ಮಂಗಳವಾರ, ನವೆಂಬರ್ 24, 2020
25 °C

ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ಅಪಾರ; ರಾಣಾ–ಸಿಂಗ್ ಆಟಕ್ಕೆ ಸಚಿನ್ ಮೆಚ್ಚುಗೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಐಪಿಎಲ್‌ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡದ ಆಟಗಾರ ಮನ್‌ದೀಪ್‌ ಸಿಂಗ್‌ ಮತ್ತು ಕೋಲ್ಕತ ನೈಟ್‌ರೈಡರ್ಸ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಕ್ರೀಡಾ ಪ್ರೇಮಿಗಳ ಮನ ಗೆದ್ದರು. ರಾಣಾ ಅವರ ಮಾವ ಕ್ಯಾನ್ಸರ್‌ನಿಂದಾಗಿ ಶುಕ್ರವಾರ ನಿಧನರಾಗಿದ್ದರು. ಮನ್‌ದೀಪ್‌ ಸಿಂಗ್ ತಂದೆಯವರೂ ಅದೇ ದಿನ ಮೃತಪಟ್ಟಿದ್ದರು. ಆದಾಗ್ಯೂ ರಾಣಾ ಮತ್ತು ಮನ್‌ದೀಪ್‌ ತಮ್ಮ ತಂಡಗಳ ಪರ ಕಣಕ್ಕಿಳಿದಿದ್ದರು.

ಈ ಬಗ್ಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ನೋವಾಗುತ್ತದೆ. ಆದರೆ, ಅಂತಿಮ ವಿದಾಯ ಹೇಳಲೂ ಸಾಧ್ಯವಾಗದಿರುವುದು ಹೃದಯವಿದ್ರಾವಕ. ಈ ದುರಂತದ ನೋವಿನಿಂದ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಆಟಕ್ಕೆ ಇಂದು ಮರಳಿರುವುದಕ್ಕೆ ಹ್ಯಾಟ್ಸ್‌ಆಫ್‌. ಚೆನ್ನಾಗಿ ಆಡಿದ್ದೀರಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬಿರುಸಿನ ಬ್ಯಾಟಿಂಗ್‌ ಮಾಡಿದ್ದ ನಿತೀಶ್‌ ರಾಣಾ, ಕೇವಲ 53 ಎಸೆತಗಳಲ್ಲಿ 81 ರನ್‌ ಬಾರಿಸಿದ್ದರು. ಅವರ ಆಟದ ಬಲದಿಂದ ಕೆಕೆಆರ್‌, ನಿಗದಿತ 20 ಓವರ್‌ಗಳಲ್ಲಿ 195 ರನ್ ಕಲೆಹಾಕಿತ್ತು. ಈ ಪಂದ್ಯದಲ್ಲಿ ಕೆಕೆಆರ್ 59 ರನ್ ಅಂತರದ ಗೆಲುವು ಸಾಧಿಸಿತು.

ರಾಣಾ ಅರ್ಧಶತಕದ ರನ್‌ ಬಾರಿಸಿದ ಬಳಿಕ ಅವರ ಮಾವ ‘ಸುರೀಂದರ್‌’ ಹೆಸರಿನ ಜೆರ್ಸಿ ತೊಟ್ಟು ಆಡುವ ಮೂಲಕ ಕ್ರೀಡಾಂಗಣದಲ್ಲಿ ಭಾವುಕ ಗೌರವ ಸಮರ್ಪಿಸಿದ್ದರು.

ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದ್ದ ಮನ್‌ದೀಪ್‌ 17 ರನ್ ಗಳಿಸಿದರು. ಪಂದ್ಯದಲ್ಲಿ ಕಿಂಗ್ಸ್‌ ಪಡೆ, ರೈಸರ್ಸ್‌ ಬಳಗವನ್ನು 12 ರನ್‌ ಅಂತರದಿಂದ ಮಣಿಸಿತ್ತು.

1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದ್ದ ವಿಶ್ವಕಪ್‌ ವೇಳೆ ಸಚಿನ್‌ ಅವರ ತಂದೆ ಮೃತಪಟ್ಟಿದ್ದರು. ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದ ಸಚಿನ್‌, ಇಂಗ್ಲೆಂಡ್‌ಗೆ ವಾಪಸ್‌ ಆಗಿದ್ದರು. ನಿರ್ಣಾಯಕ ಎನಿಸಿದ್ದ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು