ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್–2020 | ಆರ್‌ಸಿಬಿ ವಿರುದ್ಧದ ಹೋರಾಟಕ್ಕೆ ಸಿದ್ಧ: ಅನಿಲ್ ಕುಂಬ್ಳೆ

Last Updated 24 ಸೆಪ್ಟೆಂಬರ್ 2020, 13:38 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಗೆಲುವು ಕಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೂಪರ್‌ ಓವರ್‌ನಲ್ಲಿ ಸೋಲು ಕಂಡಿರುವ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ.

ಆರ್‌ಸಿಬಿ ವಿರುದ್ಧದ ಪಂದ್ಯದ ಕುರಿತು ಮಾತನಾಡಿರುವ ಪಂಜಾಬ್‌ ತಂಡದ ಕೋಚ್‌ ಅನಿಲ್‌ ಕುಂಬ್ಳೆ, ಸೋಲಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆರ್‌ಸಿಬಿ ವಿರುದ್ಧದ ಎರಡನೇ ‍ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್‌ ಅಭಿಯಾನವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

‘ನಾವು ಆ ಸೋಲನ್ನು ಪಕ್ಕಕ್ಕಿರಿಸುವ ಸಾಮರ್ಥ್ಯ ಹೊಂದಿದ್ದೇವೆ. ಅದೆಲ್ಲವೂ ನಾವು ಆಡುವ ದಿನ ಹೇಗೆ ಆಡುತ್ತೇವೆ ಎಂಬುದನ್ನು ಅವಲಂಭಿಸಿರುತ್ತದೆ ಎಂದು ನಾನು ಭಾವಿಸುತ್ತೇನೆ. ಕಳೆದ ಒಂದು ತಿಂಗಳಿನಿಂದ ನಾವು ತುಂಬಾ ಚೆನ್ನಾಗಿ ಅಭ್ಯಾಸ ಮಾಡಿದ್ದೇವೆ. ದೆಹಲಿ ಪಂದ್ಯದ ಬಳಿಕ ನಾವು ಮಾಡಬೇಕಿರುವ ತಿದ್ದುಪಡಿಗಳೇನು ಎಂಬುದರ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಿದ್ದೇವೆ’ ಎಂದು ಹೇಳಿದ್ದಾರೆ.

‘ನಾವು ಆರ್‌ಸಿಬಿ ವಿರುದ್ಧ ಅದೇ ಮೈದಾನದಲ್ಲಿ ಆಡಲಿದ್ದೇವೆ. ಇದು ಟಿ20 ಟೂರ್ನಿ. ಹಾಗಾಗಿ ಪಂದ್ಯದ ದಿನದಂದು ಉತ್ತಮವಾಗಿ ಆಡಬೇಕಾಗಿದೆ’ ಎಂದಿದ್ದಾರೆ.

ಆರ್‌ಸಿಬಿ ಬ್ಯಾಟಿಂಗ್‌ ವಿಭಾಗ ತುಂಬಾ ಬಲಿಷ್ಠವಾಗಿದೆ ಎಂದೂ ಹೇಳಿರುವ ಕುಂಬ್ಳೆ, ‘ವಿರಾಟ್‌ ಕೊಹ್ಲಿ, ಆ್ಯರನ್‌ ಫಿಂಚ್‌, ಎಬಿ ಡಿ ವಿಲಿಯರ್ಸ್‌ ಅವರನ್ನೊಳಗೊಂಡ ಆರ್‌ಸಿಬಿ ಬ್ಯಾಟಿಂಗ್‌ ವಿಭಾಗ ಖಂಡಿತಾ ಬಲಿಷ್ಠ ಮತ್ತು ಅನುಭವದಿಂದ ಕೂಡಿದೆ ಎಂಬುದು ತಿಳಿದಿದೆ. ಪದಾರ್ಪಣೆ ಪಂದ್ಯವಾಡಿದ ಯುವ ಆಟಗಾರ ದೇವದತ್ತ ಪಡಿಕ್ಕಲ್‌ ಕಳೆದ ಪಂದ್ಯದಲ್ಲಿ ತುಂಬಾ ಚೆನ್ನಾಗಿ ಆಡಿದ್ದಾರೆ. ಐಪಿಎಲ್‌ನಲ್ಲಿ ಯುವ ಆಟಗಾರ ಉತ್ತಮವಾಗಿ ಆಡುತ್ತಿರುವುದನ್ನು ನೋಡಲು ಸಂತಸವಾಗುತ್ತದೆ. ಆದರೆ, ಯೋಜನೆಯೊಂದಿಗೆ ನಾವು ಸಜ್ಜಾಗಿದ್ದೇವೆ’ ಎಂದು ಟ್ವಿಟರ್‌ ವಿಡಿಯೊದಲ್ಲಿ ಮಾತನಾಡಿದ್ದಾರೆ.

ಪಡಿಕ್ಕಲ್‌ ಸನ್‌ರೈಸರ್ಸ್‌ ವಿರುದ್ಧ 42 ಎಸೆತಗಳಲ್ಲಿ 56 ರನ್‌ ಗಳಿಸಿದ್ದರು.

ಕಳೆದ ಮೂರು ಆವೃತ್ತಿಗಳಲ್ಲಿ ಮೊದಲ ಪಂದ್ಯಗಳಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ಈ ಬಾರಿ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದೆ. ಕೊಹ್ಲಿ ‍ಪಡೆ ಇದೀಗ ಎರಡನೇ ಪಂದ್ಯವನ್ನೂ ಗೆದ್ದು ಜಯದ ಓಟ ಮುಂದುವರಿಸುವ ತವಕದಲ್ಲಿದೆ. ಆದರೆ, ಪಂಜಾಬ್‌ ಮೊದಲ ಜಯದ ನಿರೀಕ್ಷೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT