ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್: ಅಂದು ಲಾರ್ಡ್ಸ್‌ನಲ್ಲಿ ಕುಸಿದಿದ್ದ ಭಾರತ!

ಫಾಲೊ ಆನ್‌ಗೆ ಒಳಗಾದ ಮೇಲೆ ಗಳಿಸಿದ್ದು 42!
Last Updated 19 ಡಿಸೆಂಬರ್ 2020, 13:02 IST
ಅಕ್ಷರ ಗಾತ್ರ

ಈಗ ವಿಶ್ವದ ಶ್ರೇಷ್ಠ ಆಟಗಾರ ಎನಿಸಿದ ವಿರಾಟ್‌ ಕೊಹ್ಲಿ, ಬೇರೂರಿ ಆಡುವ ಅನುಭವಿಗಳಾದ ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ ಇದ್ದ ತಂಡ ಅಡಿಲೇಡ್‌ನ ಅಹರ್ನಿಶಿ ಟೆಸ್ಟ್‌ನಲ್ಲಿ 36 ರನ್ನಿಗೆ ಕುಸಿದಾಗ ಕ್ರಿಕೆಟ್‌ಪ್ರಿಯರಿಗೆ ನೆನಪಾಗಿದ್ದು, ಭಾರತ ತಂಡ ಗಳಿಸಿದ್ದ ಎರಡನೇ ಅತಿ ಕಡಿಮೆ ಮೊತ್ತ. ಅದು 42 ರನ್. ಇಂಗ್ಲೆಂಡ್‌ ವಿರುದ್ಧ 1974ರ ಸರಣಿಯ ಎರಡನೇ ಟೆಸ್ಟ್‌ನ (ಜೂನ್‌ 20 ರಿಂದ 24) ಎರಡನೇ ಇನಿಂಗ್ಸ್‌ನಲ್ಲಿ ಭಾರತ 42 ರನ್‌ಗಳಿಗೆ (17 ಓವರ್‌) ಕುಸಿದಾಗ ಅದು ಆಗ ದೊಡ್ಡ ಸುದ್ದಿಯಾಗಿತ್ತು. (ಆಗಲೂ ಭಾರತ 9 ವಿಕೆಟ್‌ ಕಳೆದುಕೊಂಡಿತ್ತು!).

ಆಗಿನ ಕಾಲದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ್ದ ಸುನಿಲ್ ಗಾವಸ್ಕರ್‌ ಜೊತೆ ನಾಯಕ ಅಜಿತ್ ವಾಡೇಕರ್‌, ಗುಂಡಪ್ಪ ವಿಶ್ವನಾಥ್‌, ಫಾರೂಕ್‌ ಇಂಜಿನಿಯರ್, ಏಕನಾಥ ಸೋಲ್ಕರ್‌ ಅಂಥ ಆಟಗಾರರನ್ನು ತಂಡ ಒಳಗೊಂಡಿತ್ತು. ಇಂಗ್ಲೆಂಡ್‌ ಲಾರ್ಡ್ಸ್‌ನಲ್ಲಿ ನಡೆದ ಆ ಪಂದ್ಯವನ್ನು ಇನಿಂಗ್ಸ್‌ ಮತ್ತು 285 ರನ್‌ಗಳ ಭಾರಿ ಅಂತರದಿಂದ ಗೆದ್ದುಕೊಂಡು ಮೂರು ಟೆಸ್ಟ್‌ಗಳ ಸರಣಿಯಲ್ಲಿ 2–0 ಮುನ್ನಡೆ ಪಡೆದಿತ್ತು.

ಆದರೆ ಆ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ರನ್‌ ಹೊಳೆ ಹರಿದಿತ್ತು. ಪಿಚ್‌ನ ಮೊದಲ ಉಪಯೋಗ ಪಡೆದ ಆತಿಥೇಯರು 182.5 ಓವರುಗಳಲ್ಲಿ 629 ರನ್‌ಗಳ ಭಾರಿ ಮೊತ್ತ ಪೇರಿಸಿದ್ದರು. ಮೂವರು ಆಟಗಾರರಿಂದ ಶತಕ ದಾಖಲಾಗಿದ್ದರೆ, ಒಬ್ಬರು ಸ್ವಲ್ಪದರಲ್ಲೇ ಆ ಗೌರವ ಕಳೆದುಕೊಂಡರು. ಡೆನಿಸ್‌ ಅಮಿಸ್‌ 188, ಮೈಕ್‌ ಡೆನೆಸ್‌ 118 ಮತ್ತು ಟೋನಿ ಗ್ರೆಗ್‌ 106 ರನ್‌ ಗಳಿಸಿದ್ದರು. ಜಾನ್‌ಎಲ್ಡ್ರಿಚ್‌, ಬಿಷನ್‌ ಸಿಂಗ್‌ ಬೇಡಿ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆಗಿದ್ದು ಕೇವಲ ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಬೇಕಾಯಿತು. ಇದಕ್ಕುತ್ತರವಾಗಿ ಭಾರತ ಮೊದಲ ಸರದಿಯಲ್ಲಿ 302 ರನ್‌ ಗಳಿಸಿತ್ತು. ಗಾವಸ್ಕರ್‌(49) ಮತ್ತು ವಿಕೆಟ್‌ ಕೀಪರ್‌ ಇಂಜಿನಿಯರ್‌ (86) ಮೊದಲ ವಿಕೆಟ್‌ಗೆ 131 ರನ್‌ಗಳ ಅಡಿಪಾಯ ಹಾಕಿಕೊಟ್ಟಿದ್ದರಿಂದ ಭಾರತವೂ ದೊಡ್ಡ ಮೊತ್ತ ಗಳಿಸುವಂತೆ ಕಂಡಿತ್ತು. ಆದರೆ ನಂತರ ವಿಶ್ವನಾಥ್‌ (52) ಮತ್ತು ಸೋಲ್ಕರ್‌ (43) ಬಿಟ್ಟರೆ ಉಳಿದವರಿಂದ ದೊಡ್ಡ ಕೊಡುಗೆ ಬರಲಿಲ್ಲ. 302 ರನ್‌ಗಳಿಗೆ ಭಾರತ ಆಲೌಟ್‌ ಆಗಿತ್ತು.

ಎರಡನೇ ಇನಿಂಗ್ಸ್‌ನದ್ದು ಮಾತ್ರ ನಾಟಕೀಯ ಪತನ. ಫಾಲೊಆನ್‌ಗೆ ಒಳಗಾದ ಮೇಲೆ 12 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ಪ್ರವಾಸಿಗರು ಉಳಿದ ಏಳು ವಿಕೆಟ್‌ಗಳನ್ನು 30 ರನ್‌ ಅಂತರದಲ್ಲಿ ಕಳೆದುಕೊಂಡಿದ್ದರು. ಚಂದ್ರಶೇಖರ್‌ ಗಾಯಾಳಾಗಿ ಆಡಲು ಇಳಿದಿರಲಿಲ್ಲ. ಸೋಲ್ಕರ್‌ ಗಳಿಸಿದ 18 ರನ್‌ಗಳೇ ಅತ್ಯಧಿಕ ಮೊತ್ತ. ಉಳಿದವರು ಎರಡಂಕಿ ದಾಟಲಿಲ್ಲ. ವೇಗಿಗಳಾದ ಕ್ರಿಸ್‌ ಓಲ್ಡ್ (21ಕ್ಕೆ5) ಮತ್ತು ಜೆಫ್‌ ಅರ್ನಾಲ್ಡ್ (19ಕ್ಕೆ4) ಭಾರತದ ಇನಿಂಗ್ಸ್‌ ಧ್ವಂಸ ಮಾಡಿದ್ದರು.

ಆ ಪಂದ್ಯದಲ್ಲಿ ವಿಶ್ವನಾಥ್ ಜೊತೆ ಕರ್ನಾಟಕದ ಬ್ರಿಜೇಶ್‌ ಪಟೇಲ್‌, ಅನುಭವಿ ಸ್ಪಿನ್ನರ್‌ಗಳಾದ ಎರಪಳ್ಳಿ ಪ್ರಸನ್ನ, ಬಿ.ಎಸ್‌.ಚಂದ್ರಶೇಖರ್‌ ಕೂಡ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT