ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2020, KXIP Vs MI: ಬ್ಯಾಟಿಂಗ್ ‘ಕಿಂಗ್ಸ್‌‘ ಹಣಾಹಣಿಯಲ್ಲಿ ಗೆಲುವು ಯಾರಿಗೆ?

ಕೆ.ಎಲ್‌.ರಾಹುಲ್–ರೋಹಿತ್ ಶರ್ಮಾ ಬಳಗಗಳ ಹೋರಾಟ; ರನ್‌ ಹೊಳೆ ಹರಿಯುವ ನಿರೀಕ್ಷೆ
Last Updated 30 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಅಬುಧಾಬಿ: ಜಯದ ಸನಿಹ ಎಡವಿ ನಿರಾಸೆ ಕಂಡಿರುವ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಗುರುವಾರ ಇಲ್ಲಿ ಮುಖಾಮುಖಿಯಾಗಲಿದ್ದು ಜಯದ ಹಾದಿಗೆ ಮರಳಲು ಪ್ರಯತ್ನಿಸಲಿವೆ. ಎರಡೂ ತಂಡಗಳಲ್ಲಿ ಬ್ಯಾಟಿಂಗ್ ದಿಗ್ಗಜರು ಇರುವ ಕಾರಣ ಈ ಪಂದ್ಯದಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ.

ಭಾನುವಾರ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 223 ರನ್‌ ಪೇರಿಸಿದ್ದ ಕಿಂಗ್ಸ್ ಇಲೆವನ್ ತಂಡದ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದ ಎದುರಾಳಿಗಳು ದಾಖಲೆಯೊಂದಿಗೆ ಜಯ ಗಳಿಸಿದ್ದರು. ಎರಡು ದಿನಗಳ ಹಿಂದೆ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 202 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ‘ಟೈ’ ಸಾಧಿಸಿ, ಸೂಪರ್ ಓವರ್‌ನಲ್ಲಿ ಸೋಲು ಕಂಡಿತ್ತು.

ಹಾಲಿ ಚಾಂಪಿಯನ್ ಮುಂಬೈ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದ್ದರೂ ಚೇತರಿಸಿಕೊಂಡು ಕೋಲ್ಕತ್ತ ನೈಟ್ ರೈಡರ್ಸ್ ಎದುರು ಗೆಲುವು ಸಾಧಿಸಿತ್ತು. ಬೆಂಗಳೂರು ಎದುರಿನ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಕೀರನ್ ಪೊಲಾರ್ಡ್ ಕೊನೆಯ ವರೆಗೂ ಹೋರಾಟ ನಡೆಸಿದ್ದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದರು.

ಕಿಂಗ್ಸ್ ಇಲೆವನ್ ತಂಡ ಕೂಡ ಹೋರಾಟ ನಡೆಸಿ ಗೆಲುವಿನ ನಗೆ ಬೀರಲು ವಿಫಲವಾಗಿತ್ತು. ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ರಾಹುಲ್ ತೇವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್‌ಗೆ ತಡೆ ಹಾಕಲು ಪಂಜಾಬ್ ತಂಡದ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಅನುಭವಿ ಮೊಹಮ್ಮದ್ ಶಮಿ ಮೂರು ವಿಕೆಟ್ ಪಡೆದಿದ್ದರೂ 53 ರನ್ ನೀಡಿ ದುಬಾರಿ ಎನಿಸಿದ್ದರು. ಲೆಗ್ ಸ್ಪಿನ್ನರ್ ರವಿ ಬಿಷ್ನೋಯ್ (0/34) ಮಾತ್ರ ಸ್ವಲ್ಪ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.

ಕೆ.ಎಲ್‌.ರಾಹುಲ್ ಮತ್ತು ಮಯಂಕ್ ಅಗರವಾಲ್ ಅವರು ಬ್ಯಾಟಿಂಗ್‌ನಲ್ಲಿ ಲಯ ಉಳಿಸಿಕೊಂಡಿರುವುದು ತಂಡಕ್ಕೆ ಸಮಾಧಾನ ತಂದಿರುವ ವಿಷಯ. ರಾಜಸ್ಥಾನ ಎದುರಿನ ಪಂದ್ಯದಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ 183 ರನ್ ಸೇರಿಸಿದ್ದರು.

ಮುಂಬೈಗೆ ಬ್ಯಾಟಿಂಗ್ ವಿಭಾಗದ ಬಲ

ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠ ಬ್ಯಾಟಿಂಗ್ ಬಳಗ ಹೊಂದಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಅವರು ಅಗ್ರ ಕ್ರಮಾಂಕದ ಭರವಸೆ ಎನಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಎದುರಾಳಿ ಬೌಲರ್‌ಗಳ ಬೆವರಿಳಿಸಬಲ್ಲ ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಇದ್ದಾರೆ.

ಮಧ್ಯಮ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಮಿಂಚಲು ಆಗಲಿಲ್ಲ ಎಂಬುದು ಮುಂಬೈ ತಂಡದಲ್ಲಿ ಆತಂಕ ಮೂಡಿಸಿದೆ. ಬೂಮ್ರಾ ಈ ವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್ ಉರುಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT