ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಕ್ರಿಕೆಟ್: ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ವಿರಾಟ್ ಬಳಗ

ಭಾರತ–ಆಸ್ಟ್ರೇಲಿಯಾ ಎರಡನೇ ಹಣಾಹಣಿ ಇಂದು
Last Updated 22 ನವೆಂಬರ್ 2018, 19:51 IST
ಅಕ್ಷರ ಗಾತ್ರ

ಮೆಲ್ಬರ್ನ: ಕೇವಲ ನಾಲ್ಕು ರನ್‌ಗಳ ಅಂತರದಲ್ಲಿ ಮೊದಲ ಟ್ವೆಂಟಿ–20 ಪಂದ್ಯದಲ್ಲ ಸೋತಿರುವ ಭಾರತ ತಂಡವು ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಕೆಲವು ಬದಲಾವಣೆಗಳೊಂದಿಗೆ ತಂಡವನ್ನು ಕಣಕ್ಕಿಳಿಸುವ ಯೋಚನೆಯಲ್ಲಿದೆ.

ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿರುವ ಆತಿಥೇಯ ಆಸ್ಟ್ರೇಲಿಯಾ ತಂಡವು, ಇನ್ನೊಂದು ಪಂದ್ಯ ಗೆದ್ದು ಪಾರಮ್ಯ ಸಾಧಿಸುವ ಛಲದಲ್ಲಿದೆ. ಆದರೆ , ಸತತ ಏಳು ಸರಣಿಗಳಲ್ಲಿ ಗೆದ್ದಿರುವ ದಾಖಲೆಯನ್ನು ಅಜೇಯವಾಗಿ ಮುಂದುವರಿಸುವ ಇರಾದೆ ವಿರಾಟ್ ಕೊಹ್ಲಿಯವರದ್ದು. ಅದಕ್ಕಾಗಿ ಅವರು ತಮ್ಮ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಒಂದಷ್ಟು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಕೆಲವು ತಿಂಗಳುಗಳ ಹಿಂದೆ ಇಂಗ್ಲೆಂಡ್‌ನ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ 101 ರನ್‌ ಬಾರಿಸಿದ್ದ ಕೆ.ಎಲ್. ರಾಹುಲ್ ನಂತರದಆರು ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿಲ್ಲ. ಬ್ರಿಸ್ಟೇನ್ ಪಂದ್ಯದಲ್ಲಿ ಅವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳಿಸಲಾಗಿತ್ತು. ಆದರೆ, ಆವರು ವೈಫಲ್ಯ ಅನುಭವಿಸಿದರು. ಐದನೇ ಓವರ್‌ನಲ್ಲಿ ರೋಹಿತ್ ಶರ್ಮಾ ವಿಕೆಟ್‌ ಕಳೆದುಕೊಂಡಿದ್ದ ತಂಡವು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಅವರಿಗಾಗಿ ನಾಲ್ಕನೇ ಕ್ರಮಾಂಕದಲ್ಲಿ ಬಂದಿದ್ದ ವಿರಾಟ್ ಕೂಡ ಕೇವಲ ನಾಲ್ಕುರನ್ ಗಳಿಸಿ ಔಟಾಗಿದ್ದರು. ಈ ಎರಡು ಸ್ಥಾನಗಳಲ್ಲಿ ಅದಲು–ಬದಲು ಆಗುವ ಸಾಧ್ಯತೆ ಹೆಚ್ಚಿದೆ. ರಾಹುಲ್‌ಗೆ ‘ವಿಶ್ರಾಂತಿ’ ನೀಡಿದರೂ ಅಚ್ಚರಿಯೇನಿಲ್ಲ.

ಬೌಲಿಂಗ್‌ನಲ್ಲಿಯೂ ಬದಲಾವಣೆ ಸಾಧ್ಯತೆ ಇದೆ. ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ ಕೇವಲ ನಾಲ್ಕು ಓವರ್‌ಗಳಲ್ಲಿ 55 ರನ್‌ಗಳನ್ನು ಕೊಟ್ಟಿದ್ದು ತುಟ್ಟಿಯಾಗಿತ್ತು. ಅವರ ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಆರು ಸಿಕ್ಸರ್‌ಗಳನ್ನು ಸಿಡಿಸಿದ್ದು ಕೋಚ್ ರವಿಶಾಸ್ತ್ರಿ ಕಣ್ಣುಗಳನ್ನು ಕೆಂಪಗಾಗಿಸಿತ್ತು. ಕೃಣಾಲ್ ಬದಲಿಗೆ ಯಜುವೇಂದ್ರ ಚಾಹಲ್ ಅವಕಾಶ ಪಡೆಯಬಹುದು.

ಈ ಪಂದ್ಯ ನಡೆಯಲಿರುವ ಎಂಸಿಜಿ ಕ್ರೀಡಾಂಗಣವು ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಅವರನ್ನು ಎದುರಿಸಲು ವಿಶೇಷ ಸಿದ್ಧತೆ ಅಗತ್ಯ. ಆಸ್ಟ್ರೇಲಿಯಾದ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಲಯಕ್ಕೆ ಮರಳಿದರೆ ಭಾರತದ ಬೌಲಿಂಗ್‌ಗೆ ಕಠಿಣ ಸವಾಲು ಎದುರಾಗುವುದು ಖಚಿತ. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್, ಕ್ರಿಸ್ ಲಿನ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರು ಮತ್ತೊಮ್ಮೆ ತಮ್ಮ ಬ್ಯಾಟ್ ಬೀಸಲು ಸಿದ್ಧರಾಗಿದ್ದಾರೆ. ಆದ್ದರಿಂದ ಇನಿಂಗ್ಸ್‌ನ ಅಂತಿಮ ಹಂತದ ಓವರ್‌ಗಳಲ್ಲಿ ಬೌಲರ್‌ಗಳಿಗೆ ಇವರ ಸವಾಲನ್ನು ಮೆಟ್ಟಿ ನಿಲ್ಲಬೇಕಿದೆ.

ಶುಕ್ರವಾರ ಇಲ್ಲಿಯೂ ಮಳೆ ಸುರಿಯುವ ಸಾಧ್ಯತೆ ಇದೆ. ಆದ್ದರಿಂದ ಮತ್ತೊಮ್ಮೆ ಡಕ್ವರ್ಥ್ –ಲೂಯಿಸ್ ನಿಯಮದ ಆಟವೂ ನಡೆಯಬಹುದು. ಇದರಿಂದಾಗಿ ಟಾಸ್‌ ಗೆದ್ದ ತಂಡವು ಕೈಗೊಳ್ಳುವ ನಿರ್ಣಯವೂ ಪ್ರಮುಖವಾಗಲಿದೆ.

ಡಕ್ವರ್ಥ್‌–ಲೂಯಿಸ್ ನಿಯಮಕ್ಕೆ ಟೀಕೆ
ಯಾವುದೇ ಕ್ರಿಕೆಟ್ ಪಂದ್ಯದಲ್ಲಿ ಹೆಚ್ಚು ರನ್‌ ಗಳಿಸುವ ತಂಡವು ಗೆಲ್ಲುವುದು ಮತ್ತು ಕಡಿಮೆ ರನ್‌ ಗಳಿಸಿದ ತಂಡವು ಸೋಲುವುದು ಸಹಜ. ಆದರೆ, ಬುಧವಾರ ಬ್ರಿಸ್ಬೆನ್‌ನ ಗಾಬಾ ಕ್ರೀಡಾಂಗಣದಲ್ಲಿ ಇದಕ್ಕೆ ತದ್ವಿರುದ್ಧ ಘಟನೆ ನಡೆಯಿತು.

ಇಲ್ಲಿ ನಡೆದ ಟ್ವೆಂಟಿ–20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡವು 17 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 158 ಗಳಿಸಿತ್ತು. ಆಗ ಮಳೆಯಿಂದಾಗಿ ಇನಿಂಗ್ಸ್‌ನ 45 ನಿಮಿಷಗಳ ಆಟವು ನಷ್ಟವಾಗಿತ್ತು. ಆದರೆ ಡಕ್ವರ್ಥ್– ಲೂಯಿಸ್ ನಿಯಮದನ್ವಯ ಭಾರತಕ್ಕೆ 17 ಓವರ್‌ಗಳಲ್ಲಿ 174 ರನ್‌ಗಳ ಜಯದ ಗುರಿಯನ್ನು ನಿಗದಿಪಡಿಸಲಾಯಿತು. ವಿರಾಟ್ ಕೊಹ್ಲಿ ಬಳಗವು 17 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 169 ರನ್‌ ಗಳಿಸಿತು. ಆಸ್ಟ್ರೇಲಿಯಾದ ನೈಜಮೊತ್ತಕ್ಕಿಂತ 11 ರನ್‌ ಹೆಚ್ಚು ಗಳಿಸಿಯೂ ಸೋತಿತು. ಆದರೆ ಈ ಲೆಕ್ಕಾಚಾರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವ್ಯಂಗ್ಯಕ್ಕೆ ಗುರಿಯಾಗಿದೆ.

‘ಭಾರತವು ಆಸ್ಟ್ರೇಲಿಯಾಗಿಂತಲೂ ಹೆಚ್ಚು ಸ್ಕೋರ್ ಮಾಡಿಯೂ ಸೋತಿದೆ. ಆಸ್ಟ್ರೇಲಿಯಾ ಸ್ಕೋರ್‌ ಮೇಲೆ ಹಾಕಿದ ಜಿಎಸ್‌ಟಿಯು ಭಾರತಕ್ಕೆ ಹೊರೆಯಾಯಿತು. ಏನೇ ಅಗಲಿ ಒಳ್ಳೆಯ ಥ್ರಿಲ್ಲಿಂಗ್ ಪಂದ್ಯ ಇದಾಗಿತ್ತು. ಸರಣಿಗೆ ಉತ್ತಮ ಆರಂಭ ನೀಡಿದೆ’ ಎಂದು ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

‘ಆಸ್ಟ್ರೇಲಿಯಾವು ಭಾರತಕ್ಕೆ ಏಕೆ ಉಚಿತ ರನ್‌ಗಳನ್ನು ಕಾಣಿಕೆ ನೀಡಿತು, ದಯವಿಟ್ಟು ಯಾರಾ ದರೂ ವಿವರ ಕೊಡಿ’ ಎಂದು ಕೆಲವರು ಟ್ವೀಟ್ ಮಾಡಿದ್ಧಾರೆ. ಡಕ್ವರ್ಥ್‌–ಲೂಯಿಸ್ ಅವರ ಚಿತ್ರಗಳನ್ನೂ ಹಾಕಿ ಟೀಕಿಸಿದ್ದಾರೆ.‌

ತಂಡಗಳು ಇಂತಿವೆ: ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಖಲೀಲ್ ಯಾದವ್, ವಾಷಿಂಗ್ಟನ್ ಸುಂದರ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಆ್ಯಷ್ಟನ್ ಅಗರ್, ಜೇಸನ್ ಬೆರೆನ್‌ಡ್ರಾಫ್‌, ಅಲೆಕ್ಸ್‌ ಕ್ಯಾರಿ, ನೇಥನ್ ಕೌಲ್ಟರ್‌ ನೈಲ್, ಕ್ರಿಸ್‌ ಲಿನ್, ಬೆನ್‌ ಮೆಕ್‌ಡರ್ಮಾಟ್, ಗ್ಲೆನ್ ಮ್ಯಾಕ್ಸ್‌ವೆಲ್, ಡಾರ್ಚಿ ಶಾರ್ಟ್, ಬಿಲ್ಲಿ ಸ್ಟಾನ್‌ಲೇಕ್, ಮಾರ್ಕಸ್‌ ಸ್ಟೊಯಿನಿಸ್, ಆ್ಯಂಡ್ರ್ಯೂ ಟೈ, ಆ್ಡಡಂ ಜಂಪಾ.

ರೆಫರಿ: ಜೆಫ್‌ ಕ್ರೋವ್ (ನ್ಯೂಜಿಲೆಂಡ್)
ಪಂದ್ಯ ಆರಂಭ: ಮಧ್ಯಾಹ್ನ 1.20
ನೇರಪ್ರಸಾರ: ಸೋನಿ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT