ಸಿಎಸ್‌ಕೆ ವಿರುದ್ಧ ಆರ್‌ಸಿಬಿಗೆ ರೋಚಕ ಜಯ

ಶನಿವಾರ, ಮೇ 25, 2019
28 °C

ಸಿಎಸ್‌ಕೆ ವಿರುದ್ಧ ಆರ್‌ಸಿಬಿಗೆ ರೋಚಕ ಜಯ

Published:
Updated:

ಬೆಂಗಳೂರು: 4,6,6,2,6, ರನ್‌ಔಟ್ ..! -ಭಾನುವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಓವರ್‌ನ ರೋಚಕ ರಸದೌತಣದ ಸಾರಾಂಶವಿದು. ಮಹೇಂದ್ರಸಿಂಗ್ ಧೋನಿಯ ಎಲ್ಲ ಶ್ರಮವೂ ವ್ಯರ್ಥವಾಯಿತು. ಆದರೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಒಂದು ರನ್‌ ರೋಚಕ ಜಯ ಒಲಿಯಿತು. 

ಗೆಲುವಿಗಾಗಿ 162 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಚೆನ್ನೈ ತಂಡವು ಕೊನೆಯ ಓವರ್‌ನಲ್ಲಿ 26 ರನ್‌ ಗಳಿಸುವ ಸವಾಲು ಇತ್ತು. ಕ್ರೀಸ್‌ನಲ್ಲಿದ್ದ ಧೋನಿ ಅವರು ಉಮೇಶ್ ಯಾದವ್ ಅವರ ಎಸೆತಗಳನ್ನು ನುಚ್ಚುನೂರು ಮಾಡಿದ್ದರು. ಒಂದು ಬೌಂಡರಿ, ಮೂರು ಸಿಕ್ಸರ್ ಮತ್ತು ಒಂದು ಡಬಲ್ ರನ್ ಹೊಡೆದು ಕೊನೆಯ ಎಸೆತದಲ್ಲಿ ಕೇವಲ ಎರಡು ರನ್‌ಗಳ ಅಗತ್ಯವಿತ್ತು. ಆ ಎಸೆತದಲ್ಲಿ ಧೋನಿ ಬೀಟ್ ಆದರು. ವಿಕೆಟ್‌ಕೀಪರ್ ಪಾರ್ಥಿವ್ ಕ್ಯಾಚ್ ಮಾಡಿ ಚೆಂಡನ್ನು ಸ್ಟಂಪ್‌ನತ್ತ ಎಸೆದಿದ್ದರು. ಇತ್ತ ಧೋನಿ ಓಡಿದ್ದರು, ಆ ಕಡೆಯಿಂದ  ಓಡಿ ಬಂದ ಶಾರ್ದೂಲ್ ಠಾಕೂರ್ ರನ್‌ಔಟ್ ಆದರು. ಅದರೊಂದಿಗೆ ಆರ್‌ಸಿಬಿ ಜಯಿಸಿತು.  ಧೋನಿಯ ಅರ್ಧಶತಕ ವ್ಯರ್ಥವಾಯಿತು. ಚೆನ್ನೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 160 ರನ್‌ ಗಳಿಸಿತು. 

ಪಾರ್ಥಿವ್ ಅರ್ಧಶತಕ: ಆರ್‌ಸಿಬಿಯ ಭರವಸೆಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಅವರು ಅಲ್ಪಕಾಣಿಕೆ ನೀಡಿ ನಿರ್ಗಮಿಸಿದಾಗ ತಂಡವು ಸಣ್ಣಮೊತ್ತಕ್ಕೆ ಕುಸಿಯುವಂತೆ ಕಂಡಿತ್ತು.

 ಆದರೆ, ಗುಜರಾತಿ ಭಾಯಿ ಪಾರ್ಥಿವ್ (53; 36ಎಸೆತ, 2ಬೌಂಡರಿ, 4ಸಿಕ್ಸರ್) ಅರ್ಧಶತಕದ ಆಟವು ಆತಿಥೇಯರ ಗೌರವ ಉಳಿಸಿತು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 161 ರನ್ ಗಳಿಸಿತು.

ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೆನ್ನುನೋವಿನಿಂದ ಚೇತರಿಸಿಕೊಂಡಿರುವ ಮಹೇಂದ್ರಸಿಂಗ್ ಧೋನಿ ಕಣಕ್ಕಿಳಿದರು. ಮೂರನೇ ಓವರ್‌ನಲ್ಲಿಯೇ ಅವರ ತಂತ್ರ ಫಲ ನೀಡಿತು. ದೀಪಕ್ ಚಾಹರ್ ಹಾಕಿದ ಔಟ್ ಸ್ವಿಂಗರ್‌ ತಡವಿದ ವಿರಾಟ್ ಕೊಹ್ಲಿ ದಂಡ ತೆತ್ತರು. ವಿಕೆಟ್‌ಕೀಪರ್ ಧೋನಿಗೆ ಕ್ಯಾಚಿತ್ತರು. ಈಚೆಗೆ ಕೆಕೆಆರ್ ಎದುರಿನ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದ್ದರು. 

ಕ್ರೀಸ್‌ಗೆ ಬಂದ ಎಬಿ ಡಿವಿಲಿಯರ್ಸ್‌ ತಮ್ಮ ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದರು. ಅವರು ಆಟಕ್ಕೆ ಕುದುರಿಕೊಂಡಂತೆ ಕಂಡರು. ಇದರಿಂದಾಗಿ ಆರ್‌ಸಿಬಿ ಖಾತೆಯಲ್ಲಿ ಹೆಚ್ಚು ರನ್‌ಗಳು ಸೇರುವ ಭರವಸೆ ಮೂಡಿತ್ತು. ಎಡಗೈಸ್ಪಿನ್ನರ್ ರವೀಂದ್ರ ಜಡೇಜ ಇದಕ್ಕೆ ಅಡ್ಡಿಯಾದರು. ಫಾಫ್ ಡುಪ್ಲೆಸಿ ಪಡೆದ ಕ್ಯಾಚ್‌ಗೆ ಎಬಿಡಿ ಔಟಾದರು. ಅದಕ್ಕೂ ಮುನ್ನ ಡುಪ್ಲೆಸಿ ಅವರೇ ಎಬಿಡಿಯ ಒಂದು ಕ್ಯಾಚ್ (6ನೇ ಓವರ್) ನೆಲಕ್ಕೆ ಚೆಲ್ಲಿದ್ದರು.

ಅಕ್ಷದೀಪ್ ನಾಥ್ ಒಂದಷ್ಟು ಬೀಸಾಟವಾಡಿದರು. 24 ರನ್‌ ಗಳಿಸಿದ ಅವರಿಗೂ ಜಡೇಜ ಅವರೇ ಡಗ್‌ಔಟ್ ದಾರಿ ತೋರಿಸಿದರು. ಇದೆಲ್ಲದರ ನಡುವೆಯೂ ಪಾರ್ಥಿವ್ ಇನ್ನೊಂದು ಬದಿಯಲ್ಲಿ ತಣ್ಣಗೆ ಆಡುತ್ತಿದ್ದರು.

ಪಾರ್ಥಿವ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಜೊತೆಗೂಡಿ ಇನಿಂಗ್ಸ್‌ ಬೆಳೆಸುವ ಪ್ರಯತ್ನ ಮಾಡಿದರು. ಆದರೆ, ಚೆನ್ನೈ ಬೌಲರ್‌ಗಳ ಶಿಸ್ತಿನ ದಾಳಿಯಲ್ಲಿ ಹೆಚ್ಚು ರನ್ ಕಬಳಿಸಲು ಸಾಧ್ಯವಾಗಲಿಲ್ಲ. ಡ್ವೇನ್ ಬ್ರಾವೊ ಹಾಕಿದ  16ನೇ ಓವರ್‌ನಲ್ಲಿ ಅರ್ಧಶತಕದ ಗಡಿ ಮುಟ್ಟಿದ ಪಾರ್ಥಿವ್  ನಂತರದ ಎಸೆತದಲ್ಲಿಯೇ ಔಟಾದರು.

ಮಾರ್ಕಸ್‌ಗೆ ಪೆಟ್ಟು: ಹದಿನಾರನೇ ಓವರ್‌ನಲ್ಲಿ ಪಾರ್ಥಿವ್ ಆಡಿದ ಮೊದಲ ಎಸೆತವು ಪುಟಿದು ಇನ್ನೊಂದು ಬದಿಯಲ್ಲಿದ್ದ ಮಾರ್ಕಸ್‌ ಕೈಗೆ ಅಪ್ಪಳಿಸಿತು. ಇದರಿಂದಾಗಿ ಮಾರ್ಕಸ್ ತೀವ್ರ ನೋವು ಅನುಭವಿಸಿದರು. ತಂಡದ ಫಿಸಿಯೊ ಬಂದು ಚಿಕಿತ್ಸೆ ನೀಡಿದರು. 17ನೇ ಓವರ್‌ನಲ್ಲಿ ಇಮ್ರಾನ್ ತಾಹಿರ್ ಎಸೆತವನ್ನು  ಮಾರ್ಕಸ್‌ ಸಿಕ್ಸರ್‌ಗೆ ಎತ್ತುವ ಪ್ರಯತ್ನ ಮಾಡಿದರು. ಲಾಂಗ್‌ ಆಫ್‌ ಬೌಂಡರಿ ಲೈನ್‌ನಲ್ಲಿದ್ದ ಬದಲಿ ಫೀಲ್ಡರ್‌ ಡುಪ್ಲೆಸಿ  ಸಾಹಸಮಯ ಪ್ರಯತ್ನಕ್ಕೆ ಮಾರ್ಕಸ್‌ ನಿರ್ಗಮಿಸಿದರು.

ಡೈವ್ ಮಾಡಿ ಕ್ಯಾಚ್ ಪಡೆದ ಡುಪ್ಲೆಸಿ ತಮ್ಮ ದೇಹ ಗಾಳಿಯಲ್ಲಿದ್ದಾಗಲೇ ಸಹ ಫೀಲ್ಡರ್ ಧ್ವುವ ಶೋರೆಯತ್ತ ಚೆಂಡು ಎಸೆದು  ಬೌಂಡರಿಲೈನ್ ದಾಟಿ ಒಳಗೆ ಬಿದ್ದರು.  ಶೋರೆ ಕ್ಯಾಚ್ ಪಡೆದರು.

ಆದರೆ ನಂತರದ ಆಟದಲ್ಲಿ ಮೋಯಿನ್ ಅಲಿ ಏಕಾಂಗಿ ಹೋರಾಟ ಮಾಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಓಡದ ಧೋನಿ: ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ಚೆನ್ನೈ ತಂಡಕ್ಕೆ 36 ರನ್‌ಗಳ ಅವಶ್ಯಕತೆ ಇತ್ತು. ಆದರೆ, 19ನೇ ಓವರ್‌ನ ಮೂರು ಎಸೆತಗಳಲ್ಲಿ ರನ್‌ ಗಳಿಸುವ ಅವಕಾಶವಿದ್ದರೂ ಓಡದ ಮಹೇಂದ್ರಸಿಂಗ್ ಧೋನಿ ನಡೆ ಅಚ್ಚರಿಗೆ ಕಾರಣವಾಯಿತು.

ನವದೀಪ್ ಸೈನಿ ಹಾಕಿದ ಓವರ್‌ನ ಮೊದಲೆರಡು ಎಸೆತಗಳಲ್ಲಿ ಒಂದು ಅಥವಾ ಎರಡು ರನ್‌ ಪಡೆಯುವ ಅವಕಾಶವಿತ್ತು. ಈ ಎಸೆತಗಳನ್ನು ಆಡಿದ ಧೋನಿ ಕ್ರಿಸ್‌ ಬಿಟ್ಟು ಕದಲಿಲ್ಲ. ಇನ್ನೊಂದು ಬದಿಯಲ್ಲಿದ್ದ ಡ್ವೇನ್ ಬ್ರಾವೊ ಅವರು ಸ್ನಾಯುಸೆಳೆತ ಇದ್ದ ಕಾರಣ ಧೋನಿ ಹೀಗೆ ಮಾಡಿರಬಹುದು ಎಂದು ತಂಡದ ಮೂಲಗಳು ಹೇಳಿವೆ. ಆದರೆ, ಅದೇ ಓವರ್‌ನ ಮೂರನೇ ಎಸೆತವನ್ನು ಧೋನಿ ಸಿಕ್ಸರ್‌ಗೆ ಎತ್ತಿದರು. ಅದು ನೋಬಾಲ್ ಆಗಿದ್ದ ಕಾರಣ ಫ್ರೀಹಿಟ್ ದೊರೆಯಿತು. ಅದರಲ್ಲಿ ಎರಡು ರನ್ ಪಡೆಯುವಲ್ಲಿ ಧೋನಿ ಯಶಸ್ವಿಯಾದರು. ನಾಲ್ಕನೇ ಎಸೆತದಲ್ಲಿಯೂ ಅವರು ರನ್ ಪಡೆಯಲಿಲ್ಲ. ಐದನೇ ಎಸೆತದಲ್ಲಿ ಧೋನಿ ಒಂದು ರನ್ ಓಡಿದರು. ಆರನೇ ಎಸೆತದಲ್ಲಿ  ಬ್ರಾವೊ ಔಟ್ ಆದರು.

ನುಗ್ಗಿದ ಅಭಿಮಾನಿ: ಸುರೇಶ್ ರೈನಾ ಔಟಾದ ಸಂದರ್ಭದಲ್ಲಿ ಮೈದಾನಕ್ಕೆ ಅಭಿಮಾನಿಯೊಬ್ಬ ನುಗ್ಗಿ ಆಟಗಾರನ ಕೈಕುಲುಕಲು ಯತ್ನಿಸಿದ ಘಟನೆ ನಡೆಯಿತು. ಭದ್ರತಾ ಸಿಬ್ಬಂದಿಯು  ಆ ಯುವಕನನ್ನು ಹೊರಗೆ ಎಳೆದೊಯ್ದರು.

ಆರ್‌ಸಿಬಿಗೆ ಇದೆ ಇನ್ನೂ ಅವಕಾಶ
ಈ ಬಾರಿ ಏಳು ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿಯು ಮೂರು ಜಯ ಸಾಧಿಸಿದೆ. ಇನ್ನುಳಿದಿರುವ ನಾಲ್ಕು ಪಂದ್ಯಗಳಲ್ಲಿಯೂ ಉತ್ತಮ ರನ್‌ರೇಟ್‌ ಅಂತರದೊಂದಿಗೆ ಗೆದ್ದರೆ ಪ್ಲೇ ಆಫ್‌ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಇಲ್ಲಿ ಅದೃಷ್ಟವೂ ಜೊತೆಗೂಡಬೇಕು.
 

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !