ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡುವಿಗೂ ಮುನ್ನ ಸಂಚಾರಕ್ಕೆ ಮುಕ್ತ?

ಭರದಿಂದ ಸಾಗಿದ ಶಿರಾಡಿ ಘಾಟ್‌ ಹೆದ್ದಾರಿಯ ಕಾಂಕ್ರೀಟ್‌ ಕಾಮಗಾರಿ
Last Updated 25 ಮಾರ್ಚ್ 2018, 19:31 IST
ಅಕ್ಷರ ಗಾತ್ರ

ಸಕಲೇಶಪುರ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು, ಏಪ್ರಿಲ್‌ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಎರಡನೇ ಹಂತವಾಗಿ ₹ 74 ಕೋಟಿ ಅಂದಾಜು ವೆಚ್ಚದಲ್ಲಿ ಕಿ.ಮೀ 250.62ರಿಂದ ಕಿ.ಮೀ 263ರವರೆಗೆ 12.38 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ ವೇಗ ಹೆಚ್ಚು ಮಾಡಲಾಗಿದೆ. ಸರ್ಕಾರ ನೀಡಿರುವ ಗಡುವಿಗೆ (ಆಗಸ್ಟ್‌ 1) ಮುನ್ನವೇ ಕಾಮಗಾರಿ ಪೂರ್ಣಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಗುತ್ತಿಗೆ ಪಡೆದಿರುವ ಓಷನ್‌ ಕನ್‌ಸ್ಟ್ರಕ್ಷನ್‌ ಕಂಪನಿಯ ಎಂಜಿನಿಯರ್‌ ಶರ್ಫುದ್ದೀನ್‌ ವಿಶ್ವಾಸ ತಿಳಿಸಿದರು.

ಕಾಮಗಾರಿಗಾಗಿ ಜನವರಿ 12ರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಎಡಭಾಗದಲ್ಲಿ  ಗ್ರ್ಯಾನ್ಯುಲರ್‌ ಸಬ್‌ ಬೇಸ್‌ ಮತ್ತು ಬಲಭಾಗದಲ್ಲಿ ಲೇಯಿಂಗ್‌ ಆಫ್‌ ಡ್ರೈ ಲೀನ್‌ ಕಾಂಕ್ರೀಟ್‌ (ಡಿಎಲ್‌ಸಿ) ಕಾಮಗಾರಿ ನಡೆಯುತ್ತಿದೆ ಎಂದೂ ಅವರು ಹೇಳಿದರು.

ಜರ್ಮನಿ ಯಂತ್ರ: ಪ್ರತಿ ದಿನ ಸುಮಾರು 700 ಮೀಟರ್‌ ಮೇವ್‌ಮೆಂಟ್‌ ಕ್ವಾಲಿಟಿ ಕಾಂಕ್ರಿಟ್‌ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಗುತ್ತಿಗೆದಾರರು ಜರ್ಮನಿಯಿಂದ ಅತ್ಯಾಧುನಿಕ ಯಂತ್ರ ಖರೀದಿಸಿದ್ದಾರೆ.

ಶಿರಾಡಿಯಲ್ಲಿ ವರ್ಷದ 6 ತಿಂಗಳು ನಿರಂತರ ಮಳೆ ಬೀಳುತ್ತದೆ. ಇಲ್ಲಿಯದು ಮೃದು ಮಣ್ಣು. ರಸ್ತೆಯಲ್ಲಿಯೇ ನೀರು ಉಕ್ಕುತ್ತದೆ. ಆದ್ದರಿಂದ ವಿಶೇಷ ತಂತ್ರಜ್ಞಾನದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಎಂಜಿನಿಯರ್‌ ರಾಘವನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಕ್ರೀಟ್‌ ರಸ್ತೆಗೆ ಮಣ್ಣಿನ ಕಣಗಳು ತಾಕದಂತೆ ತಡೆಯುವ ಸಲುವಾಗಿ ಮಣ್ಣಿನ ಮೇಲೆ ಜಿಯೋ ಟೆಕ್ಸ್‌ಟೈಲ್‌ ಹಾಕಲಾಗಿದೆ. ನೀರಿನ ಸೋರುವಿಕೆ ತಡೆಗಟ್ಟುವ ಸಲುವಾಗಿ ಪ್ರತಿ 25 ಮೀಟರ್‌ ಅಂತರದಲ್ಲಿ ‘ಕ್ರಾಸ್‌ ಫಿಲ್ಟರ್‌ ಡ್ರೈನೇಜ್‌’ ಮಾಡಲಾಗುತ್ತಿದೆ. ಒಟ್ಟು 600 ಎಂ.ಎಂ. ದಪ್ಪದ ರಸ್ತೆ ನಿರ್ಮಾಣವಾಗುತ್ತಿದೆ. 74 ಮೋರಿಗಳ ಕಾಮಗಾರಿ ಪೂರ್ಣಗೊಂಡಿದೆ. ಕಿರಿದಾಗಿದ್ದ ಮೂರು ಸೇತುವೆಗಳ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ರಸ್ತೆ ತಗ್ಗು ಇರುವ ಪ್ರದೇಶಗಳಿಗೆ ನೆಲ್ಯಾಡಿಯಿಂದ ಗಟ್ಟಿಮಣ್ಣು ತರಿಸಿ ಹಾಕಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ನಿತ್ಯ ₹ 50 ಕೋಟಿ ನಷ್ಟ
‘ಈ ಹೆದ್ದಾರಿ ಬಂದ್‌ ಆಗಿರುವುದರಿಂದ ವಾಣಿಜ್ಯ ವಹಿವಾಟು ಹಾಗೂ ಪ್ರಯಾಣಿಕರ ಸಂಚಾರಕ್ಕೆ ಆಗಿರುವ ಅಡಚಣೆಯಿಂದ ದಿನಕ್ಕೆ ಸರಾಸರಿ ₹50 ಕೋಟಿಗೂ ಹೆಚ್ಚು ನಷ್ಟ ಉಂಟಾಗುತ್ತಿದೆ. ಈ ಗಂಭೀರತೆ ಅರಿತು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿಯನ್ನು ಉತ್ತಮ ಗುಣಮಟ್ಟ ಹಾಗೂ ವೇಗವಾಗಿ ನಡೆಸುತ್ತಿರುವುದು ಶ್ಲಾಘನೀಯ’ ಎಂದು ಶಿರಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜಿತ್‌ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT