡೆಸುವಂತೆ ಅಡ್‌ಹಾಕ್‌ ಸಮಿತಿಗೆ ಸೂಚಿಸಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT